ಬೇಸಿಗೆಯ ರಜೆಯ ಜೊತೆಗೇ ಬಿಸಿಲಿನ ಸೆಖೆಯೂ ಬಂದಿದೆ. ರಜೆಯ ಮಜಾ ಅನುಭವಿಸಲು ಬಿಸಿಲಿನ ಝಳ ಸಜೆ ನೀಡುತ್ತದೆ. ವಾತಾವರಣದ ಬಿಸಿಯ ಕಾರಣ ಹೆಚ್ಚು ಬೆವರು ಹರಿದು ದೇಹದಲ್ಲಿ ನೀರಿನ ಕೊರತೆ ಎದುರಾಗುತ್ತದೆ. ಆದ್ದರಿಂದ ಸತತವಾಗಿ ನೀರು ಕುಡಿಯುತ್ತಿರುವುದು ಅಗತ್ಯ. ಹಿಂದೆ ಒಂದು ಊರಿನಿಂದ ಇನ್ನೊಂದೂರಿಗೆ ನಡೆದೇ ಹೋಗುವವರಿಗೆ ಅನುಕೂಲವಾಗಲೆಂದು ದಾರಿಯಲ್ಲಿದ್ದ ಮನೆಯವರೆಲ್ಲರೂ ಮನೆಯ ಹೊರಗೆ ಮಡಕೆ ಮತ್ತು ಬೆಲ್ಲದ ತುಂಡುಗಳನ್ನು ಇಡುತ್ತಿದ್ದರು. ಏಪ್ರಿಲ್ ಮೇ ತಿಂಗಳಲ್ಲಿ ಬಿಸಿಲು ಹೆಚ್ಚಾಗುತ್ತಿದ್ದಂತೆಯೇ ನೀರಿನ ಅಗತ್ಯವೂ ಹೆಚ್ಚಾಗುತ್ತಾ ಹೋಗುತ್ತದೆ. ಈ ಅವಧಿಯಲ್ಲಿ ಕೇವಲ ನೀರು ಕುಡಿಯುವ ಬದಲು ಹಣ್ಣುಗಳ ಜ್ಯೂಸ್ ಕುಡಿಯುವುದು ಉತ್ತಮ.  

ಜ್ಯೂಸ್ ಎಂದಾಕ್ಷಣ ಮೊತ್ತ ಮೊದಲಿಗೆ ನೆನಪಿಗೆ ಬರುವುದು ಲಿಂಬೆಯ ಶರಬತ್ತು. ಆದರೆ ಪ್ರತಿಬಾರಿ ಒಂದೇ ಬಗೆಯ ಶರಬತ್ತು ಕುಡಿದು ಬೇಸರ ಹೆಚ್ಚಾಗುತ್ತದೆ. ನಿಮ್ಮ ಪರಿಸ್ಥಿತಿಯೂ ಇದೇ ಆಗಿದ್ದರೆ ಬದಲಾವಣೆಗಾಗಿ ವಿವಿಧ ಹಣ್ಣುಗಳ ಪಂಚ್ ಅಥವಾ ಒಮ್ಮೆಲೇ ರುಚಿಯನ್ನು ನೀಡುವ ಶರಬತ್ತೊಂದನ್ನು ಪ್ರಯತ್ನಿಸಿ ನೋಡಲು ಇದು ಸಕಾಲವಾಗಿದೆ. ಈ ವಿಧಾನ ಸುಲಭ ಮತ್ತು ಆಯಾ ಋತುಮಾನದಲ್ಲಿ ಯಥೇಚ್ಛವಾಗಿ ಸಿಗುವ ಹಣ್ಣುಗಳನ್ನು ಬಳಸಿ ಮಾಡಲಾಗುವ ಹಾಗೂ ಇದರ ಮೇಲೆ ಕೊಂಚ ಐಸ್ ಕ್ರೀಂ ಸೇರಿಸಿರುವ ಕಾರಣ ಬಿಸಿಲಿಗೆ ಬಳಲಿದ ದೇಹಕ್ಕೆ ಚೈತನ್ಯ ನೀಡುವ ಜೊತೆಗೇ ಹೊಸ ರುಚಿಯನ್ನು ಆಸ್ವಾದಿಸಿದ ತೃಪ್ತಿಯೂ ದೊರಕುತ್ತದೆ. ಬನ್ನಿ ಇದನ್ನು ತಯಾರಿಸುವ ಬಗೆಯನ್ನು ಈಗ ನೋಡೋಣ:

*ಪ್ರಮಾಣ: ಮೂವರಿಗೆ, ಒಂದು ಹೊತ್ತಿಗಾಗುವಷ್ಟು

*ಸಿದ್ಧತಾ ಸಮಯ: ಹತ್ತು ನಿಮಿಷಗಳು

*ತಯಾರಿಕಾ ಸಮಯ: ಹತ್ತು ನಿಮಿಷಗಳು                     

ಅಗತ್ಯವಿರುವ ಸಾಮಾಗ್ರಿಗಳು:

*ಕಲ್ಲಂಗಡಿ ಹಣ್ಣು: ಒಂದು ಕಪ್ (ಚಿಕ್ಕದಾಗಿ ತುಂಡರಿಸಿ, ಬೀಜ ನಿವಾರಿಸಿದ್ದು)

*ಅನಾನಾಸ್ ಹಣ್ಣು: ಒಂದು ಕಪ್ (ಚಿಕ್ಕದಾಗಿ ತುಂಡರಿಸಿದ್ದು)

*ಕಿತ್ತಳೆ ಹಣ್ಣು -ಒಂದು ಕಪ್

*ಸೇಬು – ಒಂದು ಕಪ್ (ಚಿಕ್ಕದಾಗಿ ತುಂಡರಿಸಿದ್ದು)

*ಬಾಳೆಹಣ್ಣು – ಒಂದು ಕಪ್ (ಚಿಕ್ಕದಾಗಿ ತುಂಡರಿಸಿದ್ದು)

*ಸಕ್ಕರೆ – ಒಂದು ಕಪ್

*ಏಲಕ್ಕಿ ಪುಡಿ-ಕಾಲು ಚಿಕ್ಕಚಮಚ

*ಐಸ್ ಕ್ರೀಮ್ – 1 ಸ್ಕೂಪ್

*ಐಸ್ ತುಂಡುಗಳು- 1 ಕಪ್

ವಿಧಾನ:

* ಮಿಕ್ಸಿಯ ದೊಡ್ಡ ಜಾರಿನಲ್ಲಿ ಎಲ್ಲಾ ಹಣ್ಣುಗಳನ್ನು ಹಾಕಿ ಮೇಲೆ ಸಕ್ಕರೆ ಸುರಿದು ಸುಮಾರು ಅರ್ಧ ನಿಮಿಷ ಕಡೆಯಿರಿ.

* ಜಾರಿನಿಂದ ಈ ಮಿಶ್ರಣವನ್ನು ಹೊರತೆಗೆದು ಸೋಸುಕ ಅಥವಾ ಬಟ್ಟೆಯಲ್ಲಿ ಹಿಂಡಿ ರಸ ಬೇರ್ಪಡಿಸಿ.

*ರಸ ತೆಗೆದ ಮಿಶ್ರಣವನ್ನು ಮತ್ತೊಮ್ಮೆ ಮಿಕ್ಸಿಗೆ ಹಾಕಿ ಐಸ್ ಕ್ರಿಮ್, ಏಲಕ್ಕಿ ಪುಡಿ, ಐಸ್ ತುಂಡುಗಳನ್ನು ಹಾಕಿ ಮತ್ತೊಮ್ಮೆ ಕಡೆಯಿರಿ.

*ಒಂದು ಲೋಟದಲ್ಲಿ ಮೊದಲು ಹಣ್ಣಿನ ರಸವನ್ನು ಅರ್ಥ ತುಂಬಿಸಿ ಉಳಿದರ್ಧವನ್ನು ಎರಡನೆಯ ಬಾರಿ ಕಡೆದ ಮಿಶ್ರಣವನ್ನು ತುಂಬಿ. ಕೊಂಚವೇ ಚಮಚದಲ್ಲಿ ಮಿಶ್ರಣ ಮಾಡಿ ಕುಡಿಯಿರಿ. ಆಟವಾಡಿ ಬಂದ ಮಕ್ಕಳಿಗೆ, ಬಿಸಿಲಿನಲ್ಲಿ ತಿರುಗಾಡಿ ಬಂದ ಹಿರಿಯರಿಗೆ ಈ ಜ್ಯೂಸ್ ಅಪ್ಯಾಯಮಾನವಾಗುವುದರಲ್ಲಿ ಸಂಶಯವಿಲ್ಲ. ನಿಮಗೆ ಹೇಗೆನಿಸಿತು ಎಂಬುದನ್ನು ನಮಗೆ ತಿಳಿಸಿ. ಇದಕ್ಕಾಗಿ ಕೆಳಗಿನ ಕಮೆಂಟ್ಸ್ ಭಾಗವನ್ನು ಬಳಸಿ.

 

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.