ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆಗಸ್ಟ್ ತಿಂಗಳ 16 ರಿಂದ ಸುಮಾರು ಒಂದು ವಾರಗಳ ಸುರಿದ ಭಾರೀ ಮಳೆಗೆ ಉಂಟಾದ ಪ್ರವಾಹದ ಕಾರಣ ಕೋಟ್ಯಾಂತರ ರೂಪಾಯಿ ಆಸ್ತಿ-ಪಾಸ್ತಿ ನಷ್ಟದೊಂದಿಗೆ ಹತ್ತಾರು ಜೀವಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದವು. ಸಾವಿರಾರು ಕುಟುಂಬಗಳು ತಾವು ಹುಟ್ಟಿ ಬೆಳೆದ, ಬದುಕು ಕಟ್ಟಿ ಕೊಂಡಿದ್ದ ಮನೆ, ಹೊಲ, ತೋಟಗಳನ್ನು ಕಳೆದುಕೊಂಡು ನಿರಾಶ್ರಿತ ಶಿಬಿರಗಳಲ್ಲಿ ಜೀವನ ಸಾಗಿಸಲು ತೊಡಗಿದ್ದರು. ಹಲವಾರು ಸಂಘಟನೆಗಳು, ಜಿಲ್ಲಾಡಳಿತ ಸೇರಿದಂತೆ ಸ್ವತಃ ರಾಜ್ಯ ಸರಕಾರದ ಸಚಿವರುಗಳು, ಮಿಲಿಟರಿ ಪಡೆಗಳು ರಕ್ಷಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಈ ಬಗ್ಗೆ ಹಲವಾರು ವೀಡಿಯೋ, ಚಿತ್ರಗಳನ್ನು ನಾವು ಸಾಮಾಜಿಕ ಜಾಲಾತಾಣದಲ್ಲಿ, ಮಾಧ್ಯಮದಲ್ಲಿ ಗಮನಿಸಿದ್ದೇವು.

ಕೊಸ್ಟಲ್ ಮಿರರ್ ತಂಡ ಸ್ವತಃ ಕೊಡಗು ಜಿಲ್ಲೆಯ ನಾನಾಕಡೆಗಳಲ್ಲಿ ಪ್ರವಾಹದ ಅರ್ಭಟಕ್ಕೆ ಗುಡ್ಡ ಕುಸಿದು ಕೋಟ್ಯಾಂತರ ರೂಪಾಯಿಗಳ ಆಸ್ತಿ ಪಾಸ್ತಿ ನಷ್ಟದೊಂದಿಗೆ, ಮನೆಗಳನ್ನು ಕಳೆದುಕೊಂಡ ಪ್ರದೇಶಕ್ಕೆ ಭೇಟಿ ನೀಡಿತು.

ಸಂಪಾಜೆ ಘಾಟ್ ರಸ್ತೆ ಪ್ರವಾಹದಿಂದ ಕೊಚ್ಚಿ ಹೋಗಿದ್ದ ಕಾರಣ ಕೇರಳದ ಪನತ್ತೂರು ಮಾರ್ಗವಾಗಿ ಭಾಗಮಂಡಲದ ದಟ್ಟಡವಿಯ ಮಾರ್ಗದಿಂದ ಕರಿಕೆಯ ಮಾರ್ಗವಾಗಿ ಮಡಿಕೇರಿಗೆ ಪ್ರಯಾಣ ಬೆಳೆಸಿದ ತಂಡ, ಮಾರ್ಗದಲ್ಲಿ ಹಲವಾರು ಮನೆಗಳು ಪ್ರವಾಹಕ್ಕೀಡಾಗಿ ಸಂಕಷ್ಟಕ್ಕೊಳಗಾಗಿದ್ದನ್ನು ಗಮನಿಸಿದರು. ಭಾಗಮಂಡಲ ಭಾಗದ ಕೆಲವು ಕಡೆ ಗುಡ್ಡ ಕುಸಿದು ರಸ್ತೆಗೆ ಬಿದ್ದಿದ್ದರೂ ಅದನ್ನು ತೆರವುಗೊಳಿಸಲಾಗಿತ್ತು. ಕೆಲವು ನೂರಾರು ಅಡಿ ಆಳದ ಪ್ರಪಾತಕ್ಕೆ ಅಡ್ಡಲಾಗಿ ಕಟ್ಟಿದ ತಡೆಗೋಡೆಗಳು ಕೊಚ್ಚಿ ಹೋಗಿದ್ದವು.

ಕರಿಕೆ ಭಾಗದಲ್ಲಿ ಕೆಲವು ಕಡೆ ಮನೆಗಳ ಮೇಲೆ ಗುಡ್ಡ ಜರಿದು ಬಿದ್ದಿದ್ದರೂ ಅಷ್ಟೊಂದು ದೊಡ್ಡ ಮಟ್ಟದ ಹಾನಿಯಾಗಿರಲಿಲ್ಲ.ಆದರೆ ಈ ಮನೆಗಳೆಲ್ಲವೂ ಈಗಲೂ ಸುರಕ್ಷಿತವಲ್ಲವೆಂಬುದು ಅಕ್ಷರಶಃ ಸತ್ಯ! ಸ್ಥಳೀಯರು ಇನ್ನು ಕೂಡ ಜೀವ ಭಯದೊಂದಿಗೆ ಅದೇ ಮನೆಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಮದೆನಾಡು,ಕರ್ತುಜೆ ಪ್ರದೇಶದಲ್ಲಂತೂ ನಿರಾವ ಮೌನ ಆವರಿಸಿದೆ. ಮಂಗಳೂರು-ಮಡಿಕೇರಿ ಸಂಪರ್ಕ ಕೊಂಡಿಯಾಗಿದ್ದ ಸಂಪಾಜೆ ಘಾಟ್ ರಸ್ತೆ ಪ್ರವಾಹದಲ್ಲಿ ಕೊಚ್ಚಿ ಹೋಗಿ ಗುಡ್ಡ ಕುಸಿದ ಮಣ್ಣಿನಿಂದ ಹೂತು ಹೋಗಿದ್ದು ಮಣ್ಣು ತೆರವುಗೊಳಿಸಿ ಸಮತಟ್ಟು ಮಾಡಲು ಹತ್ತಾರು ಜೆಸಿಬಿಗಳು,ಕಾರ್ಮಿಕರು ಶ್ರಮ ಪಡುತ್ತಿದ್ದಾರೆ.ಆದರೆ ಪ್ರವಾಹ ನಿಂತಿದ್ದರೂ ಸುರಿಯುವ ಭಾರಿ ಮಳೆ ಕಾರ್ಯಚರಣೆಗೆ ಅಡಚಣೆ ಉಂಟು ಮಾಡುತ್ತಿದೆ. ಸರಕಾರಿ ಅಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟು ಕೆಲಸದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಈ ರಸ್ತೆಗಳಲ್ಲಿ ಸ್ಥಳೀಯರಿಗೆ ಬಿಟ್ಟು ಬೇರೆ ಯಾರಿಗೂ ಅವಕಾಶ ನೀಡುತ್ತಿಲ್ಲ. ಸಂಪೂರ್ಣವಾಗಿ ಕೊಚ್ಚಿ ನೆಲಕಚ್ಚಿರುವ ರಸ್ತೆಯಲ್ಲಿ ಹೋಗುವುದು ಕೂಡ ಅಪಾಯಕಾರಿ! ಆದ್ದರಿಂದ ಪೊಲೀಸ್ ಇಲಾಖೆ ಈ ರಸ್ತೆಗೆ ಹೋಗುವ ದಾರಿ ಆರಂಭದಲ್ಲೆ ಬ್ಯಾರಿಕೇಡ್ ಹಾಕಿ ಪ್ರವೇಶ ನಿಷೇಧಿಸಿದೆ.

ರಾವೆದ್ ಸ್ಪಿನ್ ಗ್ರಾಡ್ ರೆಸಾರ್ಟ್ ಈಗ ನದಿಯಲ್ಲಿ! :

ಹೌದು! ಮದೇನಾಡು ಕರ್ತುಜೆ ಗ್ರಾಮದಲ್ಲಿ ನಾಸಿರ್ ಅಹ್ಮದ್ ಸಿ ಎಂಬುವವರ ರಾವೆದ್ ಸ್ಪಿನ್ ಗ್ರಾಡ್ ಎಂಬ ರೆಸಾರ್ಟೊಂದು ಇತ್ತು‌.ಆದರೆ ನೀವು ಈಗ ನೋಡಿದರೆ ಆ ಭಾಗದಲ್ಲಿ ನದಿಯೊಂದು ಹರಿಯುತ್ತಿದೆ!

ಪ್ರವಾಹದ ಭೀಕರತೆಗೆ ಗುಡ್ಡ ಕುಸಿದು ಟನ್ ಗಟ್ಟಲೇ ತೂಗುವ ಘನಗಾತ್ರದ ಮರಗಳು ರೆಸಾರ್ಟ್ ಒಳಗೆ ನುಗ್ಗಿದೆ. ಅದರೊಂದಿಗೆ ನದಿಗೆ ಈ ಮರಗಳು ಅಡ್ಡಲಾಗಿ ಮರಗಳು ಬಿದ್ದ ಕಾರಣ ಎಲ್ಲೊ ಹರಿಯುತ್ತಿದ್ದ ನದಿ ತನ್ನ ದಿಕ್ಕು ಬದಲಾಯಿಸಿ ರೆಸಾರ್ಟನ್ನು ನೀರಿನಲ್ಲಿ ಕೊಚ್ಚಿ ಕೊಂಡುಹೋಗಿದೆ. ಅದರೊಂದಿಗೆ ಅವರು ವಾಸಿಸುತ್ತಿದ್ದ ಮನೆ ಈಗ ನಾಪತ್ತೆಯೇ ಆಗಿದೆ! ಈ ರೆಸಾರ್ಟ್ ನಾಶದಿಂದ ನಾಸಿರ್ ರವರಿಗೆ ಆಗಿರುವ ನಷ್ಟ ಬರೊಬ್ಬರಿ ಎರಡು ಕೋಟಿ!

“ಹತ್ತು ವರ್ಷ ಗಲ್ಫ್ ರಾಷ್ಟ್ರಗಳಲ್ಲಿ ದುಡಿದು ಇಲ್ಲಿ ಬಂದು ಜೀವನ ಸಾಗಿಸಲು ರೇಸಾಟ್ ಮಾಡಿಕೊಂಡಿದ್ದೆ, ಇದೀಗ ಈ ರೆಸಾರ್ಟ್ ಮೇಲೆ ಇಪ್ಪತೈದು ಲಕ್ಷ ಸಾಲವಿದೆ. ಅದಲ್ಲದೆ ನನ್ನ ಮನೆ ಕೂಡ ಕೊಚ್ಚಿ ಹೋಗಿ. ನಾನು, ನನ್ನ ಕುಟುಂಬ ಬೀದಿಗೆ ಬಂದಿದೆಯೆಂದು” ನಾಸಿರ್ ಕಣ್ಣೀರು ಹರಿಸುತ್ತಿದ್ದಾರೆ.

ಅದೃಷ್ಟವಶಾತ್ ರೆಸಾರ್ಟ್ ನೀರಿನಲ್ಲಿ ಕೊಚ್ಚಿ ಹೋದ ರಾತ್ರಿ ನಾಸಿರ್ ಕುಟುಂಬ ಮುಂಜಾಗೃತ ಕ್ರಮವಾಗಿ ಕುಟುಂಬಸ್ಥರ ಮನೆಗೆ ಹೋಗಿದ್ದರು ಬಂದು ನೋಡುವಾಗ ಕಟ್ಟಿ ಕೊಂಡಿದ್ದ ಬದುಕು ನೀರಿನಲ್ಲಿ ಕೊಚ್ಚಿ ಹೋಗಿತ್ತು. ಈ ರೆಸಾರ್ಟ್ ಪ್ರದೇಶದ ಹಾನಿಯ ವೀಡಿಯೋವನ್ನು ಕೊಸ್ಟಲ್ ಮಿರರ್ ತಂಡ ಸೆರೆ ಹಿಡಿದು ಈ ಕೆಳಗೆ ಹಾಕಲಾಗಿದೆ.

ಉದಯಗಿರಿ ಪ್ರದೇಶದಲ್ಲಂತು ಇಡೀ ಊರಿಗೆ ಊರೇ ಗುಡ್ಡ ಕುಸಿದ ಮಣ್ಣಿನಡಿಯಲ್ಲಿ ಹೂತು ಹೋಗಿದೆ. ಪ್ರವಾಹದ ತೀವೃತೆಗೆ ಅರ್ಧ ತುಂಡಾದ ಮನೆಯೊಂದು ಗುಡ್ಡದ ಪಾರ್ಶ್ವ ಭಾಗದಲ್ಲಿ ನೇತಾಡುತ್ತಿರುವುದು. ಪ್ರವಾಹ ತೀವೃತೆ ಹಾಗೂ ಗುಡ್ಡ ಕುಸಿತದ ಭಯಾನಕತೆಯನ್ನು ಹೇಳುತ್ತಿದ್ದು. ಈ ದೃಶ್ಯವನ್ನು ಕಾಫಿ ತೋಟವೊಂದರ ಎತ್ತರ ಪ್ರದೇಶಕ್ಕೆ ಹೋಗಿ ನೋಡುವಾಗ ನಮ್ಮ ಕಾಲು ನಡುಗಿದ್ದು ಮಾತ್ರ ಸುಳ್ಳಲ್ಲ!

ಮಕ್ಕಂದೂರು ಗ್ರಾಮದ ಎಮ್ಮೆತಾಳು ಗ್ರಾಮಕ್ಕೆ ಭೇಟಿ ನೀಡುವುದೇ ಒಂದು ಸಾಹಸ. ಅತ್ಯಂತ ಕಿರಿದಾದ ರಸ್ತೆ. ಪ್ರವಾಹದ ಕಾರಣ ಕೆಲವು ಕಡೆ ಕೊಚ್ಚಿ ಹೋಗಿದ್ದರು ಮುಖ್ಯ ರಸ್ತೆಯಿಂದ ಸರಿ ಸುಮಾರು ಎರಡು ಕಿ.ಮಿ ದೂರದ ತಲುಪುವುದೇ ಒಂದು ಸಾಹಸ. ಅಂತು ಇಂತು ಕಷ್ಟಪಟ್ಟು ಸ್ಥಳೀಯರಾದ ‘ಜನಾರ್ಧನ ಕೊಡಗು’ ಅವರ ಸಹಾಯದೊಂದಿಗೆ ಅಲ್ಲಿ ತಲುಪಿದಾಗ ಒಂದು ಎಂಟರಿಂದ ಹತ್ತು ಮನೆಗಳಿದ್ದ ಆ ಪ್ರದೇಶದಲ್ಲಿ ಯಾವುದೇ ನಾಮಾವಶೇಷ ಕೂಡ ಇರಲಿಲ್ಲ. ಈ ಪ್ರದೇಶದಲ್ಲಿ ಉಮೇಶ್ ಮತ್ತು ಅವರ ತಾಯಿ ಮನೆಯಲ್ಲಿರುವಾಗಲೇ ಪ್ರವಾಹದ ನೀರು ಮತ್ತು ಗುಡ್ಡದ ಮಣ್ಣು ಮನೆಯೊಂದಿಗೆ ಅವರನ್ನು ಕೊಚ್ಚಿಕೊಂಡು ಹೋಗಿತ್ತು. ಅವರ ಶವ ಸಿಕ್ಕಾಗ ಪರಸ್ಪರ ಕೈ ಹಿಡಿದ ಸ್ಥಿತಿಯಲ್ಲಿತ್ತೆಂದು ಸ್ಥಳೀಯರು ಹೇಳುವಾಗ ಅವರ ಕಣ್ಣಲ್ಲಿ ನೀರು ತುಂಬಿತ್ತು!

ಉಮೇಶ್ ಆಟೋ ಚಾಲಕರಾಗಿದ್ದರು. ಅವರ ಆಟೋ ಈಗಲೂ ಕೂಡ ಆ ಪರಿಸರದಲ್ಲಿದ್ದು ಅದರ ಪೋಟೊ ನಾವು ಕೆಳಗೆ ನಿಮಗಾಗಿ ನೀಡಿದ್ದೇವೆ.

ಎಮ್ಮೆತಾಳು ಪ್ರದೇಶದಲ್ಲಿ ನೂರಾರು ಎಕರೆ ಕಾಫಿ ತೋಟಗಳು ಸರ್ವನಾಶವಾಗಿವೆ. ಇನ್ನು ಕೆಲವರ ಜಾಗದಲ್ಲಿ ದೊಡ್ಡ ಕಂದಕವಿದ್ದರೆ, ಇನ್ನು ಕೆಲವರ ಜಾಗದಲ್ಲಿ ಒಂದು ಇನ್ನೂರು ಮುನ್ನೂರು ಲಾರಿಗಳಷ್ಟು ಮಣ್ಣು ತುಂಬಿಕೊಂಡಿತ್ತು!

ನಂತರ ಮಡಿಕೇರಿ ಮತ್ತು ಸೋಮವಾರಪೇಟೆ ಸಂಪರ್ಕಿಸುವ ರಸ್ತೆಯ ಕಡೆಯ ಸಾಗಿದಾಗ ಮಡಿಕೇರಿ ತಾಲೂಕಿನಲ್ಲಿ ಸಂಭವಿಸಿದ ಪ್ರವಾಹ ಎಷ್ಟು ಭೀಕರತೆಯಿಂದ ಕೂಡಿತ್ತು ಎಂಬುದಕ್ಕೆ ಸಾಕ್ಷಿ ವಹಿಸುತ್ತಿದೆ. ಮಕ್ಕಂದೂರು ಗ್ರಾಮದಲ್ಲಿ ಈ ರಸ್ತೆ ಪ್ರವಾಹದ ನೀರಿನೊಂದಿಗೆ ಗುಡ್ಡ ಮಣ್ಣು ಸೇರಿ ರಭಸದಿಂದ ಯಾವುದೇ ನಾಮಾವಶೇಷ ಉಳಿಯದಂತೆ ಕೊಚ್ಚಿಕೊಂಡು ಹೋಗಿ ನೂರಾರು ಅಡಿ ಆಳ ಕಂದಕ ಸೃಷ್ಟಿಸಿದೆ. ಆಶ್ಚರ್ಯಕಾರಿ ಸಂಗತಿಯೆಂದರೆ ಮತ್ತೊಂದು ಕಡೆಯ ರಸ್ತೆಯಂತೂ ನಿಮಗೆ ಕಾಣ ಸಿಗುವುದೇ ಇಲ್ಲ! ನಾವು ಅಂದಾಜಿಸಿದ ಪ್ರಕಾರ ಐದು ಕಿ.ಮಿ ವರೆಗಿನ ರಸ್ತೆ ಜಾಗದಲ್ಲಿ ಈ ಕಂದಕ ಸೃಷ್ಟಿಯಾಗಿದೆ. ಈ ರಸ್ತೆ ದುರಸ್ತಿ ಈಗ ಸರಕಾರದ ಪಾಲಿಗೆ ಸವಾಲಾಗಿಯೇ ಉಳಿಯಲಿದೆ. ಈ ಪ್ರದೇಶದ ವೀಡಿಯೋ ಕೂಡ ಈ ಕೆಳಗೆ ನೀಡಲಾಗಿದ್ದು ನೀವು ವೀಕ್ಷಿಸಬಹುದಾಗಿದೆ.

ನೆಡುಗಣ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂರು ಗ್ರಾಮದಲ್ಲಿ ಅಂದಾಜು 205 ಮನೆಗಳು ಕೊಚ್ಚಿ ಹೋಗಿರುವ ಬಗ್ಗೆ ಅಲ್ಲಿ ಪಂಚಾಯತ್ ಸದಸ್ಯರಾದ ಜೋನ್ ಪಿಂಟೋ ಹೇಳುತ್ತಾರೆ. ಹೆಚ್ಚಟಿಗೇರಿ ಗ್ರಾಮವೊಂದರಲ್ಲೇ 190 ಮನೆಗಳು ಗುಡ್ಡ ಮಣ್ಣಿನಡಿಯಲ್ಲಿ ಹೂತು ಹೋಗಿದ್ದು ಸಂತ್ರಸ್ಥರು ಕಣ್ಣೆಂಗೇರಿ ಸರಕಾರಿ ಶಾಲೆಯಲ್ಲಿ ನಿರಾಶ್ರಿತರಾಗಿ ದಿನ ದೂಡುತ್ತಿದ್ದಾರೆ.

ಸದ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಂದು ಸಾವಿರದ ಐನೂರು ಎಕರೆ ಜಾಗ ಪ್ರವಾಹಕ್ಕೀಡಾಗಿದ್ದು, ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿದೆ. ಅದರೊಂದಿಗೆ ನೂರು ಎಕರೆಯಷ್ಟು ವಾಣಿಜ್ಯ ಜಾಗಗಳು ನಾಶ ಹೊಂದಿವೆ.

ಮಡಿಕೇರಿ, ಸೋಮವಾರ ಪೇಟೆಯ ಬಹಳಷ್ಟು ಸಂತ್ರಸ್ತರು ಕುಟುಂಬಸ್ಥರ ಮನೆಗಳಿಗೆ, ಬಾಡಿಗೆ ಮನೆಗಳಿಗೆ, ತಾತ್ಕಲಿಕ ಶೆಡ್ ಗಳಿಗೆ ತೆರಳುತ್ತಿದ್ದು ಕೊಡಗು ಜಿಲ್ಲೆಯಲ್ಲಿ ಆರಂಭದಲ್ಲಿದ್ದ 42 ನಿರಾಶ್ರಿತರ ಶಿಬಿರದಲ್ಲಿ ಇದೀಗ 8-10 ಶಿಬಿರಗಳು ಮಾತ್ರ ಬಾಕಿ ಉಳಿದಿವೆ.

ಸರಕಾರದ ವತಿಯಿಂದ ಈಗಾಗಲೇ ಖರ್ಚಿಗಾಗಿ ಪ್ರತಿ ನಿರಾಶ್ರಿತರಿಗೆ 3800 ರೂಪಾಯಿಗಳನ್ನು ನೀಡಲಾಗಿದೆ. ಸರಕಾರದಿಂದ ಸಂತ್ರಸ್ಥರಿಗೆ ದಾಖಲಾತಿ ಒದಗಿಸುವ ಬಗ್ಗೆ ಡ್ರೋನ್ ಸರ್ವೆ ಕೂಡ ನಡೆಸುವ ಬಗ್ಗೆ ಸರಕಾರ ಚಿಂತಿಸಿದೆ ಎಂದು ತಿಳಿದು ಬಂದಿದೆ.

“ತಾತ್ಕಾಲಿಕವಾಗಿ ಬಾಡಿಗೆ ಮನೆಗಳಲ್ಲಿ ಇರುವವರಿಗೆ ಬಾಡಿಗೆ ಮೊತ್ತವನ್ನು ನೀಡುವ ಬಗ್ಗೆಯೂ ಸರಕಾರ ಹೇಳಿದೆ. ಅದರೊಂದಿಗೆ ಸಂಪೂರ್ಣ ಜಾಗ ನಾಶ ಹೊಂದಿದವರಿಗೆ ಸರಕಾರ ಪರಿಶೀಲಿಸಿ ಜಾಗ ಮತ್ತು ಏಳು ಲಕ್ಷದ ಹತ್ತು ಸಾವಿರ ರೂಪಾಯಿಯ‌ ಮನೆ ನಿರ್ಮಾಣ ಮಾಡಿಕೊಡುವ ಬಗ್ಗೆ ಹೇಳಿದೆ. ಜಾಗವಿದ್ದವರಿಗೆ ಏಳು ಲಕ್ಷ ಹಣ ಕೊಟ್ಟು ಸ್ವತಃ ಮನೆ ನಿರ್ಮಿಸುವಂತೆ ಮಾಡುವ ಬಗ್ಗೆ ಭರವಸೆ ನೀಡಿದೆ. ಭಾಗಶಃ ಮನೆ ಹಾನಿಯಾದವರಿಗೆ 95 ಸಾವಿರ ಮೊತ್ತವನ್ನು ನೀಡಲಿದೆಯೆಂದು ಸರಕಾರ ಭರವಸೆ ನೀಡಿದೆಯೆಂದು” ಜೋನ್ ಪಿಂಟೊ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಜೋಡುಪಾಲು ಪ್ರದೇಶದಲ್ಲಂತೂ ಅಕ್ಷರಶಃ ನಿರಾವ ಮೌನ ಆವರಿಸಿದೆ. ಸರ್ವವನ್ನು ಕಳೆದುಕೊಂಡವರು ಕಣ್ಣೀರುಡುತ್ತಾ ಕುಳಿತುಕೊಂಡಿರುವ ದೃಶ್ಯ ಸಾಮಾನ್ಯವಾಗಿತ್ತು.

ಅಸ್ಸಾಮ್, ಪಶ್ಚಿಮ ಬಂಗಾಳ, ಬಿಹಾರ ಕಾರ್ಮಿಕರಸ್ಥಿತಿ ಶೋಚನೀಯ:
ಅಸ್ಸಾಮ್, ಪಶ್ಚಿಮ ಬಂಗಾಳ, ಬಿಹಾರ ಕಾರ್ಮಿಕರ ಕಾರ್ಮಿಕರ ಸ್ಥಿತಿ ಗತಿಯ ಬಗ್ಗೆ ಇನ್ನು ನಿಖರವಾದ ಮಾಹಿತಿ ಲಭ್ಯವಾಗುತ್ತಿಲ್ಲ. ಅವರು ಎಷ್ಟು ಮಂದಿ ಇದ್ದರೂ ಅವರಿಗೆ ಪ್ರವಾಹದಿಂದ ಏನಾಗಿದೆ ಎಂಬ ಬಗ್ಗೆ ಇನ್ನು ಕೂಡ ಸ್ಪಷ್ಟವಾದ ಮಾಹಿತಿ ಲಭ್ಯವಾಗುತ್ತಿಲ್ಲ.

ದೂರ ರಾಜ್ಯದಿಂದ ಎಸ್ಟೇಟ್ ಮಾಲಿಕರನ್ನು ಸಂಪರ್ಕಿಸಿ ಕೆಲಸಕ್ಕೆ ಬಡ ಕಾರ್ಮಿಕರ ಬಗ್ಗೆ ಸರಕಾರದ ಬಳಿಯೂ ಸೂಕ್ತ ಮಾಹಿತಿ ಇರುವುದು ಕಂಡು ಬರುತ್ತಿಲ್ಲ. ಅವರು ವಾಸಿಸುತ್ತಿದ್ದ ಮನೆಗಳು ಏನಾಗಿವೆ. ಕಾರ್ಮಿಕರ ಜೀವ ಹಾನಿ ಸಂಭವಿಸಿರುವ ಬಗ್ಗೆ ಸ್ಪಷ್ಟತೆ ಇಲ್ಲ. ನಾವು ಪ್ರವಾಹ ಪ್ರದೇಶಕ್ಕೆ ಪ್ರವಾಹಕ್ಕೊಳಗಾದ ಭೀಕರ ಪ್ರದೇಶದಲ್ಲಿ ಹೋಗಿದ್ದಾಗ ಪುಟ್ಟ ಪುಟ್ಟ ಮಕ್ಕಳೊಂದಿಗೆ ಪಶ್ಚಿಮ ಬಂಗಾಳ ಕುಟುಂಬವೊಂದು ವಾಸವಾಗಿತ್ತು. ಪ್ರವಾಹ ಸಂದರ್ಭದಲ್ಲಿ ಅವರು ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು ಎಂದು ತಿಳಿಸಿದ್ದಾರೆ.

HRS ನಿಂದ ರಿಲೀಫ್ ವರ್ಕ್: ಮಡಿಕೇರಿ ಪ್ರದೇಶದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ನ ರಿಲೀಫ್ ಘಟಕ ರಿಲೀಫ್ ಸೆಲ್ ತೆರೆದು ಕಾರ್ಯ ನಿರ್ವಹಿಸುತ್ತಿದ್ದು ಸಂತ್ರಸ್ತರಿಗೆ ಊಟದ ಸಾಮಾಗ್ರಿ ಸೇರಿದಂತೆ ದಿನ ಬಳಕೆಯ ವಸ್ತುಗಳನ್ನು ಪೂರೈಸುತ್ತಿದೆ. ವೈದ್ಯಕೀಯ ಸೌಲಭ್ಯ, ತಾತ್ಕಲಿಕ ಶೆಡ್, ಉದ್ಯೋಗವಕಾಶದ ಬಗ್ಗೆಯೂ ಸೂಕ್ತ ಕ್ರಮ ಕೈಗೊಂಡಿರುವ ಬಗ್ಗೆ ಎಚ್.ಆರ್.ಎಸ್ ರಾಜ್ಯ ಕಾರ್ಯದರ್ಶಿ ಮುಹ್ಮದ್ ಮರಕಡ ತಿಳಿಸಿದ್ದಾರೆ.

ಪೀಪಲ್ ಫಾರ್ ಕೊಡಗು ತಂಡದಿಂದ ಶ್ಲಾಘನೀಯ ಕಾರ್ಯ: ಪೀಪಲ್ ಫಾರ್ ಕೊಡಗು ತಂಡ ಪ್ರವಾಹ ಸಂಭವಿಸಿದ ದಿನದಿಂದ ಕೂಡ ಸಂತ್ರಸ್ಥರೊಂದಿಗಿದ್ದು ನಿರಾಶ್ರಿತ ಸಂತ್ರಸ್ಥರಿಗೆ ಸ್ಪಂದಿಸುತ್ತಿರುವುದು ಕಂಡು ಬಂತು!

52 ಜೀವಗಳನ್ನು ರಕ್ಷಿಸಿದ ಆರ್.ಎಸ್.ಎಸ್ ಕಾರ್ಯಕರ್ತರು: ಎಮ್ಮೆತಾಳು ಪ್ರದೇಶದಲ್ಲಿ ಸಿಲುಕಿ ಹಾಕಿಕೊಂಡಿದ್ದ ಸುಮಾರು ಐವತ್ತೆರಡು ಜೀವಗಳನ್ನು ಆರ್.ಎಸ್.ಎಸ್ ಕಾರ್ಯಕರ್ತರು ರಕ್ಷಣೆ ಮಾಡಿರುವ ಬಗ್ಗೆ ಆರ್.ಎಸ್.ಎಸ್ ಕಾರ್ಯಕರ್ತ ನಾಗೇಶ್ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅವರು ಮಾತನಾಡುವ ವೀಡಿಯೋ ವನ್ನು ಈ ಕೆಳಗೆ ನೀಡಲಾಗಿದೆ.

ಈತನ್ಮಧ್ಯೆ ಕೆಲವು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿ, ನೆರೆಪೀಡಿತರ ಸಂಕಷ್ಟಕ್ಕೆ ಸ್ಪಂದಿಸಿ ಬೇರೆ ಜಿಲ್ಲೆಗಳಿಂದ ಬಂದಿದ್ದ ಸಾಮಾಗ್ರಿಗಳ ದುರ್ಬಳಕೆಯಾಗುತ್ತಿದ್ದು ನಿಜವಾಗಿ ಪ್ರವಾಹದಿಂದ ಸಂತ್ರಸ್ಥರಾದವರಿಗೆ ದಕ್ಕುತ್ತಿಲ್ಲ. ಕೆಲವು ಜನರು ಸಂತ್ರಸ್ಥರೆಂದು ಸಾಮಾಗ್ರಿಗಳನ್ನು ದುರ್ಬಳಕೆ ಮಾಡುತ್ತಿರುವ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.

ಪ್ರಾಣಿಗಳ ಪಾಡು ಚಿಂತಾಜನಕ:
ಪ್ರವಾಹದಲ್ಲಿ ಮನುಷ್ಯನೆಷ್ಟು ಸಂಕಷ್ಟ ಅನುಭವಿಸಿದ್ದಾನೋ ಅಷ್ಟೇ ಸಂಕಷ್ಟವನ್ನು ಪ್ರಾಣಿಗಳು ಕೂಡ ಅನುಭವಿಸಿದೆ. ಕುರಿ, ದನ , ನಾಯಿಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದರೆ ಇನ್ನೊಂದು ಕಡೆ ಹಾವುಗಳು, ಮಂಗಗಳು, ಇತರೆ ಕಾಡು ಪ್ರಾಣಿಗಳು ಕಾಡು ನಾಶದಿಂದಾಗಿ ಸಂಕಷ್ಟಕ್ಕೀಡಾಗಿದೆ.

ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಪ್ರದೇಶದಲ್ಲಿ ದನ,ಕುರಿ,ಆಡು,ಕೋಳಿಗಳು ನಾಯಿಗಳು ಭಯ ಭೀತವಾಗಿ ಕುಳಿತುಕೊಂಡಿದ್ದನ್ನು ಗಮನಿಸಿದೆವು.

ಹರ್ಷಿತಾ ಜನಾರ್ದನ ಕೊಡಗು ಚಿತ್ರಗಳು:

ಕೊಸ್ಟಲ್ ಮಿರರ್ ತಂಡದ ಎಕ್ಸ್ ಕ್ಲೂಸಿವ್ ಕ್ಲಿಕ್ಸ್: 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.