ಸಂಪಾದಕೀಯ

ಸರ್ವೊಚ್ಚ ನ್ಯಾಯಾಲಯದ ಐದು ಮಂದಿ ನ್ಯಾಯಾಧೀಶರ ಪೀಠ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 497 ನ್ನು ರದ್ದುಗೊಳಿಸಿ ತೀರ್ಪು ನೀಡಿದೆ. ಸುಮಾರು ನೂರೈವತ್ತು ವರ್ಷದಷ್ಟು ಹಳೆಯದಾದ ಕಾನೂನನ್ನು ಅನೂರ್ಜಿತಗೊಳಿಸಲಾಗಿದೆ. ಈ ಕಾನೂನು ಅನೂರ್ಜಿತಗೊಳ್ಳುದರೊಂದಿಗೆ ದಂಡ ಪ್ರಕ್ರಿಯೆ ನೀತಿ ಸಂಹಿತೆಯ ಕಲಮು 198(2) ಕೂಡ ರದ್ದುಗೊಂಡತಾಗಿದೆ.

ಐಪಿಸಿ ಕಲಮು 497 ವಿವಾಹೇತರ ಸಂಬಂಧದ ವಿಚಾರದಲ್ಲೂ ಅಸಮಾನತೆಯ ದ್ಯೋತಕವಾಗಿದ್ದನ್ನು ಮರೆಯುವಂತಿಲ್ಲ. ಒರ್ವ ಸಾಮಾನ್ಯ ನಾಗರಿಕನಾಗಿ ಯೋಚಿಸುದಾದರೆ ಪತಿ-ಪತ್ನಿಯ ಸಂಬಂಧಕ್ಕೆ ಈ ಸಮಾಜದಲ್ಲಿ ಬಹಳಷ್ಟು ಮಹತ್ವವಿದೆ. ಅಲ್ಲಿ ಈ ವಿವಾಹೇತರ ಸಂಬಂಧಗಳನ್ನು ಊಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಅದು ಕೇವಲ ದೇಹದ ಬದಲಾವಣೆಯಲ್ಲ. ವಿಶ್ವಾಸ ಮತ್ತು ಪ್ರೀತಿಯ ಮೇಲೆ ನಡೆಸುವ ಗದ ಪ್ರಹಾರ! ಆದರೆ 497 ಕಲಮು ಕೇವಲ “ಒನ್ ಸೈಡೆಡ್” ಅನಾಗರಿಕ ಕಾನೂನು ಆಗಿದಿದ್ದು ಸುಳ್ಳಲ್ಲ!

ಕಲಮಿನಡಿಯಲ್ಲಿ ಮಹಿಳೆ ತನ್ನ ಗಂಡನಿಗೆ ತಿಳಿಯದಂತೆ ಪರ ಪುರುಷನೊಂದಿಗೆ ಸಂಬಂಧ ಇಟ್ಟಂತಹ ಸಂದರ್ಭದಲ್ಲಿ ಆಕೆ ಸಂಬಂಧ ಇಟ್ಟ ಗಂಡಸಿಗೆ ಐದು ವರ್ಷದ ಸಜೆ ಕೊಡ ಬಹುದಾಗಿತ್ತು. ಅದೇ ವೇಳೆ ಆಕೆಗೆ ಯಾವುದೇ ಶಿಕ್ಷೆಯ ಬಗ್ಗೆ ಈ ಕಲಮಿನಲ್ಲಿ ಪ್ರಸ್ತಾಪವಿರಲಿಲ್ಲ.ಗಂಡ ಪತ್ನಿಯ ಮೇಲೆ ವಿವಾಹೇತರ ಸಂಬಂಧದ ಬುನಾದಿಯಲ್ಲಿ ವಿಚ್ಚೇದನ ಪಡೆದುಕೊಳ್ಳಬಹುದಾಗಿತ್ತು. ಆದರೆ ಪುರುಷನೊಬ್ಬ ಸ್ತ್ರಿಯೊಂದಿಗೆ ಸಂಬಂಧ ಇಟ್ಟುಕೊಂಡಾಗ ಈ ಕಲಮು ಸಂಬಂಧ ಪಡುತ್ತಿರಲಿಲ್ಲ.ಅದಕ್ಕಿಂತಲೂ ಮುಖ್ಯವಾಗಿ ಈ ಐಪಿಸಿ 497 ರ ಅಡಿಯಲ್ಲಿ ಪುರುಷ ಅಕ್ರಮ ಸಂಬಂಧ ಇಟ್ಟಾಗ ಆಕೆಯ ವಿವಾಹೇತರ ಸಂಬಂಧದಲ್ಲಿರುವ ಸ್ತ್ರಿಯನ್ನು ಈ ಕಲಮಿನಡಿಯಲ್ಲಿ ಶಿಕ್ಷೆಗೆ ಒಳಪಡಿಸುವಂತಿರಲಿಲ್ಲ. ಅಷ್ಟೇ ಅಲ್ಲ ಒರ್ವ ಸ್ತ್ರಿಯು ಆಕೆಯ ಗಂಡನ ಮೇಲೆ ಈ ಕೃತ್ಯಕ್ಕೆ ಕ್ರಮ ಕೈಗೊಳ್ಳಲು ಯಾವುದೇ ಅವಕಾಶವಿರಲಿಲ್ಲ. ಸುಪ್ರೀಮ್ ಕೋರ್ಟ್ ನ ನ್ಯಾಯಾಧೀಶರ ಪೀಠ 497 ರ ಕಲಮನ್ನು ರದ್ದುಗೊಳಿಸಿ ಸಂವಿಧಾನದ ಪರಿಚ್ಛೇದ 14ದ ಸಮಾನತೆಯನ್ನು ಎತ್ತಿ ಹಿಡಿದೆ. ಆದರೆ ವಿವಾಹೇತರ ಸಂಬಂಧದ ಕಾರಣಕ್ಕೆ ದಂಪತಿಗಳು ವಿಚ್ಚೇದನ ಪಡೆದುಕೊಳ್ಳಬಹುದೆಂಬ ಮಾತುಗಳನ್ನು ಕೂಡ ಸ್ಪಷ್ಟ ಪಡಿಸಿದೆ.

ಸಾಮಾಜಿಕವಾಗಿ ನೋಡುದಾರೆ ವಿವಾಹೇತರ ಸಂಬಂಧಗಳು ಖಂಡಿತವಾಗಿಯೂ ತಪ್ಪು. ಮನುಷ್ಯ ಪ್ರಾಣಿಗಳಂತೆ ಬದುಕುವವನಲ್ಲ. ಆತ ಭಾವನಾತ್ಮಕ ಜೀವಿ. ತನ್ನ ಸಂಗತಿಗಳೊಂದಿಗೆ ಆತ ಎಷ್ಟೇ ಪ್ರಗತಿಪರನೆನೆಸಿಕೊಂಡರು ತನ್ನ ಪತಿ/ಪತ್ನಿಯನ್ನು ಬೇರೆಯವರೊಂದಿಗೆ ಸಂಬಂಧ ಇಟ್ಟುಕೊಳ್ಳುವುದನ್ನು ಬಯಸಲಾರ. ಹಾಗಂತ ಐಪಿಸಿ 497 ಈ ಸಂಬಂಧಗಳನ್ನು ರಕ್ಷಿಸುತ್ತಿತ್ತು ಎಂಬುದು ಕೂಡ ಬಾಲಿಶತನ. ಈ ಕಲಮು ವಿವಾಹೇತರ ಸಂಬಂಧದ ನೆಪದಲ್ಲಿ ಸಂವಿಧಾನದ ಮೂಲ ಆಶಯವಾದ ಸಮಾನತೆಗೆ ಕೊಡಲಿ ಏಟು ಕೊಡುತ್ತಿತ್ತು. ಸ್ತ್ರಿಯ ಕಡೆಯಿಂದ ತಪ್ಪಾದಾಗ ಮಾತ್ರ ಆಕೆ ವಿವಾಹೇತರ ಸಂಬಂಧ ಹೊಂದಿದ್ದ ಪುರುಷನಿಗೆ ಶಿಕ್ಷೆಯಾಗುತ್ತಿತ್ತು. ಆದರೆ ಪುರುಷ ಸಿಕ್ಕಿಹಾಕಿಕೊಂಡಾಗ ಕಾನೂನು ಅನ್ವಯವೇ ಆಗುತ್ತಿರಲಿಲ್ಲ!

ಆ ಕಾರಣಕ್ಕಾಗಿ ಆಗಸ್ಟ್ 2018 ರಲ್ಲಿ ಈ ಪ್ರಕರಣ ನ್ಯಾಯಾಲಯ ಆಲಿಸುವಾಗ ನೀವು ಈ ಕಾನೂನು ಸಂವಿಧಾನಿಕವಾಗಿ ಸಮಾನತೆಗೆ ಹೇಗೆ ವಿರೋಧವೆಂಬುದು ಸಾಬೀತು ಪಡಿಸಿ ನಂತರ ನ್ಯಾಯಾಲಯ ಇದರ ಅನೂರ್ಜಿತದ ಬಗ್ಗೆ ಚಿಂತಿಸಲಿದೆ ಎಂದು ಹೇಳಿತ್ತು. ಅದರಂತೆ ಇಂದಾ ವಿವಾಹೇತರ ಸಂಬಂಧ ಅಪರಾಧವಲ್ಲ ಮತ್ತು ಗಂಡ ಹೆಂಡತಿಯ ಮಾಲಿಕನಲ್ಲ ಎಂದು ಘೋಷಿಸಿದೆ.

ಇನ್ನು ಕೆಲವರ ವಾದದಂತೆ ಸೆಕ್ಷನ್ 497 ಮದುವೆಯ ಪಾವಿತ್ರ್ಯತೆಯನ್ನು ರಕ್ಷಿಸುತ್ತಿತ್ತು ಎಂದು ವಾದಿಸುತ್ತಾರೆ. ಪತ್ನಿಯೊಬ್ಬಳು ವಿವಾಹೇತರ ಸಂಬಂಧ ಇಟ್ಟರೆ ಕ್ರಮ ಪತಿ ಇಟ್ಟರೆ ಇಲ್ಲ ಎಂಬುದು ಯಾವ ಪಾವಿತ್ರ್ಯತೆ? ಹಾಗಾಗಿ ವಿವಾಹದ ಪಾವಿತ್ರ್ಯತೆ ರಕ್ಷಣೆ ಹೆಸರಿನಲ್ಲಿ ಸದ್ದಿಲ್ಲದೆ ಅಸಮಾನತೆಯನ್ನು ಮುನ್ನಡೆಸುತ್ತಿದ್ದು ಸುಳ್ಳಲ್ಲ!

ಇನ್ನು ನೈತಿಕ ಅನೈತಿಕತೆಯ ಪ್ರಶ್ನೆ. ವ್ಯಭಿಚಾರವೆಂಬುದು ನಾಗರಿಕ ಸಮಾಜ ತಪ್ಪೆಂದು ಒಪ್ಪಿಕೊಳ್ಳುತ್ತದೆ. ವಿವಾಹೇತರ ಸಂಬಂಧಗಳು ಇಬ್ಬರ ಜೀವನವನ್ನು ಅಸ್ಥಿರ ಗೊಳಿಸುತ್ತದೆಂಬುದು ಸುಳ್ಳಲ್ಲ! ಅಂದ ಹಾಗೆ ಮದುವೆಯೆಂಬುದು ಊರ್ಜಿತಗೊಳ್ಳುವುದು ಕಾನೂನಿನಡಿಯಲ್ಲಿ ಅಲ್ಲಿ ಇಬ್ಬರು ಪರಸ್ಪರ ಒಪ್ಪಿ ಕಾನೂನಿನ ನಿಬಂಧನೆಗಳನ್ನು ಪಾಲಿಸಿ ಮದುವೆಯಾಗುತ್ತಾರೆ. ಏಕಾಏಕಿ ವಿವಾಹೇತರ ಸಂಬಂಧ ಬೆಳೆಸುತ್ತಾರೆಂದಾದರೆ ಅದೊಂದು ನಂಬಿಕೆ ದ್ರೋಹವಲ್ಲದೆ ಮತ್ತೇನು? ಹಾಗೇ ತಾನು ಸಂಬಂಧ ಇಟ್ಟುಕೊಳ್ಳುದಾದರೆ ಮದುವೆಯಾಗುವ ಅವಶ್ಯಕತೆಯಿತ್ತೆ? ಹೀಗೆ ನೂರಾರು ಪ್ರಶ್ನೆಗಳು ಇಂದು ಸಮಾಜದಲ್ಲಿ ಚರ್ಚಿಸಲ್ಪಡುತ್ತದೆ.

ಆದರೆ ಬಹುಮುಖ್ಯವಾದ ಅಂಶವೊಂದನ್ನು ನಾವು ಗಮನಿಸಬೇಕಾಗಿರುವುದು ಐಪಿಸಿಯ 497 ರದ್ದು ವಿವಾಹೇತರ ಸಂಬಂಧಕ್ಕೆ ಕೊಟ್ಟ ಲೈಸನ್ಸ್ ಲ್ಲ ಬದಲಾಗಿ ವಿವಾಹೇತರ ಸಂಬಂಧ ಹೆಸರಿನಲ್ಲಿ ಕಳೆದ ನೂರೈವತ್ತು ವರ್ಷದಿಂದ “ಒನ್ ಸೈಡೆಡ್” ತೀರ್ಮಾನಗಳಿಗೆ ನೀಡಿದ ಪೂರ್ಣ ವಿರಾಮ ಮಾತ್ರವೇ ಆಗಿದೆ.

ತನ್ನ ತೀರ್ಪಿನಲ್ಲಿ ಸುಪ್ರೀಮ್ ಹೇಳಿದಂತೆ ವಿವಾಹೇತರ ಸಂಬಂಧವು ವಿಚ್ಚೇದನಕ್ಕೆ ಬುನಾದಿಯಾಗಬಹುದೆಂದು! ಈ ಒಂದು ಭಾಗವು ಬಹಳಷ್ಟು ಮಹತ್ವದಾಗಿದೆ.ಪತ್ನಿ – ಪತಿಯರಿಬ್ಬರು ಅತೀ ಮುಖ್ಯವಾಗಿ ಚಿಂತಿಸಬೇಕಾದ ಭಾಗ. ಇದರ್ಥ ಈಗಲೂ ವಿವಾಹೇತರ ಸಂಬಂಧಕ್ಕೆ ಕಾನೂನಿನಲ್ಲಿ ಒಂದು ಕಿಟಕಿ ತೆರೆಯಲಾಗಿದೆ ಅದು ವಿಚ್ಚೇದನ! ಇದರರ್ಥ ಪತ್ನಿ ಅಥವಾ ಪತಿ ಸ್ವಾತಂತ್ರ್ಯ ನಿರ್ಧಾರ ಕೈಗೊಳ್ಳುವ ಮುನ್ನ ಅಥವಾ ವಿವಾಹೇತರ ಸಂಬಂಧ ಬೆಳೆಸುವ ಮುನ್ನ ಶಿಕ್ಷೆಯ ಹೆದರಿಕೆ ಇಲ್ಲವೆಂದು ಮುನ್ನಡೆಯುದಾದರೆ, ವಿಚ್ಚೇದನ ಎಂಬ ಕಿಟಕಿಯಿಂದ ಹೊರ ಬೀಳುವುದು ಖಚಿತ ಎಂಬುದನ್ನು ಮರೆಯಬಾರದಾಗಿದೆ!!

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.