ಬೆಂಗಳೂರು,(ಅ.22)- ನಳೀನ್ ಕುಮಾರ್ ಕಟೀಲ್ ಅವರು ಬರೇ ಕಾಡಿನಲ್ಲಿರೋಕೆ ಲಾಯಕ್ಕು, ಕಾಡುಪ್ರಾಣಿಗಳಂತೆ ವರ್ತಿಸುತ್ತಾರೆ. ಅವರನ್ನು ಕಾಡಿನಲ್ಲಿ ಬಿಟ್ಟು ಬನ್ನಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವ ತಾಕತ್ತಿಲ್ಲದ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ನಾಲಿಗೆಯಲ್ಲಷ್ಟೆ ಅಲ್ಲ ಬೆನ್ನಲ್ಲೂ ಮೂಳೆ ಇಲ್ಲ. ಅವರನ್ನು ಒಂದಷ್ಟು ದಿನ ಪಕ್ಷದ ಕಚೇರಿಯಲ್ಲಿ ಕಸ ಗುಡಿಸಲು ಹೇಳಿ ಅಥವಾ ಕರೆದುಕೊಂಡು ಹೋಗಿ ಕಾಡಿಗೆ ಬಿಟ್ಟು ಬನ್ನಿ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ನಿನ್ನೆ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ನಳೀನ್ ಕುಮಾರ್ ಕಟೀಲ್ ಉಪಚುನಾವಣೆ ಫಲಿತಾಂಶದ ಬಳಿಕ ಬಂಡೆ ಛಿದ್ರವಾಗುತ್ತೆ, ಹುಲಿಯಾ ಕಾಡಿಗೆ ಹೋಗುತ್ತೆ ಎಂದು ಲೇವಡಿ ಮಾಡಿದ್ದರು.ಇದಕ್ಕೂ ಮೊದಲು ಕಾಂಗ್ರೆಸ್ ಪಕ್ಷವನ್ನು ಅರಬ್ಬಿ ಸಮುದ್ರಕ್ಕೆ ಹಾಕಬೇಕು ಎಂದು ಟೀಕಿಸಿದ್ದರು. ಎಲ್ಲದಕ್ಕೂ ಸೇರಿಸಿ ಇಂದು ಪತ್ರಿಕಾ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಕಟು ಶಬ್ದಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ತಮ್ಮ ಹೇಳಿಕೆಯಲ್ಲಿ ಸಿದ್ದರಾಮಯ್ಯ, ಕಾಡಿಗೆ ಹುಲಿ ಓಡಿಸುತ್ತೇನೆ, ಬಂಡೆ ಒಡೆಯುತ್ತೇನೆ ಎಂದು ಹೇಳಿಕೊಂಡು ತಿರುಗಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಒಬ್ಬ ಕಾಡು ಮನುಷ್ಯ, ನಾಗರಿಕ ಜಗತ್ತಲ್ಲಿ ಇರಲು ನಾಲಾಯಕ್ ಆಗಿರುವ ಈ ವ್ಯಕ್ತಿಯನ್ನು ನಾಡಿನ ಜನರ ಹಿತದೃಷ್ಟಿಯಿಂದ ಬಿಜೆಪಿ ತಕ್ಷಣ ಕಾಡಿಗೆ ಕೊಂಡು ಹೋಗಿ ಬಿಡಬೇಕು ಎಂದಿದ್ದಾರೆ.