ಉಡುಪಿ, ಜ.24: ಕಿದಿಯೂರು ಪಡುಕೆರೆಯ ಸಮುದ್ರದಲ್ಲಿ ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಸುತ್ತಿ ಬೀಗ ಹಾಕಿ ಈಜು ಮೂಲಕ ಗಂಗಾಧರ ಜಿ.ಕಡೆಕಾರ್ ಹೊಸ ದಾಖಲೆ ನಿರ್ಮಿಸಿದ್ದಾರೆ.
65ರ ಹರೆಯದ ಗಂಗಾಧರ್ ಬೆಳಗ್ಗೆ 8.36ರಿಂದ 9.49ರ ವರೆಗೆ 1.13.03 ಗಂಟೆಗಳ 1400ಮೀಟರ್ ಬ್ರೆಸ್ಟ್ ಸ್ಟ್ರೋಕ್ ಶೈಲಿಯಲ್ಲಿ ಈಜಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಉಡುಪಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಗಂಗಾಧರ್ ಅವರ ಕಾಲಿಗೆ ಸರಪಳಿ ಸುತ್ತಿ ಬೀಗ ಜಡಿಸಿದರು. ಬಳಿಕ ಸಮುದ್ರದ ನೀರಿನಲ್ಲಿ ನಿರಂತರ ಈಜು ಮೂಲಕ ಗಂಗಾಧರ್ ಸಾಧನೆ ಮಾಡಿದ್ದಾರೆ. ಇದಕ್ಕೆ ತೀರ ದಲ್ಲಿ ನೆರೆದ ನೂರಾರು ಮಂದಿ ಗಣ್ಯರು ಹಾಗೂ ಅಭಿಮಾನಿಗಳು ಸಾಕ್ಷಿಗ ಳಾದರು.
ಉಡುಪಿ ಶಾಸಕ ಕೆ.ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸೇರಿದಂತೆ ಹಲವು ಮಂದಿ ಗಂಗಾಧರ್ ಅವರನ್ನು ಅಭಿನಂದಿಸಿದರು. ಈ ಸಾಧನೆ ಮಾಡಲು ಸಹಕರಿಸಿದ ಎಲ್ಲರಿಗೂ ಗಂಗಾಧರ್ ಕೃತಜ್ಞತೆ ಸಲ್ಲಿಸಿದರು.
‘ಗಂಗಾಧರ್ 1400 ಮೀಟರ್ ದೂರವನ್ನು ಒಂದು ಗಂಟೆ 13 ನಿಮಿಷದಲ್ಲಿ ತಲುಪುವ ಮೂಲಕ ಹೊಸ ದಾಖಲೆ ಮಾಡಿದ್ದಾರೆ. ಮುಂದೆ ಈ ದಾಖಲೆಯನ್ನು ಯಾರಿಗೂ ಮುರಿಯಲು ಸಾಧ್ಯ ಇಲ. ಸದ್ಯ ಇವರಿಗೆ ತಾತ್ಕಾಲಿಕ ಪ್ರಮಾಣಪತ್ರವನ್ನು ನೀಡಲಾಗಿದ್ದು, ಮುಂದೆ ಮೂಲ ಪ್ರಮಾಣ ಪತ್ರ ನೀಡಲಾಗುವುದು ಎಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ನ ಪ್ರತಿನಿಧಿ ಹರೀಶ್ ಆರ್. ತಿಳಿಸಿದರು.