ಹೈದರಾಬಾದ್: ಮಹಾಮಾರಿ ಕೋವಿಡ್ 19ಗೆ ಲಸಿಕೆ ಕಂಡುಹಿಡಿಯುತ್ತಿರುವ ಹೈದರಾಬಾದ್ನ ಭಾರತ್ ಬಯೋಟೆಕ್ಸ್ ಕೇಂದ್ರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಳೆ (ನವೆಂಬರ್ 28) ಭೇಟಿ ನೀಡಲಿದ್ದಾರೆ.
ಹೈದರಾಬಾದ್ನ ಭಾರತ್ ಬಯೋಟೆಕ್ಸ್ ಕೇಂದ್ರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ ಕೊಡುವ ಬಗ್ಗೆ ತೆಲಂಗಾಣ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಶನಿವಾರ ಭಾರತೀಯ ವಾಯುಪಡೆ ವಿಮಾನದ ಮೂಲಕ ಪುಣೆಯಿಂದ ಹೊರಡಲಿರುವ ಪ್ರಧಾನಿ ಮೋದಿ ಮಧ್ಯಾಹ್ನದ ನಂತರ ತೆಲಂಗಾಣದ ಹಾಕಿಂಪೇಟೆ ವಾಯುಪಡೆ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ನಂತರ ವಾಯುಪಡೆ ನಿಲ್ದಾಣದಿಂದ ನೇರವಾಗಿ ಜಿನೋಮ್ ವ್ಯಾಲಿಯಲ್ಲಿರುವ ಭಾರತ್ ಬಯೋಟೆಕ್ಸ್ ಫೆಸಿಲಿಟಿ ಕೇಂದ್ರಕ್ಕೆ ಭೇಟಿ ನೀಡುತ್ತಾರೆ ಎಂದು ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾರತ್ ಬಯೋಟೆಕ್ ಕೇಂದ್ರದಲ್ಲಿ ಒಂದು ಗಂಟೆ ಇರಲಿರುವ ಪ್ರಧಾನಿ ಮೋದಿ, ಕೋವಿಡ್ ಗೆ ಲಸಿಕೆ ಉತ್ಪಾದನಾ ಪ್ರಕ್ರಿಯೆಯ ವಿವಿಧ ಚಟುವಟಿಕೆಗಳನ್ನು ವೀಕ್ಷಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.