ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ದದ 4ನೇ ಮತ್ತು ಅಂತಿಮ ಟೆಸ್ಟ್ ನಲ್ಲಿ ಪ್ರವಾಸಿ ಭಾರತ ತಂಡ ಪ್ರಬಲ ಆಸ್ಟ್ರೇಲಿಯಾ ತಂಡವನ್ನು 3 ವಿಕೆಟ್ ಗಳ ಅಂತರದಲ್ಲಿ ಮಣಿಸಿ ಟೆಸ್ಟ್ ಸರಣಿಯನ್ನು ಕೈ ವಶ ಮಾಡಿಕೊಂಡಿದೆ.
ಗೆಲುವಿಗೆ ನಾಲ್ಕನೇ ಇನ್ನಿಂಗ್ಸ್ ನಲ್ಲಿ 328 ರನ್ ಗುರಿ ಪಡೆದ ಭಾರತ ತಂಡಕ್ಕೆ ಆರಂಭಿಕ ಶುಭ್ಮನ್ ಗಿಲ್, ಚೇತೇಶ್ವರ ಪೂಜಾರ ಮತ್ತು ರಿಷಭ್ ಪಂತ್ ನೆರವಾದರು. ಮೂವರು ಅರ್ಧಶತಕ ಸಿಡಿಸಿ, ಗಾಬ್ಬಾದಲ್ಲಿ ವಿಶ್ವದಾಖಲೆಯ ಜಯ ಸಾಧಿಸಲು ನೆರವಾದರು.
ವಿಕೆಟ್ ನಷ್ಟವಿಲ್ಲದೆ ನಾಲ್ಕು ರನ್ ಗಳಿಸಿದ್ದಲ್ಲಿಂದ ಐದನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾ ರೋಹಿತ್ ಶರ್ಮಾ ರೂಪದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಕೇವಲ ಏಳು ರನ್ ಗಳಿಸಿ ರೋಹಿತ್ ಔಟಾದರು. ನಂತರ ಜೊತೆಗೂಡಿದ ಪೂಜಾರ- ಗಿಲ್ ಎರಡನೇ ವಿಕೆಟ್ ಗೆ ಶತಕದ ಜೊತೆಯಾಟವಾಡಿದರು.
ತನ್ನ ಎರಡನೇ ಅರ್ಧಶತಕ ಬಾರಿಸಿದ ಶುಭ್ಮನ್ ಗಿಲ್ ಕೇವಲ ಒಂಬತ್ತು ರನ್ ಅಂತರದಲ್ಲಿ ಚೊಚ್ಚಲ ಶತಕ ತಪ್ಪಿಸಿಕೊಂಡರು. 91 ರನ್ ಗಳಿಸಿ ಲಯಾನ್ ಗೆ ವಿಕೆಟ್ ಒಪ್ಪಿಸಿದರು. ತಾಳ್ಮೆಯುತ ಬ್ಯಾಟಿಂಗ್ ನಡೆಸಿದ 56 ರನ್ ಗಳಿಸಿ ಕಮಿನ್ಸ್ ಗೆ ವಿಕೆಟ್ ಒಪ್ಪಿಸಿದರು.
ವೇಗವಾಗಿ ಆಡುವ ಇರಾದೆ ತೋರಿದ ನಾಯಕ ರಹಾನೆ 22 ರನ್ ಗಳಿಸಿ ಔಟಾದರು. ಮಯಾಂಕ್ ಆಟವೂ 9 ರನ್ ಗೆ ಅಂತ್ಯವಾಯಿತು. ಆದರೆ ಉತ್ತಮವಾಗಿ ಬ್ಯಾಟಿಂಗ್ ಮಾಡಿದ ಕೀಪರ್ ರಿಷಭ್ ಪಂತ್ ಅಜೇಯ 89 ರನ್ ಗಳಿಸಿ ತಂಡವನ್ನು ಜಯ ಒದಗಿಸಿದರು.
ಆರಂಭದಲ್ಲಿ ನಿಧಾನಗತಿಯಿಂದ ಬ್ಯಾಟಿಂಗ್ ನಡೆಸಿದ ಪಂತ್, ಅಂತ್ಯದಲ್ಲಿ ಆಕರ್ಷಕ ಶಾಟ್ ಗಳಿಂದ ಗಮನ ಸೆಳೆದರು. 138 ಎಸೆತ ಎದುರಿಸಿದ ಪಂತ್ 9 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ ಅಜೇಯ 89 ರನ್ ಬಾರಿಸಿದರು.
ಆಸೀಸ್ ಪರ ಪ್ಯಾಟ್ ಕಮಿನ್ಸ್ 5 ವಿಕೆಟ್ ಪಡೆದರೆ, ನಥನ್ ಲಯಾನ್ ಎರಡು ಮತ್ತು ಹ್ಯಾಜಲ್ ವುಡ್ ಒಂದು ವಿಕೆಟ್ ಪಡೆದರು.