ಬೆಂಗಳೂರು : ಕೊರೊನಾ ವೈರಸ್ ಗೆ ತುತ್ತಾಗಿ ಆಸ್ಪತ್ರೆಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಗುಣಮುಖರಾಗಿ ನಿನ್ನೆ ರಾತ್ರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸುರೇಶ್ ಕುಮಾರ್, ನಿನ್ನೆ ರಾತ್ರಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆ ಸೇರಿದ್ದೇನೆ. ಸೋಮವಾರ, ಅಕ್ಟೋಬರ್ 5 ರಂದು ನನಗೆ ಕೊರೋನಾ ಸೋಂಕು ತಗುಲಿದೆ ಎಂದು ತಿಳಿದಾಗ ಬಿಬಿಎಂಪಿ ತಂಡದ ಸಲಹೆಯಂತೆ ನಾನು ಮನೆಯಲ್ಲಿಯೇ ಹೋಂ ಐಸೋಲೇಷನ್ ನಲ್ಲಿದ್ದೆ. ವೈದ್ಯರು ಸೂಚಿಸಿದ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದೆ. ಆದರೆ ಅಕ್ಟೋಬರ್ 10 ರಂದು ನನ್ನ ಮನೆಗೆ ಬಂದ ವೈದ್ಯರೊಬ್ಬರು ನನ್ನ ಉಸಿರಾಟದಲ್ಲಿ ವ್ಯತ್ಯಾಸವನ್ನು ಗಮನಿಸಿ ತಕ್ಷಣ ಪರೀಕ್ಷೆಗೆ ಒಳಗಾಗ ಬೇಕೆಂದು ಆಗ್ರಹಿಸಿದರು.
ಅವರ ಸೂಚನೆ ಮೇರೆಗೆ ನಾನು ಅವರೊಡನೇ ಹೋಗಿ ಶ್ವಾಸಕೋಶದ ಸಿಟಿ ಸ್ಕ್ಯಾನ್ (CT -Scan) ಗೆ ಒಳಗಾದೆ. ಆಗ ನನ್ನ ಶ್ವಾಸಕೋಶಕ್ಕೆ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿಯೇ ಸೋಂಕು ಹರಡಿದೆ ಎಂದು ತಿಳಿದುಬಂತು. ಕಳೆದ ಎಂಟು ದಿನಗಳಿಂದ ನನಗೆ ಎಲ್ಲಾ ರೀತಿಯ ಚಿಕಿತ್ಸೆ ನೀಡಿ, ಶುಶ್ರೂಷೆ ಮಾಡಿ ನನ್ನನ್ನು ಗುಣಮುಖನಾಗುವ ಹಾದಿಗೆ ತಂದ ಡಾ. ಶಶಾಂಕ್, ಡಾ. ಶ್ರೀನಾಥ್, ಡಾ. ಪೂರ್ಣ ಪ್ರಸಾದ್, ಡಾ. ಕೃಪೇಶ್ ಮತ್ತು ಎಲ್ಲಾ ದಾದಿಯರಿಗೆ ಕೃತಜ್ಞತೆಗಳನ್ನು ತಿಳಿಸಿದ್ದಾರೆ.