ಯಾರಾದೋ ಮನೆ ಮಗನನ್ನು ‘ಭಯೋತ್ಪಾದಕ’ನನ್ನಾಗಿಸಿ ವಿಕೃತಿ ಮೆರೆಯುವ ಮಾಧ್ಯಮಗಳು!

335

ಸಂಪಾದಕೀಯ

‘ಬೆಳ್ತಂಗಡಿಯಿಂದ ಪಾಕಿಸ್ತಾನಕ್ಕೆ ಕರೆ’ , ಮಂಗಳೂರಿನಲ್ಲಿ ಶಂಕಿತನ ಬಂಧನ, ಪಾಕಿಸ್ತಾನದಿಂದ ವ್ಯಕ್ತಿ ಕರಾವಳಿಗೆ, ಶಂಕಿತ ವ್ಯಕ್ತಿಯ ಮನೆಯಲ್ಲಿ ಆರ್ಡಿಎಕ್ಸ್ ಪತ್ತೆ, ಮೌಲ್ವಿ ಬಂಧನ’ – ಹೀಗೆ ವೈಭವೀಕೃತ ಲಂಗು ಲಗಾಮಿಲ್ಲದ ಊಹಾಪೋಹಾದ ವರದಿಗಳನ್ನು ಸೃಷ್ಟಿಸಿ ಅದಕ್ಕೊಂದು ಓದುಗರ ಗಮನ ಸೆಳೆಯುವ ತಲೆ ಬರಹ ಕೊಟ್ಟು ಟಿ.ಆರ್.ಪಿ ಹೆಚ್ಚಿಸಲೋ ಅಥವಾ ತಮ್ಮ ಪತ್ರಿಕೆಯ ಮಾರಾಟ ಹೆಚ್ಚಿಸಲೋ ಯಾರದೋ ಮನೆ ಮಗನಿಗೆ ‘ಭಯೋತ್ಪಾದಕ’ನ ಪಟ್ಟ ಕೊಟ್ಟು ತಮ್ಮ ಜೇಬು ತುಂಬಿಸಿಕೊಳ್ಳುವ ‘ಪಿಂಪ್ ಪತ್ರಿಕೋದ್ಯಮ’ ಎಗ್ಗಿಲ್ಲದೆ ಸಾಗುತ್ತಿದೆ.

ಇತ್ತೀಚಿಗೆ ಬೆಳ್ತಂಗಡಿಯಿಂದ ಪಾಕಿಸ್ತಾನಕ್ಕೆ ಕರೆ ಹೋಗಿದೆ. ಈ ಸಂಬಂಧ ಮೌಲ್ವಿ ಒಬ್ಬರನ್ನು ಬಂಧಿಸಲಾಗಿದೆ ಎಂದು ಕಪೋಕಲ್ಪಿತ ವರದಿ ಪ್ರಕಟಿಸಿದ ಮಾಧ್ಯಮಗಳು ನಂತರ ಅಬ್ದುಲ್ ರವೂಫ್ ಎಂಬ ಅಮಾಯಕ ವ್ಯಕ್ತಿಯ ಬಂಧನ ಎಂಬ ಕಪೋಕಲ್ಪಿತ ವರದಿಗಳನ್ನು ಪ್ರಕಟಿಸಿ ತನ್ನ ಟಿ.ಆರ್.ಪಿ ದಾಹ ಮತ್ತು ಒಂದು ಸಮುದಾಯದ ಬಗೆಗಿನ ಪೂರ್ವ ಗ್ರಹ ಪೀಡಿತೆಯನ್ನು ಹೊರ ಹಾಕಿದೆ. ಇದರಿಂದಾಗಿ ಅಮಾಯಕ ಅಬ್ದುಲ್ ರವೂಫ್ ಪಟ್ಟ ಕಷ್ಟ ಅಷ್ಟಿಷ್ಟು ಅಲ್ಲ. ಇದರ ಪರಿಣಾಮ ಸ್ವತಃ ಮಾಜಿ ಸಚಿವ, ಶಾಸಕ ಯುಟಿ ಕಾದರ್ ಸ್ಪಷ್ಟನೆ ನೀಡಬೇಕಾಯಿತು. ಸುಳ್ಳು ವರದಿಯೆಂದು ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟನೆ ನೀಡಬೇಕಾಯಿತು.

ಸದಾ ಭಯೋತ್ಪಾದನೆಯ ಹೆಸರಿನಲ್ಲಿ ಭಾವೋದ್ರಿಕ್ತ ವರದಿಗಳನ್ನು ಯಾವುದೇ ಅಧಿಕೃತ ಮಾಹಿತಿ ಇಲ್ಲದೆ ಪ್ರಕಟಿಸುವ ಮಾಧ್ಯಮಗಳು ಅದೆಷ್ಟೋ ಅಮಾಯಕರನ್ನು ಯಾವುದೇ ತಪ್ಪು ಮಾಡದೇ “ಭಯೋತ್ಪಾದಕ” ರನ್ನಾಗಿಸಿದೆ. ತನಿಖಾ ಸಂಸ್ಥೆಗಳು ವಿಚಾರಣೆಯ ಸಲುವಾಗಿ ಒರ್ವ ವ್ಯಕ್ತಿಯನ್ನು ಕರೆದುಕೊಂಡು ಹೋದರೂ ಸರಿ ಇವರ ಹೆಡ್ ಲೈನ್ಗಗಳಲ್ಲಿ ವ್ಯಕ್ತಿಯ ಪೂರ್ವಪರ ತಿಳಿದು ಕೊಳ್ಳದೆ ನೇರವಾಗಿ ಉಗ್ರ ಪಟ್ಟ ಕಟ್ಟಲಾಗುತ್ತದೆ. ನಂತರ ಸೌಜನ್ಯಕ್ಕೂ ಸತ್ಯಾಸತ್ಯತೆಯನ್ನು ಅಥವಾ ಕನಿಷ್ಠ ಅವರು ಬಿಡುಗಡೆಯಾದ ಸುದ್ದಿ ಪ್ರಕಟಿಸದೆ ವಿಕೃತಿ ಮೆರೆಯುತ್ತದೆ.

ಬಹಳಷ್ಟು ಸಮಯದಲ್ಲಿ ಪ್ರಯೋಗಾತ್ಮಕವಾಗಿ ಪೊಲೀಸ್ ಇಲಾಖೆ, ಭದ್ರತಾ ಸಿಬ್ಬಂದಿಗಳು ಕಟ್ಟೆಚಾರ ಘೋಷಿಸುದುಂಟು ಆದರೆ ಮಾಧ್ಯಮಗಳು ಜನರ ದಿಕ್ಕು ತಪ್ಪಿಸಿ ಜನರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಲು ‘ಕರಾವಳಿಯಲ್ಲಿ ಉಗ್ರರ ಕಟ್ಟೆಚ್ಚರ’ ಎಂಬ ಚಿತ್ರ ವಿಚಿತ್ರ ತಲೆಬರಹ ಕೊಟ್ಟು ಜನರಲ್ಲಿ ಆತಂಕದೊಂದಿಗೆ, ಸಮುದಾಯಗಳ ನಡುವೆ ಕೊಳ್ಳಿ ಇಟ್ಟು ‘ದಂಧೆ’ ನಡೆಸುತ್ತದೆ.

ಈ ದೇಶದಲ್ಲಿ ಭಯೋತ್ಪಾದಕತೆಯ ಹೆಸರಿನಲ್ಲಿ ಸಾವಿರಾರು ಮಂದಿಯ ಬಂಧನವಾಗಿದೆ. ಆದರೆ ಎಷ್ಟು ಜನರ ಆರೋಪ ಸಾಬೀತಾಗಿದೆ ಮುಖ್ಯ. ನೂರು ಅಪರಾಧಿಗಳು ತಪ್ಪಿ ಹೋದರೂ ಪರವಾಗಿಲ್ಲ ಒಬ್ಬ ನಿರಾಪರಾಧಿಗೆ ಶಿಕ್ಷೆಯಾಗಬಾರದೆಂಬ ವಿಶಾಲ ಮನೋಭಾವದ ಸಂವಿಧಾನದ ಆಶಯವನ್ನು ಕಾಲಿನಲ್ಲಿ ತುಳಿದು ಇಂದು ಮಾಧ್ಯಮಗಳು ಟಿ.ಆರ್.ಪಿ ರೇಸ್ ನಲ್ಲಿ ಬಿದ್ದಿದೆ. ಇದಕ್ಕಾಗಿ ಅದು ಒರ್ವ ಸಾಮಾನ್ಯ ವ್ಯಕ್ತಿಯನ್ನು ಯಾವ್ಯಾವುದೋ ಸಂಘಟನೆಗಳ ಹೆಸರು ಹೇಳಿ (ಕೆಲವು ಸಂಘಟನೆಯ ಹೆಸರನ್ನು ಸ್ವತಃ ಮಾಧ್ಯಮಗಳೇ ಸೃಷ್ಟಿಸಿ) ಅದರ ಮಾಸ್ಟರ್ ಮೈಂಡ್ ಗಳೆಂದು ಘೋಷಿಸಿ ‘ಮಾಧ್ಯಮ ವ್ಯಭಿಚಾರ’ ವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದೆ.

ಒಂದು ಕಾಲದಲ್ಲಿ ಮಾಧ್ಯಮಗಳು ಸರಕಾರಗಳು ತಪ್ಪು ಮಾಡಿದಾಗ ಅವರ ಕಿವಿ ಹಿಂಡಿ ಅವರನ್ನು ಸರಿ ದಾರಿಗೆ ತರುವ, ಜನರ ಪರ ನಿಲ್ಲುವ, ಒರ್ವ ವ್ಯಕ್ತಿಯನ್ನು ವಶ ಪಡಿಸಿಕೊಂಡರೆ ಅಥವಾ ಬಂಧಿಸಿದರೆ ಆತನ ಪೂರ್ವ ಪರವೇನು? ಎಂಬುದನ್ನು ಚರ್ಚಿಸಿ ಒಂದು ವಸ್ತುನಿಷ್ಠ ವರದಿ ನೀಡುತ್ತಿದ್ದವು. ಇವತ್ತು ಮಾಧ್ಯಮಗಳು ಹಾಗೆ ಉಳಿದಿಲ್ಲ ಅದು ಸರಕಾರಗಳ ಕೈಗೊಂಬೆಗಳಾಗಿವೆ. ಜನರ ಮೇಲಿನ ದಬ್ಬಾಳಿಕೆ, ದೌರ್ಜನ್ಯಗಳು ಇವರಿಗೆ ವರ್ಣ ರಂಜಿತ ಸುದ್ದಿಯಾಗುತ್ತದೆ. ಸರಕಾರದ ಹಗರಣಗಳನ್ನು, ಕೊರತೆಗಳನ್ನು ಸಂಪೂರ್ಣವಾಗಿ ಮುಚ್ಚುವ ಹೊಣೆ ಹೊತ್ತಿರುವ ಮಾಧ್ಯಮಗಳು ಯಾವಾಗಲಾದರೂ ಸರಕಾರದ ಮುಖವಾಡ ಕಳಚಿದಾಗ ಕಪೋಕಲ್ಪಿತ ‘ಬ್ರೇಕಿಂಗ್ ನ್ಯೂಸ್’ ಹೆಸರಿನಲ್ಲಿ ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತದೆ.

ಕೇಂದ್ರ ಸರ್ಕಾರದ ಪ್ರತಿ ನಡೆಯನ್ನು ಹೊಗಳುವ ಭರದಲ್ಲಿ ದೇಶದ ನಿಜ ಏಳಿಗೆಯನ್ನು ಕಡೆಗಣಿಸುವ ಮಾಧ್ಯಮ, ಬ್ರಿಟಿಷರು ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ಧಮನಿಸಲು ಬಳಸುತ್ತಿದ್ದ ಡೊಕೊನಿಯನ್ ಕಾನೂನುಗಳ ಅಗತ್ಯತೆ ಈಗ ಉಂಟಾ? ಸರಕಾರದ ಜನ ವಿರೋಧಿ ನೀತಿಗಳ ವಿರುದ್ಧ ಸೆಟೆದ್ದ ಜನರ ವಿರುದ್ಧವೂ ಇಂತಹ ಕಾನೂನುಗಳನ್ನು ಬಳಸಿ ಧಮನಿಸುವ ಪ್ರಯತ್ನ ನಡೆಸಲಾಗುದಿಲ್ವ ಎಂಬ ಬಗ್ಗೆ ಚರ್ಚೆ ಕೂಡ ನಡೆಸುವುದಿಲ್ಲ. ಅದರ ಬದಲಾಗಿ ಸರಕಾರದ ಪ್ರತಿ ನಡೆಯನ್ನು ಯಾವುದೇ ವಿಮರ್ಶೆಯಿಲ್ಲದೆ ‘ಸಾಕು ನಾಯಿ’ ಯಂತೆ ಹೊಗಳುತ್ತದೆ. ಮಾಧ್ಯಮಗಳ ಸಹಾಯದಿಂದಲೇ ಇಂದು ಸರಕಾರಗಳು ಮನಸ್ಸಿಗೆ ಬಂದಂತೆ ಕಾನೂನುಗಳನ್ನು ತಿದ್ದುಪಡಿ ಮಾಡಿ ಜನರನ್ನು ಧಮನಿಸುವ ಯತ್ನ, ಸರಕಾರದ ಬಗ್ಗೆ ಮಾತನಾಡಿದವರನ್ನು ಇಂತಹ ಕಾನೂನಿನ ಅಡಿಯಲ್ಲಿ ಸಿಲುಕಿಸಿ ನಕ್ಸಲ್ ಅಥವಾ ಭಯೋತ್ಪಾದಕ ಪಟ್ಟಕೊಟ್ಟು ತನ್ನ ಕೆಲಸ ಸಿದ್ಧಿಸುವ ಸುಲಭ ವಿಧಾನ ಕೂಡ ಕಂಡುಕೊಂಡಿದೆ. ಇದಕ್ಕೆ ಸಾಕ್ಷಿಯೆಂಬಂತೆ ಇತ್ತೀಚಿಗೆ ತಿದ್ದುಪಡಿಗೊಂಡ ಯುಎಪಿಎ ಕಾನೂನನ್ನೇ ಗಮನಿಸಬಹುದಾಗಿದೆ. ಇಷ್ಟು ಸಮಯ ವ್ಯಕ್ತಿಯ ಮೇಲಿನ ಅಪರಾಧ ಬಂಧಿಸಿದ ಸರಕಾರ ಸಾಬೀತುಪಡಿಸಬೇಕಿತ್ತು. ಆದರೆ ಇದೀಗ ಯುಎಪಿಯ 2019 ರ ತಿದ್ದುಪಡಿ ಕಾಯಿದೆಯ ಪ್ರಕಾರ ಸರಕಾರ ಒಂದು ಸಂಘಟನೆಯನ್ನು ಮಾತ್ರವಲ್ಲ, ಒರ್ವ ವ್ಯಕ್ತಿಯನ್ನು ಭಯೋತ್ಪಾದಕ ಎಂದು ಘೋಷಿಸಬಹುದು. ನಂತರ ಸರಕಾರದ ಬದಲು ಆ ವ್ಯಕ್ತಿ ಭಯೋತ್ಪಾದಕ ಅಲ್ಲವೆಂಬುದನ್ನು ಸಾಬೀತು ಪಡಿಸಬೇಕಾಗುತ್ತದೆ. ಇಂತಹ ಕಾನೂನುಗಳು ಸರಕಾರ ತನ್ನ ವಿರುದ್ಧ ಮಾತನಾಡುವವರ ಧಮನಕ್ಕೆ ಬಳಸುದಿಲ್ಲವೆಂಬುದಕ್ಕೆ ಯಾವ ಗ್ಯಾರಂಟಿಯಿದೆ? ಅದನ್ನು ಸತ್ಯವೆಂದು ನಿರೂಪಿಸಲು ಹೇಗೂ ‘ಪಿಂಪ್ ಪತ್ರಿಕೋದ್ಯಮ’ ಕೂಡ ಬಕ ಪಕ್ಷಿಯಂತಿದೆ.

ಕರ್ನಾಟಕದ ಕೆಲವು ಟಿವಿ ಚಾನೆಲ್ ಗಳು, ಕೆಲವು ಪ್ರಮುಖ ಪತ್ರಿಕೆಗಳ ತಲೆ ಬರಹಗಳನ್ನು ಗಮನಿಸಿದರೆ ಇವರು ಹಣಕ್ಕಾಗಿ ಎಷ್ಟರ ಮಟ್ಟಿಗೆ ‘ತಲೆ ಹಿಡುಕ’ರಾಗಿದ್ದಾರೆಂಬುದನ್ನು ನೆನೆಸಿದರೆ ವ್ಯಾಕರಿಕೆ ಬರುತ್ತದೆ. ಭಯೋತ್ಪಾದಕ ಆರೋಪವಿರುವ ಸಾಧ್ವಿ ಪ್ರಜ್ಞಾ ಸಿಂಗ್ ಈ ದೇಶದಲ್ಲಿ ಚುನಾವಣೆಗೆ ನಿಂತು ಸಂಸದೆಯಾದಾಗ ತುಟಿ ಬಿಚ್ಚದ ಮಾಧ್ಯಮಗಳು ಒಂದು ವರ್ಗದ ಮೇಲೆ ಅಥವಾ ಸಮುದಾಯದ ಮೇಲೆ ಎಷ್ಟು ಪೂರ್ವಗ್ರಹ ಹೊಂದಿದೆಯೆಂಬುದು ಅವು ಬಿತ್ತರಿಸುವ ಕಪೋಕಲ್ಪಿತ ವರದಿಗಳಿಂದಲೇ ಸ್ಪಷ್ಟ ವಾಗುತ್ತದೆ.

ಖಂಡಿತವಾಗಿಯೂ ಬೆರಳೆಣಿಕೆಯಷ್ಟು ಜನ ಈ ದೇಶದಲ್ಲಿ ತೀವ್ರವಾದ ಸಿದ್ಧಾಂತಗಳಿಗೆ ಜೋತು ಬಿದ್ದು ಅಭಿನವ ಭಾರತ, ಐಸಿಸ್, ಸನಾತನ ಸಂಸ್ಥ, ಅಲ್ ಕೈದಾ ದಂತಹ ಸಂಘಟನೆಗಳ ಕಡೆ ಆಕರ್ಷಣೆಯಾಗುತ್ತಿರಬಹುದು. ಆದರೆ ಆ ಬೆರಳೆಣಿಕೆಯಷ್ಟು ಜನರಿಗಾಗಿ ಮಾಧ್ಯಮಗಳು ಇಡೀ ಸಮುದಾಯವನ್ನು ಕಟಕಟೆಯಲ್ಲಿ ನಿಲ್ಲಿಸುವುದು ಒಂದು ನಿರ್ದಿಷ್ಟ ಅಜೆಂಡಾದ ಭಾಗವಲ್ಲದೆ ಮತ್ತೇನು ಅಲ್ಲ!. ಇದರ ಪರಿಣಾಮ ಎಲ್ಲ ಮಾಧ್ಯಮಗಳ ಮೇಲಿನ ನಂಬಿಕೆ ನಿಧಾನವಾಗಿ ಕುಸಿಯುತ್ತಿದೆ. ಬಿಸ್ಕೆಟ್ ಖಾಲಿಯಾದ ಮೇಲೆ ಸಾಕು ನಾಯಿಗಳು ನಮಗೆ ಕಚ್ಚ ಬಹುದೆಂದು ಸರಕಾಗಳು ಕೂಡ ಮಾಧ್ಯಮಗಳ ‘ಅಭಿವ್ಯಕ್ತಿ ಸ್ವಾತಂತ್ರ್ಯ’ ಕ್ಕೆ ಬ್ರೇಕ್ ಹಾಕುವ ಸಾಧ್ಯತೆಯೂ ಇದೆ. ಎಚ್ಚರ!

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.