ಮುಸ್ಲಿಂ ಉಮ್ಮತ್ತಿನ ಪಾಲಿಗೆ ಅತ್ಯಂತ ಬೆಲೆಬಾಳುವ ಪವಿತ್ರ ರಂಝಾನ್

443

ಲೇಖನ : ಶಫೀ ಉಚ್ಚಿಲ

ಪವಿತ್ರ ರಂಝಾನ್: ಪವಿತ್ರ ರಂಝಾನ್ ಈಗಾಗಲೇ ನಮ್ಮನ್ನು ಸ್ವಾಗತಿಸಿದೆ. ರಂಝಾನ್ ತಿಂಗಳ ಪ್ರತಿಯೊಂದು ದಿವಸಗಳು, ಸಮಯಗಳು, ಕ್ಷಣಗಳೂ ಮುಸ್ಲಿಂ ಉಮ್ಮತ್ತಿನ ಪಾಲಿಗೆ ಅತ್ಯಂತ ಬೆಲೆಬಾಳುವಂತದ್ದು ಎಂಬುದು ಸತ್ಯ. ಪವಿತ್ರ ಇಸ್ಲಾಮಿನ ಕಡ್ಡಾಯ ಕರ್ಮಗಳಲ್ಲೊಂದಾಗಿದೆ ರಂಝಾನ್ ತಿಂಗಳ ಉಪವಾಸ ವೃತಾಚರಣೆ. ಇಸ್ಲಾಮೀ ಕ್ಯಾಲೆಂಡರ್ ಪ್ರಕಾರ 9ನೇ ತಿಂಗಳಾಗಿರುವ ಪವಿತ್ರ ರಂಝಾನ್‍ನಲ್ಲಿ ಉಪವಾಸ ವೃತವನ್ನು ಆಚರಿಸುವುದು ಪ್ರಾಯ ಪೂರ್ತಿಯಾಗಿರುವ, ಬುದ್ದಿ ಇರುವ ಪ್ರತಿಯೊಬ್ಬ ಮುಸಲ್ಮಾನನಿಗೂ ಕಡ್ಡಾಯವಾಗಿದೆ. ಈ ತಿಂಗಳಲ್ಲಿ ಮುಸಲ್ಮಾನನೊಬ್ಬ ಎಲ್ಲಾ ಕೆಡುಕುಗಳಿಂದ ದೂರವಿದ್ದು,ಅಲ್ಲಾಹನಿಗಾಗಿ ಉಪವಾಸ ವೃತವನ್ನು ಆಚರಿಸಿದರೆ ಆತ ತನ್ನ ಜೀವಿತಾವಧಿಯಲ್ಲಿ ಕೈಗೊಂಡ ಸಕಲ ಪಾಪಗಳನ್ನು ಅಲ್ಲಾಹನು ಸುಟ್ಟು ಹಾಕುವನು.

ಪೂರ್ವಿಕ ಪ್ರವಾದಿಗಳ ಅನುಯಾಯಿಗಳು ಈ ಲೋಕದಲ್ಲಿ ಸಾವಿರಾರು ವರ್ಷಗಳ ಕಾಲ ಬಾಳಿ ಬದುಕಿದ್ದು, ಅಷ್ಟೂ ವರ್ಷಗಳಲ್ಲಿ ಅವರು ಸೃಷ್ಟಿಕರ್ತನ ಆರಾಧನೆಯಲ್ಲಿ ತಲ್ಲೀನರಾಗುತ್ತಿದ್ದರು. ಆದರೆ ಅಂತ್ಯ ಪ್ರವಾದಿ (ಸ.ಅ) ರವರ ಅನುಯಾಯಿಗಳಾದ ನಮ್ಮ ಆಯುಷ್ಯವಾದರೋ ಕೇವಲ ಅರುವತ್ತೋ-ಎಪ್ಪತ್ತೋ ವರ್ಷಗಳ ಮಧ್ಯೆ ಇರುವ ಅಲ್ಪಾವಧಿಯಾಗಿದೆ. ಹೀಗಿರುತ್ತಾ ಪೂರ್ವಿಕ ಪ್ರವಾದಿಗಳ ಅನುಯಾಯಿಗಳ ದೀರ್ಘಾಯುಷ್ಯದ ಸತ್ಕರ್ಮಗಳೊಂದಿಗೆ ನಮ್ಮ ಅಲ್ಪಾಯುಷ್ಯದ ಆರಾಧನೆಗಳು ಸಮಾನವಾಗಲು ಅಲ್ಲಾಹನು ನಮಗೆ ಕೆಳವೊಂದು ತಿಂಗಳುಗಳು, ದಿವಸಗಳು ಹಾಗೂ ಸಮಯಗಳನ್ನು ನಿಗದಿಪಡಿಸಿದ್ದಾನೆ.ಅದರಂತೆ ರಂಝಾನ್ ತಿಂಗಳು ಒಂದಾಗಿದ್ದು,ಈ
ತಿಂಗಳಲ್ಲಿ ಕೈಗೊಳ್ಳುವ ಎಲ್ಲಾ ಸತ್ಕರ್ಮಗಳಿಗೆ ಉಳಿದ ಸಮಯಗಳಲ್ಲಿ ಕೈಗೊಳ್ಳುವ ಸತ್ಕರ್ಮಗಳಿಗಿಂತ ದುಪ್ಪಟ್ಟು ಪ್ರತಿಫಲವನ್ನು ಅಲ್ಲಾಹನು ನೀಡುತ್ತಾನೆ.ರಮಳಾನಿನಲ್ಲಿ ಒಂದು ಕಡ್ಡಾಯ ಕರ್ಮವನ್ನು ಕೈಗೊಂಡರೆ ಉಳಿದ ಸಮಯಗಳಿಗಿಂತ 70 ಪಟ್ಟು ಪ್ರತಿಫಲ ಅಲ್ಲಾಹನು ನೀಡುತ್ತಾನೆ.ರಮಳಾನಿನಲ್ಲಿ ಕೈಗೊಳ್ಳುವ ಉಪವಾಸ ವೃತವು ಕೇವಲ ಅನ್ನಾಹಾರ, ಪಾನೀಯಾದಿಗಳನ್ನು ತೊರೆಯುವುದಕ್ಕೆ ಮಾತ್ರ ಸೀಮಿತಗೊಳಿಸದೆ, ಸಕಲ ದೇಹೇಚ್ಚೆಗಳಿಂದ ದೂರವಿದ್ದರೆ ಮಾತ್ರ ಉಪವಾಸ ವೃತದ ಪರಿಪೂರ್ಣ ಪ್ರತಿಫಲ ದೊರೆಯಲು ಸಾಧ್ಯ. ಶರೀರದ ಯಾವುದಾದರೊಂದು ಅಂಗದ ಮುಖಾಂತರ ಕೈಗೊಳ್ಳುವ ಒಂದು ಸಣ್ಣ ತಪ್ಪಾದರೂ ಅದು ಅಂದಿನ ಆತನ ಉಪವಾಸದ ಪ್ರತಿಫಲದಲ್ಲಿ ಕೊರತೆಯನ್ನು ಅನುಭವಿಸುವಂತೆ ಮಾಡುತ್ತದೆ.
ರಮಳಾನಿನ ರಾತ್ರಿ ಸಮಯದಲ್ಲಿ ತರಾವೀಹ್ ಎಂಬ ಸುನ್ನತ್ ನಮಾಜ್ ಪ್ರತ್ಯೇಕ ಸುನ್ನತಾಗಿದ್ದು, ಸಾಮಾನ್ಯವಾಗಿ ಎಲ್ಲ ಮಸೀದಿಗಳಲ್ಲೂ ಅದನ್ನು ಸಾಮೂಹಿಕವಾಗಿ ನೆರವೇರಿಸಲಾಗುತ್ತದೆ. ಅಂತಹ ಸತ್ಕರ್ಮಗಳಿಂದ ವಂಚಿತರಾಗದೆ,ನಿರ್ವಹಿಸುವ
ಮೂಲಕ ರಮಳಾನ್ ತಿಂಗಳ ಸಾರ್ಥಕತೆಗೆ ಪ್ರಯತ್ನಿಸುವುದರೊಂದಿಗೆ ನಾವು ನಿರ್ವಹಿಸುವ ಸಕಲ ಸತ್ಕರ್ಮಗಳು ಲೋಕಮಾನ್ಯತೆಯ ಉದ್ದೇಶದಿಂದ ಮುಕ್ತಗೊಂಡು ದೇವ ಸಂಪ್ರೀತಿಯ ಏಕಮಾತ್ರ ಉದ್ದೇಶವನ್ನು ಹೊಂದಿರುವಂತಾಗಲಿ.

ಅನಿಸ್ಲಾಮಿಕ ಸಂಭ್ರಮಾಚರಣೆ ಬೇಡ :

ಇಸ್ಲಾಮಿನಲ್ಲಿ ಹಬ್ಬಗಳ ಆಚರಣೆಗೂ ಒಂದು ಮಿತಿಯಿದೆ. ಅವುಗಳನ್ನು ಪಾಶ್ಚಾತ್ಯ ಆಚರಣೆಗಳೊಂದಿಗೆ ಸಮೀಕರಿಸುವುದನ್ನು ಇಸ್ಲಾಂ ಯಾವತ್ತೂ ಒಪ್ಪುವುದಿಲ್ಲ. ಸಂಭ್ರಮದ ಹಬ್ಬಗಳ ಆಚರಣೆಯಲ್ಲೂ ಸೃಷ್ಟಿಕರ್ತನಾದ ಅಲ್ಲಾಹನ ಸ್ಮರಣೆಯನ್ನು ಅಧಿಕಗೊಳಿಸಲು ಇಸ್ಲಾಂ ಕಲ್ಪಿಸುತ್ತದೆ. ಹಬ್ಬಗಳ ಹೆಸರಿನಲ್ಲಿ ಒಂದು ಕ್ಷಣದ ಅನಿಸ್ಲಾಮಿಕ ಸಂಭ್ರಮಾಚರಣೆ ಮುಸಲ್ಮಾನನೊಬ್ಬನ ಜೀವಮಾನವಿಡೀ ಸಂಪಾದಿಸಿದ ಸತ್ಕರ್ಮಗಳ ವಿನಾಶಕ್ಕೆ ಹೇತುವಾಗುವುದು ಮಾತ್ರವಲ್ಲದೆ,ಪವಿತ್ರ ರಂಝಾನ್ ನಮ್ಮನ್ನು ಬೀಳ್ಕೊಡುವಾಗ ಶಪಿಸುತ್ತಾ ಬೀಳ್ಕೊಡುವ ಸನ್ನಿವೇಶ ನಿರ್ಮಾಣವಾದರೆ ಇಡೀ ಪಾರತ್ರಿಕ ಜೀವನದ ವಿನಾಶಕ್ಕೆ ಸಾಕಾದೀತು. ಇಂತಹ ಸನ್ನಿವೇಶದಲ್ಲಿ ಮುಸ್ಲಿಂ ಸಮುದಾಯವು ತಮ್ಮೆಲ್ಲ ಅವಯವಗಳಿಂದ ಬರುವ ಕೆಡುಕುಗಳಿಂದ ದೂರ ನಿಲ್ಲುವ ಗರಿಷ್ಠ ಪ್ರಯತ್ನವನ್ನು ಮಾಡುವ ಮೂಲಕ
ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಅನುಯಾಯಿಗಳಾದ ನಾವು ಅಲ್ಲಾಹನು ಅನುಗ್ರಹೀತವಾಗಿ ನೀಡಿರುವ ಪುಣ್ಯ ಮಾಸವನ್ನು ಅತ್ಯುತ್ತಮ ರೀತಿಯಲ್ಲಿ ವ್ಯಯಿಸಿ ಅಲ್ಲಾಹನ ಪ್ರೀತಿಗಳಿಸುವ ಸತ ಪ್ರಯತ್ನ ನಮ್ಮದಾಗಿರಲಿ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.