ಸಂಪಾದಕೀಯ

ತನು ಶ್ರೀ ದತ್ತಾಳಂತಹ ಮುಂದುವರಿದ, ಶಿಕ್ಷಣವಂತ ಹೆಣ್ಣು ಮಗಳೊಬ್ಬಳು ಹತ್ತು ವರ್ಷದ ನಂತರ ಈ ಸಮಾಜದ ಮುಂದೆ ಬಂದು ತನಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ಹಂಚಿಕೊಳ್ಳುತ್ತಾಳೆಂದಾದರೆ ಕೆಲವೊಂದು ವರ್ಷದಿಂದ ಮಹಿಳೆಯ ಸಬಲೀಕರಣವೆಂದು ಬೊಬ್ಬಿಡುವ ಬಾಲಿವುಡ್ ನ ಅಂತರಂಗ ಎಷ್ಟೊಂದು ಹೊಲಿಸಿನೊಂದಿಗೆ, ಭೀಕರತೆಯಿಂದ ಕೂಡಿದೆ ಎಂಬುದನ್ನು ಅರ್ಥೈಸಿಕೊಳ್ಳಬಹುದಾಗಿದೆ. ಬಟ್ಟೆ ಬಿಚ್ಚುವುದನ್ನು ಹೆಣ್ಣಿನ ಸಬಲೀಕರಣ, ಆಧುನಿಕತೆಯೆಂದು ಬಡಾಯಿಕೊಚ್ಚಿಕೊಳ್ಳುವ ಎಲ್ಲರಿಗೂ ಈ ಘಟನೆಯಲ್ಲಿ ಕಲಿಯಲು ಬಹಳಷ್ಟಿದೆ. ತನುಶ್ರೀ ದತ್ತಾ 2008 ರಲ್ಲಿ ನಾನಾ ಪಟೇಕರ್ ನೊಂದಿಗಿನ “Horn OK please” ಸಿನಿಮಾದ ಚಿತ್ರೀಕರಣ ಮತ್ತು ಚಾಕೋಲೇಟ್ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ನಿರ್ದೇಶಕ ವಿವೇಕ್ ಅಗ್ನಿ ಹೋತ್ರಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ ಬಗ್ಗೆ ಆರೋಪಿಸಿದ್ದಾರೆ.

ಅದನ್ನು ಕೇವಲ ಆರೋಪವಾಗಿ ನೋಡಬೇಕೆಂದಿಲ್ಲ ಅದರಲ್ಲಿ ಸತ್ಯಾಂಶವಿದೆ. ಆಕೆ ಖಾಸಗಿ ಟಿವಿ ಚಾನೆಲ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತನ್ನ ಮೇಲಾದ ದೌರ್ಜನ್ಯ ಮತ್ತು ಕಳೆದ ಹತ್ತು ವರ್ಷಗಳಿಂದ ತನಗಾಗಿರುವ ಮಾನಸಿಕ ಹಿಂಸೆಯ ಬಗ್ಗೆ ಬಿಡಿ ಬಿಡಿಯಾಗಿ ಬಿಡಿಸಿಟ್ಟಿದ್ದಾಳೆ. ಆದರೆ ಇವತ್ತು ಯಾವ ಮಾಧ್ಯಮಗಳು, ಸೋ ಕಾಲ್ಡ್ ಸಾಮಾಜಿಕ ಕಾರ್ಯಕರ್ತರು, ಮಹಿಳಾವಾದಿಗಳು ಈ ವ್ಯವಸ್ಥೆಯ ಬಗ್ಗೆ ಮಾತನಾಡಬೇಕಿತ್ತೋ, ಅವರೆಲ್ಲರೂ ಮೌನಕ್ಕೆ ಶರಣಾಗಿದ್ದಾರೆ. ಮಾಧ್ಯಮಗಳಂತೂ ನಾನಾ ಪಟೇಕರ್ ಮತ್ತು ವಿವೇಕ್ ಅಗ್ನಿ ಹೋತ್ರಿ ಕಳುಹಿಸಿದ ಲೀಗಲ್ ನೋಟಿಸ್ “ಕಪಾಳ ಮೋಕ್ಷ” ವೆಂಬಂತೆ ತನು ಶ್ರೀ ದತ್ತಾಳನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದೆ.

ಹೆಣ್ಣೊಬ್ಬಳು ಯಾವ ರೀತಿ ಬಟ್ಟೆ ತೊಡಬೇಕು. ಅವಳು ಹೇಗೆ ಒಬ್ಬ ನಟನೊಂದಿಗೆ ನಟಿಸಬೇಕು ಎಲ್ಲವೂ ಕೂಡ ಪುರುಷಾಧಿಪಾತ್ಯದಲ್ಲಿಟ್ಟುಕೊಂಡಿರುವ ಬಾಲಿವುಡ್ ಇಂದು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತದೆ. ಮತ್ತು ಭಾರತೀಯ ಮಹಿಳೆಯರಿಗೆ ಸಬಲೀಕರಣದ ಪಾಠ ಬೋಧಿಸುತ್ತದೆ. ಬಾಲಿವುಡ್ ನ ಜಗತ್ತಿನಲ್ಲಿ ನೊಂದ ನಟಿಯರ ಬಗ್ಗೆ ಈ ಜಗತ್ತು ತುಟಿ ಪಿಟಿಕ್ ಎನ್ನಲ್ಲ!! ಯಾಕೆಂದರೆ ಈ ಜಗತ್ತಿನಲ್ಲಿ ನಡೆಯುವ ಲೈಂಗಿಕ ದೌರ್ಜನ್ಯಗಳಿಗೆ “ಆಧುನೀಕರಣ” ದ ಹೆಸರು ನೀಡಲಾಗುತ್ತದೆ. ಹೆಣ್ಣೊಬ್ಬಳು ಧೈರ್ಯ ಮಾಡಿ ತನ್ನ ಮೇಲಾದ ದೌರ್ಜನ್ಯವನ್ನು ಹೇಳಿಕೊಂಡರೆ ಅವಳ ತೇಜೋವಧೆ ಮಾಡಲು ಇನ್ನಷ್ಟು ನಟಿಯರು, ನಟರು, ಮಾಧ್ಯಮಗಳು ತುದಿಗಾಲಲ್ಲಿ ನಿಂತಿರುತ್ತಾರೆ ಹೆಣ್ಣು ಮೈತುಂಬಾ ಬಟ್ಟೆ ತೊಡುವುದನ್ನೇ ಅಪರಾಧವನ್ನಾಗಿಸಿರುವ ಈ ಲೋಕದ ಬಗ್ಗೆ ಪ್ರಶ್ನೆಯೆತ್ತಿದಾಗಲೆಲ್ಲ ಮಹಿಳಾ ವಿರೋಧಿ ಹಣೆ ಪಟ್ಟಿ ಕಟ್ಟಲು ಸೋಕಾಲ್ಡ್ ಹೋರಾಟಗಾರರು ಇವರ ಬೆನ್ನಿಗೆ ಸದಾ ನಿಂತಿರುತ್ತಾರೆ.

ಈಗ ತನು ಶ್ರೀ ಪ್ರಕರಣದಲ್ಲಿ ಆಕೆಯ ಪರ ಎಷ್ಟು ಮಂದಿ ಧ್ವನಿಯೆತ್ತುದಿದ್ದಾರೆ? ಹೆಣ್ಣು ಅಂದರೆ ಆಕೆ ಬಂಡವಾಳಶಾಹಿಗಳ ಪಾಲಿಗೆ ಉತ್ಪನ್ನವಾಗಿ ಮಾರ್ಪಟ್ಟಿರುವ ಈ ಸಂದರ್ಭದಲ್ಲಿ ಆಕೆಯ ಹಕ್ಕಿನ ಬಗ್ಗೆ ಈ ಆಧುನೀಕರಣ ಜಗತ್ತಿನಲ್ಲಿ ಮತ್ತೆ ಮತ್ತೆ ಮಾತನಾಡಬೇಕಿದೆ. ತನು ಶ್ರೀ ಯಂತೆ ಯಾವ ಹೆಣ್ಣು ಕೂಡ ಅನ್ಯಾಯಕ್ಕೊಳಗಾಗಬಾರದು. ಹೆಣ್ಣಿಗೆ ಸಂಪೂರ್ಣ ಬಟ್ಟೆ ತೊಡುವ ಸಂಸ್ಕೃತಿ ಹೊಂದಿರುವುದನ್ನು ವಿರೋಧಿಸುವ ವರ್ಗ, ಇಂದು ತನು ಶ್ರೀಗೆ ಕ್ಯಾಮರಾದ ಮುಂದೆಯೇ ಬಟ್ಟೆ ಬಿಚ್ಚಲು, ಬಲವಂತವಾಗಿ ಅವಳು ಇಚ್ಚಿಸದ ಒಂದು ಸಿನಿಮಾ ಪಾತ್ರವನ್ನು ಮಾಡಲು ಒತ್ತಾಯಿಸಿರುವ ಕೃತ್ಯದ ಬಗ್ಗೆ ಯಾವ ಪ್ರತಿಭಟನೆಗಳೂ ಕಾಣ ಸಿಗುವುದಿಲ್ಲ! ಇದನ್ನು “ಬೂಟಾಟಿಕೆ” ಎನ್ನದೆ ಮತ್ತೇನೆಂದು ಹೇಳಲು ಸಾಧ್ಯ? ನೀವೆ ನಿರ್ಧರಿಸಿ.

ಇತ್ತೀಚೆಗೆ ಮಹಿಳೆಯರ ಸಬಲೀಕರಣದ ಉದ್ದುದ್ದ ಭಾಷಣ ಮಾಡುವ ಈ ಸಿನಿಮಾ ರಂಗದಲ್ಲಿ ಅದೆಷ್ಟೋ ಮಹಿಳೆಯರು ತಮ್ಮ ಮೇಲಾದ ದೌರ್ಜನ್ಯವನ್ನು ಪ್ರಸ್ತಾಪಿಸುತ್ತಾ ಬೀದಿಗೆ ಬಂದಿದ್ದಾರೆ. ಆದರೆ ಯಾರು ಕೂಡ ಮಾತನಾಡುವುದಿಲ್ಲ!! ಮಾತನಾಡುವುದೂ ಅವರಿಗೆ ಬೇಕಾಗಿಲ್ಲ. ಇಂತಹ ಬೂಟಾಟಿಕೆಗಳನ್ನು ವಿರೋಧಿಸಬೇಕಾದ ಮತ್ತು ಮಹಿಳಾ ಸಬಲೀಕರಣವೆಂದರೆ ಮಹಿಳೆಯರನ್ನು ಬಂಡವಾಳಶಾಹಿಗಳ ಉತ್ಪನ್ನವನ್ನಾಗಿಸುವುದಲ್ಲ ಹಾಗೂ ಅವರ ದೇಹದಲ್ಲಿನ ಬಟ್ಟೆಗಳನ್ನು ಬಿಚ್ಚಿಸಿ ಅವರನ ಮೇಲೆ ಇನ್ನಷ್ಟು ದೌರ್ಜನ್ಯಗಳನ್ನು ಎಸಗುವುದಲ್ಲವೆಂಬುದನ್ನು ಈ ಸಮಾಜಕ್ಕೆ ತಿಳಿ ಹೇಳಿ, ಆಧುನೀಕರಣ ಹೆಸರಿನಲ್ಲಿ ದೌರ್ಜನ್ಯಕ್ಕೊಳಗಾಗುತ್ತಿರುವ ತನುಶ್ರೀ ದತ್ತಾಳಂತಹ ಲಕ್ಷಾಂತರ ಯುವತಿಯರನ್ನು ರಕ್ಷಿಸಬೇಕಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.