ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟ ಅಂತ್ಯಕ್ಕೆ ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡ ಭಾರತ ಅನಿಶ್ಚಿತತೆಯ ಸ್ಥಿತಿಗೆ ಸಿಲುಕಿದೆ.
ದಿನದಾಟದಂತ್ಯಕ್ಕೆ ವಿರಾಟ್ ಕೊಹ್ಲಿ ಪಡೆ ಆರು ವಿಕೆಟ್ ಗಳನ್ನು ಕಳೆದುಕೊಂಡ 257ರನ್ ಗಳಿಸಿದೆ. ಹೀಗಾಗಿ ಇನ್ನಿಂಗ್ಸ್ ಹಿನ್ನಡೆ ತಪ್ಪಿಸಿಕೊಳ್ಳಬೇಕಾದರೆ ಇನ್ನೂ 321 ರನ್ ಗಳಿಸಬೇಕಾಗಿದೆ. ಆರಂಭಿಕ ಆಟಗಾರ ರೋಹಿತ್ ಶರ್ಮಾ, ಕೇವಲ ಆರು ಗಳಿಸಿ ಔಟಾದರೆ, ಯುವ ಆಟಗಾರ ಶುಭಮನ್ ಗಿಲ್ 29 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಈ ಮಧ್ಯೆ ನಾಯಕ ವಿರಾಟ್ ಕೊಹ್ಲಿ (11) ಮತ್ತು ಉಪ ನಾಯಕ ಅಜಿಂಕ್ಯ ರಹಾನೆ 1 ರನ್ ಗಳಿಸಿ ಔಟಾದರು. ಅಲ್ಪ ಮೊತ್ತಕ್ಕೆ ಕುಸಿಯುವ ಆತಂಕದಲ್ಲಿದ್ದ ತಂಡಕ್ಕೆ ಬ್ಯಾಟ್ಸ್ ಮನ್ ಚೇತೇಶ್ವರ ಪೂಜಾರ ಹಾಗೂ ವಿಕೆಟ್ ಕೀಪರ್ ರಿಷಭ್ ಪಂತ್ ನೆರವಾದರು.
ಈ ಜೋಡಿ 5 ನೇ ವಿಕೆಟ್ ಜೊತೆಯಾಟದಲ್ಲಿ 119 ರನ್ ಹೊಂದಿಸಿದರು. 143 ಎಸೆತಗಳನ್ನು ಎದುರಿಸಿದ ಪೂಜಾರ 73 ರನ್ ಗಳಿಸಿದರೆ, ಪಂತ್ ಕೇವಲ 88 ಎಸೆತಗಳಲ್ಲಿ 5 ಸಿಕ್ಸರ್ , 9 ಬೌಂಡರಿ ಸಹಿತ 91 ರನ್ ಗಳಿಸಿ ಶತಕದ ಹೊಸ್ತಿಲಲ್ಲಿ ವಿಕೆಟ್ ಒಪ್ಪಿಸಿದರು.
ಸದ್ಯ ವಾಷಿಂಗ್ಟನ್ ಸುಂದರ್ (33) ಮತ್ತು ಆರ್ .ಅಶ್ವಿನ್ 8 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಈ ಇಬ್ಬರು ನಾಲ್ಕನೇ ದಿನದಂದು ಉತ್ತಮ ಪ್ರದರ್ಶನ ನೀಡಬೇಕಾಗಿದೆ. ಇಂಗ್ಲೆಂಡ್ ಪರ ಡಾಮ್ ಬೇಸ್ ಪ್ರಮುಖ ನಾಲ್ಕು ವಿಕೆಟ್ ಪಡೆದರು.