ಮಧ್ಯ ಪ್ರದೇಶದ ಶಿವಪುರಿ ಬಳಿಯ ಹಳ್ಳಿಯೊಂದರಲ್ಲಿ ಇಬ್ಬರು ದಲಿತ ಮಕ್ಕಳನ್ನು ಬಯಲು ಶೌಚಲಯಕ್ಕೆ ಹೋದ ಕಾರಣ ಹೊಡೆದು ಹತ್ಯೆ ಮಾಡಲಾಯಿತು. ಈ ಗ್ರಾಮವನ್ನು ಕೂಡ ಸ್ವಚ್ಛ ಭಾರತ ಮಿಷನ್ ಅಂಕಿ ಅಂಶದ ಪ್ರಕಾರ ‘ಬಯಲು ಶೌಚ ಮುಕ್ತ’ ಗ್ರಾಮ ಎಂದು ಘೋಷಿಸಲಾಗಿದೆ. ಹಾಗದರೆ ಪ್ರಧಾನಿ ಮೋದಿ ಗಾಂಧಿ ಜಯಂತಿಯ ಈ ದಿನ ಭಾರತವನ್ನು ಬಯಲು ಶೌಚ ಮುಕ್ತ ಎಂದು ಘೋಷಿಸಿರುವುದು ಎಷ್ಟು ದೊಡ್ಡ ಸುಳ್ಳು ಎಂಬುದು ಸಾಬೀತಾಗುತ್ತದೆ.

ಹತ್ತು ದಿನದ ಮೊದಲು ಉತ್ತರ ಪ್ರದೇಶದ ರಾಯ್ ಬರೇಲಿಯ ಇಚ್ವಾಪುರ ಗ್ರಾಮದಲ್ಲಿ ಬಯಲು ಶೌಚಾಕ್ಕೆ ತೆರಳಿದ ಮಹಿಳೆ ಕೊಲೆಯಾಗಿ ಪತ್ತೆಯಾಗುತ್ತಾರೆ. ಆಕೆಯ ಮನೆಯಲ್ಲಿ ಶೌಚಾಲಯವಿರಲಿಲ್ಲವೆಂಬುದು ನಂತರ ತಿಳಿಯುತ್ತದೆ. ಈ ಗ್ರಾಮವನ್ನು ಕೂಡ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಬಯಲು ಶೌಚ ಮುಕ್ತ ಗ್ರಾಮವೆಂದು ಘೋಷಿಸಿದ್ದರು. ಹಾಗಾದರೆ ಈ ಅಂಕಿ ಅಂಶಗಳು ಎಷ್ಟೊಂದು ಸುಳ್ಳಿನಿಂದ ಕೂಡಿದೆ ಎಂಬುದಕ್ಕೆ ಸಾಕ್ಷ್ಯ ವಹಿಸುತ್ತದೆ.

ಈ ಮೇಲಿನ ಎರಡು ಘಟನೆಗಳು ಭಾರತ ಬಯಲು ಶೌಚ ಮುಕ್ತವಾಗಿ ಕೇವಲ ಘೋಷಣೆಯಲ್ಲಿ ಮಾತ್ರ ಉಳಿದಿದೆಯೆಂಬುದಕ್ಕೆ ಪ್ರತ್ಯಕ್ಷ ಸಾಕ್ಷಿಗಳಾಗಿವೆ. ಇನ್ನು ಸ್ವಚ್ಚ ಭಾರತ ಮಿಷನ್ ಸಂಗ್ರಹಿಸುವ ಅಂಕಿ ಅಂಶಗಳು ಎಷ್ಟು ಸತ್ಯಾಸತ್ಯತೆಯಿಂದ ಕೂಡಿದೆಯೆಂಬುದು ಕೂಡ ಪ್ರಶ್ನಾರ್ಹ ಕಾರಣವೇನೆಂದರೆ ಗ್ರಾಮ ಪಂಚಾಯತ್ ಒಂದು ಗ್ರಾಮ ಸಭಾದಲ್ಲಿ ನಡುವಳಿಯೊಂದನ್ನು ಮಾಡಿ ತನ್ನ ಗ್ರಾಮವನ್ನು ‘ಬಯಲು ಶೌಚ ಮುಕ್ತ’ ಗ್ರಾಮ ವೆಂದಯ ಘೋಷಿಸಿಕೊಳ್ಳಬಹುದು. ನಂತರ ಸ್ವಚ್ಛ ಭಾರತ ಮಿಷನ್ ನಲ್ಲಿ ದಾಖಲಿಸಿಬಹುದು. ಅದನ್ನು ನಂತರ ‘ಘೋಷಿತ ಬಯಲು ಶೌಚ ಮುಕ್ತ ಗ್ರಾಮ’ ವೆಂದು ಕರೆಯಲಾಗುತ್ತದೆ. ನಂತರ ಇದರ ಸತ್ಯಾಸತ್ಯತೆ ಅರಿಯಲು ಸರಕಾರವು ಸ್ವತಂತ್ರ ಸಂಸ್ಥೆಯಿಂದ ಅಥವಾ ಸರಕಾರದ ತಂಡವು ಪರಿಶೀಲಿಸಬೇಕು. ಅದು ಮೂರು ತಿಂಗಳ ಅವಧಿಯಲ್ಲಿ ಮೊದಲ ಬಾರಿ ಒಂದು ವೇಳೆ ಅದು ಬಯಲು ಶೌಚ ಮುಕ್ತವಲ್ಲವೆಂದು ಕಂಡು ಬಂದರೆ ಮತ್ತೊಮ್ಮೆ ಆರು ತಿಂಗಳಲ್ಲಿ ಪರಿಶೀಲಿಸಬೇಕು. ಆದರೆ ಈ ಪ್ರಕ್ರಿಯೆಯನ್ನು ಸರಕಾರಗಳು 2018 ರಲ್ಲಿ ಪಾಲಿಸಿರಲಿಲ್ಲವೆಂಬವುದು ಮಾಧ್ಯಮ ವರದಿಗಳಿಂದ ಸ್ಪಷ್ಟವಾಗುತ್ತದೆ. ಹಾಗದರೆ ಪ್ರಧಾನಿ ಮೋದಿ ಘೋಷಿಸಿದ ‘ಬಯಲು ಶೌಚ ಮುಕ್ತ’ ಭಾರತ ಎಂಬ ಘೋಷಣೆಯೇ ಪ್ರಶ್ನಾರ್ಹವಾಗಿದೆ!

ಭಾರತವನ್ನು ‘ಬಯಲು ಶೌಚ ಮುಕ್ತ’ ಎಂದು ಘೋಷಿಸುವ ನೆಪದಲ್ಲಿ ಮೇಲಿನ ಪ್ರಕ್ರಿಯೆಗಳನ್ನು ಯಾವುದೇ ಗ್ರಾಮಕ್ಕೆ ತೆರಳಿ ಮಾಡದೆ ಗ್ರಾಮ ಪಂಚಾಯತ್ ಘೋಷಿತ ನಡುವಳಿಗಳ ಆಧಾರದಲ್ಲಿ ಕೇವಲ ಕಾಗದ ಪತ್ರದಲ್ಲಿ ತೋರಿಸಲಾಗುತ್ತಿರುವ ವಿಚಾರವನ್ನು ಸ್ವತಃ ಅಧಿಕಾರಿಗಳು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದನ್ನು ನೋಡಬಹುದಾಗಿದೆ.

ಒರಿಸ್ಸಾ ರಾಜ್ಯದ ಅಂಕಿ ಅಂಶವನ್ನೇ ಪರಿಶೀಲಿಸಿದರೆ ODF ನಲ್ಲಿ ಇದೇ ಸೆಪ್ಟೆಂಬರ್ 26 ರಂದು ಬಯಲು ಶೌಚ ಮುಕ್ತ ಗ್ರಾಮಗಳ ಸಂಖ್ಯೆ 23,902 ಇತ್ತು ಆದರೆ ಸೆಪ್ಟೆಂಬರ್ 30 ಕ್ಕೆ ಪರಿಶೀಲಿಸಿದಾಗ ಅದರ ಸಂಖ್ಯೆ 37008 ಅಂದರೆ 55% ಶೇ ಹೆಚ್ಚಳವಾಗಿತ್ತು. ಇದರರ್ಥ 4 ದಿನದಲ್ಲಿ 13,000 ಗ್ರಾಮಗಳು ಏಕಾಏಕಿ odf ಅಂಕಿ ಅಂಶದಲ್ಲಿ ಸೇರುವುದಾದರೆ ಇದೊಂದು ಕೇಂದ್ರ ಸರಕಾರ ದೇಶದ ಜನತೆಗೆ ‘ಬಯಲು ಶೌಚ ಮುಕ್ತ’ದ ಹೆಸರಿನಲ್ಲಿ ಸುಳ್ಳು ಹೇಳುತ್ತಿದೆಯೆಂಬುದಕ್ಕೆ ಸಾಕ್ಷಿ. ಯಾಕೆಂದರೆ ಒಂದು ದಿನದಲ್ಲಿ 3000+ ಕ್ಕಿಂತ ಹೆಚ್ಚು ಗ್ರಾಮಗಳ ಪರಿಶೀಲನೆಯನ್ನು ಒಂದು ರಾಜ್ಯ ಖಂಡಿತವಾಗಿಯೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ ‘ಭಾರತ ಬಯಲು ಶೌಚ ಮುಕ್ತ’ ಎಂದು ಹೇಳುವುದು ರಾಜಕಾರಣಿಗಳು ಕಸಯಿಲ್ಲದ ಪ್ರದೇಶದಲ್ಲಿ ಗುಡಿಸಿದಷ್ಟೇ ನಾಟಕ!

ಒರಿಸ್ಸಾದ ಒಂದು ಉದಾಹರಣೆಯಂತೆ ಉತ್ತರ ಪ್ರದೇಶ, ಬಿಹಾರ, ಕರ್ನಾಟಕ ಹೀಗೆ ನಾನಾ ರಾಜ್ಯದ ODF ಅಂಕಿ ಅಂಶಗಳನ್ನು ಪರಿಶೀಲಿಸಿದರೆ ಅದರಲ್ಲಿನ ಅಂಕಿ ಅಂಶಗಳ ಸತ್ಯಾಸತ್ಯತೆಯ ಬಗ್ಗೆ ದೊಡ್ಡ ಮಟ್ಟದ ಅನುಮಾನ ಕಾಡುತ್ತದೆ. ಬಯಲು ಶೌಚ ಮುಕ್ತ ಗ್ರಾಮದ ಮೊದಲ ಹಂತದ ಪರಿಶೀಲನೆಗೆ ಮಾದರಿ ತುಂಬಲು ಕನಿಷ್ಠ 3 ಗ್ರಾಮವೊಂದಕ್ಕೆ ಮೂರು ಗಂಟೆಯ ಸಮಯ ಬೇಕು. ಆದರೆ 4-5 ದಿನದಲ್ಲಿ ಸಾವಿರಾರು ಗ್ರಾಮಗಳನ್ನು ಪರಿಶೀಲಿಸುವುದೆಂದರೆ ಇದರಲ್ಲೂ ಸರಕಾರ ಜನರ ಕಣ್ಣಿಗೆ ಮಣ್ಣೆರೆಚಿ ತನ್ನ ಡಾಂಭಿಕತೆಯನ್ನು ಪ್ರದರ್ಶಿಸುದರೊಂದಿಗೆ ‘ಗಾಂಧಿ ಜಯಂತಿಯ’ ದಿನ ಸುಳ್ಳು ಅಂಕಿ ಅಂಶದ ಆಧಾರದ ಮೇಲೆ ಭಾರತ ಬಯಲು ಶೌಚ ಮುಕ್ತ ದೇಶವೆಂದು ಘೋಷಿಸಿ ಗಾಂಧೀಜಿಯ ಆಶಯಕ್ಕೂ ಮಸಿಯೆರಚುವ ಯತ್ನದಲ್ಲಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.