ಉಡುಪಿ : ಮೊನ್ನೆಯಷ್ಟೇ ಕೇರಳಕ್ಕೆ ಮುಂಗಾರು ಪ್ರವೇಶಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆಯಿಂದ ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ತುಂತುರು ಮಳೆ ಆರಂಭವಾಗಿದೆ. ಉಡುಪಿಯಲ್ಲಿ ಇಂದು ಮುಂಜಾನೆಯಿಂದ ತುಂತುರು ಮಳೆ ಆರಂಭವಾಗಿದ್ದು, ಭೂಮಿಯ ತಾಪಕ್ಕೆ ಮಳೆರಾಯ ತಂಪರೆದಿದ್ದಾನೆ. ಮಳೆ ಆರಂಭಗೊಂಡ ಬೆನ್ನಲ್ಲೇ ಜನರು ಆತಂಕಗೊಂಡಿದ್ದಾರೆ. ಕಳೆದ ಬಾರಿಯ ಭಾರೀ ಮಳೆಯ ಅವಾಂತರಕ್ಕೆ ಕೊಡಗಿನ ಜನರು ಹೈರಾಣಾಗಿದ್ದರು.  ಭೂ ಕುಸಿತದಿಂದ ಅಪಾರ ಪ್ರಮಾಣದ ಆಸ್ತಿ ನಾಶವಾಗಿತ್ತು. ಸದ್ಯ ಜಿಲ್ಲೆಗೆ ಕಳೆದ ವರ್ಷಕ್ಕಿಂತ ಈ ವರ್ಷ ಮುಂಗಾರು ವಿಳಂಬವಾಗಿದೆ.

ಇತ್ತ ದಕ್ಷಿಣ ಕನ್ನಡದಲ್ಲೂ ಮುಂಗಾರಿನ ಮುನ್ಸೂಚನೆ ಸಿಕ್ಕಿದೆ. ಹನಿ ಹನಿ ಮಳೆಯ ಸಿಂಚನಕ್ಕೆ ಜನ ರೋಮಾಂಚನಗೊಂಡಿದ್ದಾರೆ. ಬಿಸಿಲ ಬೇಗೆಯಲ್ಲಿ ಕಾದ ಇಳೆಗೆ ಮಳೆರಾಯನ ತಂಪಿನ ಕಂಪನ ಸಿಕ್ಕಿದೆ. ಹವಾಮಾನ ಇಲಾಖೆ ಜೂನ್ 10ಕ್ಕೆ ಮುಂಗಾರಿನ ಸೂಚನೆ ನೀಡಿತ್ತು. ಅಲ್ಲದೆ ಮುಂಗಾರು ಎರಡು ದಿನಗಳ ಹಿಂದೆ ಕೇರಳಕ್ಕೆ ಕಾಲಿಟ್ಟಿತ್ತು. ಕರಾವಳಿ ಜನ ಬೇಸಿಗೆಯಲ್ಲಿ ಮಳೆ ಇಲ್ಲದೆ ನೀರಿಗಾಗಿ ಪರದಾಡಿದ್ದರು. ಉಡುಪಿಯಲ್ಲಿ ಮಳೆಗಾಗಿ ಕಪ್ಪೆಗಳಿಗೂ ಮದುವೆ ಮಾಡಿದ್ದರು. ಈಗ ಮಳೆ ಶುರುವಾಗಿದ್ದು ಜನರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.