ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಸರಣಿ ಟ್ವೀಟ್ ಮೂಲಕ ತಮ್ಮ ಗುಣಗಾನ ಮಾಡಿಕೊಂಡಿದ್ದಾರೆ. ತಾನು ಚಿಕ್ಕ ವಯಸ್ಸಿನಿಂದಲೇ ರೆಬೆಲ್ ವ್ಯಕ್ತಿತ್ವದವಳಾಗಿದ್ದೆ ಎಂಬುದನ್ನು ಜಗಜ್ಜಾಹೀರು ಮಾಡುವ ಭರದಲ್ಲಿ, ವಿದ್ಯಾಭ್ಯಾಸ ಮಾಡಮ್ಮ ಎಂದು ಬುದ್ಧಿ ಹೇಳಲು ಬಂದ ತಂದೆಗೆ ಅವರು ಹೊಡೆಯಲು ಮುಂದಾಗಿದ್ದರಂತೆ. ಇದೀಗ ಈ ಟ್ವೀಟ್ ಟ್ರೋಲಾಗಿದೆ.
‘ನನ್ನನ್ನು ಜಗತ್ತಿನ ಬೆಸ್ಟ್ ಡಾಕ್ಟರ್ರನ್ನಾಗಿ ಮಾಡಬೇಕು ಎಂಬುದು ಅಪ್ಪನ ಆಸೆ ಆಗಿತ್ತು. ನನಗೆ ಉತ್ತಮವಾದ ಶಾಲೆಗೆ ಕಳಿಸಿ ತಾನೊಬ್ಬ ಕ್ರಾಂತಿಕಾರಿ ತಂದೆ ಎನಿಸಿಕೊಳ್ಳಬೇಕು ಎಂಬುದು ಅವರ ಆಲೋಚನೆ ಆಗಿತ್ತು. ಆದರೆ ನಾನು ಶಾಲೆಗೆ ಹೋಗಲು ಒಪ್ಪಲಿಲ್ಲ. ಆಗ ಅವರು ನನಗೆ ಹೊಡೆಯಲು ಬಂದರು. ಅವರ ಕೈಯನ್ನು ಹಿಡಿದುಕೊಂಡು ‘ನೀವು ನನಗೆ ಹೊಡೆದರೆ ನಾನು ನಿಮಗೆ ತಿರುಗಿಸಿ ಹೊಡೆಯುತ್ತೇನೆ’ ಅಂತ ಎಚ್ಚರಿಕೆ ನೀಡಿದ್ದೆ. ಅದೇ ದಿನ ನಮ್ಮಿಬ್ಬರ ಸಂಬಂಧ ಅಂತ್ಯವಾಯ್ತು’ ಎಂದು ಟ್ವೀಟ್ ಮಾಡಿದ್ದಾರೆ.
‘ಆ ಘಟನೆಯಿಂದ ಅವರ ದೃಷ್ಟಿಯಲ್ಲಿ ಏನೋ ಬದಲಾವಣೆ ಆಯಿತು. ನನ್ನ ಮತ್ತು ಅಮ್ಮನ ಕಡೆಗೆ ಒಮ್ಮೆ ನೋಡಿ, ಅವರು ರೂಮಿನಿಂದ ಹೊರನಡೆದರು. ನಾನು ಮಿತಿ ಮೀರಿದ್ದೆ ಎಂಬುದು ನನಗೆ ಗೊತ್ತಿತ್ತು. ಅಪ್ಪನನ್ನು ಮತ್ತೆ ಮರಳಿ ಪಡೆಯಲಿಲ್ಲ. ನನ್ನ ಸ್ವಾತಂತ್ರ್ಯಕ್ಕಾಗಿ ನಾನು ಯಾವ ಮಟ್ಟಕ್ಕೆ ಬೇಕಾದರೂ ಹೋಗಬಲ್ಲೆ ಎಂಬುದನ್ನು ಈ ಘಟನೆಯಿಂದ ಅರ್ಥ ಮಾಡಿಕೊಳ್ಳಬಹುದು. ನನ್ನನ್ನು ಯಾರೂ ಕೂಡಿ ಹಾಕಲು ಸಾಧ್ಯವಿಲ್ಲ’ ಎಂದಿದ್ದಾರೆ.
‘ನನಗೆ ಯಶಸ್ಸಿನ ಮದ ಏರಿದೆ ಎಂದು ಈ ಇಂಡಸ್ಟ್ರಿಯವರು ತಿಳಿದುಕೊಂಡಿದ್ದಾರೆ. ನನ್ನನ್ನು ನಿಯಂತ್ರಿಸಬಹುದು ಎಂದುಕೊಂಡಿದ್ದಾರೆ. ನಾನು ಯಾವಾಗಲೂ ಹಠಮಾರಿ ಆಗಿದ್ದವಳು. ಯಶಸ್ಸು ಸಿಕ್ಕ ಬಳಿಕ ನನ್ನ ಧ್ವನಿಗೆ ಇನ್ನಷ್ಟು ಬಲ ಬಂತು ಅಷ್ಟೇ. ಈ ದೇಶದ ಅತಿ ಪ್ರಭಾವಿಗಳಲ್ಲಿ ನಾನೂ ಒಬ್ಬಳು. ನನ್ನನ್ನು ಹದ್ದುಬಸ್ತಿನಲ್ಲಿ ಇಡಬೇಕು ಎಂದುಕೊಂಡು ಬಂದವರನ್ನು ನಾನೇ ಹದ್ದುಬಸ್ತಿನಲ್ಲಿ ಇಟ್ಟಿದ್ದೇನೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿ’ ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.