‘ಸಂಬೋಧನೆ’ಗಳು ತಾರತಮ್ಯದ ಸೂಚಕ

107
ಲೇಖಕಿ: ಚೈತ್ರಿಕಾ ಹರ್ಗಿ

ನಮ್ಮ ಊರುಗಳಲ್ಲಿ (ಬಹುತೇಕ) 4 ವರ್ಷದ ಬ್ರಾಹ್ಮಣ ಮಗು ಕೂಡ ಬ್ರಾಹ್ಮಣೇತರರನ್ನು ಹೆಸರು ಹಿಡಿದು ಕೂಗುತ್ತದೆ. ಬಹುತೇಕ ಬ್ರಾಹ್ಮಣ ಮನೆಗಳಲ್ಲಿ ಮಗು ಮಾತನಾಡಲು ಕಲಿತಾಗಿನಿಂದ ಇದನ್ನು ಪ್ರಯತ್ನಪೂರ್ವಕವಾಗಿ ಕಲಿಸಲಾಗುತ್ತದೆ. ಹಿರಿಯರ ವಯಸ್ಸು 65 ಆಗಿರಲಿ 70 ವಯಸ್ಸಾಗಿರಲಿ ಆ ಮಗು ಏಕವಚನದಲ್ಲೆ ಕರೆಯುವುದು. ನನ್ನ ಅಪ್ಪನನ್ನು ನನ್ನ ಶಾಲೆಯ 1 ತರಗತಿ ಬ್ರಾಹ್ಮಣ ಮಗು ‘ನಾಗಪ್ಪ’ ಎಂದು ಏಕವಚನದಲ್ಲಿ ಕರೆದಿದ್ದನ್ನು, ನನ್ನ ಬ್ರಾಹ್ಮಣ ಗೆಳತಿಯರು ಏಕವಚನದಲ್ಲಿ ಸಂಭೋದಿಸುವುದನ್ನು ಕೇಳುತ್ತಾ ಬೆಳೆದವಳು ನಾನು.

ಇನ್ನು ನಾವು ಮೇಲ್ವರ್ಗದವರನ್ನು ಹೇಗೆ ಕರೆಯಬೇಕೆಂಬುದನ್ನು ಅವರೆ ನಿರ್ಧರಿಸುತ್ತಾರೆ. 4 ವರ್ಷದ ತಮ್ಮ ಗಂಡು ಮಗುವಿನ ಬಗ್ಗೆ ತನ್ನ ಮನೆ ಆಳಿನ ಜೊತೆ ಮಾತನಾಡುವ ಅಪ್ಪನೊಬ್ಬ- ‘ನಮ್ಮನೆ ಸಣ್ಣ ಭಟ್ರು’ ಎಂದು ಹೇಳುತ್ತಾರೆ. ಅಂದರೆ ಆಳು ಆ ಸಣ್ಣ ಮಗುವನ್ನು ‘ಸಣ್ಣ ಭಟ್ರೆ’, ‘ಸಣ್ಣ ಹೆಗಡೆರೆ’ ಎಂದು ಕರೆಯಬೇಕು. ಹಾಗೆ ‘ನಮ್ಮನೆ ಅಮ್ಮ’ ಎಂದು ಹೆಂಡತಿಯನ್ನು ಅಂದರೆ ಆಳು ‘ಅಮ್ಮ’ ಎಂದು ಕರೆಯಬೇಕೆಂಬ ನಿರ್ದೇಶನ ಇದು.

ಇದು ಆಯಾ ಪ್ರದೇಶದಲ್ಲಿ ಯಾರು ಪ್ರಭಲರೊ ಅವರು ಉಳಿದವರ ಮೇಲೆ ಮಾಡುವ ಎಲ್ಲಾ ವಿಧದ ತಾರತಮ್ಯಕ್ಕೆ ಸಂಬೋಧನಾ ಸೂಚಕಗಳು ಇವು.‌ ನಮ್ಮ ಜಾತಿಯವರು ಊರಲ್ಲಿ ಎಸ್.ಸಿ ಎಸ್.ಟಿ ಮೇಲೆ ಮಾಡುವುದು ಇದನ್ನೆ
‌‌ ‌******
ಊರು ಕೇರಿ ಬಿಟ್ಟು ಮುಂದಕ್ಕೆ ಇದು ನಮ್ಮನ್ನು ಎಷ್ಟು ಆವರಿಸಿದೆ ಎಂದರೆ ನಮಗೆ ಎಸ್.ಸಿ. ಎಸ್.ಟಿ, ಲಂಬಾಣಿ, ನಾಯಕ, ಸಮುದಾಯದವರನ್ನು ಏಕವಚನದಲ್ಲಿ ಕರೆದಾಗ ಅದು ಸಾಮಾನ್ಯ ಎನಿಸಿಬಿಡುತ್ತದೆ !?
ಆದರೆ ಭಟ್ಟ ಹೆಗಡೆ ರಾವ್ ಮೂರ್ತಿ ಮತ್ತೇನೊ ಒಂದನ್ನು ಏಕವಚನದಲ್ಲಿ ಬಳಸಿ ನೋಡಿ. ಯೋಗ್ಯತೆ ಇಲ್ಲದಿದ್ದರು ಬಹುವಚನ ಬೇಕಿತ್ತು ಎನ್ನುವವರು ಅಧಿಕ.

ದುರ್ಬಲ ವರ್ಗದ ಪರ ಇರುವ ಕಾದಂಬರಿಕಾರರು ಇದೆ ಹಣೆಬರಹ. ದಲಿತ ವ್ಯಕ್ತಿಯ ಸಂಬೋಧನೆ ಏಕವಚನದಲ್ಲೆ ಇರುತ್ತದೆ. ಲೇಖಕನ ಮತ್ತು ಸಮಾಜದ ತಾರತಮ್ಯದ ಪರವಾದ ಜಾಗೃತ ಮನಸ್ಥಿತಿ.

ನಮ್ಮ ಮನೆಯಲ್ಲಿ ಎಸ್.ಸಿ ಎಸ್.ಟಿ ಯವರನ್ನು ನಾವು ಅಣ್ಣ ಅಕ್ಕ ಅಮ್ಮ ಅಂತಲೆ ಕರೆಯುವ ಸಂಸ್ಕಾರ ಕಲಿಸಿದ್ದಾರೆ. ಆದರೆ ಊರು ಹಾಳು ಮಾಡುವವನೊಬ್ಬ ಮೇಲ್ವರ್ಗದವನು ಎಂಬ ಮಾತ್ರಕ್ಕೆ ಅವರ ಯೋಗ್ಯತೆ ಮೀರಿ ಬಹುವಚನದಿಂದ ಕರೆಯಲಾಗದು. ಎಲ್ಲರನ್ನು ಗೌರವಿಸೋಣ ಆದರೆ ಪ್ರಜ್ಞಾಪೂರ್ವಕವಾಗಿ ಸಾಮಾಜಿಕವಾಗಿ ಸುಳ್ಳು ಬಿತ್ತುವವರನ್ನು, ಸ್ವಾಸ್ಥ್ಯ ಕೆಡಿಸುವವರನ್ನು, ಬೇಧ ತಂದಿಕ್ಕುವವರು, ಒಡೆಯುವರನ್ನು ಅಲ್ಲ.

ನನಗಿರುವುದು ಜಾತಿಯ ತಾರತಮ್ಯವಲ್ಲ; ಬೇಧವೆಣಿಸುವವರೆಡೆ ಇರುವ ಬೇಸರ, ಸಿಟ್ಟು, ಅಸಹ್ಯ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.