ವಿರಾಟ್ ಕೊಹ್ಲಿಗೆ ‘ಸ್ಪಿರಿಟ್​ ಆಫ್​ ಕ್ರಿಕೆಟ್’​ ಗೌರವ!

0
109

ನವದೆಹಲಿ: ಇಂಗ್ಲೆಂಡ್​ ವಿಶ್ವಕಪ್​ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಆಲ್​ರೌಂಡರ್ ಬೆನ್​ ಸ್ಟೋಕ್ಸ್, ಟೀಮ್​ ಇಂಡಿಯಾ ಉಪನಾಯಕ ರೋಹಿತ್​ ಶರ್ಮ ಮತ್ತು ನಾಯಕ ವಿರಾಟ್​ ಕೊಹ್ಲಿ 2019ನೇ ಸಾಲಿನ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ(ಐಸಿಸಿ) ಪ್ರಶಸ್ತಿ ಪಟ್ಟಿಯಲ್ಲಿ ಅತ್ಯುನ್ನತ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಇಂಗ್ಲೆಂಡ್​ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ ಪ್ರತಿಷ್ಠಿತ ಸರ್ ಗಾರ್ಫೀಲ್ಡ್ ಸೋಬರ್ಸ್ ಟ್ರೋಫಿ​ಗೆ ಅರ್ಹರಾಗುವ ಮೂಲಕ ವರ್ಷದ ಕ್ರಿಕೆಟಿಗ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಆ್ಯಂಡ್ರಿವ್​ ಫ್ಲಿಂಟಪ್​ ಮತ್ತು ಜೊನಾಥನ್​ ಟ್ರಾಟ್​ ಬಳಿಕ ಈ ಪ್ರಶಸ್ತಿಗೆ ಭಾಜನರಾದ ಇಂಗ್ಲೆಂಡ್​ನ ಮೂರನೇ ಆಟಗಾರನೆಂಬ ಕೀರ್ತಿಯನ್ನು ಗಳಿಸಿದ್ದಾರೆ.

ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡರಲ್ಲೂ 2019ನೇ ಇಸವಿಯಲ್ಲಿ ಸ್ಟೋಕ್ಸ್​ ಛಾಪು ಮೂಡಿಸಿದ್ದಾರೆ. ಕಳೆದ ವರ್ಷದ ತವರು ನೆಲದಲ್ಲಿ ನಡೆದ ನ್ಯೂಜಿಲೆಂಡ್​ ವಿರುದ್ಧ ವಿಶ್ವಕಪ್ ಫೈನಲ್​ ಪಂದ್ಯದಲ್ಲಿ ಬೆನ್​ ಸ್ಟೋಕ್ಸ್​ ಉತ್ತಮ ಆಲ್​ರೌಂಡರ್​ ಪ್ರದರ್ಶನ ನೀಡಿ ತಂಡ ಮೊದಲನೇ ವಿಶ್ವಕಪ್​ ಜಯಿಸಲು ಪ್ರಮುಖ ಕಾರಣರಾಗಿದ್ದರು. ವಿಶ್ವಕಪ್​ ಟೂರ್ನಿಯಲ್ಲಿ 5 ಅರ್ಧ ಶತಕಗಳೊಂದಿಗೆ 465ರನ್​ ಗಳಿಸಿದ್ದರು.​

ಇದಲ್ಲದೆ, ಮೂರನೇ ಆ್ಯಸಸ್​ ಟೆಸ್ಟ್​ನಲ್ಲಿ ಸ್ಫೋಟಕ 135 ರನ್​ ಸಿಡಿಸುವ ಮೂಲಕ ಆಸ್ಟ್ರೇಲಿಯಾ ನೀಡಿದ್ದ 356 ರನ್​ ಗುರಿಯನ್ನು ಪವಾಡವೆಂಬಂತೆ ಬೆನ್ನಟ್ಟಿ ಇಂಗ್ಲೆಂಡ್​ ಜಯ ಸಾಧಿಸಲು ಕಾರಣರಾಗಿದ್ದರು. ಹೀಗಾಗಿ 2019ರಲ್ಲಿ ಏಕದಿನ ಮತ್ತು ಟೆಸ್ಟ್​ನಲ್ಲಿ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ತೋರಿದ್ದಲ್ಲದೆ, ಬೌಲಿಂಗ್​ನಲ್ಲೂ ಗಮನ ಸೆಳೆದಿದ್ದಕ್ಕೆ ಸ್ಟೋಕ್ಸ್​ ವರ್ಷದ ಕ್ರಿಕೆಟಿಗ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ರೋಹಿತ್​ ಶರ್ಮ ಏಕದಿನ ವರ್ಷದ ಕ್ರಿಕೆಟಿಗ
2019ರಲ್ಲಿ ಬ್ಯಾಟಿಂಗ್​ ಮೂಲಕ ಎಲ್ಲರನ್ನು ರಂಜಿಸಿದ ಟೀಮ್​ ಇಂಡಿಯಾ ಆರಂಭಿಕ ಆಟಗಾರ ರೋಹಿತ್​ ವರ್ಷದ ಏಕದಿನ ಕ್ರಿಕೆಟಿಗ ಗೌರವಕ್ಕೆ ಪಾತ್ರರಾಗಿದ್ದಾರೆ. ವಿಶ್ವಕಪ್​ ಟೂರ್ನಿಯೊಂದರಲ್ಲೇ 5 ಶತಕ ಹಾಗೂ ಒಟ್ಟಾರೆ ಏಕದಿನ ಕ್ರಿಕೆಟ್​ನಲ್ಲಿ 7 ಶತಕಗಳನ್ನು ರೋಹಿತ್​ ಬಾರಿದ್ದಾರೆ. ಹೀಗಾಗಿ ಈ ಪ್ರಶಸ್ತಿಗೆ ರೋಹಿತ್​ ಪಾತ್ರರಾಗಿದ್ದಾರೆ.

ವಿರಾಟ್​ಗೆ ಸ್ಪಿರಿಟ್​ ಆಫ್​ ಕ್ರಿಕೆಟ್​ ಗೌರವ
ಅದ್ಭುತ ಬ್ಯಾಟಿಂಗ್​ ಹಾಗೂ ನಾಯಕತ್ವದಿಂದ ವಿಶ್ವಕಪ್​ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ವಿರಾಟ್​ ಕೊಹ್ಲಿ, ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ಕ್ರೀಡಾ ಸ್ಫೂರ್ತಿ ಮೆರೆಯುವ ಮೂಲಕ ಅಗ್ರೆಸಿವ್​​ನೆಸ್​ ನನ್ನ ಪ್ರವೃತ್ತಿಯಲ್ಲ ಎಂಬುದನ್ನು ಸಾಬೀತು ಪಡಿಸಿದ್ದರು. ಕನ್ನಿಂಗ್ಟನ್​ನ ಓವಲ್​ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಪಂದ್ಯವು ಕ್ರೀಡಾ ಸ್ಫೂರ್ತಿಗೆ ಸಾಕ್ಷಿಯಾಗಿತ್ತು. ಆಸಿಸ್​ ತಂಡದ ನಾಯಕ ಸ್ಟೀವ್​ ಸ್ಮಿತ್​ ಬೌಂಡರಿ ಗೆರೆಯ ಬಳಿ ಕ್ಷೇತ್ರ ರಕ್ಷಣೆ ಮಾಡುವಾಗ ಟೀಂ ಇಂಡಿಯಾದ ಅಭಿಮಾನಿಗಳು ಚೆಂಡು ವಿರೂಪ ಪ್ರಕರಣದಲ್ಲಿ ಒಂದು ವರ್ಷ ಬ್ಯಾನ್​ ಆಗಿದ್ದ ಸ್ಮಿತ್​ ಕಡೆ ನೋಡುತ್ತಾ, ಕೂಗುತ್ತಾ ಅಪಹಾಸ್ಯ ಮಾಡುತ್ತಿದ್ದರು. ಇದನ್ನು ಗಮನಿಸಿದ ಕೊಹ್ಲಿ ಮುಂದೆ ಬಂದು ಅಭಿಮಾನಿಗಳನ್ನು ಸುಮ್ಮನಿರುವಂತೆ ಹೇಳಿ, ಹೀಗೆ ಮಾಡುವುದರ ಬದಲು ಚಪ್ಪಾಳೆ ತಟ್ಟಿ ಹುರಿದುಂಬಿಸಿ ಎಂದು ಹೇಳಿದ್ದರು. ಈ ವಿಶೇಷ ಕ್ಷಣವನ್ನು ಮೆಲಕು ಹಾಕಿರುವ ಐಸಿಸಿ, ವಿರಾಟ್​ ಕೊಹ್ಲಿಗೆ “ಸ್ಪಿರಿಟ್​ ಆಫ್​ ಕ್ರಿಕೆಟ್”​ ಪ್ರಶಸ್ತಿ ಗೌರವಿಸಿದೆ.

ಪ್ಯಾಟ್​ ಕ್ಯುಮಿನ್ಸ್​ಗೆ ಟೆಸ್ಟ್​ ಕ್ರಿಕೆಟಿಗ ಗೌರವ
ಕಳೆದ ವರ್ಷ ಟೆಸ್ಟ್​ ಕ್ರಿಕೆಟ್​ನಲ್ಲಿ ತಮ್ಮ ಬೌಲಿಂಗ್​ ಮೂಲಕ ಜಾದೂ ಮಾಡಿದ ಆಸಿಸ್​ ತಂಡದ ವೇಗದ ಬೌಲರ್​ ಪ್ಯಾಟ್​ ಕ್ಯುಮಿನ್ಸ್​ ವರ್ಷದ ಟೆಸ್ಟ್​ ಕ್ರಿಕೆಟಿಗ ಗೌರವಕ್ಕೆ ಪಾತ್ರರಾಗಿದ್ದಾರೆ. ಕಳೆದ ವರ್ಷ ಟೆಸ್ಟ್​ನಲ್ಲಿ ಒಟ್ಟು 59 ವಿಕೆಟ್​ ಪಡೆದಿರುವ ಕ್ಯುಮಿನ್ಸ್​ ಇತರೆ ಬೌಲರ್​ಗಳಿಗಿಂತ 14 ವಿಕೆಟ್​ ಮುಂದಿದ್ದಾರೆ. ಈ ಸಾಧನೆಯೇ ಈ ಬಾರಿಯ ಐಪಿಎಲ್​ಗೆ ದಾಖಲೆಯ ಬೆಲೆಯಲ್ಲಿ ಕ್ಯುಮಿನ್ಸ್​ ಬಿಕರಿಯಾಗಿದ್ದಾರೆ.

ದೀಪಕ್​ ಚಹಾರ್​ಗೆ ಐಸಿಸಿ ಪುರುಷರ ಟಿ20 ಫರ್ಫಾರ್ಮೆನ್ಸ್​ ಅವಾರ್ಡ್​
ಕಳೆದ ನವೆಂಬರ್​ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಟಿ20 ಕ್ರಿಕೆಟ್​ ಇತಿಹಾದಲ್ಲೇ ದೀಪಕ್​ ಚಹಾರ್​ ಮಹತ್ವದ ಸಾಧನೆಯೊಂದನ್ನು ಮಾಡಿದರು. ಕೇವಲ 7 ರನ್​ ನೀಡಿ 6 ವಿಕೆಟ್​ ಗಳಿಸಿದ ಕಾರಣ ಟೀಂ ಇಂಡಿಯಾಗೆ ಟಿ20 ಸರಣಿ ಲಭಿಸಿತ್ತು. ಹೀಗಾಗಿ ದೀಪಕ್​ ಚಹಾರ್​ಗೆ ಐಸಿಸಿ ಪುರುಷರ ಟಿ20 ಫರ್ಫಾರ್ಮೆನ್ಸ್​ ಅವಾರ್ಡ್ ದೊರಕಿದೆ.

ಉಳಿದಂತೆ
2019ರ ಟಿ20ವಿಶ್ವಕಪ್​ ಟೂರ್ನಿಗೆ ಸ್ಕಾಟ್​ಲೆಂಡ್​ಗೆ ಅರ್ಹತೆ ದೊರಕಿಸಿಕೊಟ್ಟ ಕೈಲ್​ ಕಿಯೋಟ್ಜರ್​ ವರ್ಷದ ಅಸೋಸಿಯೇಟ್​​ ಕ್ರಿಕೆಟರ್​ ಪ್ರಶಸ್ತಿಗೆ ಭಾಜನರಾಗಿದ್ದರೆ, ಆಸ್ಟ್ರೇಲಿಯಾದ ಮಾರ್ನಸ್​ ಲಬಸ್ಛಗ್ನೆ ಟೆಸ್ಟ್​ ಕ್ರಿಕೆಟ್​ನಲ್ಲಿ 64.94 ಬ್ಯಾಟಿಂಗ್​ ಸರಾಸರಿಯಲ್ಲಿ ರನ್​ ಬಾರಿಸುವ ಮೂಲಕ ಐಸಿಸಿ ಮೆನ್ಸ್​ ಎಮರ್ಜಿಂಗ್​ ಕ್ರಿಕೆಟರ್​ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ರಿಚರ್ಡ್​ ಇಲ್ಲಿಂಗ್​ವೆರ್ತ್​ ವರ್ಷದ ಅಂಪೈರ್​ ಪ್ರಶಸ್ತಿಗೆ ಭಾಜನರಾಗಿದ್ದಾರೆ.

LEAVE A REPLY

Please enter your comment!
Please enter your name here