ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ಗಾಳಿ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಿದೆ.ಧಾರಾಕಾರ ವಾಗಿ ಮಳೆ ಸುರಿದಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.
ಇಂದು ಬೆಳಗ್ಗೆ ಸುಮಾರು 5 ಗಂಟೆಯಿಂದ ಆರಂಭವಾದ ಮಳೆ ಸುಮಾರು 2 ಗಂಟೆಗಳ ಕಾಲ ಸುರಿದಿದೆ.ಜೊತೆಗೆ ಗುಡುಗು ಮಿಂಚು ಕೂಡ ಜೋರಾಗಿಯೇ ಇತ್ತು.ನಗರದ ಎಲ್ಲ ಫ್ಲೈ ಓವರ್ ಗಳನ್ನು ಮುಚ್ಚಿದ ಪರಿಣಾಮ ಸರ್ವಿಸ್ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿದ್ದು, ಕಾರು ಚಾಲಕರು ಮತ್ತು ಬೈಕ್ ಸವಾರರಿಗೆ ಸಮಸ್ಯೆಯಾಗಿತ್ತು.ತಗ್ಗು ಪ್ರದೇಶಗಳಲ್ಲಿ ನೀರು ನಿಂತು ವಾಹನ ಸವಾರರಿಗೆ ತೊಂದರೆಯಾಯಿತು.
ಕೆಂಗೇರಿ ನೈಸ್ ರೋಡ್ ಜಂಕ್ಷನ್ ಬಳಿ ರಸ್ತೆಗೆ ನೀರು ನುಗ್ಗಿದ್ದು ಕೆರೆಯಂತಾಗಿತ್ತು.ಬೆಂಗಳೂರು ಅಲ್ಲದೇ ರಾಮನಗರ, ಕೋಲಾರದಲ್ಲೂ ಭಾರೀ ಮಳೆ ಸುರಿದಿದೆ.