ಸಂಪಾದಕೀಯ

ಇಸ್ಲಾಮಿನಲ್ಲಿ ಬಡ್ಡಿ ನಿಷೇಧವಾಗಿದೆ. ವ್ಯಾಪರ ಧರ್ಮ ಸಮ್ಮತವಾಗಿದೆ. ಪರಿಶ್ರಮವಿಲ್ಲದೆ ಹಣ ಗಳಿಸುವುದು ನಿಷಿದ್ಧ. ಆ ಹಿನ್ನಲೆಯಲ್ಲಿ ಧರ್ಮದ ನೈತಿಕ ಬೋಧನೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಕೆಲವು ವಂಚಕರು ವಂಚಕ ಸಂಸ್ಥೆಗಳನ್ನು ರೂಪಿಸಿ ಬಡ ಮುಸ್ಲಿಮರನ್ನು, ಸಣ್ಣ ಉದ್ದಿಮೆದಾರರನ್ನು ಹಲಾಲ್ ಹೆಸರಿನಲ್ಲಿ ವಂಚಿಸುತ್ತ‌ ಬಂದಿದ್ದಾರೆ.

ಇದುವರೆಗೆ ಹಲವಾರು ಸಂಸ್ಥೆಗಳು ಈ ರೀತಿಯಾಗಿ ಮುಸ್ಲಿಮರನ್ನು ವಂಚಿಸುತ್ತಾ ಬಂದಿದೆ. ಮುಖ್ಯವಾಗಿ Ajmera, Aleef, Aala Ventures, Injaz International, Burraqh, Ambidant and the IMA Group, HIRA Gold ಸೇರಿದಂತೆ ಹಲವು ವಂಚಕ ಸಂಸ್ಥೆಗಳು ಐದು ವರ್ಷದಲ್ಲಿ 18 ಲಕ್ಷ ಜನರಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ಪಂಗನಾಮ ಹಾಕಿದೆ.

ಬಹುತೇಕ ವಂಚಕ ಸಂಸ್ಥೆಗಳು ಆರಂಭದಲ್ಲಿ 10% ಲಾಭ ಕೊಡುವ ಆಸೆಯಲ್ಲಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಿ ಲೂಟುತ್ತಿದೆ.

ಮುಸ್ಲಿಮ್ ಸಮುದಾಯ ಈ ಸಂಸ್ಥೆಗಳನ್ನು ನಂಬುವಂತೆ ಮಾಡಲು ಮೌಲ್ವಿಗಳ ಮೂಲಕ ಹಲಾಲ್ ಫತ್ವಾ ಕೊಡಿಸಲಾಗುತ್ತದೆ. ಸ್ಥಳೀಯ ಧರ್ಮದ ಗುತ್ತಿಗೆದಾರರಂತೆ ವರ್ತಿಸುವ ಜನ ಈ ವಂಚಕ ಸಂಸ್ಥೆಯ ಪರವಾಗಿ ಬಿಕರಿಯಾಗಿ ಜನರನ್ನು ಮೂರ್ಖರನ್ನಾಗಿಸುತ್ತಾರೆ. ಮಸೀದಿ ಮದ್ರಸಾಗಳಿಗೆ ವಂತಿಗೆ ನೀಡಿ ‘ಒಳ್ಳೆಯ ವ್ಯಕ್ತಿ’ ಎಂಬ ಪೋಷಕು ಧರಿಸುತ್ತಾರೆ.

ಈಗಾಗಲೇ ವಂಚಿಸಿರುವ ಹೀರಾ ಗೋಲ್ಡ್ ಪರವಾಗಿಯೂ ಬೇಕಾ ಬಿಟ್ಟಿ ಫತ್ವಾ ಕೊಟ್ಟು ಜನರನ್ನು ಮೂರ್ಖರನ್ನಾಗಿಸಿದ ಧರ್ಮದ ಗುತ್ತಿಗೆದಾರರು, IMA ಕಂಪೆನಿಯ ಪರವಾಗಿ ಬೆಂಗಳೂರಿನ ಮಸೀದಿಯ ಖುತ್ಬಾಗಳಲ್ಲಿ (ಪ್ರವಚನಗಳಲ್ಲಿ) ಹಲಾಲ್ ಪ್ರಮಾಣ ಪತ್ರ ನೀಡಿದ್ದರು. ಮಾಹಿತಿ ಪ್ರಕಾರ ಮಸೀದಿ, ಮದ್ರಸಾಗಳಿಗೆ ಈ ಮೌಲ್ವಿಗಳು ಸಿಕ್ಕಾಪಟ್ಟೆ ವಂತಿಗೆ ಪಡೆದು ಮುಸ್ಲಿಮ್ ಸಮುದಾಯದ ಬಡವರು, ಸಣ್ಣ ಉದ್ದಿಮೆದಾರರು ಮತ್ತು ಹಣವಿದ್ದ ಹೂಡಿಕೆದಾರರು ಈ ವಂಚಕ ಜಾಲಾದಲ್ಲಿ ಬೀಳುವಂತೆ ಮಾಡಿದ್ದರು ಎಂದು ತಿಳಿದು ಬಂದಿದೆ.

ಒಂದು ಸ್ವಾರಸ್ಯಕರ ವಿಚಾರವೆಂದರೆ ಅದೆಷ್ಟೋ ವಂಚಕ ಸಂಸ್ಥೆಗಳು ಹಲಾಲ್ ಹೆಸರಿನಲ್ಲಿ ವಂಚಿಸಿದರೂ ಮುಸ್ಲಿಮರು ಮಾತ್ರ ಬೇರೆ ಬೇರೆ ಹೆಸರಿನಲ್ಲಿ ಬರುವ ವಂಚಕ ಸಂಸ್ಥೆಗಳಿಗೆ ಬಲಿಯಾಗುತ್ತಿದ್ದಾರೆ.

ಐ.ಎಮ್.ಎ ಹಗರಣದ ನಂತರವಾದರೂ ಮುಸ್ಲಿಮ್ ಸಮುದಾಯ ಎಚ್ಚೆತ್ತುಕೊಳ್ಳಬಹುದೇ?

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.