ಸಂಪಾದಕೀಯ

ಹೌದು! 2014 ರ ಚುನಾವಣೆಯ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಮಾಡುತ್ತಿದ್ದ ಭಾಷಣದಲ್ಲಿ ಜನ ಹೊಸತನ್ನು ಕಾಣುತ್ತಿದ್ದರು ಆದರೆ ಇದೀಗ ಅದು ಅವರ ಭಾಷಣದಲ್ಲಿ ಕಾಣುತ್ತಿಲ್ಲ. ಕಳೆದ ಐದು ವರ್ಷದಲ್ಲಿ ಅತೀ ಹೆಚ್ಚು ಟ್ರೋಲ್ ಗೆ ಒಳಗಾಗಿರುವ ಮೋದಿ, ಕಾಂಗ್ರೆಸ್ ನ್ನು ಹೀಯಾಳಿಸುತ್ತಾ ಈ ಬಾರಿಯ ರಾಜಕೀಯ ಭಾಷಣ ಮಾಡುತ್ತಾ ಸಾಗುತ್ತಿದ್ದಾರೆ. ಆದರೆ ಹೇಳಿ ಕೊಳ್ಳುವ ಸಾಧನೆಗಳಿಲ್ಲವೆಂಬುದು ಅವರ ಭಾಷಣದಲ್ಲಿ ಸ್ಪಷ್ಟವಾಗುತ್ತಿದೆ.

ಹಳೆಯ ಭರವಸೆಗಳ ಪ್ರಣಾಳಿಕೆಗೆ ಈ ಬಾರಿ ಹೊಸ ಮುಖಪುಟ ಹಚ್ಚಿ ಪ್ರಸ್ತುತ ಪಡಿಸಿರುವಂತಹ ಬಿಜೆಪಿಯ ಪ್ರಣಾಳಿಕೆ ಜನರನ್ನು ಆಕರ್ಷಿಸುವಲ್ಲಿ ಸೋತದ್ದು ಸ್ಪಷ್ಟವಾಗಿ ಗೋಚರಿಸುತ್ತಿದೆ. 2014 ರಲ್ಲಿ ಚುನಾವಣಾ ರ಼್ಯಾಲಿ ಮತ್ತು ಸಭೆಗೆ ಮೋದಿ ಬರುತ್ತಾರೆಂದಾಗ ಕರಾವಳಿಗರಲ್ಲಿ ಸಂಚಲನದ ವಾತಾವರಣ ಉಂಟು ಮಾಡಿತ್ತು. “ಅಬ್ ಕಿ ಬಾರ್ ಮೋದಿ ಸರಕಾರ್” ಎಂಬ ಘೋಷಣೆಯೊಂದಿಗೆ ಬೀದಿ ಬೀದಿ ಗಳು ರಾರಾಜಿಸುತ್ತಿದ್ದವು. ಅದೇ ಈ ಬಾರಿ ಮೋದಿ ಬಂದಿರುವುದನ್ನು ಮತ್ತು ಕರಾವಳಿಗರ ಪ್ರತಿಕ್ರಿಯೆ ನೋಡಿದಾಗ ಮೋದಿ ವರ್ಚಸ್ಸು ಕಡಿಮೆಯಾಗಿರುವುದು ಸ್ಪಷ್ಟವಾಗಿದೆ. ಒಂದು ಕಡೆ ಮತದಾರರಿಗೆ ಬೇಕಾದ ಭರವಸೆ ಪೂರೈಸದೆ ಕೇವಲ ದೇಶದಲ್ಲಿ ನಡೆದ ಕೆಲವು ಘಟನೆಗಳನ್ನು ಮುಂದಿಟ್ಟುಕೊಂಡು, ಅದರಲ್ಲೂ ರಾಜಕೀಯಕ್ಕೆ ಬಳಸಲೇ ಬಾರದಂತಹ ಪುಲ್ವಾಮ ಘಟನೆಗಳನ್ನೆಲ್ಲ ಉಲ್ಲೇಖಿಸುತ್ತಾ ಮತ ಕೇಳುವುದನ್ನು ನೋಡಿ ಜನ ಮೋದಿ ಭಾಷಣದಿಂದ ಬೆಸೆತ್ತಿರುವುದು ಸ್ಪಷ್ಟವಾಗುತ್ತಿದೆ.

ಇನ್ನು ಕಳೆದ 2014ರಲ್ಲಿ ಮೋದಿ ಹೆಸರು ಹೇಳಿ ವಿಜಯ ಪತಾಕೆ ಹಾರಿಸಿದ್ದ ಅಭ್ಯರ್ಥಿಗಳು ಈ ಬಾರಿ ಕೆಲಸ ಮಾಡದೆ ಸುಮ್ಮನೆ ಮೋದಿ ಹೆಸರಿನಲ್ಲಿ ಮತ್ತೊಮ್ಮೆ ಮತ ಕೇಳಲು ಬರುತ್ತಿರುವುದು ಮತದಾರರಲ್ಲಿ ಅಸಮಾಧಾನದ ವಾತವರಣ ಸೃಷ್ಟಿಸಿದೆ.

ಇಂದು ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ಮಾತನಾಡುತ್ತಿರುವಾಗ ಅವರ ಮಾತಲ್ಲಿ “ಜೋಶ್” ಇರಲಿಲ್ಲ. ಹಳೆಯ ಬದನೆಕಾಯಿಗೆ ಹೊಸ ಸಂಬಾರ್ ಹಾಕುವ ಪ್ರಯತ್ನದಂತಿದ್ದ ಅವರ ಮಾತುಗಳು ಬಿಜೆಪಿಗರನ್ನೇ ನಿರಾಸೆಗೆ ದೂಡಿರುವುದು ಸುಳ್ಳಲ್ಲ.

ಕರಾವಳಿಯಲ್ಲಂತೂ ಬಿಜೆಪಿ ಅಭ್ಯರ್ಥಿಗಳಿಗೆ ಈ‌ ಬಾರಿ ಅಂತರಿಕ ಸವಾಲುಗಳೇ ಹೆಚ್ಚು. ಈ ಸವಾಲುಗಳಿಗೆ ಮೋದಿ “ಜುಮ್ಲಾಗಳು” ವರ್ಕೌಟ್ ಆಗುತ್ತಿಲ್ಲ. ಶೋಭಾ ಕರಂದ್ಲಾಜೆ ವಿರುದ್ಧ ಸಡ್ಡು ಹೊಡೆದು ಈಗಾಗಲೇ ಕೆಲವು ಕಾರ್ಯಕರ್ತರು ಬಹಿರಂಗವಾಗಿ ಕಾಂಗ್ರೆಸ್ ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಗೆ ಬೆಂಬಲ ನೀಡಿರುವುದು ಮತ್ತಷ್ಟು ಕಿರಿಕಿರಿ ಉಂಟು ಮಾಡಿದೆ.

ರೂಪಾಯಿಗೆ ಹದಿನೈದು ಡಾಲರ್ ಎಂದು ಟ್ರೋಲ್ ಗೆ ಒಳಗಾಗುತ್ತಿರುವ ಸಂಸದ ನಳಿನ್ ಕುಮಾರ್, ಸಾಮಾಜಿಕ ಜಾಲಾತಾಣದಲ್ಲಿ ಸಿಕ್ಕಪಟ್ಟೆ ಚರ್ಚೆಗೊಳಗಾಗಿ ಈಗ ಅವರ ಹೆಸರನ್ನು ಸ್ವತಃ ಬಿಜೆಪಿಗರು ಮುಜುಗರದೊಂದಿಗೆ ತೆಗೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಪಂಪ್ ವೆಲ್ ಫ್ಲೈ ಒವರ್ ಸಮಸ್ಯೆ ಇಡೀ ಅಂತರಾಷ್ಟ್ರೀಯ ಮಟ್ಟದಲ್ಲಿ ಟ್ರೋಲ್ ಗೆ ಒಳಗಾಗುತ್ತಿರುವಾಗ ಮೋದಿ ಬಂದು ಸಂಸದರ ಸಾಧನೆಗಳೆಂದು ಯಾವುದಾದರೂ ವಿಚಾರದ ಬಗ್ಗೆ ಮಾತನಾಡಿದರೂ ನಗುವ ಸ್ಥಿತಿ ಏರ್ಪಟ್ಟಿದೆ.

ಮೋದಿಯ ಭಾಷಣಗಳು ಎಲ್ಲ ಚಾನೆಲ್ ಗಳಲ್ಲಿ, ಫೇಸ್ ಬುಕ್ ನಲ್ಲಿ, ಯುಟ್ಯೂಬ್ ನಲ್ಲಿ ಲೈವ್ ಕೊಡಲಾಗುತ್ತದೆ. ಆದರೆ‌ ಅವರ ಭಾಷಣದ ವೀಕ್ಷಕರು ಕೂಡ ಕಡಿಮೆಯಾಗಿರುವುದು ಸ್ಪಷ್ಟ. ಯಾಕೆಂದರೆ ಅವರ ಐದು ವರ್ಷಗಳ ಕಾಲ ಸೋತಿದ್ದಾರೆ. ಮೋದಿ ಅಭಿಮಾನಿಗಳು ಮುಂದೆ ಒಪ್ಪಿಕೊಳ್ಳದಿದ್ದರೂ ಮನಸ್ಸಿನಲ್ಲಿ ಮೋದಿಯ ಸಾಧನೆ ಶೂನ್ಯ ವೆಂಬುದು ಅವರಿಗೆ ಅರಿವಿದೆ. ಆ ಕಾರಣಕ್ಕಾಗಿ ಇಂದು ಮೋದಿ ಮತ್ತು ಬಳಗ ಎಲ್ಲೂ ಕಪ್ಪು ಹಣ ತರುತ್ತೇವೆ. ಚಿನ್ನದ ರಸ್ತೆ ಮಾಡುತ್ತೇವೆ. ಹದಿನೈದು ಲಕ್ಷ ಖಾತೆಗೆ ಬೀಳುತ್ತದೆ ಎಂಬುದನ್ನೆಲ್ಲಾ ಮಾತನಾಡುತ್ತಿಲ್ಲ. ಬದಲಾಗಿ ರಾಜಕಿಯೇತರ ಸಂಸ್ಥೆಗಳಾದ ಸೇನೆ ಅಥವಾ ಇನ್ನಿತರ ಸಂಸ್ಥೆಗಳ ಸಾಧನೆಯನ್ನು ತನ್ನ ಸಾಧನೆಯೆಂದು ಬಡಾಯಿ ಕೊಚ್ಚಿಕೊಳ್ಳುತ್ತಾ ಜನರ ಬಳಿ ಹೋಗುವ ಪ್ರಯತ್ನ ಮಾಡುತ್ತಿದೆ. ಆದರೆ ಡಿ ಮೋನಿಟೈಝೇಷನ್, ಅವೈಜ್ಞಾನಿಕವಾಗಿ ಏಕಾಏಕಿ ಜಾರಿಗೆ ತಂದ ಜಿ.ಎಸ್.ಟಿ ,‌ಸುಮ್ಮನೆ ಬ್ಯಾಂಕ್ ಖಾತೆ ತೆರೆಸಿ ಕಣ್ಣ ಮುಚ್ಚಾಲೆ, ಗ್ಯಾಸ್, ಪೆಟ್ರೋಲಿಯಂ ಉತ್ಪನ್ನ ದರ ಏರಿಕೆಯಿಂದ ಬೆಸೆತ್ತ ಜನ ಮೋದಿಯ ಸುಳ್ಳನ್ನು ಅರಿತುಕೊಂಡಿರುವುದು ಸ್ಪಷ್ಟವಾಗಿದೆ.

ಹಾಗಾಗಿ ಇವತ್ತು ನಡೆದ ಮಂಗಳೂರಿನ ಕಾರ್ಯಕ್ರಮದಲ್ಲಿ ಮೋದಿಯ ಭಾಷಣದಲ್ಲಿ ಹಳೆ ಕಿಕ್ ಇರಲಿಲ್ಲ, ಅದೇ ರಾಗ ಅದೇ ಹಾಡು ಮಾತ್ರ ರರಾಜಿಸುತ್ತಿತ್ತು. ಅಂತು ಮೋದಿಗೆ ನೆಹರು ಮಾತ್ರ ಯಾವುದೇ ಅಡೆ ತಡೆಯಿಲ್ಲದೆ ನೆಹರೂ ಮೈದಾನದಲ್ಲಿ ಭಾಷಣ ಮಾಡಲು ಬಿಟ್ಟಿದ್ದು ವಿಶೇಷ!

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.