ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ ಕಳೆದ 5 ವರ್ಷದ ಆಡಳಿತದಲ್ಲಿ ಘೋಷಣೆ ಮಾಡದ ತುರ್ತು ಪರಿಸ್ಥಿತಿ ಜಾರಿಯಾಗಿತ್ತು. ಅವರ ವಿರುದ್ಧ ಮಾತನಾಡಿದರೆ ಕೇಂದ್ರದ ಸಂಸ್ಥೆಗಳ ಮೂಲಕ ಮಟ್ಟ ಹಾಕುತ್ತಾರೆ. ಈಗಿರುವ ಕೇಂದ್ರ ಚುನಾವಣೆ ಆಯೋಗ (ಇಸಿ) ನಗೆ ಪಾಟಲಿನ ಆಯೋಗವಾಗಿದೆ. ಈಗಿನ ಚುನಾವಣಾ ಆಯೋಗವೇ ಸರಿ ಇಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ದೂಷಿಸಿದ್ದಾರೆ.
ಬೆಂಗಳೂರು ಉತ್ತರ ಕ್ಷೇತ್ರ ಮೈತ್ರಿ ಅಭ್ಯರ್ಥಿ ಕೃಷ್ಣಬೈರೇಗೌಡ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 5 ವರ್ಷ ಕೆಲಸ ಮಾಡದವರು ಈಗ ವೋಟ್ ಕೇಳೋಕೆ ಬಂದಿದ್ದಾರೆ. 5 ವರ್ಷದಲ್ಲಿ ಮೋದಿ ಏನು ಕೆಲಸ ಮಾಡಿಲ್ಲ. ಕೆಲಸ ಮಾಡಿದ್ದರೆ ನಾನೇ ಮೋದಿಗೆ ಓಟ್ ಹಾಕಿ ಎಂದು ಮನವಿ ಮಾಡುತ್ತಿದೆ. ಆದರೆ ಮೋದಿ ಯಾವುದೇ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಸರ್ವ ಶಿಕ್ಷಣ ಅಭಿಯಾನದ ಹಣವನ್ನು ಇವತ್ತು ನಿಲ್ಲಿಸಿದೆ. ಮನ್ ಕೀ ಬಾತ್ ಭಾಷಣದಲ್ಲಿ ಮಾತ್ರ ಭೇಟಿ ಬಚಾವ್ ಕಾರ್ಯಕ್ರಮ ಎನ್ನುತ್ತಾರೆ. ಆದರೆ ಯಾವ ಭೇಟಿ ಬಚಾವ್ ಮಾಡಿದ್ದಾರೋ ಗೊತ್ತಿಲ್ಲ. ದೇಶದ ಭದ್ರತೆ ವಿಚಾರ ಇಟ್ಟುಕೊಂಡು ಈಗ ಮತ ಕೇಳುತ್ತಿದ್ದು, 5 ವರ್ಷದ ಸಾಧನೆಯ ಬಗ್ಗೆ ಮಾತನಾಡುತ್ತಿಲ್ಲ. ದೇಶದ ಭದ್ರತೆಯನ್ನ ಒಬ್ಬರೇ ರಕ್ಷಣೆ ಮಾಡಿದಂತೆ ಹೇಳಿಕೊಂಡು ಮತ ಕೇಳುತ್ತಿದ್ದಾರೆ. 5-6 ಜನ ಯುವಕರು ಮೋದಿ ಮೋದಿ ಅಂತ ಕೂಗುತ್ತಾರೆ. ಮೋದಿ ಮೋದಿ ಅಂತ ಕೂಗಿ ದೇಶ ಹಾಳು ಮಾಡಬೇಡಿ ಎಂದು ಹೇಳಿದರು.
ದೇಶಕ್ಕೆ ಅಪಾಯ ಬಂದಾಗ ಮಹಿಳೆಯಾಗಿದ್ದ ಇಂದಿರಾ ಗಾಂಧಿ ದೇಶದ ರಕ್ಷಣೆ ಮಾಡಿದರು. ವಾಜಪೇಯಿ ದೇಶದ ರಕ್ಷಣೆ ಮಾಡಿಲ್ವಾ? ಆದರೆ ಮೋದಿ ಒಬ್ಬರೇ ದೇಶದ ರಕ್ಷಣೆ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳು ನಿತ್ಯ ಪ್ರಸಾರ ಮಾಡುತ್ತಿದೆ. ದೇಶದ ಸೈನಿಕರು ಹೋರಾಡಿದರೆ ಅದರ ಹೆಸರು ಮೋದಿಗೆ ಹೋಗಬೇಕಂತೆ. ಸೈನಿಕರ ಹೆಸರು ಹೇಳಲು ಮೋದಿ ಆಗೋದಿಲ್ಲ. ರಾಜ್ಯಕ್ಕೆ ಆದ ಅನ್ಯಾಯ ಸರಿಪಡಿಸಲು ಇಳಿವಯಸ್ಸಿನಲ್ಲೂ ದೇವೇಗೌಡರು ಹೋರಾಟ ಮಾಡುತ್ತಿದ್ದಾರೆ. ಕಾವೇರಿಗಾಗಿ ದೇವೇಗೌಡರು ಗಾಂಧಿ ಪ್ರತಿಮೆ ಮುಂದೆ ಉಪವಾಸ ಸತ್ಯಾಗ್ರಹ ಮಾಡಿದರು. ಅವರಿಗೆ ವಯಸ್ಸು ಆಗಿರಬಹುದು ಆದರೆ ರಾಜ್ಯದ ಪರ ಹೋರಾಟಕ್ಕೆ ಅವರಿಗೆ ಬದ್ಧತೆ ಇದೆ ಎಂದು ತಿಳಿಸಿದರು.
ಸಮ್ಮಿಶ್ರ ಸರ್ಕಾರದಲ್ಲೂ ಉತ್ತಮ ಯೋಜನೆಗಳನ್ನು ಜಾರಿ ಮಾಡಿದ್ದು, ಒಂದು ಲಕ್ಷ ಮನೆ ನಿರ್ಮಾಣ ಕೆಲಸ ಪ್ರಾರಂಭ ಮಾಡಿದ್ದೇವೆ. 4 ವರ್ಷಗಳಲ್ಲಿ 8-10 ಲಕ್ಷ ಮನೆ ನಿರ್ಮಾಣ ಮಾಡಿ ಬಡವರಿಗೆ ಕೊಡುತ್ತೇವೆ. ಬೆಂಗಳೂರು ಅಭಿವೃದ್ಧಿಗೆ ಅನೇಕ ಯೋಜನೆ ಜಾರಿಗೆ ತರುತ್ತಿದ್ದೇವೆ. ಬಡವರ ಬಂದು ಯೋಜನೆ ಜಾರಿ ಮಾಡಿದ್ದೇವೆ. ಬಡ ಮಹಿಳೆಯರ ಆಶೀರ್ವಾದದಿಂದ ನಾನು ಈಗ ಸಿಎಂ ಆಗಿದ್ದೇನೆ. ನನಗೆ ಆರೋಗ್ಯದ ತೊಂದರೆ ಇದ್ದರು ಈ ಜೀವ ಗಟ್ಟಿಯಾಗಿ ಇರುತ್ತೆ. ನಿಮ್ಮ ಆಶೀರ್ವಾದಿಂದ ನಾನು ಬದುಕಿರುತ್ತೇನೆ. ನನ್ನ ತಾಯಿ ಬೆಳಗ್ಗೆ 4 ಗಂಟೆಗೆ ಎದ್ದು 12 ಗಂಟೆ ವರೆಗೆ ದೇವರ ಪೂಜೆ ಮಾಡುತ್ತಾರೆ. ಅವರ ಆಶೀರ್ವಾದ ಇರುವ ವರೆಗೂ ನನಗೆ ಏನು ಆಗಲ್ಲ. ಮುಂದಿನ ದಿನಗಳಲ್ಲಿ ಹಳ್ಳಿ ಹಳ್ಳಿಗೆ ಪ್ರವಾಸ ಮಾಡುತ್ತೇನೆ ಎಂದರು.
ಬಿಜೆಪಿಯವರು ಮಾಧ್ಯಮಗಳಿಗೆ 500 ಕೋಟಿ ರೂ. ಹಣವನ್ನು ನೀಡಿದ್ದು, ಹೀಗಾಗಿ ಬೆಳಗ್ಗೆಯಿಂದ ಮೋದಿ ಬಗ್ಗೆಯೇ ತೋರಿಸುತ್ತಾರೆ. ಮೋದಿ ಹಣ ಪಡೆದು ಅವರ ಪರವೇ ಮಾಧ್ಯಮಗಳು ಪ್ರಚಾರ ಮಾಡಬೇಕು. ಮಾಧ್ಯಮಗಳು ಮಂಡ್ಯದ ಬಗ್ಗೆ ನಿತ್ಯ ತೋರಿಸುತ್ತಿವೆ. ಏನೋ ಆಗುತ್ತೆ ಎಂದು ನನ್ನನ್ನ ಮುಗಿಸಲು ಸಾಧ್ಯವಿಲ್ಲ. ಇದಕ್ಕೆ ಹೆದರುವುದಿಲ್ಲ. ಮಾಧ್ಯಮಗಳಿಗೆ ಮೇ 23 ರಂದು ನಾನು ಉತ್ತರ ಕೊಡುತ್ತೇನೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.