-ಶಾಹೆಲಾ ಹನೀಫ್, ಉಡುಪಿ

“ಎಲ್ಲಾ ಪ್ರವಾದಿಗಳು ಮತ್ತು ಧರ್ಮ ನೇತಾರರಲ್ಲಿ ಅತ್ಯಧಿಕ ವಿಜಯಶ್ರೀ ಒಲಿದ ಪ್ರವಾದಿಯೇ ಮುಹಮ್ಮದರು” ಎಂದು ಎನ್‍ಸೈಕ್ಲೋಪೀಡಿಯ ಬ್ರಿಟಾನಿಕಾ ಹೇಳುತ್ತದೆ. ಇದೊಂದು ಅತಿಶÀಯೋಕ್ತಿ ಅಲ್ಲ. ಬದಲಿಗೆ ಅವರ ಆಕರ್ಷಕ ಸಾಟಿಯಿಲ್ಲದ ಸದ್ಗುಣ ಸಂಪನ್ನತೆಗೆ ಸಿಕ್ಕಿದ ನ್ಯಾಯವಷ್ಟೇ.

ಅವರ ಮಾನವೀಯ ಮೌಲ್ಯಗಳು ಬೇರಾವ ಇತಿಹಾಸದಲ್ಲಿ ಕಾಣಸಿಗದು. ಅಪರೂಪದ ಮುತ್ತುಗಳಾದ ಈ ಮೌಲ್ಯಗಳು ಅವರ ಜೀವನದ ವಿವಿಧ ರಂಗಗಳಲ್ಲೂ ಕಂಡುಬರುವುದು. ಅವರೊಬ್ಬ ದೇವನಿಯುಕ್ತ ಪ್ರವಾದಿ ಮಾತ್ರವಲ್ಲದೇ ಉತ್ತಮ ವಾಗ್ಮಿ, ಸರಿಸಾಟಿಯಿಲ್ಲದ ಆಡಳಿತಗಾರ, ಆದರ್ಶ ತತ್ವಜ್ಞಾನಿ, ಸಮಾಜ ಸುಧಾರಕ, ಸತ್ಯನಿಷ್ಠ ವ್ಯಾಪಾರಿ, ನೈಜ ರಾಜಕಾರಣಿ, ರಣರಂಗದಲ್ಲಿ ಅದ್ವಿತೀಯ ಶೂರ, ಅನಾಥ ಸಂರಕ್ಷಕ, ಗುಲಾಮರ ವಿಮೋಚಕ, ಸ್ತ್ರೀ ಪರವಾದಿ, ನ್ಯಾಯನಿಷ್ಠ ನ್ಯಾಯಾಧೀಶ. ಈ ಎಲ್ಲಾ ರಂಗಗಳಲ್ಲೂ ಅವರ ನೈತಿಕ ಮೌಲ್ಯಕ್ಕೆ ಸಾಟಿಯಿಲ್ಲ.

ಎಷ್ಟೋ ಮಹಾತ್ಮ ಮಹಾ ಪುರುಷರ ಇತಿಹಾಸ ನಮಗೆ ತಿಳಿದಿವೆ. ಅವರ ಮೃದು ಸ್ವಭಾವ, ತಾಳ್ಮೆ, ಸಂಯಮಗಳು ಸಮಾಜದಲ್ಲಿ ಮನೆಮಾತಾಗಿದ್ದರೂ ಅವರ ಮನೆಗಳಲ್ಲಿ ಅದರಲ್ಲೂ ಪತ್ನಿ, ಮಕ್ಕಳು, ಕೆಲಸದವರೊಡನೆ ಅವರ ವರ್ತನೆಗಳು ತದ್ವಿರುದ್ಧವಾಗಿರುತ್ತವೆ. ಆದರೆ ಪ್ರವಾದಿ(ಸ)ರು ತಮಗೆ ಮನೆಗೆಲಸದಲ್ಲಿ ನೆರವಾಗುವ, ತಮ್ಮನ್ನು ಗೌರವಿಸುವ, ಪ್ರೀತಿಸುವ ಅತ್ಯುತ್ತಮ ಪತಿಯಾಗಿದ್ದರೆಂದು ಅವರ ಆದರ್ಶ ಪತ್ನಿಯರೇ ಹೇಳಿಕೊಂಡಿದ್ದಾರೆ. ಇಂತಹ ಅದ್ವಿತೀಯ ಮಾಲಕರನ್ನು ಕಂಡಿಲ್ಲವೆಂದು ಸೇವಕರು ಕೊಂಡಾಡಿದ್ದಾರೆ.

ಅರೇಬಿಯಾದ ಮರಳುಗಾಡಿನಲ್ಲಿ ಪ್ರವಾದಿ(ಸ)ರ ಜನನ. ಜನನಕ್ಕಿಂತ ಮುಂಚೆಯೇ ತಂದೆಯನ್ನು ಕಳೆದುಕೊಂಡ ಅವರು ಆರು ವರ್ಷದವರಿರುವಾಗ ತಾಯಿಯನ್ನು ಸಹ ಕಳೆದುಕೊಂಡರು. ಅವರನ್ನು ಅನಾಥಪ್ರಜ್ಞೆ ಬಾರದಂತೆ ಪ್ರೀತಿಯಿಂದ ಸಾಕಿ ಸಲುಹಿದ ಅಜ್ಜ ಕೂಡ 8ನೇ ವರ್ಷದಲ್ಲೇ ಶಾಶ್ವತವಾಗಿ ದೂರವಾದರು. ಹೀಗೆ ಬಾಲ್ಯವನ್ನು ಕಷ್ಟಗಳ ಸುರಿಮಳೆ ಹಾಗೂ ಅನಾಥಪ್ರಜ್ಞೆಯಿಂದ ಕಳೆದರೂ ಅವರ ಸಚ್ಚಾರಿತ್ರ್ಯವು ಉನ್ನತವಾಗಿತ್ತು.

ತಮ್ಮ 40ನೇ ಪ್ರಾಯದಲ್ಲಿ ಆ ಸೃಷ್ಟಿಕರ್ತನಿಂದ ಪ್ರವಾದಿಯಾಗಿ ನೇಮಕಗೊಳ್ಳುವುದಕ್ಕಿಂತ ಮೊದಲೇ ಅವರು ತಮ್ಮ ಸಮುದಾಯದ ಜನರಿಂದ “ಅಮೀನ್” (ಪ್ರಾಮಾಣಿಕ) ಹಾಗೂ “ಸಾದಿಕ್” (ಸತ್ಯಸಂಧ) ಎಂಬ ಬಿರುದನ್ನು ಪಡೆದಿದ್ದರು. ಅವರನ್ನು ವಿರೋಧಿಸುತ್ತಿದ್ದವರು ಕೂಡಾ ತಮ್ಮ ಸಂಪತ್ತುಗಳನ್ನು ಅವರಲ್ಲಿ ಅಮಾನತ್ತಾಗಿ ಇಡುತ್ತಿದ್ದರು. ಮೂರ್ತಿಪೂಜಕರಾದ ತನ್ನ ಬಂಧುಗಳಿಗೆ, ಸಮಾಜಕ್ಕೆ ಪ್ರವಾದಿ(ಸ)ರು “ವಿಗ್ರಹಾರಾಧನೆ ತೊರೆದು ಸೃಷ್ಟಿಕರ್ತನಾದ ಏಕೈಕ ದೇವನನ್ನು ಆರಾಧಿಸಿ” ಎಂಬ ಕರೆ ನೀಡಿದರೋ ಆಗ ಅವರನ್ನು ಅತಿಯಾಗಿ ಪ್ರೀತಿಸುತ್ತಿದ್ದ, ಗೌರವಿಸುತ್ತಿದ್ದ ಜನಾಂಗ ಅವರನ್ನು ವಿರೋಧಿಸ ತೊಡಗಿತು. ವಿರೋಧಿಗಳ ಅಪಹಾಸ್ಯ, ಬೈಗುಳ, ಎಣೆಯಿಲ್ಲದ ಹಿಂಸೆ, ಕ್ರೂರತೆಗೆ ಸಹನೆ, ಪ್ರೀತಿ ಮತ್ತು ಕ್ಷಮೆಯೇ ಅವರ ಉತ್ತರವಾಗಿತ್ತು.

ಪ್ರವಾದಿ(ಸ)ರು ರಸ್ತ್ತೆಯಲ್ಲಿ ಹಾದು ಹೋಗುವಾಗ ಓರ್ವ ವೃದ್ದೆ ದಿನವೂ ಮನೆಯ ಕಸಗಳನ್ನು ಅವರ ಮೇಲೆ ಎಸೆಯುತ್ತಿದ್ದಳು. ಒಮ್ಮೆ ಆ ಮಹಿಳೆಯ ಕಸ ತಮ್ಮ ಮೇಲೆ ಬೀಳದಿದ್ದುದನ್ನು ಕಂಡು ಕಳವಳಗೊಂಡು ಅವರ ಮನೆಗೆ ಹೋಗಿ ವಿಚಾರಿಸುತ್ತಾರೆ. ಅವರಿಗೆ ಜ್ವರ ಬಂದಿದೆಯೆಂದು ಕೈಯಾರೆ ಅವರ ಆರೈಕೆ ಮಾಡುತ್ತಾರೆ. ಆಗ ಆ ವೃದ್ದೆ ಪಶ್ಚಾತ್ತಾಪದ ಕಣ್ಣೀರಿನಿಂದ ತನ್ನನ್ನು ಪಾಪಮುಕ್ತಗೊಳಿಸಿಕೊಳ್ಳುತ್ತಾಳೆ.

ಪ್ರವಾದಿ(ಸ)ರು ಒಮ್ಮೆ ತಾಯಿಫ್ ನಗರದಲ್ಲಿ ಹಾದು ಹೋಗುತ್ತಿರುವಾಗ ವೈರಿಗಳ ಗುಂಪೊಂದು ಅವರ ಮೇಲೆ ಕಲ್ಲುಗಳ ಮಳೆ ಸುರಿಸಿ ಅವರ ಮೈ, ಕೈಕಾಲುಗಳು ರಕ್ತದಲ್ಲಿ ತೊಯ್ಯುವಂತೆ ಮಾಡುತ್ತಾರೆ. ಆಗ ದೇವಚರರು ಅವರ ಬಳಿ ಬಂದು ‘ನೀವು ಅಪ್ಪಣೆ ನೀಡಿದರೆ ತಾಯೀಫ್ ನಗರವನ್ನೇ ನಾಶ ಮಾಡುತ್ತೇವೆ ಎಂದಾಗ ಪ್ರವಾದಿ(ಸ)ರು ದೇವಚರರನ್ನು ತಡೆದು ವೈರಿಗಳಿಗಾಗಿ ಪ್ರಾರ್ಥಿಸುತ್ತಾರೆ.

ದೇಹ ಪರಿಶುದ್ದತೆಗೆ ಮಹತ್ವ ನೀಡಿದ ಪ್ರವಾದಿ(ಸ)ರು ಒಬ್ಬ ಹಸುಳೆಯ ಮೂತ್ರ ತಾಗಿದರೂ ನೀರು ಹಾಕಿ ತೊಳೆಯಬೇಕೆಂದು ಆದೇಶಿಸಿದಾರೆ ಹಾಗೂ ನೈರ್ಮಲ್ಯವು ಸತ್ಯವಿಶ್ವಾಸದ ಅರ್ಧಭಾಗವೆಂದು ಹೇಳಿದ್ದಾರೆ. ಒಮ್ಮೆ ಗ್ರಾಮೀಣ ವ್ಯಕ್ತಿಯೊಬ್ಬ ಮಸೀದಿ ಒಳಗೆ ಬಂದು ಮೂತ್ರ ವಿಸರ್ಜನೆ ಮಾಡುತ್ತಾನೆ. ಆಗ ಅವರ ಅನುಯಾಯಿಗಳು ಆ ವ್ಯಕ್ತಿಯನ್ನು ತಡೆಯಲು ಮುಂದಾಗುತ್ತಾರೆ. ಆದರೆ ಪ್ರವಾದಿ(ಸ)ರು ಆ ವ್ಯಕ್ತಿಗೆ ನಿರಾಳವಾಗಿ ಮೂತ್ರ ಮಾಡಲು ಅನುವು ಮಾಡಿ ನಂತರ ಮಸೀದಿಯನ್ನು ನೀರಿನಿಂದ ತೊಳೆಯಲು ಆದೇಶಿಸುತ್ತಾರೆ. ಇದು ಅವರು ಮಾನವತೆಗೆ ನೀಡಿದ ಮೌಲ್ಯ.

ಒಂದು ಪಂಗಡದ ಒಂಟೆಯು ಇನ್ನೊಂದು ಪಂಗಡದ ಹುಲ್ಲುಗಾವಲಿನಲ್ಲಿ ಹುಲ್ಲು ಮೇದ ಕ್ಷುಲ್ಲಕ ಕಾರಣಕ್ಕಾಗಿ 40 ವರ್ಷಗಳ ಕಾಲ ಯುದ್ಧ ನಡೆದು 70 ಸಾವಿ ಮಾನವ ಜೀವವನ್ನು ಕೊಲೆಗೈದ ಜನಾಂಗವನ್ನು ಕೆಲವೇ ವರ್ಷಗಳಲ್ಲಿ ಶಿಸ್ತು ಸಂಯಮ ಹಾಗೂ ಯುದ್ಧರಂಗದಲ್ಲಿಯೂ 5 ವೇಳೆಯ ಸಮಾಜನ್ನು ಸಾಮೂಹಿಕವಾಗಿ ಆಚರಿಸುವವರನ್ನಾಗಿ ಮಾಡಿದುದು ಅವರ ಸಮಾಜ ಸುಧಾರಣೆಗೆ ಸಾಕ್ಷಿ. ಅವರ ಕಾಲದಲ್ಲಿ ನಡೆದ ಯುದ್ಧಗಳೆಲ್ಲವೂ ಅವರ ಮೇಲೆ ಹೇರಲ್ಪಟ್ಟುದು, ನಿರಂತರ ಶಾಂತಿಯತ್ನಗಳು ವಿಫಲವಾದಾಗ ಹಾಗೂ ಆತ್ಮರಕ್ಷಣೆಗಾಗಿ ಮಾತ್ರವಾಗಿತ್ತು. ಅವರ ಜೀವನಾವಧಿಯಲ್ಲಿ ನಡೆದ ಎಲ್ಲಾ ಯುದ್ಧಗಳಲ್ಲಿ ಮೃತರಾದ ಯೋಧರ ಸಂಖ್ಯೆ ಒಂದು ಸಾವಿರ ಮಿಕ್ಕಿರಲಿಲ್ಲ.

ಪ್ರವಾದಿ(ಸ)ರು ಸಂಪೂರ್ಣ ಮಕ್ಕವನ್ನು ಅಧೀನಗೊಳಿಸಿ ವಿಜಯಶಾಲಿಯಾಗಿ ಮಕ್ಕನಗರವನ್ನು ತಮ್ಮ ಅನುಯಾಯಿಗಳೊಂದಿಗೆ ಪ್ರವೇಶಿಸುವಾಗ ಮಕ್ಕದ ಕುರೈಷರು ಭಯದಿಂದ ನಡುಗುತ್ತಿದ್ದರು. ಏಕೆಂದರೆ ಅವರು ಪ್ರವಾದಿ(ಸ) ಹಾಗೂ ಅವರ ಅನುಯಾಯಿಗಳನ್ನು ನಿರಂತರ ಹಿಂಸಿಸಿ ವರ್ಷಗಟ್ಟಲೇ ಆಹಾರವೂ ಸಿಗದಂತೆ ಮಾಡಿ ಕೊನೆಗೆ ತಮ್ಮ ನಾಡಿನಿಂದ ಹೊರಹಾಕಿದ್ದವು. ಅದರೆ ಕ್ಷಮೆ ಕರುಣೆ ದಯೆಯೇ ತುಂಬಿಕೊಂಡಿದ್ದ ಧೀಮಂತ ಮನುಕುಲದ ಪ್ರವಾದಿ(ಸ)ರು ಹೀಗೆ ಘೋಷಿಸಿದರು, “ಈ ದಿನ ನಿಮ್ಮ ಮೇಲೆ ಯಾವ ದಂಡನೆಯನ್ನು ವಿಧಿಸಲಾಗುವುದಿಲ್ಲ. ಇಂದು ನೀವೆಲ್ಲ ಸ್ವತಂತ್ರರು.”

ಹೆಣ್ಣು ಹುಟ್ಟಿತೆಂಬ ಕಾರಣಕ್ಕಾಗಿ ಅದನ್ನು ಜೀವಂತ ಹೂಳುವ ಸಂಪ್ರದಾಯವಿದ್ದ ಅರಬಿಗಳಿಗೆ ಪ್ರವಾದಿ(ಸ) ಹೇಳಿದರು, “ಯಾರು ಮೂವರು ಹೆಣ್ಣು ಮಕ್ಕಳನ್ನು ಪೋಷಿಸಿ, ಬೆಳೆಸಿ ಉತ್ತಮ ಶಿಕ್ಷಣ ನೀಡಿ, ಅವರನ್ನು ವಿವಾಹ ಮಾಡಿ ಅವರೊಡನೆ ಸದ್ವರ್ತನೆ ತೋರುವವರು ಸ್ವರ್ಗ ಪ್ರವೇಶಿಸುವರು” ಅವರು ಸ್ತ್ರೀಯರಿಗೆ ಸಮಾನ ನೀಡಿದರಲ್ಲದೇ ಆಸ್ತಿಯಲ್ಲಿ ಅವಳಿಗೂ ಪಾಲಿದೆಯೆಂದು ಸಾರಿದರು.

“ತನ್ನ ಪತ್ನಿಯೊಡನೆ ಉತ್ತಮ ರೀತಿಯಲ್ಲಿ ವ್ಯವಹರಿಸುವವನೇ ನಿಮ್ಮ ಪೈಕಿ ಅತ್ಯುತ್ತಮನು” “:ನಿಮ್ಮ ಪತ್ನಿಯರೊಂದಿಗೆ ದಾಸಿಯರಂತೆ ವರ್ತಿಸಬೇಡಿ, ಅವರಿಗೆ ಹೊಡೆಯಬೇಡಿ” “ನೀವು ಉಣ್ಣುವಾಗಿ ನಿಮ್ಮ ಪತ್ನಿಯರಿಗೂ ಉಣ್ಣಿಸಿ” ಎಂದು ಪತಿಯಂದಿರಿಗೆ ತಾಕೀತು ಮಾಡಿ ಮಹಿಳೆಯರ ಬಗ್ಗೆ ಕಾಳಜಿ ತೋರಿದ್ದಾರೆ.

ಪ್ರವಾದಿ(ಸ)ರ ಪ್ರೇಮ, ಕರುಣೆಗಳು ಕೇವಲ ಮಾನವ ಕುಲಕ್ಕೆ ಸೀಮಿತವಾಗಿರಲಿಲ್ಲ. ಅವರು ಪ್ರಕೃತಿ, ಪರಿಸರ, ಪ್ರಾಣಿ, ಪಕ್ಷಿಗಳನ್ನು ಪ್ರೀತಿಸಿ ಇತರರಿಗೂ ಅದನ್ನು ಗೌರವಿಸುವಂತೆ ಆದೇಶಿದ್ದಾರೆ. ಪ್ರಾರ್ಥನೆಗೆ ಮೊದಲು ನಿರ್ವಹಿಸುವ ಅಂಗಸ್ನಾನಕ್ಕೂ ಅಗತ್ಯಕ್ಕಿಂತ ಹೆಚ್ಚು ನೀರನ್ನು ಬಳಸಬಾರದೆಂದು ಎಚ್ಚರಿಸಿದ್ದಾರೆ. ಗಿಡ ಮರ ಕಡಿಯುವುದನ್ನು ವಿರೋಧಿಸಿದ್ದಾರೆ. ಪ್ರಾಣಿಗಳನ್ನು ಪ್ರಾಣರಕ್ಷಣೆ ಅಥವಾ ಆಹಾರಕ್ಕೆ ಹೊರತಾಗಿ ಪ್ರಾಣಿಗಳನ್ನು ಕೊಲ್ಲಬಾರದೆಂದು ಕಟ್ಟೆಚ್ಚರವಿತ್ತಿದ್ದಾರೆ. ಒಮ್ಮೆ ಅವರ ಸಂಗಾತಿಗಳು ಇರುವೆಗಳ ರಾಶಿಗೆ ಬೆಂಕಿ ಹಚ್ಚಿದಾಗ ಕುಪಿತರಾಗಿ ಹೊತ್ತಿಸುವ ಅಧಿಕಾರ ಕೇವಲ ಸೃಷ್ಟಿಕರ್ತನಿಗೆ ಮಾತ್ರ ಎನ್ನುತ್ತ ಈ ತಮ್ಮ ಸಂಗಾತಿಗಳನ್ನು ತಡೆದಿದ್ದಾರೆ. “ನೀವು ಮರಣದ ಅಂಚಿನಲ್ಲಿದ್ದರೂ ಗಿಡ ನೆಡಲು ಪ್ರಯತ್ನಿಸಿ” ಎಂದು ಸಾರಿದ ಪ್ರವಾದಿಯವರ ಮಾತು ಈಗ ಬಹಳ ಪ್ರಸ್ತುತವಾಗಿದೆ.

ಜಾರ್ಜ್ ಬರ್ನಾಡ್ ಶಾ ಹೇಳಿದ ಮಾತು ನೆನಪಾಗುತ್ತದೆ, “ಈಗ ಪ್ರವಾದಿ(ಸ)ರು ಜೀವಂತವಾಗಿದ್ದರೆ ನಮ್ಮನ್ನು ಕಾಡುತ್ತಿರುವ ಹಲವು ಸಮಸ್ಯೆಗಳಿಗೆ ಸಮರ್ಥ ಪರಿಹಾರ ಸಿಗುತ್ತಿತ್ತು.” ಅವರ ಸಂದೇಶಗಳು, ಮಾದರಿಗಳು ಜೀವಂತವಾಗಿವೆ. ಯಾರೇ ಆಗಲಿ ನಿಷ್ಪಕ್ಷಪಾತವಾಗಿ ಅಧ್ಯಯನ ಮಾಡಿದರೆ ವಿಜಯದ ದಾರಿ ಕಂಡೇ ತೀರುವುದು. ನೈತಿಕ ಮಾಲ್ಯಗಳು ಮಾಯವಾಗುತ್ತಿರುವ, ಹಿಂಸೆ, ದ್ವೇಷ, ಅಸೂಯೆ ತುಂಬಿರುವ ಹಾಗೂ ಪ್ರಕೃತಿ, ಪರಿಸರದ ಮೇಲೆ ದೌರ್ಜನ್ಯ ಎಸಲಾಗುತ್ತಿರುವ ಇಂದಿನ ಸಮಾಜಕ್ಕೆ ನಿಜಕ್ಕೂ ಪ್ರವಾದಿ(ಸ) ಸಂದೇಶದ ಅವಶ್ಯಕತೆ ಇದೆ. ಆಮಾನವೀಯ ಮೌಲ್ಯಗಳನ್ನು ಅರಿತು ತಮ್ಮದಾಗಿಸಿಕೊಳ್ಳಬೇಕಾದ ಅಗತ್ಯವಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.