ಉಡುಪಿ: ಮಾನ್ಸೂನ್‌ನ
ನಿರೀಕ್ಷೆಯಲ್ಲಿರುವ ಜನರಿಗೆ ಜತೆ ಜತೆಗೆ ಚಂಡಮಾರುತದ
ಭೀತಿಯೂ ಕಾಡಲಿದೆ.

ಅರಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಇನ್ನಷ್ಟು ತೀವ್ರಗೊಂಡು ಚಂಡಮಾರುತವಾಗಲಿದೆ.

ಇದರ ಪರಿಣಾಮ ಲಕ್ಷದ್ವೀಪ, ಕೇರಳ, ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಭಾರೀ ಗಾಳಿ-ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಪ್ರಸ್ತುತ ನಿರ್ಮಾಣವಾಗಿರುವ ವಾಯುಭಾರ ಕುಸಿತ 36 ಗಂಟೆಗಳಲ್ಲಿ ಚಂಡಮಾರುತದ ಸ್ವರೂಪ ಪಡೆಯಲಿದ್ದು, ವಾಯವ್ಯ ದಿಕ್ಕಿನತ್ತ ಚಲಿಸಲಿದೆ.

ರಭಸದ ಗಾಳಿ
ಸಮುದ್ರದಿಂದ ಕಿನಾರೆಯತ್ತ ಈಗಾಗಲೇ ರಭಸವಾಗಿ ಗಾಳಿ ಬೀಸಲಾರಂಭಿಸಿದೆ. ಇದು ಮುಂದಿನ 2-3 ದಿನ ಇನ್ನಷ್ಟು ತೀವ್ರಗೊಳ್ಳಲಿದೆ. ರವಿವಾರ ಕೇರಳ ಮತ್ತು ಕರ್ನಾಟಕ ಕರಾವಳಿಯಲ್ಲಿ ಗಂಟೆಗೆ 35ರಿಂದ 45 ಕಿ.ಮೀ. ವೇಗದ ವರೆಗೆ ಗಾಳಿ ಬೀಸುತ್ತಿತ್ತು. ಸೋಮವಾರ ಗಂಟೆಗೆ 40ರಿಂದ 55 ಕಿ.ಮೀ. ವರೆಗೂ ಗಾಳಿ ಬೀಸುವ ಸಂಭವ ಇದೆ. ಮಂಗಳವಾರ ಇದರ ವೇಗ ಮತ್ತಷ್ಟು ಹೆಚ್ಚಿ 55ರಿಂದ 65 ಕಿ.ಮೀ. ಇರುತ್ತದೆ. ಕೆಲವೊಮ್ಮೆ 75 ಕಿ.ಮೀ. ವರೆಗೂ ತಲುಪುವ ಸಂಭವ ಇದೆ.

ಜೂ. 12ರ ವೇಳೆಗೆ ಕರ್ನಾಟಕ ಕರಾವಳಿಯನ್ನು ದಾಟಿ ಮಹಾರಾಷ್ಟ್ರ ಮತ್ತು ಗುಜರಾತ್‌ ಕರಾವಳಿಯತ್ತ ಚಂಡಮಾರುತ ಚಲಿಸಲಿದೆ. ಈ ಸಂದರ್ಭ ಗಾಳಿ 70ರಿಂದ 80 ಕಿ.ಮೀ. ವರೆಗೆ ಹಾಗೂ 13ರಂದು 90ರಿಂದ 100 ಕಿ.ಮೀ. ವರೆಗೂ ತಲುಪಲಿದೆ. ಅನಂತರ ಚಂಡಮಾರುತದ ವೇಗ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಆರೆಂಜ್‌ ಎಚ್ಚರಿಕೆ
ಭಾರತೀಯ ಹವಾಮಾನ ಇಲಾಖೆಯು ಚಂಡಮಾರುತದ ಕುರಿತಂತೆ ಈಗಾಗಲೇ ಅರಬಿ ಸಮುದ್ರಕ್ಕೆ ಹೊಂದಿಕೊಂಡಂತಿರುವ ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ. ಕೇರಳ ಮತ್ತು ಕರ್ನಾಟಕ ಕರಾವಳಿಯಲ್ಲಿ ಭಾರೀ ಗಾಳಿ-ಮಳೆಯಾಗಲಿದೆ ಎಂದು ಆರೆಂಜ್‌ ಬಣ್ಣದ ಎಚ್ಚರಿಕೆ ನೀಡಿದೆ. ಜೂ. 11, 13ಕ್ಕೆ ಕೇರಳ ಮತ್ತು ಕರ್ನಾಟಕ ಕರಾವಳಿಗೆ ಹಳದಿ ಬಣ್ಣದ ಎಚ್ಚರಿಕೆ ನೀಡಲಾಗಿದೆ. ಕರ್ನಾಟಕ ದಕ್ಷಿಣ ಒಳನಾಡಿಗೆ ಸೋಮವಾರಕ್ಕೆ ಹಳದಿ ಎಚ್ಚರಿಕೆ ನೀಡಲಾಗಿದೆ. ಚಂಡಮಾರುತದ ತೀವ್ರತೆಗೆ ತಕ್ಕಂತೆ ಎಚ್ಚರಿಕೆಯನ್ನು ಪರಿಷ್ಕರಿಸಲಾಗುತ್ತದೆ. ಎಲ್ಲ ಬಂದರುಗಳಲ್ಲಿ ಮುನ್ನೆಚ್ಚರಿಕೆಯ ಸಂಕೇತದ ಬಾವುಟ ಹಾರಿಸುವಂತೆ ಸೂಚಿಸಲಾಗಿದೆ.

ಸಾಗರತೀರದಲ್ಲಿ ಕಟ್ಟೆಚ್ಚರ
ಸಮುದ್ರ ಪ್ರಕ್ಷುಬ್ಧವಾಗಿರು ವುದು ಹಾಗೂ ಅಲೆಗಳ ಅಬ್ಬರ ತೀವ್ರ ವಾಗಿರುವ ಹಿನ್ನಲೆಯಲ್ಲಿ ಸಾಗರ ತೀರದ ಕಟ್ಟಚ್ಚರ ವಹಿಸಲಾಗಿದೆ. ಮಂಗಳೂರಿನಲ್ಲಿ ಉಳ್ಳಾಲ, ಸೋಮೇಶ್ವರ, ಪಣಂಬೂರು ಸೇರಿದಂತೆ ಬೀಚ್‌ಗಳಲ್ಲಿ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.
ಬಲವಾದ ಗಾಳಿ ದಿನವಿಡೀ ಮುಂದುವರಿದಿತ್ತು. ವಿವಿಧೆಡೆ ಮರ ಗಳು ಬಿದ್ದು ಹಾನಿ ಸಂಭವಿಸಿದೆ.

ಟೋಲ್‌ಫ್ರೀ ಸಂಖ್ಯೆ

ಅರಬಿ ಸಮುದ್ರದಲ್ಲಿ ವಾಯು ಭಾರ ಕುಸಿತ ಹಾಗೂ ಮುಂಗಾರು ಪ್ರವೇಶದ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ತುರ್ತು ಸೇವೆಗೆ ಟೋಲ್‌ಫ್ರೀ ಸಂಖ್ಯೆ 1077 ಸಂಪರ್ಕಿಸಬಹುದಾಗಿದೆ. ಇದು ದಿನದ 24 ತಾಸುಗಳ ಕಾಲವೂ ಕಾರ್ಯಾಚರಿಸಲಿದೆ. ಇದಲ್ಲದೆ ವಾಟ್ಸ್‌ಆ್ಯಪ್‌ ಸಂಖ್ಯೆ 9483908000 ಸಂಪರ್ಕಿಸ ಬಹುದಾಗಿದೆ ಎಂದು ಜಿಲ್ಲಾಧಿಕಾರಿ ಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಉಡುಪಿಯ ಕಂಟ್ರೋಲ್‌ ರೂಂ ನಂಬರ್‌: 0820 – 2574802 / 2574360

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.