ಸಿಡ್ನಿ: ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾದ ಆಟಗಾರರಾದ ಹನುಮ ವಿಹಾರಿ ಮತ್ತು ಆರ್ ಅಶ್ವಿನ್ ಸಮಯೋಚಿತ ಆಟವಾಡಿ ತಂಡಕ್ಕೆ ಆಸರೆಯಾಗಿದ್ದರು. ತಂಡವನ್ನು ಸೋಲಿನ ದವಡೆಯಿಂದ ತಪ್ಪಿಸಿ ಪಂದ್ಯ ಡ್ರಾ ಆಗುವಂತೆ ಮಾಡಿದ್ದಾರೆ.
ಆಸ್ಟ್ರೇಲಿಯಾ ನೀಡಿದ 407 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಟೀಂ ಇಂಡಿಯಾ ಅಂತಿಮ ದಿನದ 5 ವಿಕೆಟ್ ನಷ್ಟಕ್ಕೆ 334 ರನ್ ಗಳಿಸಿದ್ದು ಹೀಗಾಗಿ ಪಂದ್ಯ ಡ್ರಾ ಎಂದು ಘೋಷಿಸಲಾಯಿತು.
ನಿನ್ನೆ ದಿನದಾಟದ ಅಂತ್ಯಕ್ಕೆ ಭಾರತ 98/2 ಗಳಿಸಿತ್ತು. ಇಂದು ಅಂತಿಮ ದಿನದ ಆರಂಭದಲ್ಲೇ ಭಾರತ ಆಘಾತ ಎದುರಿಸಿತು. ಕೇವಲ 4 ರನ್ ಗಳಿಸಿದ್ದ ರಹಾನೆ ಅವರನ್ನು ಲೈಯಾನ್ ಟ್ ಮಾಡಿದರು. ಈ ವೇಳೆ ಪೂಜಾರ ಜೊತೆಗೂಡಿದ ಪಂತ್ ಸಮಯೋಚಿತ ಬ್ಯಾಟಿಂಗ್ ಮೂಲಕ ಭಾರತಕ್ಕೆ ಆಸರೆಯಾದರು. ಈ ಜೋಡಿ ಭೋಜನ ವಿರಾಮದ ವೇಳೆ 104 ರನ್ ಗಳ ಶತಕದ ಜೊತೆಯಾಟವಾಡಿತು.
ನಂತರ ರಿಷಬ್ ಪಂತ್ ಶತಕದ ಅಂಚಿನಲ್ಲಿ ಎಡವಿದ್ದು 97 ರನ್ ಗಳಿಗೆ ಔಟ್ ಆದರು. ಪೂಜಾರ ಸಹ 77 ರನ್ ಗಳಿಗೆ ಔಟಾಗಿದ್ದು ಇದಾದ ಬಳಿಕ ತಂಡದ ಗೆಲುವಿನ ಕನಸು ಕ್ಷೀಣಿಸಿತು. ಕಡಿಮೆ ಓವರ್ ಗಳಲ್ಲಿ ಹೆಚ್ಚು ರನ್ ಪಡೆಯಬೇಕಿದ್ದರಿಂದ ಹನುಮ ವಿಹಾರಿ ಮತ್ತು ಆರ್ ಅಶ್ವಿನ್ ತಾಳ್ಮೆಯ ಆಟವಾಡಿ ತಂಡವನ್ನು ಸೋಲಿನ ದವಡೆಯಿಂದ ತಪ್ಪಿಸಿದರು.
ಅಶ್ವಿನ್ 130 ಎಸೆತಗಳನ್ನು ಎದುರಿಸಿ ಅಜೇಯ 39 ರನ್ ಪೇರಿಸಿದ್ದರೆ ಹನುಮ ವಿಹಾರಿ 160 ಎಸೆತಗಳಲ್ಲಿ ಅಜೇಯ 23 ರನ್ ಬಾರಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು ತಲಾ 1 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಸಮಬಲ ಸಾಧಿಸಿದ್ದಾರೆ. ಇನ್ನು ಜನವರಿ 15ರಿಂದ ಆರಂಭಗೊಳ್ಳುವ ನಾಲ್ಕನೇ ಪಂದ್ಯದಲ್ಲಿ ಯಾರು ಗೆಲುವು ಸಾಧಿಸುತ್ತಾರೆ ಅವರು ಟ್ರೋಫಿಗೆ ಮುತ್ತಿಡಲಿದ್ದಾರೆ.
ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 338 ರನ್ ಗಳಿಗೆ ಆಲೌಟ್ ಆಗಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ಭಾರತ 244 ರನ್ ಗಳಿಗೆ ಸರ್ವಪತನ ಕಂಡಿತ್ತು. 94 ರನ್ ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಆಸ್ಟ್ರೇಲಿಯಾ 312 ರನ್ ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. 406 ರನ್ ಗಳ ಗುರಿ ಬೆನ್ನಟ್ಟಿದ ಭಾರತ 5 ವಿಕೆಟ್ ನಷ್ಟಕ್ಕೆ 334 ರನ್ ಪೇರಿಸಿದೆ.