ಜಗತ್ತಿನಲ್ಲಿರುವ ಪ್ರಾಣಿ ಸಂಕುಲದಲ್ಲಿ ಮಾನವನಿಗೆ ಮಾತ್ರವೇ ಇರಬಹುದಾದ ಅನನ್ಯ ತುಡಿತ ಏನು ಅಂತ ಹೇಳಿದರೆ ಅದುವೇ ಗೆಳೆತನ. ಗೆಳತನ ಎನ್ನುವುದು ಮಧುರ ಅನುಭೂತಿಯ ಅನುಬಂಧ. ಗೆಳೆತನಕ್ಕೆ ಲಿಂಗಭೇದವಿಲ್ಲ, ಜಾತಿಯ ಅಡ್ಡಗೋಡೆಯಿಲ್ಲ, ಆಸ್ತಿ-ಅಂತಸ್ತುಗಳ ಬೇಲಿಯೂ ಇಲ್ಲ. ಜತೆ ಜತೆಯಾಗಿ ಸಾಗಿ ಸುಖ ದುಃಖವನ್ನು ಹಂಚಿಕೊಳ್ಳುವ ಜೀವನ ಪಯಣದ ಪ್ರಾತಿನಿಧ್ಯವೇ ಗೆಳತನ.

ಅಪರಿಚಿತರ ಗೆಳತನ ಕಷ್ಟವಲ್ಲ, ಆದರೆ ಇರುವ ಗೆಳೆಯರು ಅಪರಿಚಿತರಾಗದಂತೆ ನೋಡಿಕೊಳ್ಳುವುದು ದೊಡ್ಡದು ಹೀಗೊಂದು ನಾಲ್ನುಡಿ ನೀವೆಲ್ಲ ಕೇಳಿರಬಹುದು. ಈ ನಾಲ್ನುಡಿಯಂತೆ ಕಳೆದು ಹೋದ ಗೆಳೆಯರನ್ನು ಒಂದು ಕಡೆ ಸೇರಿಸುವ ಸಾಹಸ ತೀರ್ಥಹಳ್ಳಿಯಲ್ಲಿ ‌ನಡೆಯಿತು.

ಹೌದು ತೀರ್ಥಹಳ್ಳಿಯ ಸರ್ಕಾರಿ ಪ್ರೌಢ ಶಾಲೆ (ಈಗಿನ ಡಾ. ಯು ಆರ್ ಅನಂತಮೂರ್ತಿ ಪ್ರೌಢ ಶಾಲೆ) 2006-07ರಲ್ಲಿ ಹತ್ತನೇ ತರಗತಿಯಲ್ಲಿ ಕಲಿತ ಸ್ನೇಹಿತರು. ಸುಮಾರು 12 ವರ್ಷಗಳ ನಂತರ ಆರಗದ ಹೀರಸರದ ನೆಸ್ಟ್ ಹೋಂ ಸ್ಟೇನಲ್ಲಿ ಗೆಟ್ ಟುಗೆದರ್ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಮತ್ತೊಮ್ಮೆ ಗೆಳೆಯರನ್ನು ಭೇಟಿಯಾಗುವ ಅವಕಾಶ ಗಿಟ್ಟಿಸಿಕೊಂಡರು. ತಮ್ಮ ಬ್ಯುಸಿ ಜೀವನದಲ್ಲಿ ಒಂದಷ್ಟು ಸಮಯವನ್ನು ಕಿತ್ತು ತೆಗೆದು ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಗೆಳೆಯರ ದಂಡೆ ಸಾಲು ಸಾಲಾಗಿ ಬಂದಿತ್ತು. ಹೈಸ್ಕೂಲ್ ನೆನಪುಗಳನ್ನು ಮೆಲುಕು ಹಾಕುತ್ತಾ, ತರಗತಿಯ ಶಿಕ್ಷಕರನ್ನು ನೆನೆಯುತ್ತಾ, ಶಾಲೆಯಲ್ಲಿ ಕಲಿತ ಪಾಠ, ಆಟ ಎಲ್ಲವನ್ನೂ ನೆನಪಿಸುತ್ತ ಮತ್ತೊಮ್ಮೆ 12 ವರ್ಷ ಹಿಂದಕ್ಕೆ ಸರಿದೆವು. ಮೊದಲನೇ ಬೇಂಚ್ ನಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದವರು ಒಂದು ಕಡೆಯಾದರೆ, ಕೊನೆ ಬೇಂಚ್ ನ ಹುಡುಗರು ಇನ್ನೊಂದು ಕಡೆ. ತರಗತಿಯಲ್ಲಿ ನಡೆಯುತ್ತಲಿದ್ದ ಎಲ್ಲಾ ವಿಷಯಗಳು ಮತ್ತೆ ಮತ್ತೆ ಕಣ್ಣ ಮುಂದೆ ಬರುತ್ತಲಿದ್ದವು.

ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ ಹೆಚ್ಚಿನೆಲ್ಲ ಸ್ನೇಹಿತರು ಮುಂದಿನ ವಿದ್ಯಾಭ್ಯಾಸ ಪೂರೈಸಲು ನಗರ ಪ್ರದೇಶಗಳಿಗೆ ಹೋದ ಕಾರಣ ಸ್ನೇಹಿತರ ನಡುವೆ ಬಹಳ ಅಂತರ ಉಂಟಾದವು ಈ ಅಂತರ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ ಮತ್ತು ವಾಟ್ಸಪ್ ಗ್ರೂಪ್ ಗಳ ಮೂಲಕ ಮತ್ತೊಮ್ಮೆ ಪರಸ್ಪರ ಪರಿಚಯ ಪಟ್ಟುಕೊಳ್ಳಲು ಸಹಕಾರಿಯಾದವು. ಹೆಚ್ಚಿನಲ್ಲ ಸ್ನೇಹಿತರು ಉನ್ನತ ಶಿಕ್ಷಣ ಪಡೆದು ಡಾಕ್ಟರ್, ಇಂಜಿನಿಯರ್, ಆಗಿದ್ದಾರೆ, ಕೆಲವರು ವಿದೇಶಗಳಲ್ಲಿ ದುಡಿಯುತ್ತಿದ್ದಾರೆ, ಇನ್ನೂ ಕೆಲವು ಸ್ವಂತ ಉದ್ಯೋಗಕ್ಕೆ ಕೈ ಹಾಕಿದ್ದಾರೆ.

ನಾವು ಎಷ್ಟೇ ಸಂಪತ್ತು, ಆಸ್ತಿ ಅಂತಸ್ತುಗಳನ್ನು ಗಳಿಸಿದರು ಅವೆಲ್ಲವೂ ನಶ್ವರ, ಅದರ ಬದಲಿಗೆ ನಾವು ಗಳಿಸುವ ಸ್ನೇಹ, ಪ್ರೀತಿ, ಸಂಭಂದ ಶಾಶ್ವತವಾಗಿ ನಮ್ಮಲ್ಲೇ ಉಳಿಯುತ್ತದೆ. ಪ್ರತಿಯೊಬ್ಬ ಸ್ನೇಹಿತನೂ ಕೂಡ ತನ್ನದೇ ಆದ ಗುರಿಯನ್ನು ಇಟ್ಟುಕೊಂಡು ಮುನ್ನಡೆಯುತ್ತಿದ್ದಾರೆ, ಎಲ್ಲರೂ ಜೀವನಕ್ಕೆ ಒಂದು ಉದ್ದೇಶವನ್ನು ಇಟ್ಟುಕೊಂಡು ಈ ದೇಶಕ್ಕಾಗಿ, ಏನಾದರೂ ಸಾಧನೆ ಮಾಡಿ ತಮ್ಮ ಹೆಸರನ್ನು ಎಲ್ಲೆಡೆಯೂ ಪಸರಿಸಿ, ಬಾಲ್ಯದಲ್ಲೇ ಅರಳಿದ ಈ ಸ್ನೇಹ ಕೊನೆಯವರೆಗೂ ಶಾಶ್ವತವಾಗಿ ಉಳಿಯಲಿ ಎಂದು ಆಶಿಸುತ್ತೇನೆ.

  • ಮಹಮ್ಮದ್ ಶಾರೂಕ್ ತೀರ್ಥಹಳ್ಳಿ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.