ಸ್ಕಾರ್ಫ್ ಧಾರಣೆಯ ಕುರಿತಾಗಿ ಕೆಲವು ಶಿಕ್ಷಣ ಸಂಸ್ಥೆಗಳ ಅಸಮ್ಮತಿಯನ್ನು ಸೌಹಾರ್ದಯುತವಾಗಿ ಪರಿಹರಿಸಲು ಪ್ರಯತ್ನಿಸುವುದು ಸಮುದಾಯದ ಹೊಣೆಗಾರಿಕೆ, ಅದ್ದರಿಂದ ಸಮುದಾಯದ ಎಲ್ಲಾ ಜವಾಬ್ದಾರಿಯುತ ಸಂಘ ಸಂಸ್ಥೆಗಳು ಮತ್ತು ಪ್ರಭಾವಶಾಲಿ ವ್ಯಕ್ತಿಗಳು ಜೊತೆಯಾಗಿ ಪರಸ್ಪರ ವಿಚಾರ ವಿನಿಮಯ ನಡೆಸಿ ಈ ದಿಸೆಯಲ್ಲಿ ಯಾವ ವಿಧಾನದ ಮೂಲಕ ಪ್ರಯತ್ನಗಳು ನಡೆಯಬೇಕು ಎಂಬುದನ್ನು ಧರ್ಮದ ಆಶಯಕ್ಕೆ ಚ್ಯುತಿ ಬರದಂತೆ ಸರ್ವ ಸಮ್ಮತ ತೀರ್ಮಾನದ ಪ್ರಕಾರ ಅಥವಾ ಅದು ಸಾಧ್ಯವಾಗದಿದ್ದಲ್ಲಿ ಒಂದು ಬಹುಸಮ್ಮತ ತೀರ್ಮಾನದಂತೆ ಕಾರ್ಯ ಪ್ರವೃತ್ತರಾಗಬೇಕು. ಆ ಸಂದರ್ಭದಲ್ಲಿ ಸಮುದಾಯದ ವಿಶ್ವಾಸಾರ್ಹತೆಗೆ ಕುಂದು ಬರದಂತೆ ಜಾಗೃತೆಯೂ ಅಗತ್ಯ. ನಮಗೆ ಇರುವ ಒಂದಕ್ಕಿಂತ ಹೆಚ್ಚು ಆಯ್ಕೆಗಳ ಸಾದ್ಯತೆಗಳ ಕಡೆಗೆ ಗಮನವೂ ಅಗತ್ಯ ಈ ಬಗ್ಗೆ ಮೊದಲೇ ವಿದ್ವಾಂಸರಲ್ಲಿ ಚರ್ಚಿಸಿ ಮನವರಿಕೆ ಮಾಡಿ ಕೊಳ್ಳಬೇಕು. ಸ್ಕಾರ್ಫ್’ಗೆ ತಡೆಯಾಗಿರುವ ಶಿಕ್ಷಣ ಸಂಸ್ಥೆಗಳ ದೃಷ್ಟಿಕೋನವನ್ನು ತಿಳಿದುಕೊಳ್ಳುವ ಪ್ರಯತ್ನವೂ ನಡೆಯಬೇಕು ಆದ್ದರಿಂದ ಅವರೊಂದಿಗೆ ಒಂದಕ್ಕಿಂತ ಹೆಚ್ಚು ಸಭೆಗಳು ಅಥವಾ ಈ ಪ್ರಯತ್ನಕ್ಕೆ ಸಹಕಾರಿಯಾಗುವ ಪ್ರಕ್ರಿಯೆಗಳು ನಡೆಯಬೇಕು. ಅದರಲ್ಲಿ ವಿಷಯದ ಸೂಕ್ಷ್ಮತೆಯನ್ನು ತಿಳಿದುಕೊಂಡು ಅವರಿಗೆ ಮನವರಿಕೆ ಮಾಡಿಕೊಡುವ ಯುಕ್ತಿ ಹಾಗೂ ಜ್ಞಾನ ಸಂಪನ್ನ ವ್ಯಕ್ತಿತ್ವಗಳನ್ನು ಅರ್ಥಾತ್‌ ಈ ದಿಸೆಯಲ್ಲಿ ಸಹಾಯಕವಾಗುವ ಸಮುದಾಯದ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಳ್ಳಬಹುದು. ಒಂದು ವೇಳೆ ಒತ್ತಡ ಹೇರುವ ಅಗತ್ಯವಿದ್ದರೆ ಅದು ಯಾವ ರೀತಿಯ ಒತ್ತಡ ಮತ್ತು ಎಷ್ಟು ಪ್ರಮಾಣದ ಒತ್ತಡ ಎಂಬುದು ಸ್ಪಷ್ಟವಾಗಿರಬೇಕು. ಈ ರೀತಿಯ ಸಂತುಲಿತ ಧೋರಣೆಯು ಶಿಕ್ಷಣ ಸಂಸ್ಥೆಗಳೊಂದಿಗೆ ಸಮುದಾಯದ ಸೌಹಾರ್ದಯುತ ಸಂಬಂಧಗಳನ್ನು ಇಟ್ಟುಕೊಂಡೇ ನಮ್ಮ ಬೇಡಿಕೆಯನ್ನು ಒಪ್ಪಿಸಿಕೊಳ್ಳಲು ಸಹಾಯಕವಾಗಬಹುದು.

ಈ ಸೂತ್ರ ಕೆಲಸ ಮಾಡದೇ ಇದ್ದಾಗ ಮಾತ್ರ ನಂತರದ ಹೆಜ್ಜೆಗಳನ್ನು ಇಡಬಹುದು. ಅವಸರ ಅವಸರವಾಗಿ ಪರಸ್ಪರ ಸಮಾಲೋಚನೆ ಇಲ್ಲದೆ ಮುನ್ನುಗ್ಗುವುದೆಂದರೆ ತಲೆನೋವು ಆರಂಭಗೊಂಡ ಕೂಡಲೆ ತಲೆನೋವು ವಾಸಿ ಮಾಡಲು ಯಾವ ರೀತಿಯಲ್ಲೂ ಪ್ರಯತ್ನಿಸದೆ ನ್ಯೂರೋ ಸರ್ಜರಿ ಮಾಡಲು ಹೋದಂತಾಗ ಬಹುದು.

ಈ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಈ ಶಿಕ್ಷಣ ಸಂಸ್ಥೆಗಳ ಸಂಕಲ್ಪವೇ ಬೇರೆಯೇ ಇದೆ ಎಂದು ಸ್ಪಷ್ಟವಾಗಿ ತಿಳಿದು ಬಂದಾಗ ಸಮುದಾಯದ ನಾಯಕತ್ವಕ್ಕೆ ಮುಂದಿನ ಹೆಜ್ಜೆ ಇಡಲು ಮುಕ್ತ ಅವಕಾಶ ಸಿಕ್ಕಂತಾಗುತ್ತದೆ. ಶಿಕ್ಷಣ ಸಂಸ್ಥೆಗಳ ಸ್ಥಾಪನೆಯ ಉದ್ದೇಶ ಶೈಕ್ಷಣಿಕ ಸೇವೆ ನಿಡುವುದೇ ಅಗಿರುತ್ತದೆಯೇ ಹೊರತು ಆ ಶಿಕ್ಷಣ ಸಂಸ್ಥೆಗಳನ್ನು ತಮ್ಮ ಅಥವಾ ಒಂದು ನಿರ್ದಿಷ್ಟ ವರ್ಗದ ನಂಬಿಕೆ, ಆಚರಣೆ , ಸಂಪ್ರದಾಯಗಳನ್ನು ” ಹೇರುವ ” ಉಪಕರಣವಾಗಿ ಬಳಸಿಕೊಳ್ಳಲು ಅಥವಾ ಶಿಕ್ಷಣದ ಹೆಸರಿನಲ್ಲಿ ಇನ್ನೊಂದು ವರ್ಗದ ಧಾರ್ಮಿಕ ಹಕ್ಕುಗಳನ್ನು ಕಿತ್ತುಕೊಳ್ಳಲು ಖಂಡಿತಾ ಅಲ್ಲ ಎಂಬುದನ್ನು ಸ್ಪಷ್ಟವಾಗಿ ಕಾನೂನು ಕ್ರಮಗಳ ಮೂಲಕ ಅಥವಾ ನ್ಯಾಯಬದ್ದ ಹೋರಾಟಗಳ ಮೂಲಕ ಮನಗಾಣಿಸ ಬೇಕಾಗಬಹುದು.

ಅದೇ ಸಂದರ್ಭದಲ್ಲಿ ಈ ಪ್ರಯತ್ನಗಳು ನಮ್ಮ ಧಾರ್ಮಿಕ, ಸಾಮಾಜಿಕ ಕಳಕಳಿಯಾಗಬೇಕೆ ಹೋರತು ಯಾವುದೇ ಸಂಘಟನೆಯ ಸಂಘಟನಾ ಸಂವರ್ಧನೆ ಉದ್ದೇಶಕ್ಕೆ ಬಳಸಿಕೊಳ್ಳುವ ವಸ್ತುವಾಗಬಾರದು. ದೀನಿನ ಮತ್ತು ಸಮುದಾಯದ ಅಗತ್ಯಗಳನ್ನು ಬಲಿಕೊಟ್ಟು ಯಾವುದೇ ಸಂಘಟನೆಯ ಅಥವಾ ವ್ಯಕ್ತಿಯ ಸಂಕುಚಿತ ಹಿತಾಸಕ್ತಿಯು ಮುನ್ನೇಲೆಗೆ ಬಂದರೆ ಸ್ಕಾರ್ಫ್ ನಿಷೇಧ ಮಾತ್ರವಲ್ಲ ಇನ್ನೂ ಅನೇಕ ನಿಂದ್ಯತೆಗಳು ನಮ್ಮ ಹುಡುಕಿಕೊಂಡು ಬರಬಹುದು.

ಲೇಖಕರು: ಇದ್ರಿಸ್ ಹೂಡೆ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.