ಸಂಪಾದಕೀಯ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 2014 ರಲ್ಲಿ ವಿಜಯಿಯಾದ ನಂತರ ದೇಶದಲ್ಲಿ ಕೆಲವು ಕಟುಕರಿಗೆ ಅಮಾಯಕರ ಮೇಲೆ ಹಲ್ಲೆ ನಡೆಸಲು, ದೊಂಬಿ ಎಬ್ಬಿಸಲು, ಕೊಲೆಗೈಯಲು ಪರವನಗಿ ನೀಡಿದಂತಾಗಿತ್ತು. ಆ ಹಿನ್ನಲೆಯಲ್ಲಿ ದಲಿತರ ಮೇಲೆ, ಮುಸ್ಲಿಮರ ಮೇಲೆ, ಅಲ್ಪ ಸಂಖ್ಯಾತ ವಿಭಾಗದ ಮೇಲೆ ದೌರ್ಜನ್ಯಗಳು ಹೆಚ್ಚಾದವು.ಮುಗ್ಧ ಬಾಲಕಿಯನ್ನು ಅತ್ಯಾಚಾರ ಮಾಡಿದ ಕಾಮುಕರ ಪರವಾಗಿ ವಕೀಲರು ಪ್ರತಿಭಟನೆ ನಡೆಸುವಷ್ಟರ ಮಟ್ಟಿಗೆ ದುಷ್ಕರ್ಮಿಗಳ ಮನಸ್ಥಿತಿ ವಿಷಪೂರಿತವಾಯಿತು. ಮನುಷ್ಯರನ್ನು ಸುಳ್ಳಾರೋಪ ಹೊರಿಸಿ ಬೆಂಕಿಯಲ್ಲಿ ದಹಿಸುವಷ್ಟರ ಮಟ್ಟಿಗೆ ಕ್ರೂರತೆ ವ್ಯಾಪಕವಾಯಿತು.

ಇದೀಗ ಮೋದಿ ಮತ್ತೆ ಅಧಿಕಾರಕ್ಕೆ ಬಂದಿದ್ದಾರೆ. ಎಲ್ಲರನ್ನು ಒಳಗೊಂಡು ಅಧಿಕಾರ ನಡೆಸುವುದಾಗಿ ಹೇಳಿದ ಬೆನ್ನಲ್ಲೇ ಮಧ್ಯಪ್ರದೇಶದ ಭೋಪಾಲ್ ನಲ್ಲಿ ಅತ್ಯಂತ ಅಮಾನುಷವಾಗಿ ದನದ ಮಾಂಸದ ನೆಪವೊಡ್ಡಿ ಹಲ್ಲೆ ನಡೆಸಿದ್ದಾರೆ. ಹೆಣ್ಣು ಎಂಬುವುದನ್ನು ಮರೆತು ಅಟ್ಟಹಾಸ ಮೆರೆದಿದ್ದಾರೆ.

ಹೌದು ಸಮಾಜದಲ್ಲಿ ಮನುಷ್ಯರು ಮನುಷ್ಯತ್ವ ಬಿಟ್ಟು ಝೋಂಬಿಗಳಾಗಿ ತಿರುಗುತ್ತಿದ್ದಾರೆ. ಪೂರ್ವದೆಹಲಿಯಲ್ಲಿ ಮಸೀದಿಯಿಂದ ಮನೆಗೆ ಹೋಗುತ್ತಿದ್ದ ಯುವಕನ ಟೊಪ್ಪಿ ತೆಗೆದು ಹಲ್ಲೆ ನಡೆಸಿ ‘ಜೈ ಶ್ರೀರಾಮ್’ ಘೋಷಣೆ ಕೂಗುವಂತೆ ಈ ಝೋಂಬಿಗಳು ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲ ಬಿಹಾರದ ಬೇಗುಸರಾಯ್ ನಲ್ಲಿ ಮುಸ್ಲಿಮ್ ಹೆಸರು ಕೇಳಿದ ತಕ್ಷಣ ಗುಂಡು ಹಾರಿಸಲಾಗಿದೆ ನಂತರ ಪಾಕಿಸ್ತಾನಕ್ಕೆ ಹೋಗಿ ಎಂದು ಝೋಂಬಿ ಒತ್ತಾಯಿಸಿದ್ದಾನೆ. ಅಷ್ಟೇ ಅಲ್ಲ ಮಂಗಳೂರಿನಲ್ಲಿ ಝೊಂಬಿಗಳು ಸೋತ ಕಾಂಗ್ರೆಸ್ ಅಭ್ಯರ್ಥಿಯ ಕೈ, ಕಾಲು ಕಡಿದು ಕೊಲ್ಲುವ ಬೆದರಿಕೆಯೊಡ್ಡುವಷ್ಟರ ಮಟ್ಟಿಗೆ ಅಟ್ಟಹಾಸ ಹೆಚ್ಚಾಗುತ್ತಿದೆ.


ನರೇಂದ್ರ ಮೋದಿಯವರು ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎನ್ನುತ್ತಾ inclusive ಆಡಳಿತದ ಬಗ್ಗೆ ಮಾತನಾಡುತ್ತಿದ್ದಾರೆ. ಮತ್ತೊಂದು ಕಡೆ ಹಿಂದುತ್ವದ ಹೆಸರಿನಲ್ಲಿ ಹಿಂಸೆ ವ್ಯಾಪಕವಾಗುತ್ತಿದೆ. ಚಲನಚಿತ್ರದಲ್ಲಿ ಕಾಣಸಿಗುತ್ತಿದ್ದ ಝೋಂಬಿಗಳ ದೃಶ್ಯಾವಳಿಗಳು ಕಣ್ಣ ಮುಂದೆ ಭಾರತದಲ್ಲಿ ನಡೆಯುತ್ತಿದೆ. ಭಾರತದ ಸಂವಿಧಾನದ ಅಡಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ಭಾರತೀಯ ಜನತಾ ಪಕ್ಷ ಇಲ್ಲಿನ ಪ್ರತಿಯೊಬ್ಬ ಪ್ರಜೆಯ ರಕ್ಷಣೆಯ ಜವಾಬ್ದಾರಿ ಹೊರಬೇಕಾಗಿದೆ. ಸಂಘಪರಿವಾರ ಸಾಕಿರುವ ಈ ಝೋಂಬಿಗಳನ್ನು ನಿಯಂತ್ರಿಸಬೇಕಾಗಿದೆ. ಈ ದೇಶ ಶಾಂತಿಯ, ಸೌಹರ್ದತೆಯ ದೇಶ. ಝೋಂಬಿಗಳ ಕಾರಣಕ್ಕಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿಯಾಗುವುದರಿಂದ ತಡೆಯಬೇಕಾಗಿರುವುದು ಮೋದಿ ಪ್ರಾಥಮಿಕ ಕರ್ತವ್ಯ. ಇಲ್ಲದಿದ್ದಲ್ಲಿ ಟೈಮ್ ಮ್ಯಾಗಝೀನ್ ನ “ಡಿವೈಡರ್ ಇನ್ ಚೀಫ್” ತಲೆ ಬರಹ ಸಮರ್ಥಿಸಿದಂತಾಗುತ್ತದೆ ಡಿಯರ್ ಮೋದಿಜಿ!

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.