ಉಡುಪಿ: ಕಳೆದ ಒಂದೂವರೆ ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಇವರು ಡ್ರಗ್ಸ್ ಮಾಫಿಯಾದ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದೆ ಕತ್ತೆ ಕಾಯುತ್ತಿದ್ದರಾ? ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ, ಡ್ರಗ್ಸ್ ಮಾಫಿಯಾದಿಂದಲೇ ಕಾಂಗ್ರೆಸ್ ಸರಕಾರ ಉಳಿದದ್ದು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಹೇಳಿಕೆಗೆ ಅವರು ಈ ರೀತಿ ಪ್ರತಿಕ್ರಿಯೆ ನೀಡಿದರು. ಸಿದ್ಧರಾಮಯ್ಯ ಸರಕಾರ ಡ್ರಗ್ಸ್ ಮಾಫಿಯದಿಂದಲೇ ನಡೆಯುತ್ತಿದ್ದರೆ ಇವರು ಯಾಕೆ ಅಧಿ ವೇಶನದಲ್ಲಿ ಈ ಬಗ್ಗೆ ಒಂದೇ ಒಂದು ಶಬ್ದ ಮಾತನಾಡಿಲ್ಲ. ಗ್ರಾಪಂ ಚುನಾ ವಣೆಯ ಹಿನ್ನೆಲೆಯಲ್ಲಿ ಬಿಜೆಪಿಯವರು ಸಿದ್ಧರಾಮಯ್ಯ ಸರಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತ, ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿ ದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದ ಶಾಸಕರ ಖರೀದಿಯಿಂದಾಗಿಯೇ ಈಗಿನ ಬಿಜೆಪಿ ಸರಕಾರ ನಡೆಯುತ್ತಿದೆ. ಕೊರೋನಾ ಹತೋಟಿಗೆ ತರುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿರುವ ಬಿಜೆಪಿಗೆ ಜನರ ಸಮಸ್ಯೆ ಬಗ್ಗೆ ಯಾವುದೇ ಕಾಳಜಿ ಇಲ್ಲ. ಕೇವಲ ಅಧಿಕಾರ ಹಿಡಿಯುವುದೇ ಇವರ ಉದ್ದೇಶವಾಗಿದೆ. ಆದುದರಿಂದ ಇವರ ಮನೋಸ್ಥಿತಿ ಎಲ್ಲರಿಗೂ ಅರ್ಥವಾಗುತ್ತದೆ. ಅಧಿಕಾರಕ್ಕಾಗಿ ಇವರು ಅಪರೇಷನ್ ಕಮಲ, ಕುದುರೆ ವ್ಯಾಪಾರ ಹಾಗೂ ಶಾಸಕರ ಖರೀದಿಗೆ ಇಳಿಯುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿಯನ್ನು ಐದು ಕೆ.ಜಿ.ಗೆ ಇಳಿಸಿರುವ ಬಿಜೆಪಿ ಸರಕಾರ, ಮುಂದೆ ಈ ಯೋಜನೆಯನ್ನೇ ಕೈಬಿಡುವ ಹುನ್ನಾರ ಮಾಡುತ್ತಿದೆ. ಅದಕ್ಕಾಗಿ ಇವರು ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸುವ ಕಾರ್ಯ ದಲ್ಲಿ ತೊಡಗಿಸಿದ್ದಾರೆ. ಬಡವರಿಗೆ ನೀಡುವ ಈ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುವ ದಂಧೆ ಕೂಡ ಜಿಲ್ಲೆಯಲ್ಲಿ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡರಾದ ಭಾಸ್ಕರ ರಾವ್ ಕಿದಿಯೂರು, ಪ್ರಖ್ಯಾತ್ ಶೆಟ್ಟಿ, ಅಣ್ಣಯ್ಯ ಶೇರಿಗಾರ್, ಕೀರ್ತಿ ಶೆಟ್ಟಿ, ಪ್ರಶಾಂತ್ ಜತ್ತನ್ನ ಹಾಜರಿದ್ದರು.