ಕೇರಳ :ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಈಗ ಎಲ್ಲೆಲ್ಲಿ ಹರಡುತ್ತಿದೆ. ಈ ಸೋಂಕು ದೇಶವನ್ನು ಪ್ರವೇಶಿಸದಂತೆ ನೋಡಿಕೊಳ್ಳಲು ಸರ್ಕಾರಗಳು ಈಗಾಗಲೇ ಸಾಕಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿರುವಾಗಲೇ, ಚೀನಾದಿಂದ ಇತ್ತೀಚೆಗೆ ತಮಿಳುನಾಡಿಗೆ ಮರಳಿದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.ಕೊರೋನಾ ವೈರಾಣು ಸೋಂಕಿನಿಂದಲೇ ಅವರು ಸಾವನ್ನಪ್ಪಿರಬಹುದು ಎಂಬ ಆತಂಕ ವ್ಯಕ್ತವಾಗಿದ್ದು,ಇದು ದೇಶದ ಮೊದಲ ಕೊರೋನಾ ಸಾವು ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ ಭೀತಿಗೆ ಕಾರಣವಾಗಿದೆ.
ಚೀನಾದಲ್ಲಿ ರೆಸ್ಟೋರೆಂಟ್ ಒಂದನ್ನು ನಡೆಸುತ್ತಿರುವ ತಮಿಳುನಾಡಿನ ಪುದುಕೋಟ್ಟೈ ಜಿಲ್ಲೆಯ ಕೊಥಾಯಿಮಂಗಳಂ ಗ್ರಾಮದ 42 ವರ್ಷದ ಶಕ್ತಿ ಕುಮಾರ್ ಅವರಿಗೆ ಜಾಂಡೀಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ತವರಿಗೆ ಮರಳಿದ್ದರು.ಗ್ರಾಮದಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಚೀನಾದ ತಮ್ಮ ರೆಸ್ಟೋರೆಂಟ್ನಲ್ಲಿ ಸಿಬ್ಬಂದಿ ಕೊರತೆ ಉಂಟಾಗಿದೆ ಎಂಬ ವಿಷಯ ತಿಳಿದು ಇತ್ತೀಚೆಗೆ ಚೀನಾಕ್ಕೆ ತೆರಳಿದ್ದರು.ವಾಪಸ್ ಬಂದಾಗ ಅವರ ಆರೋಗ್ಯ ತೀವ್ರ ರೀತಿಯಲ್ಲಿ ಹದಗೆಟ್ಟಿತ್ತು. ಮದುರೈನ ಖಾಸಗಿ ಆಸ್ಪತ್ರೆಗೆ ದಾಖಲಾದರು. ಆದರೆ ಶನಿವಾರ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.