📝 ಯಾಸೀನ್ ಕೋಡಿಬೆಂಗ್ರೆ

ಭಾರತದಲ್ಲಿ ಮೋದಿ ನೇತೃತ್ವದ ಎನ್.ಡಿ.ಎ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಐದು ವರ್ಷದಲ್ಲಿ ಮಾಡಿದ ಸಾಧನೆ ಶೂನ್ಯವಾದರೂ ವಿಷಯವಲ್ಲದ ವಿಚಾರಗಳನ್ನು ಮುಂದಿಟ್ಟುಕೊಂಡು ಜನ ಸೋತು ಹೋಗುವ ಹಾಗೇ ಮಾಡಿ ಕೊನೆಗೆ ಮಾತು ಗೆಲ್ಲಿಸಿ, ಸಾಧನೆ ಮರೆಮಾಚಿಸಿ ಅಧಿಕಾರ ಹಿಡಿದಿದೆ.

ವಾಲ್ಡೊ ಬ್ಲ್ಯಾಕ್‌ ಮಿರರ್ ಸರಣಿಯ ಒಂದು ಕಾರ್ಟೂನ್ ಕ್ಯಾರೆಕ್ಟರ್!. ತನ್ನ ಚತುರ ಮಾತುಗಾರಿಕೆ, ಪ್ರಬಲ ಹಾಸ್ಯದಿಂದ ಜನರ ಮನಸೋತು ಕೊನೆಗೆ ರಾಜಕೀಯ ಅಭ್ಯರ್ಥಿಗಳೊಂದಿಗೆ ಜನರ ಬೇಡಿಕೆಯಂತೆ ತಾನೂ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿಯುತ್ತದೆ. ಎಲ್ಲಿಯೂ ಕೂಡ ನಿರುದ್ಯೋಗ, ಮೂಲ ಸೌಕರ್ಯಗಳ ಚರ್ಚೆಗಳಲ್ಲಿ ಆಸಕ್ತಿ ತೋರದೆ ಅಭ್ಯರ್ಥಿಗಳ ತೇಜೋವಧೆ ಮಾಡುತ್ತ, ಗದರಿಸುತ್ತ, ಹಾಸ್ಯ ಮಾಡುತ್ತಾ ಜನರ ಚಪ್ಪಳೆಗೆ ಪಾತ್ರವಾಗುವ ‘ವಾಲ್ಡೊ’ ಮೋದಿಗಿಂತ ಕಡಿಮೆ ಜನಪ್ರಿಯತೆ ಏನು ಗಳಿಸುವುದಿಲ್ಲ!

‘ವಾಲ್ಡೊ’ ಚುನಾವಣೆಯಲ್ಲಿ ಚರ್ಚಿತವಾಗಬೇಕಾದ ವಿಚಾರಗಳನ್ನೆಲ್ಲ ಹಿನ್ನಲೆ ದೂಡಿ ನಿಂದನೆ, ಹಾಸ್ಯ, ಭಾವುಕತೆಯ ಮುಖಾಂತರ ಜನಪ್ರಿಯತೆ ಗಳಿಸಲು ಹಪಾಹಪಿಸುವ ಪಾತ್ರ. ಈ ಸಂದರ್ಭದಲ್ಲಿ ಮೋದಿ ‘ವಾಲ್ಡೊ’ ವನ್ನು ನೆನಪಿಸಿದರು. ಸರಕಾರದ ಐದು ವರ್ಷದ ವಿಫಲತೆಯನ್ನು ಮರೆಮಾಚಿ ತನ್ನ ಹುಸಿ ವರ್ಚಸ್ಸು ಕಾಯ್ದುಕೊಳ್ಳಲು ಬಹಳ ವ್ಯವಸ್ಥಿತವಾಗಿ ಸರಕಾರದ ವೈಫಲ್ಯವನ್ನು ಮರೆಮಾಚಲಾಯಿತು. ಅಷ್ಟೇ ಅಲ್ಲ ‘ವಾಲ್ಡೋ’ ನಂತೆ ಮಾಧ್ಯಮಗಳ ಸಹಾಯ ಪಡೆದು ಚುನಾವಣೆಯಲ್ಲಿ ಅಗತ್ಯವಿಲ್ಲದ ವಿಚಾರಗಳನ್ನು ವೈಭವೀಕರಿಸಿ ಜನಪ್ರಿಯತೆ ಪಡೆಯಲು ವ್ಯವಸ್ಥಿತ ಸಂಚು ರೂಪಿಸಲಾಯಿತು. ಅದರ ಭಾಗವಾಗಿ ಬಾಲಕೋಟ್, ಪುಲ್ವಾಮ, ಗಾಂಧಿ ಕುಟುಂಬ, ರಾಜಕಿಯೇತರ ಸಂದರ್ಶನ ಹೀಗೆ ವಿಷಯವಲ್ಲದ ವಿಚಾರಗಳಲ್ಲಿ ವಿರೋಧ ಪಕ್ಷ, ಜನತೆ ಗಿರಕಿ ಹೊಡೆಯುವಂತೆ ನೋಡಿಕೊಳ್ಳಲಾಯಿತು.

ಇತರ ಅಭ್ಯರ್ಥಿಗಳು ಕೆಲವೊಂದು ವಿಚಾರಗಳನ್ನು ಮುನ್ನೆಲೆಗೆ ತಂದು ಚರ್ಚಿಸಲು ಯತ್ನಿಸಿದಾಗಲೆಲ್ಲ ಅವುಗಳ ಹಾಸ್ಯ ಮಾಡಿ ಜನರ ಅವಶ್ಯಕತೆಗಳನ್ನು ಜನರಿಂದಲೇ ಗೇಲಿ ಮಾಡಿಸುವಲ್ಲಿ ಮೋದಿ ನೇತೃತ್ವದ ತಂಡ ಯಶಸ್ವಿಯಾಯಿತು.

ಐದು ವರ್ಷದಲ್ಲಿ ಮೋದಿ ಸರಕಾರದ ಸಾಧನೆ ಏನು ಎಂಬುಂದು ಇಡೀ ಭಾರತೀಯ ಜನವರ್ಗಕ್ಕೆ ತಿಳಿದಿದ್ದರೂ ಅವರ ವೈಫಲ್ಯ ಅವರ ಜನಪ್ರಿಯತೆ ನುಂಗಿ ಹಾಕುವಂತೆ ಮಾಡಿತು. ಇನ್ನು ವಿರೋಧ ಪಕ್ಷಗಳು ತಮ್ಮ ಅಜೆಂಡಾಗಳನ್ನು ಮೋದಿಯ ವೈಫಲ್ಯದ ಮುಂದೆ ನಿರೂಪಿಸುವಲ್ಲಿ ಮತ್ತು ಅದನ್ನು ನೈಪುಣ್ಯತೆಯಿಂದ ಸ್ಥಾಪಿಸುವಲ್ಲಿ ವಿಫಲವಾದದ್ದು ಕೂಡ ಸುಳ್ಳಲ್ಲ.

ಪ್ರಜಾಪ್ರಭುತ್ವದಲ್ಲಿ ಪ್ರಧಾನಿ ಸ್ಥಾನಕ್ಕೆ ಚುನಾವಣೆ ನಡೆಯುವುದಿಲ್ಲ. ಸ್ಥಳೀಯ ಅಭ್ಯರ್ಥಿಗಳ ಅರ್ಹತೆ ಮೇಲೆ ಆಯ್ಕೆ ಮಾಡಲಾಗುತ್ತದೆ. ಆದರೆ ಬಿಜೆಪಿ ನೇತೃತ್ವದಲ್ಲಿ ‘ಮೋದಿ’ಯೆಂಬ ವಾಲ್ಡೊವನ್ನು ಮುನ್ನಲೆಗೆ ತಂದು ಮೂಲೆ ಮೂಲೆಗಳಲ್ಲಿ ಸಾಧನೆ, ದೂರದೃಷ್ಟಿ, ಯೋಜನೆಗಳ ಪ್ರಚಾರದ ಹೊರತು ಭಾವನಾತ್ಮಕ, ಅವೈಜ್ಞಾನಿಕ, ಧಾರ್ಮಿಕ ವಿಚಾರಗಳ ಬಗ್ಗೆ ಚರ್ಚಿಸುತ್ತ ಮೋದಿಯ ಜನಪ್ರಿಯತೆ ಹೆಚ್ಚಿಸಲಾಯಿತು. ಮೋದಿಯ ಆಡಳಿತ ವೈಫಲ್ಯ ಸಾಲುಗಟ್ಟಿ ಮೋದಿಯ ಹಿಂದೆ ಇದ್ದರೂ ‘ವಾಲ್ಡೊ’ ನಂತೆ ಮೋದಿ ಜನಪ್ರಿಯರಾದರು. ಜನ ಅವರ ಬಲೆಗೆ ಬಿದ್ದಾಗಿತ್ತು. ಒಮ್ಮೆ ಜನ ‘ಜನಪ್ರಿಯತೆ’ ಅಡ್ಡಾದಲ್ಲಿ ಬಿದ್ದಾಗ ವಿರೋಧ ಪಕ್ಷಗಳು ತೋರಿಸುತ್ತಿದ್ದ ಸ್ವತಃ ಅವರ ಸಮಸ್ಯೆಯೇ ಅವರಿಗೆ ಹಾಸ್ಯಾಸ್ಪದವಾಗಿ ಖಂಡಿತು.‌ಅದರ ಪರಿಣಾಮ ‘ವಾಲ್ಡೊ’ ಒಂದು ಕಾರ್ಟೂನ್ ಪಾತ್ರವಾದರೂ ಧಾರವಾಹಿಯಲ್ಲಿ ಯಶಸ್ವಿಯಾದಂತೆ ಮೋದಿ ಮತ್ತೆ ಗೆದ್ದರು, ಜನರ ಸಮಸ್ಯೆಗಳ ಮೇಲೆ ಕುಳಿತು ಪ್ರಧಾನಿಯಾದರು!!

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.