ಸಂಪಾದಕೀಯ
ಈ ಬಾರಿ ನಡೆದ ಬಿಹಾರ ಚುನಾವಣೆಯ ಫಲಿತಾಂಶದ ನಂತರ ಬಹು ಚರ್ಚಿತವಾದ ವಿಚಾರ ‘ಒವೈಸಿಯ ಪಕ್ಷ’ ಚುನಾವಣೆಯಲ್ಲಿ ಸ್ಪರ್ಧಿಸಿದ್ದು!. ಚರ್ಚೆಗೆ ಕಾರಣ ಹೈದರಾಬಾದ್ ಮೂಲದ ಸಂಸದ ಅಸಾವುದ್ದೀನ್ ಒವೈಸಿಯ ಪಕ್ಷವಾದ ಎ.ಐ.ಎಮ್.ಐ.ಎಮ್ ಪಕ್ಷವು 24 ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ 5 ಕ್ಷೇತ್ರವನ್ನು ಗೆದ್ದುಕೊಂಡಿದೆ. ಹಲವು ಪ್ರದೇಶಗಳಲ್ಲಿ ಕಾಂಗ್ರೆಸ್ ಸೋಲಲು ಈ ಪಕ್ಷ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇ ಕಾರಣವೆಂದು ಒಂದು ದೊಡ್ಡ ವರ್ಗ ಆರೋಪಿಸಿತು.
ಸ್ವತಃ ಮುಸ್ಲಿಮ್ ಸಮುದಾಯದಲ್ಲಿ ಪರ ವಿರೋಧ ಚರ್ಚೆಗಳು ನಡೆದವು. ದೇಶದಲ್ಲಿ ನಡೆಯುತ್ತಿರುವ ಹಲವು ಬೆಳವಣಿಗೆಗಳ ಲಾಭ ಪಡೆದ ಒವೈಸಿ ದೇಶದಾದ್ಯಂತ ತನ್ನ ಪಕ್ಷದ ಪ್ರಭಾವವನ್ನು ವಿಸ್ತರಿಸುತ್ತಿರುವುದು ಸುಳ್ಳಲ್ಲ. ಹಾಗಂತ ಒವೈಸಿ ಏನು ಮುಸ್ಲಿಮರ ಸರ್ವಶಕ್ತರೂ ಅಲ್ಲ, ಹಿತಾಸಕ್ತಿ ರಕ್ಷಕರೂ ಅಲ್ಲ.
ಆದರೆ ಈ ಲೇಖನದಲ್ಲಿ ಬಹು ಮೂಲ್ಯ ವಾಗಿ ಚರ್ಚಿಸಬೇಕಾದ ವಿಚಾರ ಜಾತ್ಯತೀತತೆಯನ್ನು ರಕ್ಷಿಸುವ ಹೊಣೆ ಮುಸ್ಲಿಮರ ಮೇಲೆ ಮಾತ್ರ ಇದೆಯೇ? ಎಂಬ ಕಠಿಣ ಪ್ರಶ್ನೆ. ಕಾಂಗ್ರೆಸ್ ಪಕ್ಷ ಕಳೆದ ಕೆಲವು ವರ್ಷದಿಂದ ಸೈದ್ಧಾಂತಿಕವಾಗಿ ಸೋತಿರುವುದನ್ನು ಅದರ ಅಭ್ಯರ್ಥಿಗಳು ಸಾಬೀತು ಪಡಿಸುತ್ತಲೇ ಬಂದಿದ್ದಾರೆ. ಅದಕ್ಕೆ ಮಧ್ಯ ಪ್ರದೇಶ, ರಾಜಸ್ತಾನ, ಕರ್ನಾಟಕದಲ್ಲಿ ನಡೆದ ಪ್ರಹಸನ ಪ್ರದರ್ಶನಗಳೇ ಸಾಕ್ಷಿ. ಇಲ್ಲಿ ಯಾವ ಮುಸ್ಲಿಮರು ಅವರ ವಿರುದ್ಧ ಅಭ್ಯರ್ಥಿ ನಿಲ್ಲಿಸಲಿಲ್ಲ. ಅಥವಾ ಒಬ್ಬನೇ ಒಬ್ಬ ಮುಸ್ಲಿಂ ವಿಜೇತ ಅಭ್ಯರ್ಥಿ ಬಿಜೆಪಿಗೆ ಲಾಗ ಹಾಕಿಲ್ಲ. ಜಾತ್ಯತೀತತೆಯ ಹೆಸರಿನಲ್ಲಿ ಮತ ಪಡೆದು ಹಾರಿದ್ದು ಕಾಂಗ್ರೇಸಿನ ಶಾಸಕರೇ!!
ಪ್ರತಿ ಭಾರೀ ಯಾವುದೇ ಕ್ಷೇತ್ರದಲ್ಲಿ ಮುಸ್ಲಿಮರು ಕಾಂಗ್ರೆಸ್, ಜೆ.ಡಿ.ಎಸ್ (ಕರ್ನಾಟಕ) ಅಥವಾ ಇತರ ರಾಜ್ಯದಲ್ಲಿ ಮುಖ್ಯವಾಹಿನಿಯಲ್ಲಿರುವ ಪಕ್ಷದ ಹೊರತು ಇತರ ಪಕ್ಷದಲ್ಲಿ ಚುನಾವಣಾ ಕಣಕ್ಕಿಳಿದಾಗ ಕಾಂಗ್ರೆಸ್ ಮತ ಬ್ಯಾಂಕ್ ಹಾಳಾಗುತ್ತದೆ. ಜಾತ್ಯತೀತ ಮತಗಳ ವಿಂಗಡಣೆಯಾಗುತ್ತದೆ ಎಂಬ ಕೂಗು ಕೇಳಿ ಬರುತ್ತದೆ. ಎಲ್ಲೊ ಒಂದು ಕಡೆ ಕಾಂಗ್ರೆಸ್’ನ ಈ ಪೊಳ್ಳು ಕೂಗೂ ಇಡೀ ಮುಸ್ಲಿಮ್ ಸಮುದಾಯವನ್ನು ರಾಜಕೀಯ ಪ್ರಾತಿನಿಧ್ಯದಿಂದ ದೂರ ಇರಿಸಿದೆ ಎಂಬುವುದು ಮಾತ್ರ ಸುಳ್ಳಲ್ಲ!!
ಕಾಂಗ್ರೆಸ್ ಇಂದು ಬಿಜೆಪಿಯ ಧರ್ಮ ರಾಜಕೀಯದ ಮೃಧು ಧೋರಣೆಯನ್ನು ತನ್ನಲು ಲೀನಗೊಳಿಸಿದೆ. ಅಭ್ಯರ್ಥಿಗಳ ಪಟ್ಟಿಯಲ್ಲೂ ಅದು ಮುಸ್ಲಿಮ್ ಅಭ್ಯರ್ಥಿಗಳ ಹೆಸರನ್ನು ಕಡಿತಗೊಳಿಸಿದೆ. ಅದಕ್ಕೆ ಅದು ನೀಡುವ ಕಾರಣ ಮುಸ್ಲಿಮರಿಗೆ ಮತ ಹಾಕುವುದಿಲ್ಲ. ಹಾಗಂತ ಅದರ ಇತರ ಅಭ್ಯರ್ಥಿಗಳು ಗೆದ್ದ ಅಂಕಿ ಅಂಶ ಕೂಡ ನೀರಸ. ಜಾತ್ಯಾತೀತ ಪಕ್ಷ ಒಂದು ಆಡಲೇ ಬಾರದಂತಹ ಮಾತು “ಮುಸ್ಲಿಮರು ಗೆಲ್ಲುವುದಿಲ್ಲ”. ಅಂತಹ ವಾತವರಣ, ಭಾವನೆ ಕಿತ್ತೆಸೆಯಬೇಕಾದ ಕಾಂಗ್ರೆಸ್ ಪಕ್ಷ ತನ್ನ ಸೈದ್ಧಾಂತಿಕ ದಿವಾಳಿತನಕ್ಕೆ ಪ್ರತಿ ಸಲ ಸಾಕ್ಷಿ ಹೇಳುತ್ತದೆ. ಇದೀಗ ಮತ್ತೆ ಬಿಹಾರ ಚುನಾವಣೆಯಲ್ಲಿ ಒವೈಸಿಯ ಮೇಲೆ ಗೂಬೆ ಕೂರಿಸಲಾಗುತ್ತಿದೆ.
ಒವೈಸಿ 24 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರು. ಕಾಂಗ್ರೆಸ್ 70 ಸ್ಥಾನದಲ್ಲಿ ಕೇವಲ ಹತ್ತೊಂಬತ್ತು ಸ್ಥಾನದಲ್ಲಿ ಗೆದ್ದರು. ಹಾಗದರೆ 24 ಕ್ಷೇತ್ರ ಬಿಟ್ಟು ಉಳಿದ ಕಡೆ ಸೋಲಲು ಕಾರಣವೇನು?.
ದೀರ್ಘ ಸಮಯದ ನಂತರ ರಾಜಕೀಯ ವ್ಯಾಖ್ಯಾನವನ್ನು ಸ್ಪಷ್ಟ ಪಡಿಸಬೇಕಾಗಿದೆ. ಅದರಲ್ಲೊಂದು ಮುಸ್ಲಿಮ್ ಸಮುದಾಯ ತನ್ನ ಸಾಮರ್ಥ್ಯದ ಪ್ರದೇಶಗಳಲ್ಲಿ ಮುಸ್ಲಿಮ್ ರಾಜಕೀಯ ಪ್ರಾತಿನಿಧ್ಯ ಧೈರ್ಯವಾಗಿ ಕೇಳಬೇಕು. ಈ ಜಾತ್ಯತೀತತೆಯನ್ನು ಉಳಿಸುವ ಕೆಲಸ ಕೇವಲ ಮುಸ್ಲಿಮರಿಗೆ ಮಾತ್ರವೇ ಎಂಬ ಪ್ರಶ್ನೆ ಮುಂದಿಡಬೇಕು. ಇತರ ಸಮುದಾಯಗಳಂತೆ ಶೈಕ್ಷಣಿಕ, ಅರ್ಥಿಕ, ರಾಜಕೀಯ ಮತ್ತು ಸಾಮಾಜಿಕವಾಗಿ ಸುಧೃಢವಾಗುವ ಹಕ್ಕು ಮುಸ್ಲಿಮ್ ಸಮುದಾಯಕ್ಕೂ ಇದೆಯೆಂಬುವುದನ್ನು ಗಟ್ಟಿ ಧ್ವನಿಯಲ್ಲಿ ಕೇಳಬೇಕಾಗಿದೆ.
ಅದರೊಂದಿಗೆ ಅತೀ ಮುಖ್ಯವಾಗಿ ಕಾಂಗ್ರೆಸ್ ಪಕ್ಷದ ಜಾತ್ಯತೀತ ಸಿದ್ಧಾಂತದಲ್ಲಿ ಪ್ರವೇಶಿಸಿರುವ ಅತೀ ದೊಡ್ಡ ತೂತನ್ನು ಅದು ಯಾವ ರೀತಿ ಸರಿ ಪಡಿಸಬೇಕು ಎಂಬುವುದು. ಅದರಲ್ಲಿ ಆಯ್ಕೆಯಾದ ‘ಜಾತ್ಯತೀತ’ ಅಭ್ಯರ್ಥಿಗಳು ಅಧಿಕಾರದ ಆಸೆಗೆ ಇತರ ಪಕ್ಷಕ್ಕೆ ಹಾರದಂತೆ ಈ ದೇಶದ ಜನರಿಗೆ ವಾಗ್ದಾನ. ಇದು ಎಲ್ಲಿಯವರೆಗೆ ಸಾಧ್ಯವಾಗುವುದಿಲ್ಲವೋ ಮುಸ್ಲಿಮ್ ಸಮುದಾಯ ಇತರ ಸಮುದಾಯಗಳಂತೆ ರಾಜಕೀಯ ಪ್ರಾತಿನಿಧ್ಯದೊಂದಿಗೆ ತನ್ನ ಹಕ್ಕನ್ನು ಗಟ್ಟಿ ಧ್ವನಿಯಲ್ಲಿ ಕೇಳಲು ಸಾಧ್ಯವಾಗುವುದಿಲ್ಲ.
ಕೊನೆಯದಾಗಿ ಈ ಪ್ರಕ್ರಿಯೆಯಲ್ಲಿ ಸಮುದಾಯ ಸಂಪೂರ್ಣವಾಗಿ ಕೋಮುವಾದಿ ಧೋರಣೆಯ ಯಾವ ಉಪಟಳಕ್ಕೂ ಗುರಿಯಾಗದೆ ಜಾಗೃತವಾದ ಹೆಜ್ಜೆ ಇಡುವುದು ಕೂಡ ಅಷ್ಟೇ ಅನಿವಾರ್ಯ ಮತ್ತು ಪ್ರಮುಖವಾಗಿದೆ.