ಪಾಕಿಸ್ತಾನ ಹೇಳುವಂತೆ ಮಾರ್ಚ್ 3 2016ರಲ್ಲಿ ಬಲೂಚಿಸ್ತಾನದಲ್ಲಿ ನಡೆದ ಕೌಂಟರ್ ಟೆರರಿಸಂ ದಾಳಿಯಲ್ಲಿ ಕುಲಭೂಷಣ ಜಾಧವರನ್ನು ಭಯೋತ್ಪಾದನೆ ಮತ್ತು ಗೂಢಾಚಾರಿಕೆಯ ಆರೋಪದಲ್ಲಿ ಬಂಧಿಸಿದೆ. ಹಾಗೂ ಜಾಧವ ಭಾರತದ ಗೂಢಾಚಾರ ಎಂದು ಹೇಳಿದೆ. ಏಪ್ರಿಲ್ 10 2017 ರಲ್ಲಿ ಪಾಕಿಸ್ತಾನ ಮಿಲಿಟರಿ ಕೋರ್ಟ್ ಜಾಧವರಿಗೆ ಮರಣದಂಡನೆ ಶಿಕ್ಷೆ ವಿಧಿಸಿತು.

ಆ ನಂತರ ಆಲ್ ಇಂಡಿಯಾ ರೇಡಿಯೋ ನೇರವಾಗಿ ಪಾಕಿಸ್ತಾನದಲ್ಲಿ ಜಾಧವರ ಮರಣದಂಡನೆ ವಿರುದ್ಧ ಅಭಿಯಾನವನ್ನು ಆರಂಭಿಸಿತ್ತು. ಭಾರತದಾದ್ಯಂತ ಜಾಧವರ ಮರಣದಂಡನೆ ತೀರ್ಪಿನ ವಿರುದ್ಧ ಅಭಿಯಾನ ನಡೆದಿದ್ದವು. ಇದರ ಪರಿಣಾಮ ಭಾರತ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಇದಕ್ಕೆ ಸಂಬಂಧಿಸಿದ ದೂರು ದಾಖಲಿಸಿತು.

2 ವರ್ಷದಿಂದ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿರುವ ಈ ಪ್ರಕರಣವನ್ನು ಪಾಕಿಸ್ತಾನದ ಪರವಾಗಿ ಖಾವರ್ ಖುರೇಷಿ, ಭಾರತದ ಪರ ಜಾಧವರ ಪರ ಹರೀಶ್ ಸಾಳ್ವೆ ಪ್ರಕರಣ ನಡೆಸುತ್ತಿದ್ದಾರೆ.

ಫೆಬ್ರವರಿ 18 ರಂದು ಪಾಕಿಸ್ತಾನ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಧಾನಿ ಮೋದಿಯವರ ಭಾಷಣ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸಂದರ್ಶನ ಮತ್ತು ನಮ್ಮ ಮಾಧ್ಯಮಗಳ ವರದಿಗಳನ್ನು ಅಂತರಾಷ್ಟ್ರೀಯ ನ್ಯಾಯಾಲಯದ ಮುಂದಿಟ್ಟಿದೆ. ನರೇಂದ್ರ ಮೋದಿ ಅವರು ಪಾಕಿಸ್ತಾನದ ವಿರುದ್ಧ ‘’ನೀರಿನ ಅಸ್ತ್ರ ಬಳಸುತ್ತಿದ್ದೇನೆ (ನೌಕಾಪಡೆ) ಎಂದು ಹೇಳಿದ ಭಾಷಣದ ರೆಕಾರ್ಡ್ ಕೂಡ ಖುರೇಷಿ ನೀಡಿದ್ದಾರೆ.

ಹಾಗೆಯೇ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ದೋವಲ್ ಈ ಹಿಂದೆ ಒಂದು ಸಂದರ್ಶನದಲ್ಲಿ ಬಲೂಚಿಸ್ತಾನದಲ್ಲಿ ಭಾರತ ಭಯೋತ್ಪಾದನೆ ಪ್ರೋತ್ಸಾಹಿಸುತ್ತಿದೆ ಎಂದು ಹೇಳಿದ್ದಾರೆ. “Doval confessed to Indian sponsored terrorism in Balochistan during his interview “. “According to Doval, Jadhav played a key role in terrorism in Balochistan. ಎಂದು ನ್ಯಾಯಾಲಯದ ಮುಂದೆ ಖುರೇಷಿ ಹೇಳಿದ್ದಾರೆ.

ಅಜಿತ್ ದೋವಲ್ ರ ಬಗ್ಗೆ ನೋಡುವುದಾದರೆ, 1999ರಲ್ಲಿ ಬಿಜೆಪಿ ಸರ್ಕಾರದಲ್ಲಿ ಗುಪ್ತಚರ ಇಲಾಖೆ ವಿಶೇಷ ನಿರ್ದೇಶಕರಾಗಿದ್ದಾಗ, ಮಸೂದ್ ಅಜೂರ್ ಬಿಡುಗಡೆಗೆ ಸಂಧಾನ ಮಾತುಕತೆ ನಡೆಸಿದ್ದಾರೆ. ನಂತರ ಈಗ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದು ಫೆಬ್ರವರಿ 14 ರಂದು ಕಾಶ್ಮೀರದ ಪುಲ್ವಾಮಾದಲ್ಲಿ ದಾಳಿಗೂ ಮುಂಚೆ ಪೋಲಿಸ್ ಇಲಾಖೆ ಗುಪ್ತಚರ ಇಲಾಖೆ ನೀಡಿದ ಮುನ್ನೆಚ್ಚರಿಗೆ ಮಾಹಿತಿಯನ್ನು ನಿರ್ಲಕ್ಷಿಸಿ 44 ಯೋಧರು ಹುತಾತ್ಮರಾಗಲು ಕಾರಣವಾಗಿದ್ದಾರೆ. ಅಷ್ಟೆ ಅಲ್ಲದೆ ನಂತರ ನಡೆದ ಸರ್ಜಿಕಲ್ ಸ್ಟ್ರೈಕ್ ನ ಯೋಜನೆ ಮತ್ತು ನಿರ್ವಹಣೆ ಇವರದೇ ಎಂದು ಭಾರತ ಸರ್ಕಾರ ಹೇಳಿದೆ. ಮೀಡಿಯಾಗಳು “ಸೋರ್ಸ್” ಮೂಲದಿಂದ 250-300 ಉಗ್ರರು ಸತ್ತಿದ್ದಾರೆ ಎಂದವು ಈ ಸೋರ್ಸ್ ಯಾವುದು ಎಂದು ಇವತ್ತಿಗೂ ತಿಳಿದಿಲ್ಲ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಂ ಹೇಳುವಂತೆ ಎಷ್ಟು ಜನ ಸತ್ತಿದ್ದಾರೆ ಎಂಬ ಮಾಹಿತಿಯಿಲ್ಲ. ದೋವಲ್ ಅವರ ಹೊರತಾಗಿ ಈ 200-300 ರ ಮಾಹಿತಿಯನ್ನು ಹಬ್ಬಿಸಿದ್ದು ಯಾರು ಹಾಗಾದರೆ? ಜಾಧವರ ಬಗ್ಗೆ ಮಾತನಾಡುವಾಗ ಇವರ ಬುದ್ಧಿ ಎಲ್ಲಿ ಹೋಗಿತ್ತು? ಎಂಬ ಪ್ರಶ್ನೆ ಮೂಡುತ್ತದೆ.

ಈ ಪ್ರಕರಣದಲ್ಲಿ ಭಾರತದ ಪರ ವಕೀಲರಾದ ಹರೀಶ್ ಸಾಳ್ವೆ ಅವರ ಪ್ರಯತ್ನ, ಮನವಿ, ವರದಿ ಮಂಡನೆ ರೀತಿ ಅಸಾಮಾನ್ಯ. ಆದರೆ ದೇಶದ ಪ್ರಮುಖರು ಮಾಡಿದ ತಪ್ಪನ್ನು ನಾವು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಭಾರತದ ಯಾವುದೇ ಮಾಧ್ಯಮ ಪ್ರಧಾನಿ ಮತ್ತು ದೋವಲ್ ತಪ್ಪಿನ ಕುರಿತಾಗಿ ಧ್ವನಿಯೆತ್ತಿಲ್ಲ. ಕನ್ನಡ ಮಾಧ್ಯಮಗಳದ್ದು ಈ ಕುರಿತು ಮಾತೇ ಇಲ್ಲ.

ಇನ್ನು ಜಾಧವರ ನಕಲಿ ಪಾಸ್ ಪೋರ್ಟ್, ಹೆಸರು ಬದಲಾವಣೆ ಇನ್ನಿತರ ಆರೋಪಕ್ಕೆ ಬಲವಾದ ಸಾಕ್ಷಿಯನ್ನು ಪಾಕಿಸ್ತಾನ ನೀಡಿದೆ. ಆದಾಗ್ಯೂ ಮಾಧ್ಯಮಗಳು ಜಾಧವರ ಮೇಲಿನ ಆರೋಪಕ್ಕೆ ಸಂಬಂಧಿತ ಬಲವಾದ ದಾಖಲೆ ಪಾಕಿಸ್ತಾನದ ಬಳಿ ಇಲ್ಲ, ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ ದಾಖಲೆ ನೀಡಿಲ್ಲ ಎಂದು ಹೇಳಿವೆ. 18 ರಂದು ಪ್ರಕರಣ ಮುಂದೂಡಿ ಎಂದು ಪಾಕಿಸ್ತಾನ ಕೇಳಿಕೊಂಡಿದ್ದನ್ನು ಅಂತರಾಷ್ಟ್ರೀಯ ನ್ಯಾಯಾಲಯ ನಿರಾಕರಿಸಿತ್ತು. ಅಂದು ಪಾಕಿಸ್ತಾನಕ್ಕೆ ಮುಖಭಂಗ ಎಂಬಂತೆ ಭಾರತದ ಮಾಧ್ಯಮ ಬಿಂಬಿಸಿದ್ದವು. ಹರೀಶ್ ಸಾಳ್ವೆ ತಮ್ಮ ಎಲ್ಲ ಪ್ರಯತ್ನದಿಂದ ಉತ್ತಮ ವರದಿಯನ್ನು ಸಲ್ಲಿಸಿದ್ದು ಸತ್ಯ ಆದರೆ ಪಾಕಿಸ್ತಾನ ಯಾವುದೇ ಬಲವಾದ ಸಾಕ್ಷಿ ನೀಡಿಲ್ಲ ಎಂಬ ಮಾತು ಸುಳ್ಳು.

ಖಾವರ್ ಖುರೇಷಿ ಭಾರತವನ್ನುಕುರಿತು “India is living in a wonderland. It is sitting on a weak wall of lies just like Humpty Dumpty and on one day will have a great fall” ಎಂದರು. ತುಂಬಾ ಸಾರಿ ಅವಮಾನಿಸಿದರು.

ದೋವಲ್, ಮೋದಿ ಮತ್ತು ಭಾರತದ ಎಲ್ಲಾ ಮಾಧ್ಯಮದವರನ್ನು ಖಾವರ್ ಖುರೇಷಿ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ವರದಿ ಮಂಡಿಸುವಾಗ ಅದನ್ನು ನೋಡಲು ಕೂರಿಸಬೇಕಿತ್ತು. ಖುರೇಷಿ ಭಾರತಕ್ಕೆ ಮಾಡಿದ ಅವಮಾನವನ್ನು ಇವರಿಗೆ ಕೇಳಿಸಬೇಕಿತ್ತು. ಭಾರತದ ಇಂಗ್ಲಿಷ್ ನಿಂದ ಹಿಡಿದು ಮೂರ್ಖರು, ಹೇಳಿಕೆ ಬದಲಿಸುವವರು, ನಾಚಿಕೆ ಇಲ್ಲದವರು ಎಂದು ಪದೇ ಪದೇ ಹೇಳಿದ್ದನ್ನು ಇವರಿಗೆ ಕೇಳಿಸಬೇಕಿತ್ತು. ಸಾಳ್ವೆ ಅವರು ಖಾವರ್ ಖುರೇಷಿ ಮಾತಿನಿಂದ ಎಷ್ಟು ಡಿಸ್ಬರ್ಬ್ ಆಗಿದ್ದರು ಎಂಬುದನ್ನು ತೋರಿಸಬೇಕಿತ್ತು. ಆಗಲಾದರೂ ಅವರಿಗಿರುವ ಸ್ಥಾನದ ಬೆಲೆಯಾದರೂ ತಿಳಿದಿರುತ್ತಿತ್ತೋ ಏನೋ. ತಾವು ಭಾರತವನ್ನು ಪ್ರತಿನಿಧಿಸುತ್ತೇವೆ ಎಂಬುದಾದರೂ ಆಗ ಅರಿವಾಗುತ್ತಿತ್ತೇನೊ.

ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿನ ಕರಣ್ ಥಾಪರ್ ಬರಹ ಮತ್ತು ಪ್ರವೀಣ್ ಸ್ವಾಮಿ ಫ್ರಂಟ್ ಲೈನ್ ಅಂಕಣವನ್ನು ಖುರೇಷಿ ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ ನೀಡಿದ್ದಾರೆ. ಜಾಧವ್ ಕುರಿತು ಭಾರತೀಯರಿಗಿರುವ ಪ್ರಶ್ನೆಗಳನ್ನು ಈ ಬರಹಗಳಲ್ಲಿ ವೈಯಕ್ತಿಕ ಪ್ರಶ್ನೆ ಮೂಲಕ ಲೇಖಕರು ಬರೆದಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಎರಡೂ ತಮ್ಮ ನಿಲುವುಗಳನ್ನು ಮಂಡಿಸಿವೆ. ಹೇಗ್ ನ ಅಂತರಾಷ್ಟ್ರೀಯ ನ್ಯಾಯಾಲಯ ತೀರ್ಪು ಕಾಯ್ದಿರಿಸಿದ್ದು ಬೇಸಿಗೆ ಹೊತ್ತಿಗೆ ನ್ಯಾಯಾಲಯ ತೀರ್ಪು ನೀಡುವ ನಿರೀಕ್ಷೆ ಇದೆ.
ರಾಜಕಾರಣಿಗಳು, ಅಧಿಕಾರಿಗಳು ಮತ್ತು ಮಾಧ್ಯಮಗಳ ತಪ್ಪುಗಳು ಜಾಧವರ ಪ್ರಕರಣದಲ್ಲಿ ಎದ್ದು ಕಾಣುತ್ತವೆ. ಜಾಧವರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು ಇವರೆ. ತೀರ್ಪು ಭಾರತದ ಪರ ಬರಬೇಕು. ಜಾಧವ್ ಕುಟುಂಬ ಸೇರಬೇಕು ಎಂಬ ಭಾರತೀಯರ ಆಶಯ ಈಡೇರಲಿ.

ಲೇಖಕಿ: ಚೈತ್ರಿಕಾ ಹೆರ್ಗಿ (ಪತ್ರಕರ್ತೆ)

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.