ಉಡುಪಿ, ಅ.26: ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಕುಕ್ಕೆಹಳ್ಳಿಯ ರಕ್ಷಿತಾ ನಾಯಕ್(19) ಸಾವಿಗೆ ಕಾರಣ ಪೊಲೀಸ್ ತನಿಖೆಯಿಂದ ತಿಳಿದು ಬಂದಿದ್ದು, ಪ್ರಿಯಕರ ಪ್ರಶಾಂತ್ ಕುಂದರ್(24) ತನ್ನ ಕುಟುಂಬ ತ್ಯಜಿಸಿ ಬಾರದಿರುವುದಕ್ಕೆ ಮನನೊಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಈ ಬಗ್ಗೆ ರಕ್ಷಿತಾ ಮನೆಯವರು ಆಕೆಯ ಸಾವಿನಲ್ಲಿ ಸಂಶಯ ಇರುವುದಾಗಿ ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರಂತೆ ಪ್ರಶಾಂತ್ ಕುಂದರ್ನನ್ನು ವಿಚಾರಣೆಗೆ ಒಳಪಡಿಸಿದಾಗ ಈ ವಿಚಾರ ಬೆಳಕಿಗೆ ಬಂತೆನ್ನ ಲಾಗಿದೆ. ಇನ್ನು ಆಕೆಯ ಸಾವಿಗೆ ನಿಖರವಾದ ಕಾರಣ ಮರಣೋತ್ತರ ಪರೀಕ್ಷೆಯಿಂದ ತಿಳಿದುಬರಬೇಕಾಗಿದೆ.
ಇವರು ಸಾಮಾಜಿಕ ಜಾಲತಾಣ ಇನ್ಸ್ಟಗ್ರಾಮ್ ಮೂಲಕ ಪರಿಚಯವಾಗಿ ಪರಸ್ಪರ ಪ್ರೀತಿಸುತ್ತಿದ್ದರು. ಪ್ರಶಾಂತ್ ಮದುವೆಯಾಗಿರುವ ವಿಚಾರ ತಿಳಿಯದ ಆಕೆ, ನಂತರ ಗೊತ್ತಾಗಿ ಪತ್ನಿಯನ್ನು ತೊರೆದು ಬರುವಂತೆ ಒತ್ತಾಯ ಹಾಕುತ್ತಿದ್ದಳು. ಆದರೆ ಪ್ರಶಾಂತ್ ಇದನ್ನು ನಿರಾಕರಿಸಿದ್ದನು.
ಇದೇ ವಿಚಾರದಲ್ಲಿ ಮನನೊಂದ ಆಕೆ, ಅ.24ರಂದು ಪ್ರಶಾಂತ್ಗೆ ಕರೆ ಮಾಡಿ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದಳು. ಇದರಿಂದ ಬೆದರಿದ ಆತ, ಕೂಡಲೇ ಅಂಬಾಗಿಲಿಗೆ ತೆರಳಿದ್ದಾನೆ. ಅಲ್ಲಿ ಆಕೆ ನೇಣಿಗೆ ಶರಣಾಗಿರುವುದು ಕಂಡುಬಂದಿದೆ. ತಕ್ಷಣ ಆಕೆಯನ್ನು ರಿಕ್ಷಾದಲ್ಲಿ ಕರೆದುಕೊಂಡು ಹೋಗಿ ಉಡುಪಿ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದನು. ಅಲ್ಲಿ ಆಕೆ ಮೃತಪಟ್ಟಿರುವುದು ತಿಳಿದು ಆತ ಪರಾರಿಯಾಗಿದ್ದನು.