ಬೆಂಗಳೂರು: ರಾಜ್ಯದ ಹಲವೆಡೆ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ.ಕರಾವಳಿ, ಮಲೆನಾಡು ಭಾಗದಲ್ಲಿ ಎಡಬಿಡದೆ ಮಳೆಯಾಗುತ್ತಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಇಂದು ಶುಕ್ರವಾರ ಕೂಡ ಮಳೆ ಮುಂದುವರಿಯುವ ಎಲ್ಲ ಸಾಧ್ಯತೆಗಳಿವೆಯೆಂದು ಹವಾಮಾನ ಇಲಾಖೆ ತಿಳಿಸಿದೆ.

ಚಿಕ್ಕಮಗಳೂರು, ಕೊಡಗಿನಲ್ಲಿ ಅತಿ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಕಿತ್ತಳೆ ಬಣ್ಣದ ಎಚ್ಚರಿಕೆ ನೀಡಲಾಗಿದೆ. ಅದೇ ರೀತಿ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಹಾಸನದಲ್ಲಿ ಭಾರಿ ಮಳೆಯ ನಿರೀಕ್ಷೆ ಇದೆ. ಕರಾವಳಿಯಲ್ಲಿ ಮುಂದಿನ ಮೂರ್‍ನಾಲ್ಕು ದಿನ ಮಳೆ ಮುಂದುವರಿಯಲಿದೆ. ಇನ್ನು ಉತ್ತರ ಕರ್ನಾಟಕದಲ್ಲಿ ಮಳೆ ಸಾಧ್ಯತೆ ಕಡಿಮೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

3 ದಿನಗಳಿಂದಲೂ ವರುಣನ ಆರ್ಭಟ ಜೋರಾಗಿರುವುದರಿಂದ ನದಿ, ತೊರೆಗಳು ಉಕ್ಕಿ ಹರಿಯುತ್ತಿವೆ. ಭಾಗಮಂಡಲ ಅಕ್ಷರಶಃ ಮುಳುಗಿದೆ. ತಲಕಾವೇರಿ ಮತ್ತು ಭಾಗಮಂಡಲ ವ್ಯಾಪ್ತಿಯಲ್ಲಿ ಬುಧವಾರ ಬೆಳಗ್ಗಿನಿಂದ ಗುರುವಾರ ಬೆಳಗ್ಗಿನವರೆಗೆ ದಾಖಲೆಯ ಸರಾಸರಿ 10 ಇಂಚು ಮಳೆಯಾಗಿದೆ. ಕಾವೇರಿ ನದಿ ನೀರು ಅಪಾಯಕಾರಿ ಮಟ್ಟ ಮುಟ್ಟುವ ಸಾಧ್ಯತೆ ಇರುವುದರಿಂದ ಕುಶಾಲನಗರದಲ್ಲಿ ಆತಂಕ ಸೃಷ್ಟಿಯಾಗಿದೆ. ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಹಾರಂಗಿ ಅಣೆಕಟ್ಟೆಯಿಂದ ನದಿಗೆ 15 ಸಾವಿರ ಕ್ಯುಸೆಕ್‌ ನೀರು ಬಿಡಲಾಗಿದೆ. ಇದರೊಂದಿಗೆ ಕೆ.ಆರ್.ಎಸ್ ಒಳ ಹರಿವು ಹೆಚ್ಚಾಗಿದ್ದು ಜಲಾಶಯದಿಂದ 43 ಸಾವಿರ ಕ್ಯೂಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿದೆ. ಹೀಗಾಗಿ ಕಾವೇರಿ ನದಿ ಪಾತ್ರದಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಈಗಾಗಲೇ ಅಣೆಕಟ್ಟಿನ ಗರಿಷ್ಠ ಮಟ್ಟ 124.80 ಅಡಿ ತುಂಬಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಬುಧವಾರ ಸಂಜೆ ಹಾಗೂ ಗುರುವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಭಾರೀ ಮಳೆ ಸುರಿದಿದೆ. ಕದ್ರಾ ಮತ್ತು ಸೂಪಾ ಹಾಗೂ ಗೇರುಸೊಪ್ಪ ಜಲಾಶಯಗಳಿಂದ ಶರಾವತಿ ನದಿಗೆ ಬಿಡಲಾಗಿದೆ. ಗೇರುಸೊಪ್ಪಾ ಜಲಾಶಯದಿಂದ ನೀರು ಬಿಟ್ಟ ಕಾರಣದಿಂದಾಗಿ ಶರಾವತಿ ನದಿ ತುಂಬಿ ಹರಿಯುತ್ತಿದೆ. ಮೊದಲಿಗೆ ಲಿಂಗನಮಕ್ಕಿಯಿಂದ 11 ಗೇಟ್ ಮೂಲಕ ನೀರು ಬಿಡಲಾಗಿದ್ದು, ಇದು ಗೇರುಸೊಪ್ಪಾಗೆ ಬಂದಿದೆ. ಈ ಜಲಾಶಯವೂ ತುಂಬಿಕೊಂಡ ಕಾರಣ ನೀರು ಬಿಡಲಾಗಿದೆ. ಕೆಲವು ಗ್ರಾಮಗಳ ತೋಟ ಮತ್ತು ಮನೆಯೊಳಗೆ ನೀರು ನುಗ್ಗಿದೆ. ಕೆಲವೆಡೆ ಗಂಜಿಕೇಂದ್ರ ಆರಂಭಿಸಲಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.