ಮೈಸೂರು: ಸಚಿವ ಸಂಪುಟ ವಿಸ್ತರಣೆಯಾದ ನಂತರ, ಬಜೆಟ್ ಮಂಡನೆಯಾಗುವವರೆಗೂ ಯಡಿಯೂರಪ್ಪ ಸಿಎಂ ಆಗಿ ಮುಂದುವರೆಯಬಹುದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗಿರುವ ಮಾಹಿತಿ ಪ್ರಕಾರ ಸಿಎಂ ಯಡಿಯೂರಪ್ಪ ಬದಲಾವಣೆ ಆಗಬೇಕಿತ್ತು. ಆದರೆ, ಈಗಿನ ಸಚಿವ ಸಂಪುಟ ವಿಸ್ತರಣೆ ನಂತರ ಬಜೆಟ್ವರೆಗೂ ಇವರು ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಅನ್ನಿಸುತ್ತೆ ಎನ್ನುವ ಮೂಲಕ ಈವರೆಗೆ ಸಿಎಂ ಬದಲಾವಣೆ ಆಗ್ತಾರೆ ಎಂಬ ಹೇಳಿಕೆಗೆ ವ್ಯತಿರಿಕ್ತವಾಗಿ ಮಾತನಾಡಿದ್ದಾರೆ.
ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. 7 ಜನರನ್ನ ಸಚಿವ ಸಂಪುಟಕ್ಕೆ ತೆಗೆದುಕೊಂಡರು ಸರ್ಕಾರ ಟೇಕ್ ಆಫ್ ಆಗುವುದಿಲ್ಲ. ಏಕೆಂದರೆ ಸರ್ಕಾರ ಸಚಿವ ಸಂಪುಟ ವಿಸ್ತರಣೆಯ ನಂತರ ಮತ್ತಷ್ಟು ಅಧೋಗತಿಗೆ ಹೋಗಲಿದೆ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದರು.
ನಾನು ಈವರೆಗೂ ಗೋಮಾಂಸ ತಿಂದಿಲ್ಲ, ಹಂದಿನೂ ತಿಂದಿಲ್ಲ. ತಿನ್ನಬೇಕು ಅನ್ನಿಸಿದರೆ ತಿನ್ನುತ್ತೇನೆ. ಅದನ್ನ ಕೇಳಲು ಇವರು ಯಾರು? ಆಹಾರ ನನ್ನ ಹಕ್ಕು. ಪೌಷ್ಟಿಕವಾದ ಹೋರಿ ಮಾಂಸ ಆರೋಗ್ಯಕ್ಕೆ ಒಳ್ಳೆಯದು ಎಂದು ಹಿಂದಿನ ಗ್ರಂಥಗಳಲ್ಲೇ ಬರೆದಿದ್ದಾರೆ ಎಂದು ಸಿದ್ದರಾಮಯ್ಯ ಸಮರ್ಥನೆ ನೀಡಿದರು.
ಕೃಷಿ ಮಸೂದೆ ತಿದ್ದುಪಡಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ಹಿನ್ನೆಲೆಯಲ್ಲಿ ಜನವಿರೋಧಿ ಕಾನೂನು ಅಭಿವೃದ್ಧಿಗೆ ಮಾರಕ ಎಂದು ಗೊತ್ತಾಗಿದೆ. ಕೂಡಲೇ ಪ್ರಧಾನಿ ನರೇಂದ್ರ ಮೋದಿ ದೇಶದ ಜನರ ಕ್ಷಮಯಾಚಿಸಬೇಕು ಎಂದು ಅವರು ಆಗ್ರಹಿಸಿದರು.