ಉಡುಪಿ : ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳಲ್ಲಿ ತೀವ್ರ ಹೆಚ್ಚಳವಾಗುತ್ತಿದೆ. ಇದು ಕಳವಳಕಾರಿ ವಿಚಾರವಾಗಿದೆ. ಜಮ್ಮುವಿನ ಕಥುವಾದಲ್ಲಿ ಆಸಿಫಾ ಎಂಬ ಮುಗ್ಧ ಬಾಲಕಿಯನ್ನು ಅತ್ಯಾಚಾರ ನಡೆಸಿ, ಹತ್ಯೆ ಮಾಡಲಾಗಿದೆ. ಹಾಗೆಯೇ ಉತ್ತರ ಪ್ರದೇಶದ ಉನಾವೋದಲ್ಲಿ ನಡೆದ ತನ್ನ ಮಗಳ ಅತ್ಯಾಚಾರ ಪ್ರಕರಣಕ್ಕೆ ನ್ಯಾಯವನ್ನು ಬಯಸಿ ಹೋರಾಟ ನಡೆಸುತ್ತಿದ್ದ ತಂದೆಯನ್ನು ಲಾಕಪ್‍ನಲ್ಲಿ ಹಾಕಿ ಕೊಲ್ಲಲಾಗಿದೆ. ನಿರ್ದಿಷ್ಟ ಧರ್ಮಾನುಯಾಯಿಗಳಲ್ಲಿ ಭೀತಿ ಹುಟ್ಟಿಸುವ ಉದ್ದೇಶದಿಂದ ಕೋಮುವಾದಿ ಶಕ್ತಿಗಳು ಅದಕ್ಕೆ ಕೋಮು ಬಣ್ಣವನ್ನು ನೀಡಿ ಅಪರಾಧಿಗಳ ಪರ ವಕಾಲತ್ತು ನಡೆಸುತ್ತಿದ್ದಾರೆ. ಈ ರೀತಿ ಅಪ್ರಾಪ್ತ ಬಾಲಕಿಯರ ಮೇಲೆ ನಿರಂತರ ಅತ್ಯಾಚಾರಗಳು ನಡೆಯುತ್ತಿದ್ದು, ಮನುಷ್ಯತ್ವವನ್ನು ತಲೆತಗ್ಗಿಸುವಂತೆ ಮಾಡಿದೆ. ಧರ್ಮ ಜಾತಿ ಭೇದವಿಲ್ಲದೆ ಮಹಿಳೆಯರ ಮೇಲಾಗುತ್ತಿರುವ ಇಂತಹ ಹೇಯ ಅತ್ಯಾಚಾರ ಪ್ರಕರಣಗಳು ಖಂಡನೀಯವಾದುದು. ಅದನ್ನು ಯಾರೇ ಮಾಡಿರಲಿ ಅಂತಹ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಭಾರತದಲ್ಲಿ ನಾರಿಯನ್ನು ಗೌರವದಿಂದ ಕಾಣಲಾಗುತ್ತದೆ. ಇಂದು ಅದೇ ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರಗಳು ಸಮಾಜ ಮತ್ತು ರಾಷ್ಟ್ರದ ಮೇಲೆ ಗಂಭೀರ ಪರಿಣಾಮವನ್ನು ಬೀರಲಿದೆ.

ಹಾಗಾಗಿ ಮಹಿಳೆಯರ ಮೇಲಾಗುತ್ತಿರುವ ನಿರಂತರ ಅತ್ಯಾಚಾರ ಪ್ರಕರಣವನ್ನು ವಿರೋಧಿಸುವ, ಆಸಿಫಾ ಎಂಬ ಮುಗ್ಧ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಹಾಗೂ ಉನಾವೋ ಅತ್ಯಾಚಾರ ಘಟನೆಗಳನ್ನು ಖಂಡಿಸುವ ಹಾಗೂ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸುವ ಉದ್ದೇಶದಿಂದ ಉಡುಪಿಯಲ್ಲಿ ಬೆಳಕಿನೊಂದಿಗೆ ನಮ್ಮ ನಡಿಗೆ ಎಂಬ ಸಾರ್ವಜನಿಕ ಪ್ರತಿಭಟನಾ ಕಾರ್ಯಕ್ರಮವನ್ನುಹಮ್ಮಿಕೊಳ್ಳಲಾಗಿದೆ.

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ (ರಿ) ಇದರ ಆಶ್ರಯದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಮಹಾ ಒಕ್ಕೂಟ, ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಅಂತಾರಾಷ್ಟ್ರೀಯ ಕ್ರೈಸ್ತ ಸಂಘಟನೆಗಳ ಒಕ್ಕೂಟ, ಕ್ಯಾಥೋಲಿಕ್ ಸಭಾ, ಸಿಐಟಿಯು,, ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಇವರ ಸಹಯೋಗದೊಂದಿಗೆ ಎಪ್ರಿಲ್ 24ರ ಮಂಗಳವಾರ ಸಂಜೆ 6.30ಕ್ಕೆ ಅಜ್ಜರಕಾಡಿನ ಭುಜಂಗ ಪಾರ್ಕ್‍ನಿಂದ ಪ್ರತಿಭಟನಾ ಜಾಥವು ಹೊರಡಲಿದ್ದು, ಸಂಜೆ 7.30ಕ್ಕೆ ಚಿತ್ತರಂಜನ್ ಸರ್ಕಲ್‍ನಲ್ಲಿ ಸಾರ್ವಜನಿಕ ಸಭೆ ನಡೆಯಲಿಕ್ಕಿದೆ. ಇದರಲ್ಲಿ ಖ್ಯಾತ ಚಲನಚಿತ್ರ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರೈ, ದ.ಸಂ.ಸ. (ಅಂಬೇಡ್ಕರ್‍ವಾದ) ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್, ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಕಾರ್ಯದರ್ಶಿ ಕೆ.ಎಲ್. ಅಶೋಕ್, ಮುಸ್ಲಿಂ ಒಕ್ಕೂಟದ ಜಿಲ್ಲಾಧ್ಯಕ್ಷ ಮುಹಮ್ಮದ್ ಯಾಸೀನ್ ಮಲ್ಪೆ, ಖ್ಯಾತ ಸಾಹಿತಿ ವೈದೇಹಿ, ಕೊರಗ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ಸುಶೀಲ ನಾಡ, ಪತ್ರಕರ್ತೆ ಸಬೀಹಾ ಫಾತಿಮಾ, ಕ್ರೈಸ್ತ ಧರ್ಮಗುರು ರೆ.ಫಾ. ವಿಲಿಯಂ ಮಾರ್ಟಿಸ್, ದಲಿತ ಮುಖಂಡರಾದ ಸುಂದರ್ ಮಾಸ್ತರ್ ಮತ್ತು ಶ್ಯಾಮರಾಜ ಬಿರ್ತಿ, ಖ್ಯಾತ ಚಿಂತಕ ಜಿ. ರಾಜಶೇಖರ್, ಸಿಐಟಿಯು ಜಿಲ್ಲಾಧ್ಯಕ್ಷ ಟಿ.ವಿಶ್ವನಾಥ ರೈ ಮುಂತಾದವರು ಭಾಗವಹಿಸಲಿದ್ದಾರೆ. ಸಾರ್ವಜನಿಕರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.