ಲೋಕಸಭಾ ಚುನಾವಣೆಯ ಕರ್ನಾಟದ ಹದಿನಾಲ್ಕು ಕ್ಷೇತ್ರದ ಮತದಾನ ಮುಕ್ತಾಯಗೊಂಡಿದೆ ಇನ್ನುಳಿದಿರುವುದು ಹದಿನಾಲ್ಕು ! ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ತೀರ್ಮಾನವೇ ಅಂತಿಮ. ಆದರೆ ಆ ತೀರ್ಮಾನದ ಮೇಲೆ ಪ್ರಭಾವ ಬೀಳಲು ಹಣ, ಮದ್ಯ, ಮಾದಕ ವಸ್ತುಗಳನ್ನು ಅಭ್ಯರ್ಥಿಗಳು ಬಳಸುತ್ತಿರುವುದು ಚುನಾವಣಾ ಆಯೋಗ ವಶಪಡಿಸಿಕೊಂಡ ಎರಡು ಸಾವಿರ ಕೋಟಿಗಿಂತ ಹೆಚ್ಚಿನ ಮೌಲ್ಯದ ನಗದು, ಮದ್ಯ, ಮಾದಕ ವಸ್ತುಗಳೇ ಸಾಕ್ಷಿ!

ಆ ಅಭ್ಯರ್ಥಿ ಸರಿಯಿಲ್ಲ. ಅವಳು ರಸ್ತೆ ಮಾಡಿಲ್ಲ. ಅವನಿಂದಾಗಿ ದೇಶ ಎಕ್ಕುಟ್ಟೊಯತ್ತಂತ ಬಾಯಿ ಬಡಿದುಕೊಳ್ಳುವ ಮುಂಚೆ ಮತದಾರರು ತಮ್ಮ ಕರ್ತವ್ಯವನ್ನು ಎಷ್ಟು ಪ್ರಮಾಣಿಕವಾಗಿ ದೇಶದ ಹಿತಾಸಕ್ತಿಯನ್ನು ಮುಂದಿಟ್ಟುಕೊಂಡು ಚಲಾಯಿಸಿದ್ದಾರೆಂಬುದು ಮುಖ್ಯ.

ಕೇವಲ ಒಂದು ಬಾಟಲ್ ಸರಾಯಿ, ಒಂದಿಷ್ಟು ಹಣಕ್ಕೆ ನಮ್ಮ ಮತ ಮಾರಟ ಮಾಡಿ ಪ್ರಜಾಪ್ರಭುತ್ವದ ನೈಜ್ಯ ಪಾಲುದಾರರಾಗದೇ, ಸ್ವತಃ ತಮ್ಮ ಹಕ್ಕು ಹಾಗೂ ಕರ್ತವ್ಯದೊಂದಿಗೆ ಲೋಪ ಎಸಗಿ ಹಗರಣದ ಬಗ್ಗೆ ಕಟ್ಟೆ, ಸೆಲೂನ್, ಅಂಗಡಿ, ಹೋಟೆಲ್ ನಲ್ಲಿ ಕುಳಿತು ಈ ಬಗ್ಗೆ ಚರ್ಚಿಸಲು ಖಂಡಿತ ನಾವುಗಳು ಆನ್ ಫಿಟ್!

ಪ್ರಜಾಪ್ರಭುತ್ವದಲ್ಲಿ ಮತ ಎಂಬುದು ಹಕ್ಕು ಮಾತ್ರವಲ್ಲ ಅದೊಂದು ಕರ್ತವ್ಯ. ಪ್ರಜೆಗಳು ತಮ್ಮ ನಾಯಕನನ್ನು ಆರಿಸುವುದೆಂದರೆ ತನ್ನ ಮುಂದಿನ ಐದು ವರ್ಷ ದೇಶದ ಪ್ರಗತಿ ಯಾವ ರೀತಿ ಇರಬೇಕೆಂದು ನಿರ್ಧರಿಸುವ ಒರ್ವ ದೂರದೃಷ್ಟಿ ಹೊಂದಿರುವ ನಾಯಕನ ಆಯ್ಕೆ. ಭಾರತದಲ್ಲಿ ಕೇಂದ್ರಿಕೃತ ಚುನಾವಣಾ ವ್ಯವಸ್ಥೆ ಇಲ್ಲ. ಪ್ರತಿ ಕ್ಷೇತ್ರದ ಅಭ್ಯರ್ಥಿಯ ಸಾಮಾರ್ಥ್ಯ ಅತೀ ಮುಖ್ಯ. ಆತ ನಿಮ್ಮ ಕ್ಷೇತ್ರವನ್ನು ಎಷ್ಟು ಅಭಿವೃದ್ಧಿ ಮಾಡಬಹುದು ಅದರ ಆಧಾರದ ಮೇಲೆ ದೇಶದ ಪ್ರಗತಿ ನಿರ್ಧರಿತವಾಗುತ್ತದೆ. ಆದರೆ ಇತ್ತೀಚಿಗೆ ನಮ್ಮ ಬುದ್ದಿಗೆ ಮಂಕುಬೂದಿ ಎರಚಿ ವಿಕೇಂದ್ರೀಕೃತ ಮತದಾನ ಪದ್ದತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮತದಾನ ನಡೆದಂತೆ ಒಂದು ಮುಖವನ್ನು ತೋರಿಸಿ ಕ್ಷೇತ್ರಧಾರಿತ ಅಭ್ಯರ್ಥಿಗಳ ವಿಫಲತೆಯನ್ನು ಮರೆಮಾಚಿ ಭಾವನಾತ್ಮಕವಾಗಿ ಮೂರ್ಖರನ್ನಾಗಿಸುವ ವ್ಯವಸ್ಥಿತ ಷಡ್ಯಂತ್ರ ನಡೆಯುವಾಗ ನಾವು ಮತದಾರರೆಂಬುವವರೂ ಕೂಡ ಯಾವುದೋ ಸಿನಿಮಾದ ಮಂಕು ಪ್ರೇಕ್ಷರಂತೆ ಅವರ ತಾಳಕ್ಕೆ ತಕ್ಕಂತೆ ಕುಣಿದು ದೇಶವನ್ನು ಹಿಂದಕ್ಕೆ ತಳ್ಳುವುದನ್ನು ನೋಡುತ್ತಿದ್ದೇವೆ.

ದೇಶ ಪ್ರೇಮದ ಹೆಸರಿನಲ್ಲಿ, ಸೈನ್ಯದ ಹೆಸರಿನಲ್ಲಿ ಪಕ್ಷಗಳು ಜುಮ್ಲಾದಾಟವಾಡುವಾಗ ಅವರ ದಾಂಡಿಗೆ ನಾವು ಗಿಲ್ಲಿಗಳಾಗುತ್ತಿದ್ದೇವೆ. ಅಭ್ಯರ್ಥಿಗಳ ಸಾಧನೆಯ ಮೇಲೆ, ಅಭಿವೃದ್ಧಿಯ ಆಧಾರದ ಮೇಲೆ, ನಮ್ಮ ಮಕ್ಕಳಿಗೆ ನೀಡುವ ಶಿಕ್ಷಣದ ಗುಣಮಟ್ಟ, ವ್ಯವಸ್ಥೆಯ ಆಧಾರದ ಮೇಲೆ, ನಿರುದ್ಯೋಗ ನಿವಾರಣೆಯ ಮೇಲೆ, ರೈತರ ಸಮಸ್ಯೆಗಳ ಮೇಲೆ, ಬಡತನ ನಿರ್ಮೂಲನೆಯ ಮೇಲೆ ಚರ್ಚಿಸುವ ಬದಲು ನಮ್ಮ ದೇಶವನ್ನು, ಕ್ಷೇತ್ರವನ್ನು ಮತ್ತಷ್ಟು ಹಿಂದಿಕ್ಕುವ ಅದಕ್ಕಿಂತ ಮುಖ್ಯವಾಗಿ ನಮಗೆ ಒಂದು ಚೂರು ಸಂಬಂಧವಿಲ್ಲದ ನಾಲಾಯಕ್ ರಾಜಕಾರಣಿಗಳ ತೂಕ ರಹಿತ ಮಾತುಗಳಿಗೆ ಬಲಿಯಾಗಿ ಮಹಾಪುರುಷರು ಕಟ್ಟಿ ಕೊಟ್ಟ ಸಮಾನ ಅವಕಾಶದ ಪ್ರಜಾಪ್ರಭುತ್ವ ವನ್ನು ಅಪಾಯಕೊಡ್ಡುತ್ತಿರುವುದು ನಿಜಕ್ಕೂ ನಮ್ಮ ಕಾಲಿಗೆ ನಾವೇ ಕೊಡಲಿಯಿಂದ ಹೊಡೆದುಕೊಳ್ಳುತ್ತಿರುವುದಕ್ಕೆ ಸಮವಾಗಿದೆ!

ಈ ಪರಿಸ್ಥಿತಿಯನ್ನು ಬದಲಾಯಿಸಲು ನಮ್ಮ ನಿರ್ಧಾರಗಳು ರಾಜಕಾರಣಿಗಳ ಹಣ, ಮದ್ಯ, ಮಾದಕ ವಸ್ತು ಮತ್ತು ಜುಮ್ಲಾದಾಟದ ಹೊರತು ಯೋಚಿಸಬೇಕಾದ ಅನಿವಾರ್ಯತೆ ಇದೆ. ದೇಶದ ರಕ್ಷಣೆ ಮಾಡಲು ಭಾರತೀಯ ಸೈನ್ಯಯಿದೆ. ಆ ಸೈನ್ಯದ ಮೇಲೆ ನಮಗೆ ವಿಶ್ವಾಸವಿದೆ. ಅದನ್ನು ಅವರು ಚಾಚು ತಪ್ಪದೆ ಯಾವುದೇ ಅಂಜಿಕೆಯಿಲ್ಲದೆ ನಿರ್ವಹಿಸುತ್ತಾರೆ. ಆದರೆ ನಾವು ಆರಿಸಿರುವ ನಾಯಕರು ಅಲ್ಲಿ ಸೈನ್ಯ ನಡೆಸುವ ಕಾರ್ಯಚರಣೆ ಮುಂದಿಟ್ಟುಕೊಂಡು ಚುನಾವಣೆಯ ಸಮಯದಲ್ಲಿ ನಾಟಕವಾಡಲು ಅಲ್ಲ. ನಾವು ಆರಿಸುವ ಅಭ್ಯರ್ಥಿಗಳು ನಮ್ಮ ರಸ್ತೆ, ಸೇತುವೆ, ರೈತರ ಸಮಸ್ಯೆ, ಶಿಕ್ಷಣ, ನಿರುದ್ಯೋಗ, ಬಡತನ ಬಗ್ಗೆ ಕೆಲಸ ಮಾಡಬೇಕಾಗಿದೆ. ಇಲ್ಲಿ ಯಾವುದೇ ಕೆಲಸ ಮಾಡದೇ ಸೈನ್ಯದ ಸಾಧನೆಯನ್ನು ತನ್ನ ಸಾಧನೆಯೆಂದು ತಿರುಗುವ ಇಂತಹ ರಾಜಕಾರಣಿಗಳ ಕಾಲರ್ ಹಿಡಿದು ಪ್ರಶ್ನಿಸುವ ಸಮಯ ಇದಾಗಿದೆ. ಇಲ್ಲದಿದ್ದ ಪಕ್ಷದಲ್ಲಿ ಅಂದು ನಮಗಾಗಿ ಜೀವನವಿಡಿ ಸಂಘರ್ಷ ನಡೆಸಿ ಸ್ವಾತಂತ್ರ್ಯ ದೊರಕಿಸಿಕೊಟ್ಟ ಆ ಮಹಾಪುರುಷರ ಸಂಘರ್ಷ ವ್ಯರ್ಥ ವಾಗಲೂ ಬಹುದು. ಭವ್ಯ ಸಂವಿಧಾನ ಅರ್ಪಿಸಿ ಎಲ್ಲರಿಗೂ ಸಮಾನ ಹಕ್ಕು ಕೊಟ್ಟು ಇಲ್ಲಿನ ಸೋ ಕಾಲ್ಡ್ ಮೇಲ್ಜಾತಿಗೆ ಮರ್ಮಾಘಾತಕೊಟ್ಟ ಅಂಬೇಡ್ಕರ್ ಅವರ ಮಹಾ ಸಾಧನೆ ನಮ್ಮ ಅವಿವೇಕದಿಂದ ಕೈತಪ್ಪಿ ಮತ್ತೆ ನಾವು ಗುಲಾಮರಾಗುವುದಕ್ಕಿಂತ ಮುಂಚೆ ಎಚ್ಚೆತ್ತು, ಜುಮ್ಲಾ, ಸುಳ್ಳಿನ ಸರದಾರರಿಗೆ ಮನೆಯ ಹಾದಿ ತೋರಿಸಬೇಕಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.