ರಾಯಚೂರು: ಮಧು ಪತ್ತಾರ ಎಂಬ ಬೆಳಕುಕಣ್ಣಿನ ಯುವತಿಯ ಸಾವು ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ರಾಜ್ಯಾದ್ಯಂತ ಜಸ್ಟಿಸ್ ಫಾರ್ ಮಧು ಎಂಬ ಆಂದೋಲನವೇ ಆರಂಭವಾಗಿದೆ. ಇದು ಬರೀ ಸಾಮಾಜಿಕ ಜಾಲತಾಣದ ಆಂದೋಲನವಾಗಿರದೇ ರಾಯಚೂರಿನಲ್ಲಿ ಹಲವು ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿವೆ. ರಾಜ್ಯಾದ್ಯಂತ ಹೋರಾಟದ ಬಿಸಿ ತಾರಕಕ್ಕೇರಿದೆ.

ಇಲ್ಲಿನ ನವೋದಯ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಮಧು ಪತ್ತಾರ ಅವರ ದೇಹ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಯುವತಿಯು ಏ.13ರಂದು ಮನೆಯಿಂದ ತೆರಳಿದ್ದು, ವಾಪಸಾಗಿರಲಿಲ್ಲ. ಕೊನೆಗೆ ಈಕೆ ಪತ್ತೆಯಾಗಿದ್ದು ಶವವಾಗಿ. ಈ ಶವ ಪತ್ತೆಯಾದಾಗ ಬಹುತೇಕ ಕೊಳೆತು ಹೋದ ಸ್ಥಿತಿಯಲ್ಲಿತ್ತು. ಮಾಣಿಕ ಪ್ರಭು ಬೆಟ್ಟ ಪ್ರದೇಶದ ಉಸುಕಿನ ಹನುಮಪ್ಪ ದೇವಸ್ಥಾನದ ಹಿಂಬದಿಯ ಹೊಲದಲ್ಲಿ ಮಧು ಶವ ಪತ್ತೆಯಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಪಿ ಡಿ. ಕಿಶೋರ ಬಾಬು ಅವರು, ದೇಹದ ಪಕ್ಕದಲ್ಲಿಯೇ ಸುಸೈಡ್ ನೋಟ್ ಸಹ ಸಿಕ್ಕಿದೆ. ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆಯಲಾಗಿದೆ ಎಂದು ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ್ದರು.

ಆದರೆ ಮಧು ಪೋಷಕರು ಮಗಳ ಸಾವು ಆತ್ಮಹತ್ಯೆ ಎಂದು ಒಪ್ಪಲು ಸಿದ್ಧರಿಲ್ಲ. ಆಕೆಯ ಕೊಲೆ ನಡೆದಿದೆ ಎನ್ನುತ್ತಿದ್ದಾರೆ.

ಮಧು ದಾರುಣ ಸಾವು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದೆ. ಜಸ್ಟಿಸ್ ಫಾರ್ ಮಧು ಎಂಬ ಹ್ಯಾಷ್ ಟ್ಯಾಗ್ ಮೂಲಕ ಎಲ್ಲೆಡೆ ಪ್ರಚಾರ ನಡೆಯುತ್ತಿದೆ. ಮಧು ನೇಣು ಹಾಕಿಕೊಂಡಿದ್ದರೂ ಸಹ ಅವರ ದೇಹ ನೆಲದ ಮೇಲೆ ಕುಳಿತಂತೆ ಇತ್ತು. ನೇಣು ಹಾಕಿಕೊಂಡರೆ ಈ ರೀತಿ ಆಗಲು ಸಾಧ್ಯವೇ? ಅದು ಕೊಲೆಯೇ ಎಂದು ಪ್ರತಿಪಾದಿಸಲಾಗುತ್ತಿದೆ.
ಈ ನಡುವೆ ಗುರುವಾರ ರಾಯಚೂರಿನಲ್ಲಿ ನೂರಾರು ವಿದ್ಯಾರ್ಥಿಗಳು ಮುಖಕ್ಕೆ ಕರ್ಚಿಫ್ ಕಟ್ಟಿಕೊಂಡು ಮೆರವಣಿಗೆ ನಡೆಸಿದರು. ಮಧು ಓದುತ್ತಿದ್ದ ನವೋದಯ ಇಂಜಿನಿಯರಿಂಗ್ ಕಾಲೇಜಿನಿಂದಲೇ ಹೊರಟ ಮೆರವಣಿಗೆಯು ತಹಸೀಲ್ದಾರರ ಕಚೇರಿ ವರೆಗೆ ಸಾಗಿತು. ಪ್ರಕರಣದ ಸಮಗ್ರ ತನಿಖೆ ಆಗಬೇಕು. ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.

ವಿದ್ಯಾರ್ಥಿನಿಯರಿಗೆ ಸೂಕ್ತ ಭದ್ರತೆ ನೀಡಬೇಕು ಎಂಬ ಬೇಡಿಕೆಗಳ ಮನವಿ ಪತ್ರವನ್ನು ಇನ್ ಪೇಂಟ್ ಜೀಸಸ್ ಕಾಲೇಜ್ ಹತ್ತಿರ ಸಲ್ಲಿಸಿದರು. ಎಐಎಂಎಸ್ಎಸ್ ಜಿಲ್ಲಾಧ್ಯಕ್ಷರಾದ ಚೇತನಾ ಬನಾರೆ ಹೋರಾಟ ಬೆಂಬಲಿಸಿ ಮಾತನಾಡಿದರು. ಎಐಡಿಎಸ್ಓ ಜಿಲ್ಲಾಧ್ಯಕ್ಷ ಮಹೇಶ್ ಚೀಕಲಪರ್ವಿ, ಎಐಡಿವೈಓ ಜಿಲ್ಲಾಧ್ಯಕ್ಷ ಶರಣಪ್ಪ ಉದ್ಬಾಳ್ ಹೋರಾಟದಲ್ಲಿ ಭಾಗವಹಿಸಿದ್ದರು.

ಸಂಜೆ ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಯಿತು.

ನೇತಾಜಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಒಬ್ಬ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.