ಹುಬ್ಬಳ್ಳಿ: ಲಿಂಗಾಯತ ಸ್ವತಂತ್ರ ಧರ್ಮವಾಗಲು ಬಿಡುವುದಿಲ್ಲ ಎನ್ನಲು ನೀವ್ಯಾರು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಹೊರಟ್ಟಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್) ಪ್ರಶ್ನಿಸಿದರು.

ಆರ್‌ಎಸ್‌ಎಸ್‌ನ ಪ್ರಧಾನ ಕಾರ್ಯದರ್ಶಿ ಸುರೇಶ ಭೈಯ್ಯಾಜಿ ಅವರು ನಮ್ಮ ಹೋರಾಟದಲ್ಲಿ ಮೂಗು ತೂರಿಸುವುದು ಬಿಟ್ಟು ತಮ್ಮ ಸಂಘದ ಕಾರ್ಯ ನೋಡಿಕೊಳ್ಳಲಿ ಎಂದು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಲಿಂಗಾಯತ-ವೀರಶೈವ ಒಡೆಯದಿರಿ. ಅದೇನಾಗುತ್ತೋ ನೋಡುತ್ತೇನೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರೂ ತುಮಕೂರಿನಲ್ಲಿ ಹೇಳಿದ್ದಾರೆ. ಅವರು ಮೊದಲು, ತಾವು ವೀರಶೈವರೋ, ಲಿಂಗಾಯತರೋ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಹೊರಟ್ಟಿ ಹೇಳಿದರು.
ನಾನು ಲಿಂಗಾಯತ ಎಂದು ಎದೆತಟ್ಟಿ ಹೇಳುತ್ತೇನೆ. ಅದೇ ರೀತಿ ಯಡಿಯೂರಪ್ಪನವರು ತಾವು ವೀರಶೈವ ಎಂದು ಹೇಳಲಿ ಎಂದು ಹೊರಟ್ಟಿ ಸವಾಲು ಹಾಕಿದರು.

ಈ ಹೋರಾಟದಲ್ಲಿ ನಮಗೆ ನ್ಯಾಯ ಸಿಗದಿದ್ದರೆ ನ್ಯಾಯಾಲಯಕ್ಕೆ ಮೊರೆ ಹೋಗುತ್ತೇವೆ ಎಂದ ಹೊರಟ್ಟಿ, ನಮಗೆ ಸ್ವತಂತ್ರ ಧರ್ಮ ಸ್ಥಾನಮಾನ ಕೊಟ್ಟರೆ ವೀರಶೈವರಿಗೇನು ತೊಂದರೆ ಎಂದು ಪ್ರಶ್ನಿಸಿದರು.

‘ಚುನಾವಣೆಯ ಕಾರಣಕ್ಕಾಗಿ ಲಿಂಗಾಯತ ಧರ್ಮಕ್ಕಾಗಿ ಹೋರಾಟ ಮಾಡುತ್ತಿಲ್ಲ. ಮಾನ್ಯತೆ ಸಿಗದಿದ್ದರೆ ಚುನಾವಣೆ ನಂತರವೂ ಹೋರಾಟ ಮುಂದುವರಿಯುತ್ತದೆ’ ಎಂದು ಅವರು ಹೇಳಿದರು.

ಸಂಕೇಶ್ವರ ಹೇಳಿಕೆಗೆ ತಿರುಗೇಟು: ಲಿಂಗಾಯತರು ಮೀಸಲಾತಿಗಾಗಿ ಭಿಕ್ಷೆ ಬೇಡಬಾರದು ಎಂಬ ಉದ್ಯಮಿ ವಿಜಯ ಸಂಕೇಶ್ವರ ಹೇಳಿಕೆಗೆ ಪ್ರತಿಕ್ರಿಯಿಸಿದ ಹೊರಟ್ಟಿ, ‘ನ್ಯಾಯಕ್ಕಾಗಿ, ಮೀಸಲಾತಿಗಾಗಿ ಹೋರಾಡುವುದು ನಮ್ಮ ಹಕ್ಕು. ಅದು ಭಿಕ್ಷಾಟನೆ ಅಲ್ಲ. ಎಲ್ಲರೂ ತಮ್ಮ ಜಾತಿ, ಧರ್ಮಕ್ಕಾಗಿ ಹೋರಾಡುತ್ತಾರೆ. ‘ಅಹಿಂಸಾ’ ಒಕ್ಕೂಟದ ಶೇ 82ರಷ್ಟು ಜನ ಬಡ್ತಿ ಮೀಸಲಾತಿ ರದ್ದತಿಗೆ ಹೋರಾಡುತ್ತಿದ್ದಾರೆ. ಅದು ಭಿಕ್ಷಾಟನೆಯೇ?’ ಎಂದು ಪ್ರಶ್ನಿಸಿದರು.

 

LEAVE A REPLY

Please enter your comment!
Please enter your name here