ಬೆಳ್ತಂಗಡಿ: ಹೊಟೇಲ್ಗೆ ಬಂದ ಗಿರಾಕಿಗಳು ಅಲ್ಲಿನ ಜ್ಯೂಸ್ ಮೇಕರ್ನನ್ನು ಗುರಾಯಿಸಿ ನೋಡಿದ್ದು, ಯಾಕೆ ಹಾಗೆ ನೋಡುತ್ತೀ ಎಂದು ಕೇಳಿದ್ದಕ್ಕೆ ‘ತಾಂಟ್ರೇ ಬಾ ತಾಂಟ್’ ಎಂದು ಹೇಳಿ ಹೋಗಿದ್ದ ಕೆಲ ಯುವಕರು ಬಳಿಕ 25ರಿಂದ 30 ಮಂದಿಯ ತಂಡ ಕಟ್ಟಿಕೊಂಡು ಬಂದು ಹೊಟೇಲ್ನಲ್ಲಿ ದಾಂಧಲೆ ನಡೆಸಿದ್ದಲ್ಲದೆ ಜ್ಯೂಸ್ ಮೇಕರ್ಗೆ ಹಲ್ಲೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಬೆಳ್ತಂಗಡಿ ಪೊಲೀಸರು ಜ್ಯೂಸ್ ಮೇಕರ್ಗೆ ಹಲ್ಲೆ ನಡೆಸಿದವರ ಪೈಕಿ ಆರು ಮಂದಿಯನ್ನು ಬಂಧಿಸಿದ್ದಾರೆ.
ಇಲ್ಲಿನ ಉಜಿರೆಯ ಎಂಪಾಯರ್ ಹೊಟೇಲ್ನಲ್ಲಿ ಜ್ಯೂಸ್ ಮೇಕರ್ ಆಗಿ ಕೆಲಸ ಮಾಡುತ್ತಿರುವ ಅಲ್ತಾಫ್ ಹಲ್ಲೆಗೊಳಗಾದ ಯುವಕ. ವಾರಗಳ ಹಿಂದೆ ಕೆಲ ಯುವಕರು ಹೊಟೇಲ್ಗೆ ಬಂದಿದ್ದು, ಅವರು ನನ್ನನ್ನು ಗುರಾಯಿಸಿ ನೋಡುತ್ತಿದ್ದರು. ನನ್ನನ್ನು ಹಾಗೆ ಯಾಕೆ ನೋಡುತ್ತೀರಿ ಎಂದು ಪ್ರಶ್ನಿಸಿದ್ದಕ್ಕೆ ‘ಏನು ತಾಂಟ್ ರೇ ನೀನು? ಬಾ ತಾಂಟ್’ ಎಂದು ಬೆದರಿಸಿದ್ದರು. ಎರಡು ದಿನಗಳ ಬಳಿಕ ಮತ್ತೆ ಅದೇ ತಂಡ ಹೊಟೇಲ್ಗೆ ಬಂದಿದ್ದು, ಮತ್ತೆ ಅದೇ ರೀತಿ ಗುರಾಯಿಸಿದ್ದರು ಎಂದು ಹಲ್ಲೆಗೊಳಗಾದ ಯುವಕ ಹೇಳಿದ್ದಾನೆ. ಅದೇ ದಿನ ರಾತ್ರಿ ಆ ಯುವಕರು ಮತ್ತೆ 30ರಷ್ಟಿದ್ದ ಯವಕರೊಂದಿಗೆ ಬಂದು ಹೊಟೇಲ್ನಲ್ಲಿ ದಾಂಧಲೆ ನಡೆಸಿದ್ದಲ್ಲದೆ ಅಲ್ತಾಫ್ನನ್ನು ಬೆನ್ನತ್ತಿ ಹಲ್ಲೆ ನಡೆಸಿದ್ದರು. ಈ ಕುರಿತಂತೆ ಅಲ್ತಾಫ್ ಪೊಲೀಸರಿಗೆ ದೂರು ನೀಡಿದ್ದರು.
ಘಟನೆ ಸಂಬಂಧ ಪೊಲೀಸರು, ಅಜಿತ್ ಕುಮಾರ್, ಅರುಣ್ ಕುಮಾರ್, ನಿತೀಶ್, ಆಶಿಶ್, ಪರಮೇಶ್ವರ ಮತ್ತು ನವೀನ್ ಎಂಬವರನ್ನು ಬಂಧಿಸಿದ್ದಾರೆ