ಸಂಪಾದಕೀಯ
ಹೌದು! ಹಣದ ಆಸೆ, ಅಧಿಕಾರದ ವ್ಯಾಮೋಹ ಇತ್ತೀಚಿಗೆ ಜನಪ್ರತಿನಿಧಿಗಳೆನಿಸಿಕೊಂಡವರಲ್ಲಿ ವ್ಯಾಪಕವಾಗುತ್ತಿದೆ. ಆ ಪ್ರಯುಕ್ತ ಪಕ್ಷಾಂತರವಾಗುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಮಾರ್ಕೆಟ್ ನಲ್ಲಿ ಯಾವ ಪಕ್ಷಕ್ಕೆ ಮೌಲ್ಯವಿದೆಯೆಂದು ನೋಡಿ ಹಾರುವವರ ಸಂಖ್ಯೆ ಬಹಳಷ್ಟಿದೆ. ಹೆಸರಿಗೆ ಮಾತ್ರ ಜನ ಸೇವೆ, ಉಳಿದಿದೆಲ್ಲವೂ ಪ್ಯೂರ್ಲಿ ವ್ಯಾಪರ!
ಬಿಜೆಪಿ ಹೇಗೂ ಇವತ್ತು ಮಾರ್ಕೆಟ್ ನಲ್ಲಿ ಓಡುತ್ತಿರುವ ಉತ್ಪನ್ನ. ಹಣ ಇದೆ. ಅಧಿಕಾರವೂ ಇದೆ. ಅದರೊಂದಿಗೆ ಜನರನ್ನು ಕೂಡ ಅಡ್ಡ ದಾರಿಯಲ್ಲದರೂ ಸರಿ ತನ್ನ ಹಿಡಿತದಲ್ಲಿ ಹಿಡಿದಿಟ್ಟುಕೊಂಡಿದೆ. ಸೋ ಎಲ್ರಿಗೂ ಅಲ್ಲಿ ಹೋದ್ರೆ ಸಿಕ್ಕಾಪಟ್ಟೆ ಗಳಿಸಬಹುದೆಂಬ ವ್ಯಾಮೋಹ!
ಕಾಂಗ್ರೆಸ್ ಅಧಿಕಾರದಲ್ಲಿರುವಾಗ ತನ್ನ ಸಿದ್ಧಾಂತ, ಕಾರ್ಯಕರ್ತರ ಕಡೆ ಗಮನ ಕೊಡದ ಹಿನ್ನಲೆಯಲ್ಲಿ ‘ಮಾಡಿದುಣ್ಣು ಮಾರಾಯ’ ಎಂಬ ಸ್ಥಿತಿಯಲ್ಲಿದೆ. ಇನ್ನು ಬಿಜೆಪಿಯೇನು ಸಾಚಾ ಪಕ್ಷವಲ್ಲ. ಆಪರೇಷನ್ ಕಮಲ ಎಂಬ ಭ್ರಷ್ಟ ದಾರಿಯಲ್ಲೇ ಒಳಗೆ ಪ್ರವೇಶಿಸಿ ಪ್ರವೇಶಿಸಿ ಅಭ್ಯಾಸವಾಗಿದೆ. ಅದೇನೇ ಇರಲಿ ಅವರವರ ಕರ್ಮ!
ಆದರೆ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಹಾರುತ್ತಿರುವ ಶಾಸಕರಿಗಾಗಲಿ, ಕಾಂಗ್ರೆಸ್ ಮುಖಂಡರಿಗೆ ಏನು ದಕ್ಕಿದೆ?. ಅದಕ್ಕಿಂತ ಹೆಚ್ಚು ಪಟ್ಟು ಅವರಿಗೆ ಕಾಂಗ್ರೆಸ್ ನೀಡಿದೆಯೆಂಬುವುದು ವಾಸ್ತವ. ಕರ್ನಾಟಕದ ಕಾಂಗ್ರೇಸ್ ಪ್ರಭಾವಿ ನಾಯಕ ಎಸ್.ಎಮ್ ಕೃಷ್ಣ ಅವರಿಗೆ ಕಾಂಗ್ರೆಸ್ ಪಕ್ಷ ಏನು ಮಾಡಿಲ್ಲ ಹೇಳಿ?. ಮುಖ್ಯಮಂತ್ರಿ ಅದು ಕೂಡ ಐದು ವರ್ಷ. ಇನ್ನು ಅದರ ನಂತರ ರಾಜ್ಯಪಾಲ ಸ್ಥಾನವನ್ನೂ ನೀಡಿ ಗೌರವಿಸಿತು. ಆದರೆ ಎಲ್ಲವನ್ನೂ ಬಿಟ್ಟು ಬಿಜೆಪಿ ಹಾರಿದರು (ಕಾರಣ ಬಹಳಷ್ಟಿದೆ). ಈಗ ಅವರ ಅವಸ್ಥೆ ಏನು?!. ಪಕ್ಷದಲ್ಲಿ ಅವರನ್ನು ಮೂಸಿ ನೋಡುವವರಿಲ್ಲ ತಾನೇ?.
ಕ್ಲಿನ್ ಹ್ಯಾಂಡ್ ಎಂದು ಹೆಸರು ಮಾಡಿದ್ದ ಮಾಜಿ ಸಂಸದರಾದ ಜಯ ಪ್ರಕಾಶ್ ಹಗ್ಡೆಯವರು ಸ್ವತಂತ್ರ ಅಭ್ಯರ್ಥಿಯಿದ್ದಾಗಲೂ ಇಷ್ಟೊಂದು ತೆರೆ ಹಿಂದೆ ಸರಿದಿಲ್ಲ. ಈಗ ಕಾಂಗ್ರೆಸ್ ನಿಂದ ಬಿಜೆಪಿ ಹಾರಿದ ಮೇಲೆ ಅವರ ಬಗೆಗಿನ ಸುದ್ದಿಯೇ ವಿರಳ.
ಇಷ್ಟೇ ಯಾಕೆ ಕರ್ನಾಟಕದಲ್ಲಿ ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿಗೆ ಹಾರಿದ ಶಾಸಕರ ಅವಸ್ಥೆಯೇನು? ಫ್ರಿ ಹ್ಯಾಂಡಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿದೆಯೇ? ಸಚಿವ ಡಾ.ಸುಧಾಕರ್ ಅವರನ್ನೇ ನೋಡಿ ಎಷ್ಟೊಂದು ಕಿರಿಕಿರಿ ಅನುಭವಿಸುತ್ತಿದ್ದಾರೆ. ಇನ್ನು ವಿಶ್ವನಾಥ್ ಬಿಜೆಪಿ ಪಕ್ಷಕ್ಕೆ ಹೋದ ಮೇಲೆ ಕಡಿದು ಕಟ್ಟೆ ಹಾಕಿದ್ದು ಏನು? ಇವತ್ತು ಅವರನ್ನು ಮೂಸಿ ನೋಡುವವರಿಲ್ಲ.
ಮಧ್ಯ ಪ್ರದೇಶದ ಜ್ಯೋತಿರಾಧಿತ್ಯ ಸಿಂಧಿಯಾ ಬಿಜೆಪಿ ಸೇರಿದ ಮೇಲೆ ಅವರ ವರ್ಚಸ್ಸೇ ಠುಸ್ಸಾಗಿದೆ. ಎಷ್ಟೇ ಆಗಲಿ ಅಧಿಕಾರಕ್ಕಾಗಿ ತನ್ನನ್ನು ಕೈ ಹಿಡಿದು ಬೆಳೆಸಿದ ಪಕ್ಷಕ್ಕೆ ದ್ರೋಹ ಎಸಗಿ ಮುಂದುವರಿದರೆ ಉದ್ಧಾರವಾಗಲು ಸಾಧ್ಯವೇ?
ಇದೀಗ ಸಚಿನ್ ಪೈಲೆಟ್ ಸರದಿ ಇವರಿಗೂ ಕಾಂಗ್ರೆಸ್ ಬಹಳಷ್ಟು ಹುದ್ದೆ ನೀಡಿತ್ತು. ಯುವ ರಾಜಕಾರಣಿ ಕೇಂದ್ರ ಸಚಿವ ಸ್ಥಾನದಿಂದ ಹಿಡಿದು ರಾಜಸ್ಥಾನದಲ್ಲಿ ಉಪ ಮುಖ್ಯಮಂತ್ರಿವರೆಗಿನ ಸ್ಥಾನಮಾನ ನೀಡಿತ್ತು. ಅಷ್ಟೇ ಅಲ್ಲ ಭವಿಷ್ಯದಲ್ಲಿ ಕಾಂಗ್ರೆಸ್’ನ ಪ್ರಮುಖ ಹುದ್ದೆಗಳ ಕೂಡ ಅವಕಾಶ ವಿಫುಲವಾಗಿತ್ತು. ಆದರೆ ಸಚಿನ್ ಪೈಲೆಟ್ ಅಧಿಕಾರ ವ್ಯಾಮೋಹದಿಂದಾಗಿ ಬಿಜೆಪಿಯತ್ತ ಮುಖ ಮಾಡಿದ್ದು ಸ್ವತಃ ತಮ್ಮ ರಾಜಕಾರಣದ ಗೋರಿ ತೋಡಿಕೊಳ್ಳುತ್ತಿದ್ದಾರೋ? ಎಂದು ಅನಿಸುತ್ತಿದೆ.
ಬಿಜೆಪಿಯಲ್ಲಿರುವ ಮುಖಂಡರು, ಶಾಸಕರು ಯಾಕೆ ಈ ವಲಸಿಗರನ್ನು ಸಹಿಸಬೇಕು. ಅಧಿಕಾರಕ್ಕಾಗಿ ಅವರನ್ನು ಕರೆ ತರುತ್ತಾರೆ. ಆದರೆ ಅವರನ್ನು ಪಕ್ಷದಲ್ಲಿ ಖಂಡಿತ ಬೆಳೆಯಲು ಬಿಡುವುದಿಲ್ಲ. ಏಕೆಂದು ನಿಮಗೂ ಗೊತ್ತು.ಅದು ಅವರ ಬುಡಕ್ಕೆ ಏಟು ಕೊಡುತ್ತದೆ.ಆದ್ದರಿಂದ ವಲಸೆ ನಾಯಕರು, ಪಕ್ಷಾಂತರಿಗಳು ಬೆಳೆಯಲು ಸಾಧ್ಯವೇ ಇಲ್ಲ. ‘ಯುಝ್ ಎಂಡ್ ಥ್ರೊ’ ಥಿಯರಿ ಗೊತ್ತಿದ್ದವರಿಗೆ ಇದೆಲ್ಲ ಅರ್ಥವಾಗುತ್ತದೆ.
ಇವತ್ತಿಗೂ ಹಾಲಡಿ ಶ್ರೀನಿವಾಸ ಶೆಟ್ಟಿಯವರಿಗೆ ಸಚಿವ ಸ್ಥಾನ ದೊರಕಿಲ್ಲ ಯಾಕೆ? ಅದೇ ಶಾಸಕರಲ್ಲದಿದ್ದರೂ ಶ್ರೀ ಕೋಟ ನಿವಾಸ್ ಪೂಜಾರಿ ಅವರಿಗೆ ಸಚಿವ ಸ್ಥಾನ ಸಿಗುತ್ತದೆ. ಬಿಜೆಪಿಯಲ್ಲಿ ನಡೆಯುವುದು ಮಾತೃ ಸಂಘಟನೆ ಆರ್.ಎಸ್.ಎಸ್ ಕೈ ಚಳಕ.
ಇಷ್ಟೆಲ್ಲಾ ಗೊತ್ತಿದ್ದೂ ಕ್ಷಣಿಕ ಅಧಿಕಾರಕ್ಕಾಗಿ ಕಾಂಗ್ರೆಸ್ ಶಾಸಕರು, ಮುಖಂಡರು ತಮ್ಮ ರಾಜಕೀಯ ವೃತ್ತಿಯ ಆತ್ಮಹತ್ಯೆ ಯಾಕೆ ಮಾಡುತ್ತಿದ್ದಾರೆಂಬುವುದು ಮಾತ್ರ ದುರಂತ ಪ್ರಶ್ನೆ!