ಸಚಿವ ಪ್ರಮೋದ್ ಮಧ್ವರಾಜ್ ಮೇಲೆ 193 ಕೋಟಿ ರೂ. ವಂಚನೆ ಆರೋಪ: ದೂರು ದಾಖಲು

ಉಡುಪಿ: ಕೇಂದ್ರ ಹಣಕಾಸು ಸಚಿವಾಲಯದ ಹಣಕಾಸು ಸೇವಾ ವಿಭಾಗದಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಮೇಲೆ ದೂರು ದಾಖಲಾಗಿದೆ.

ಮಧ್ವರಾಜ್ ಅವರು ಸಿಂಡಿಕೇಟ್ ಬ್ಯಾಂಕಿನ ಮಲ್ಪೆ ಶಾಖೆಯಲ್ಲಿ ಕೇವಲ 1.01 ಕೋಟಿ ರೂಪಾಯಿ ಮೌಲ್ಯದ ಸೊತ್ತುಗಳ ದಾಖಲೆ ನೀಡಿ 193 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ. ಈ ಅಕ್ರಮಕ್ಕೆ ಬ್ಯಾಂಕ್ ಅಧಿಕಾರಿಗಳು ಕುಮ್ಮಕ್ಕು ನೀಡಿದ್ದಾರೆ. ಕೇಂದ್ರ ಹಣಕಾಸು ಸಚಿವಾಲಯದ ಹಣಕಾಸು ಸೇವಾ ವಿಭಾಗದಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.

ಕಡಿಮೆ ಮೊತ್ತದ ದಾಖಲೆ ನೀಡಿ ನೂರಾರು ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ ಎಂದು ದೆಹಲಿಯಲ್ಲಿರುವ ಕೇಂದ್ರ ಹಣಕಾಸು ಸಚಿವಾಲಯಕ್ಕೆ ಆರ್‍ಟಿಐ ಕಾರ್ಯಕರ್ತ ಟಿ ಜೆ ಆಬ್ರಹಂ ದೂರು ನೀಡಿದ್ದಾರೆ.

ಈ ಆರೋಪವನ್ನು ಸಚಿವ ಪ್ರಮೋದ್ ಮಧ್ವರಾಜ್ ತಳ್ಳಿ ಹಾಕಿದ್ದಾರೆ. ಈ ಆರೋಪ ನೂರಕ್ಕೆ ನೂರು ಸುಳ್ಳು. ಬ್ಯಾಂಕಿಗೆ ಎಷ್ಟು ಆಸ್ತಿ ಇಡಬೇಕೋ ಅದನ್ನು ಇಟ್ಟಿದ್ದೇನೆ. ನಾನು ಸೂಕ್ತ ದಾಖಲೆ ಕೊಟ್ಟು ಸಾಲ ಪಡೆದಿದ್ದೇನೆ. ಸಿಂಡಿಕೇಟ್ ಬ್ಯಾಂಕ್ ಅವರನ್ನೇ ಬೇಕಾದ್ರೆ ಕೇಳಿ ಎಂದಿದ್ದಾರೆ.

ಬ್ಯಾಂಕಿನ ಸಾಲ ನಾನು ಕೊಟ್ಟ ಆಸ್ತಿ ಮೇಲೆ ನೀಡಲಾಗಿದೆ. ಸಿಂಡಿಕೇಟ್ ಬ್ಯಾಂಕ್ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಯಾವ ತನಿಖೆ ಬೇಕಾದ್ರೂ ನಡೆಸಬಹುದು. ನನ್ನಿಂದ ಯಾವ ವಂಚನೆಯೂ ಆಗಿಲ್ಲ. ವಂಚನೆ ಮಾಡಿದರೆ ನಾನು ಹೀಗೆ ಎಲ್ಲಾಕಡೆ ಸಂತೋಷದಿಂದ ತಿರುಗುತ್ತಿರಲಿಲ್ಲ. ಸುಳ್ಳು ಆರೋಪವನ್ನು ಮಾಧ್ಯಮ ಮತ್ತು ಜನ ನಂಬುತ್ತಾರೆ ಎಂದರೆ ನಾನು ಹೆಲ್ಪ್ ಲೆಸ್. ಮಲ್ಪೆ ಬ್ಯಾಂಕಲ್ಲಿ ನನ್ನ ಖಾತೆಯಿದೆ. ಯಾರು ಬೇಕಾದ್ರೂ ಪರೀಕ್ಷಿಸಬಹುದು ಎಂದು ಪ್ರಮೋದ್ ಮಧ್ವರಾಜ್ ಸ್ಪಷ್ಟನೆ ಕೊಟ್ಟಿದ್ದಾರೆ.