ನವದೆಹಲಿ: 2021ರ ಜೂನ್ ನಿಂದ ಭಾರತದಲ್ಲಿ ಬಿಐಎಸ್(ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್)ಯೇತರ ಹೆಲ್ಮೆಟ್ ಗಳನ್ನು ಉತ್ಪಾದಿಸುವುದಾಗಲಿ ಅಥವಾ ಮಾರಾಟ ಮಾಡುವುದನ್ನು ನಿರ್ಬಂಧಿಸಲಾಗಿದೆ. ಒಂದು ವೇಳೆ ಬೈಕ್ ಸವಾರರು ಬಿಐಎಸ್ ಪ್ರಮಾಣೀಕೃತ ಹೆಲ್ಮೆಟ್ ಧರಿಸದೇ ಇದ್ದರೆ ಇದು ಕಾನೂನು ಪ್ರಕಾರ ಅಪರಾಧ ಎಂದು ಪರಿಗಣಿಸಲಾಗುತ್ತದೆ ಎಂದು ರಸ್ತೆ ಸಾರಿಗೆ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತದಲ್ಲಿನ ಬಹುತೇಕ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರರು ಸಾವನ್ನಪ್ಪಲು ಹೆಲ್ಮೆಟ್ ಧರಿಸದೇ ಇರುವುದು ಮತ್ತು ಕಳಪೆ ಗುಣಮಟ್ಟದ ಹೆಲ್ಮೆಟ್ ಧರಿಸುತ್ತಿರುವುದು ಮುಖ್ಯ ಕಾರಣವಾಗಿದೆ ಎಂದು ವರದಿ ಹೇಳಿದೆ.
ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ರಸ್ತೆ ಸುರಕ್ಷತಾ ಸಮಿತಿ ಭಾರತದ ಹವಾಮಾನಕ್ಕನುಗುಣವಾಗಿ ಕಡಿಮೆ ಭಾರದ ಹೆಲ್ಮೆಟ್ ಅನ್ನು ಪರಿಗಣಿಸುವಂತೆ ಸೂಚಿಸಿದ್ದು, ಅದರಂತೆ ನೀಡಿರುವ ವರದಿಗೆ ಸಾರಿಗೆ ಸಚಿವಾಲಯ ಒಪ್ಪಿಗೆ ಸೂಚಿಸಿತ್ತು.
ಈ ಹಿನ್ನೆಲೆಯಲ್ಲಿ ಮುಂದಿನ ವರ್ಷದ ಜೂನ್ ನಿಂದ ಎಲ್ಲಾ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಬಿಐಎಸ್ ಪ್ರಮಾಣೀಕೃತ ಹೆಲ್ಮೆಟ್ ಅನ್ನು ಧರಿಸಬೇಕಾಗಿದೆ. ಅಲ್ಲದೇ ಬಿಐಎಸ್ ಪ್ರಮಾಣಿಕೃತ ಹೆಲ್ಮೆಟ್ ಅನ್ನು ಮಾರಾಟ ಮಾಡಬೇಕಾಗಿದೆ. ಇದರಿಂದ ದೇಶದಲ್ಲಿ ಕಡಿಮೆ ಗುಣಮಟ್ಟದ ಹೆಲ್ಮೆಟ್ ಮಾರಾಟಕ್ಕೆ ಕಡಿವಾಣ ಬೀಳಲು ನೆರವಾಗಲಿದೆ ಎಂದು ವರದಿ ತಿಳಿಸಿದೆ.
ಕೇಂದ್ರದ ಈ ನಿರ್ಧಾರವನ್ನು ಸ್ವಾಗತಿಸಿರುವ ಏಮ್ಸ್ ಪ್ರೊ.ಡಾ.ಅಮಿತ್ ಗುಪ್ತಾ, ರಸ್ತೆ ಅಪಘಾತದಲ್ಲಿ ಶೇ.45ರಷ್ಟು ತಲೆ ಭಾಗಕ್ಕೆ ಗಾಯವಾಗುವ ಪ್ರಕರಣಗಳು ದಾಖಲಾಗುತ್ತಿದ್ದು, ಶೇ.30ರಷ್ಟು ಗಂಭೀರ ಸ್ವರೂಪದಲ್ಲಿ ಮೆದುಳಿಗೆ ಪೆಟ್ಟಾಗಿರುತ್ತದೆ. ಇದು ವ್ಯಕ್ತಿಯ ಸಾವು ಅಥವಾ ಅಸಾಮರ್ಥ್ಯಕ್ಕೆ ಕಾರಣವಾಗುತ್ತದೆ. ಅಷ್ಟೇ ಅಲ್ಲ ಲಘು ಪ್ರಮಾಣದಲ್ಲಿ ತಲೆಗೆ ಹೊಡೆತ ಬಿದ್ದಾಗ ನೆನಪಿನ ಶಕ್ತಿಯೂ ಹೋಗುವಂತಹ ಸಂದರ್ಭ ಇರುವುದಾಗಿ ಗುಪ್ತಾ ತಿಳಿಸಿದ್ದಾರೆ.