ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವರ್ತನೆ ಅಕ್ಷಮ್ಯ ಮತ್ತು ಖಂಡನೀಯ. ತಾವೊಬ್ಬ ಅತ್ಯಂತ ಪ್ರಾಮಾಣಿಕ ಅಧಿಕಾರಿ ಎಂದು ಬಿಂಬಿಸಿಕೊಳ್ಳುತ್ತಿರುವ ಇವರು ಜನಪ್ರತಿನಿಧಿಗಳ ಮೇಲೆ ಸವಾರಿ ಮಾಡಲು ಹೊರಟಿದ್ದಾರೆ ಎಂದು ಮಾಜಿ ಸಚಿವ, ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಕಿಡಿಕಾರಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಹಾಸನದಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ ತಮ್ಮ ದಿಢೀರ್ ವರ್ಗಾವಣೆಗೆ ನ್ಯಾಯ ಕೇಳಲು ಕೆಎಟಿಗೆ ಹೋಗಿದ್ದ ಇದೇ ಅಧಿಕಾರಿ ಮೈಸೂರಿನಲ್ಲಿ ಉಲ್ಟಾ ಹೊಡೆದ ಕಥೆ ಇಡೀ ನಾಡಿಗೆ ಗೊತ್ತಿದೆ. ಇಂಥವರಿಂದ ನಾನು ಪಾಠ ಕಲಿಯಬೇಕಿಲ್ಲ ಎಂದು ಗುಡುಗಿದ್ದಾರೆ.
ತನಗೊಂದು ನ್ಯಾಯ, ಪರರಿಗೊಂದು ನ್ಯಾಯ’ ಎನ್ನುವ ಇಂತಹ ಅಧಿಕಾರಿ, ಸಾಂವಿಧಾನಿಕ ಸಂಸ್ಥೆಗಳು/ ಸಮಿತಿಗಳಿಗೆ ಯಾವ ರೀತಿ ಅಧಿಕಾರಿಗಳು ಶಿಷ್ಟಾಚಾರ ಪಾಲಿಸಬೇಕೆಂದು ಸರ್ಕಾರ ಹೊರಡಿಸಿರುವ ಸುತ್ತೋಲೆಗಳನ್ನು ಓದಿ ಮೊದಲು ಅರ್ಥಮಾಡಿಕೊಳ್ಳಲಿ ಎಂದು ಕುಟುಕಿದ್ದಾರೆ.
ಮಾತಿನಲ್ಲಿ ಬ್ರಹ್ಮ ನೀತಿಯಲ್ಲಿ ಕ್ರೋಧಿ
ಈ ಲೋಕದ ಭುಂಜಕರು
ನಾ ಹೆಚ್ಚು ತಾ ಹೆಚ್ಚು ಎಂದು ನಡೆದಾಡುವರಯ್ಯ
ನಾನು ನೀನೆಂಬ ಉಭಯವಳಿದು
ತಾನು ತಾನಾದುದ ನಾನಾರನೂ ಕಾಣೆನಯ್ಯ ಝೇಂಕಾರ ನಿಜಲಿಂಗಪ್ರಭುವೆ
– ಜಕ್ಕಣಯ್ಯ
ಎಂಬ ವಚನವನ್ನೂ ಶಾಸಕರೂ ಆಗಿರುವ ಸಾ.ರಾ.ಮಹೇಶ್ ಟ್ವೀಟ್ ನಲ್ಲಿ ಪ್ರಸ್ತಾಪಿಸಿದ್ದಾರೆ.
ವಿಧಾನಸಭಾ ಕಾಗದ ಪತ್ರಗಳ ಸಮಿತಿಯ ಅಧ್ಯಕ್ಷ ಸಾ.ರಾ. ಮಹೇಶ್ ನೇತೃತ್ವದಲ್ಲಿ ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ಸಭೆ ನಡೆದಿತ್ತು. ‘ವಿಧಾನ ಸಭೆಯ ಸ್ಪೀಕರ್ ಪರವಾಗಿ ಸಮಿತಿಯ ಸದಸ್ಯರು ಇಲ್ಲಿಗೆ ಬಂದಿದ್ದಾರೆ. ಜಿಲ್ಲಾಧಿಕಾರಿ, ಎಸ್ಪಿ ಅಥವಾ ಪೊಲೀಸ್ ಆಯುಕ್ತರು ಸಮಿತಿಯ ಸದಸ್ಯರನ್ನು ಸ್ವಾಗತಿಸಬೇಕಿತ್ತು. ಆದರೆ ಇಲ್ಲಿ ಬರಮಾಡಿಕೊಳ್ಳಲು ಯಾರೂ ಇರಲಿಲ್ಲ’ ಎಂದು ಸಾ.ರಾ. ಅಸಮಾಧಾನ ವ್ಯಕ್ತಪಡಿಸಿದರು.
ವೇದಿಕೆ ಮೇಲೆ ಆಸನದ ವ್ಯವಸ್ಥೆ ಇರದ ಕಾರಣ, ವೇದಿಕೆ ಮುಂಭಾಗದ ಆಸನದಲ್ಲಿ ರೋಹಿಣಿ ಸಿಂಧೂರಿ ಕುಳಿತುಕೊಂಡಿದ್ದಾರೆ. ಬಳಿಕ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾಸ್ಕ್ ಹಾಕಿಕೊಂಡೆ ಮಾತು ಶುರು ಮಾಡಿದ್ದಾರೆ. ಇದನ್ನು ಕಂಡು ಶಾಸಕರು ನಿಮ್ಮ ಮಾತು ಕೇಳುತ್ತಿಲ್ಲ ‘ಮಾಸ್ಕ್ ತೆಗೆದು ಮಾತಾಡಿ’ ಎಂದಿದ್ದಾರೆ. ಅದಕ್ಕೆ ಜಿಲ್ಲಾಧಿಕಾರಿ ಅವರು ಮಾಸ್ಕ್ ತೆಗೆಯಬಾರದು, ಮಾಸ್ಕ್ ತೆಗೆದು ನಾನು ಮಾತಾಡಲ್ಲ. ಈ ಸಭೆಯಲ್ಲಿ ನನಗೆ ಸಂಬಂಧಿಸಿದ ವಿಷಯಗಳ ಚರ್ಚೆ ಇಲ್ಲ. ನೀವೂ ಸಮ್ಮತಿಸಿದ್ದರೆ ನಾನು ಸಭೆಯಿಂದ ಹೋಗುತ್ತೇನೆ ಎಂದಿದ್ದಾರೆ.
ಆಗ ಸಾ.ರಾ.ಮಹೇಶ್, ಮೈಸೂರಿಗೆ ಬಂದ ಕಾಗದ ಪತ್ರಗಳ ಸಮಿತಿಗೆ ನೀವೂ ಸ್ವಾಗತ ಮಾಡಿಲ್ಲ, ಆದರೂ ಪರವಾಗಿಲ್ಲ. ಜಿಲ್ಲಾಧಿಕಾರಿಗಳಿಗೆ ಜಿಲ್ಲೆಯ ಯಾವುದೇ ಸಭೆಯ ಬಗ್ಗೆ ಮಾಹಿತಿ ಕೊಡುವುದು ಕರ್ತವ್ಯ. ಅದಕ್ಕೆ ನಿಮಗೆ ಮಾಹಿತಿ ಕೊಟ್ಟಿದ್ದೇವೆ ಅಷ್ಟೇ. ನಿಮಗೆ ಸಮಯ ಇದ್ದರೆ ಇರಿ, ಬೇರೆ ಕೆಲಸ ಇದ್ದರೆ ಹೋಗಿ ಎಂದು ಸಾರಾ ಮಹೇಶ್ ಹೇಳಿದ್ದಾರೆ. ತಕ್ಷಣ ರೋಹಿಣಿ ಸಿಂಧೂರಿ ಸಭೆಯಿಂದ ಎದ್ದು ಬೇಸರದಿಂದ ಹೊರ ನಡೆದಿದ್ದರು.