ಆಸೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಸರಣಿ ಜಯ

0
87

ಬೆಂಗಳೂರು: ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ, ಸ್ಟೀವ್​ ಸ್ಮಿತ್​(131) ಅವರ ಶತಕದಾಟದ ನೆರವಿನಿಂದ ಆತಿಥೇಯ ಭಾರತಕ್ಕೆ 287 ರನ್​ ಸವಾಲಿನ ಗುರಿ ನೀಡಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಆಸೀಸ್​ ಪಡೆಗೆ ಡೇವಿಡ್​ ವಾರ್ನರ್​(3) ಆರಂಭಿಕ ಆಘಾತ ನೀಡಿದರು. ಇದಾದ ಸ್ವಲ್ಪ ಹೊತ್ತಿನಲ್ಲೇ ನಾಯಕ ಆ್ಯರೂನ್​ ಫಿಂಚ್​(19) ಕೂಡ ರನೌಟ್​ ಆಗಿ ನಿರ್ಗಮಿಸಿದರು. 46 ರನ್​ಗೆ ಪ್ರಮುಖ 2 ವಿಕೆಟ್​ ಕಳೆದುಕೊಂಡು ಆಸೀಸ್​ ಪಡೆ ಸಂಕಷ್ಟಕ್ಕೆ ಸಿಲುಕಿತು.

ಮೂರನೇ ಕ್ರಮಾಂಕದಲ್ಲಿ ಬಂದ ಸ್ಮಿತ್ ತಂಡಕ್ಕೆ ಆಸರೆಯಾಗಿ ನಿಂತರು. ನಿಧಾನಗತಿಯ ಬ್ಯಾಟ್​ ಬೀಸುತ್ತಾ ತಂಡದ ಮೊತ್ತಕ್ಕೆ ಚೇತರಿಕೆ ನೀಡಿದರು. ಈ ವೇಳೆ ಸ್ಮಿತ್​ಗೆ ಸಾಥ್​ ನೀಡಿದ ಮಾರ್ನಸ್​ ಲಬಸ್ಛಗ್ನೆ(54) ರನ್​ಗಳ ಅರ್ಧ ಶತಕ ಗಳಿಸಿ ತಂಡದ ಮೊತ್ತ 173 ರನ್​ ಆಗಿದ್ದಾಗ ವಿಕೆಟ್​ ಒಪ್ಪಿಸಿದರು. ಬಳಿಕ ಬಂದ ಮಿಚೆಲ್​ ಸ್ಟಾರ್ಕ್​ ಯಾವುದೇ ರನ್​ ಖಾತೆ ತೆರೆಯದೇ ಬಂದಷ್ಟೇ ವೇಗವಾಗಿ ವಾಪಸ್ಸಾದರು.

ಅಲೆಕ್ಸ್​ ಕ್ಯಾರೆ 35 ರನ್​ಗಳ ಉಪಯುಕ್ತ ಕಾಣಿಕೆ ನೀಡಿದರೆ, ಆಸ್ಥಾನ್​ ಟರ್ನರ್​​(4) ಬಂದ ದಾರಿ ಹಿಡಿದರು. ಇತ್ತ ಏಕಾಂಗಿಯಾಗಿ ಹೋರಾಡುತ್ತಿದ್ದ ಸ್ಮಿತ್​ ತಂಡದ ಮೊತ್ತವನ್ನು 270ರ ಗಡಿ ದಾಟಿಸಿ, 131 ರನ್​ಗಳ ಶತಕ ಸಂಭ್ರಮಿಸಿ ತಂಡಕ್ಕೆ ಬೆಂಗಾವಲಾಗಿ ನಿಂತು, ನಿರ್ಗಮಿಸಿದರು. ಇದರ ಬೆನ್ನಲ್ಲೇ ಪ್ಯಾಟ್​ ಕ್ಯುಮಿನ್ಸ್​(0), ಆ್ಯಡಮ್​ ಝಂಪಾ(1) ವಿಕೆಟ್​ ಒಪ್ಪಿಸಿ ಹೊರ ನಡೆದರು. ಕೊನೆಯಲ್ಲಿ ಆಸ್ಥಾನ್​ ಅಗರ್​(11*) ಮತ್ತು ಜೋಶ್​ ಹಜಾಲ್​ವುಡ್​(1*) ಅಜೇಯರಾಗಿ ಉಳಿದರು.

ಅಂತಿಮವಾಗಿ ಆಸೀಸ್​ ಪಡೆ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡು 286 ರನ್​ ಕಲೆಹಾಕಿತು. ಟೀಮ್​ ಇಂಡಿಯಾ ಪರ ಮೊಹಮ್ಮದ್​ ಶಮಿ ಪ್ರಮುಖ 4 ವಿಕೆಟ್​ ಕಬಳಿಸಿ ಆಸೀಸ್​ ಬಳಗವನ್ನು ಕಾಡಿದರು. ಉಳಿದಂತೆ ರವೀಂದ್ರ ಜಡೇಜಾ 2 ವಿಕೆಟ್​ ಉರುಳಿಸಿದರೆ, ನವದೀಪ್​ ಸೈನಿ ಮತ್ತು ಕುಲದೀಪ್​ ಯಾದವ್​ ತಲಾ ಒಂದು ವಿಕೆಟ್​ಗೆ ತೃಪ್ತಿಪಟ್ಟರು.

ರೋಹಿತ್​ ಶರ್ಮ(119)ರ ಭದ್ರಬುನಾದಿ ಹಾಗೂ ನಾಯಕ ವಿರಾಟ್​ ಕೊಹ್ಲಿ(89) ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಟೀಮ್​ ಇಂಡಿಯಾ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಹಾಗೂ ಮೂರನೇ ನಿರ್ಣಾಯಕ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸುವುದರೊಂದಿಗೆ 2-1 ಅಂತರಿಂದ ಸರಣಿ ವಶಪಡಿಸಿಕೊಂಡಿತು.

ಆಸೀಸ್​ ಪಡೆ ನೀಡಿದ್ದ 287 ರನ್​ ಗುರಿ ಬೆನ್ನತ್ತಿದ ಭಾರತಕ್ಕೆ ರೋಹಿತ್​ ಶರ್ಮಾ- ಕೆ.ಎಲ್​.ರಾಹುಲ್​(19) ಮೊದಲ ವಿಕೆಟ್​ಗೆ 69 ರನ್​ ಜತೆಯಾಟವಾಡಿ ಉತ್ತಮ ಆರಂಭ ದೊರಕಿಸಿಕೊಟ್ಟರು. ರಾಹುಲ್​ ಬಳಿಕ ಕ್ರೀಸ್​ಗೆ ಇಳಿದ ನಾಯಕ ವಿರಾಟ್​ ಕೊಹ್ಲಿ, ರೋಹಿತ್​ ಜತೆಗೂಡಿ ಆಸೀಸ್​ ಬೌಲರ್​ಗಳನ್ನು ಮನಸೋ ಇಚ್ಚೆ ದಂಡಿಸಿದರು. ಆರಂಭದಿಂದಲೂ ಉತ್ತಮ ಲಯದಲ್ಲೇ ಆಡಿಕೊಂಡು ಬಂದ ರೋಹಿತ್​ 119 ರನ್​ ಗಳಿಸಿ 29ನೇ ಏಕದಿನ ಶತಕ ಸಂಭ್ರಮಿಸಿ ಕ್ಯಾಚಿತ್ತು ನಿರ್ಗಮಿಸಿದರು.

ಆಸಿಸ್​ ಬೌಲರ್​ಗಳನ್ನು ಕೊನೆವರೆಗೂ ಕಾಡಿದ ನಾಯಕ ಕೊಹ್ಲಿ (89) ರನ್​ ಗಳಿಸಿ ಟೀಮ್​ ಇಂಡಿಯಾದ ಗೆಲುವಿನ ಹೊಸ್ತಿಲಲ್ಲಿ ಔಟಾದರು. ಶ್ರೇಯಸ್​ ಅಯ್ಯರ್​ (44*) ರನ್​​ಗಳ ಉಪಯುಕ್ತ ಕಾಣಿಕೆ ನೀಡಿದರೆ, ಮನೀಶ್​ ಪಾಂಡೆ (8*) ರನ್​ ಗಳಿಸಿ ಅಜೇಯರಾಗಿ ಉಳಿದರು.

ಅಂತಿಮವಾಗಿ ಟೀಮ್​ ಇಂಡಿಯಾ 47.3 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 289 ರನ್​ ಕಲೆಹಾಕುವ ಮೂಲಕ ಆಸೀಸ್ ವಿರುದ್ಧ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ 7 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿತು. ಇದರೊಂದಿಗೆ 2-1 ಅಂತರದಲ್ಲಿ ಏಕದಿನ ಸರಣಿಯನ್ನು ವಶಪಡಿಸಿಕೊಂಡಿತು.

ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ಗಳನ್ನು ಎದುರಿಸಲು ಆಸೀಸ್​ ಬೌಲರ್​ಗಳು ಕೊನೆವರೆಗೂ ಪರದಾಡಿದರು. ಆಸೀಸ್​ ಪರ ಜೋಶ್​ ಹಜಾಲ್​ವುಡ್​, ಆಸ್ಥಾನ್​ ಅಗರ್​ ಮತ್ತು ಆ್ಯಡಮ್​ ಝಂಪಾ ತಲಾ ಒಂದು ವಿಕೆಟ್​ಗೆ ತೃಪ್ತಿಪಟ್ಟರು

LEAVE A REPLY

Please enter your comment!
Please enter your name here