ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಕಾಸರಗೋಡು ಮೂಲದ ಯುವಕನನ್ನು ಬೆದರಿಸಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ ಪ್ರಕರಣ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ರೇಶ್ಮಾ ಯಾನೆ ನೀಮಾ, ಝೀನತ್ ಮುಬೀನ್, ಇಕ್ಬಾಲ್ ಮಹಮ್ಮದ್, ಅಬ್ದುಲ್ ಖಾದರ್ ನಾಸಿಫ್ ಬಂಧಿತ ಆರೋಪಿಗಳು.
ಈ ಪೈಕಿ ಇಕ್ಬಾಲ್ ಮತ್ತು ಝೀನತ್ ದಂಪತಿಗಳಾಗಿದ್ದು, ಸುರತ್ಕಲ್ ನ ಕಾನ-ಕಟ್ಲಾ ಬಳಿಯ ಬಾಡಿಗೆ ಅಪಾರ್ಟ್ ಮೆಂಟ್ನಲ್ಲಿ ವಾಸವಿದ್ದು, ಇತರರ ರೇಶ್ಮಾ ಮತ್ತು ನಾಸಿಪ್ ಜೊತೆ ಸೇರಿ ಈ ಕೃತ್ಯ ನಡೆಸಿದ್ದಾರೆ.
ಕಾಸರಗೋಡು ಮೂಲದ ಯುವಕನಿಗೆ ಫೇಸ್ಬುಕ್ ಮೂಲಕ ಝೀನತ್ ಮತ್ತು ರೇಶ್ಮಾ ಪರಿಚಯವಾಗಿದ್ದರು. ಇವರಿಬ್ಬರು ಯುವಕನ ಜೊತೆ ಸ್ನೇಹದ ನಾಟಕವಾಡಿ ನಿರಂತರ ಚಾಟ್ ಮಾಡುತ್ತಾ ಬಂದಿದ್ದರು.
ಬಳಿಕ ಆತನನ್ನು’ಮನೆಯಲ್ಲಿ ಯಾರೂ ಇಲ್ಲ’ ಎಂದು ನಂಬಿಸಿ ತಮ್ಮ ಅಪಾರ್ಟ್ಮೆಂಟ್ ಗೆ ಕರೆಸಿಕೊಂಡಿದ್ದು, ಅಲ್ಲಿ ಇಕ್ಬಾಲ್ ಮತ್ತು ನಾಸಿಫ್ ಸಹಾಯದೊಂದಿಗೆ ವಿವಸ್ತ್ರಗೊಳಿಸಿ, ಹಾಕಿ ಸ್ಟಿಕ್ ಮತ್ತಿತರ ವಸ್ತುಗಳಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಐದು ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇಲ್ಲದಿದ್ದರೆ ಫೋಟೋ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿದ್ದಾರೆ ಎಂದು ಪೊಲಿಸ್ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಿದಾಗ ಈ ಹಿಂದೆಯೂ ಹಲವರನ್ನು ಈ ರೀತಿ ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾರೆ. ಆರೋಪಿಗಳಿಂದ ನಗದು, ಮೊಬೈಲ್ ಫೋನ್ಗಳು, ಕೃತ್ಯಕ್ಕೆ ಬಳಸಿದ ಆಯುಧ ಮತ್ತು ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.