ತೆರಿಗೆ ಹಣ ಪೋಲಾಗುವುದನ್ನು ತಡೆಯಲು ಹಜ್ಜ್ ಸಬ್ಸಿಡಿ ಹೋದರೆ ಸಾಕೇ?

ಲೇಖಕರು: ದಾದಾ ಕಲಂದರ್

1994ರಲ್ಲಿ ರೂ.10.57 ಕೋಟಿಗಳಷ್ಟಿದ್ದ ಹಜ್ ಸಬ್ಸಿಡಿ ಮೊತ್ತ ಹಜ್ ಯಾತ್ರಿಗಳ ಸಂಖ್ಯೆಯಲ್ಲಾದ ಹೆಚ್ಚಳ ಮತ್ತು ವಿಮಾನ ಯಾನ ವೆಚ್ಚದಲ್ಲಾದ ಹೆಚ್ಛಳಕ್ಕೆ ತಕ್ಕಂತೆ 2012ರ ಹೊತ್ತಿಗೆ ರೂ.837ಕೋಟಿಗಳಷ್ಟಾಯಿತು. ಅದೇ ವರ್ಷ ಮಾನ್ಯ ಸುಪ್ರೀಂಕೋರ್ಟ್ ಕುರಾನಿನಲ್ಲಿ ವಿವರಿಸಿರುವಂತೆ ಹಜ್ ಯಾತ್ರೆ ಯಾರಿಗೆಲ್ಲ ಕಡ್ಡಾಯ ಎಂಬ ಅಂಶಗಳನ್ನು ಮುಂದಿಟ್ಟು ಹಾಲಿ ಭಾರತೀಯ ಒಕ್ಕೂಟ ವ್ಯವಸ್ಥೆಯು ನೀಡುತ್ತಿರುವ ‘ಹಜ್ ಸಬ್ಸಿಡಿ’ ನಿಜಕ್ಕೂ ಮುಸ್ಲಿಮರು ಕೈಗೊಳ್ಳುವ ಹಜ್ ಯಾತ್ರೆಯ ನೈಜ ಆಶಯಕ್ಕೆ ವಿರುದ್ಧವಾಗಿರುವುದರಿಂದ, ಕುರಾನ್ ಅಂಗೀಕರಿಸದ ಹಜ್ ಸಬ್ಸಿಡಿಯನ್ನು ಮುಂಬರುವ ಹತ್ತು ವರ್ಷಗಳ ಕಾಲಾವಧಿಯಲ್ಲಿ ರದ್ದುಗೊಳಿಸಬೇಕೆಂದು ತೀರ್ಪುಕೊಟ್ಟಿತು. ಅಂದಿನ ಕಾಂಗ್ರೆಸ್ ನೇತೃತ್ವದ UPA ಸರ್ಕಾರ ಸುಪ್ರೀಂಕೋರ್ಟಿಗೆ ‘ಹಜ್ ಸಬ್ಸಿಡಿ’ ನೀಡುವ ತನ್ನ ಐತಿಹಾಸಿಕ ಕ್ರಮವನ್ನು ಸಮರ್ಥಿಸಿಕೊಂಡು ಅಫಿಡೇವಿಟ್ ಸಲ್ಲಿಸಿತ್ತು ಎಂಬುದು ಗಮನಾರ್ಹ. ಅದರಂತೆ 2016 ಹೊತ್ತಿಗೆ ಹಜ್ ಸಬ್ಸಿಡಿ ಮೊತ್ತ ಅರ್ಧಕ್ಕರ್ಧ ಕಡಿಮೆಯಾಗಿ ರೂ.405 ಕೋಟಿಗಳಿಗೆ ಇಳಿದಾಗ AIMIM ಪಕ್ಷದ ಸಂಸದ ಅಸಾದುದ್ದೀನ್ ಒವೈಸಿಯವರು ಕೇವಲ ಏರ್ ಇಂಡಿಯಾ ಎಂಬ ರೋಗಗ್ರಸ್ಥ ಸಂಸ್ಥೆಯನ್ನು ಸಲಹುವುದಕ್ಕಾಗಿ ಕಾಂಗ್ರೆಸ್ ಸರ್ಕಾರ ರೂಪಿಸಿರುವ ‘ಹಜ್ ಸಬ್ಸಿಡಿ’ಯನ್ನು ರದ್ದುಗೊಳಿಸಿರೆಂದು ಸರ್ಕಾರವನ್ನು ಆಗ್ರಹಿಸಿದ್ದೇ ಅಲ್ಲದೆ ಈ ಮೊತ್ತವನ್ನು ಹೆಣ್ಣುಮಕ್ಕಳ ಶಿಕ್ಷಣ ಕೊಡುವ ಸಲುವಾಗಿ ಹೆಚ್ಚು ಹೆಚ್ಚು ಶಾಲೆಗಳು ಮತ್ತು ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಲು ವೆಚ್ಚ ಮಾಡಬೇಕೆಂದು ಆಗ್ರಹಿಸಿದ್ದರು. ಈ ನಿಟ್ಟಿನಲ್ಲಿ ಹಾಲಿ ಭಾರತೀಯ ಒಕ್ಕೂಟ ವ್ಯವಸ್ಥೆಯ ಸರ್ಕಾರ ಸುಪ್ರೀಂಕೋರ್ಟ್ ಆದೇಶದಲ್ಲಿ ನೀಡಿದ್ದ ಅವಧಿಗೂ ಮುಂಚಿತವಾಗಿ ಹಜ್ ಸಬ್ಸಿಡಿಯನ್ನು ರದ್ದುಗೊಳಿಸಿ, ಹಜ್ ಸಬ್ಸಿಡಿಗೆ ಮೀಸಲಿಡುತ್ತಿದ್ದ ಹಣವನ್ನು ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ವೆಚ್ಚ ಮಾಡುವುದಾಗಿ ಹೇಳಿರುವುದನ್ನು ಭಾರತೀಯ ಮುಸ್ಲಿಮರು ಸಂಭ್ರಮಿಸಿ ಒಕ್ಕೊರಲಿನಿಂದ ಸ್ವಾಗತಿಸುತ್ತಿದ್ದಾರೆ.

ಈಗ ದೇಶದ ಪ್ರಜ್ಞಾವಂತರನ್ನು ಕಾಡುತ್ತಿರುವ ಬಹು ಮುಖ್ಯ ಪ್ರಶ್ನೆ ಏನೆಂದರೆ, ಕಾಂಗ್ರೆಸ್ ಸರ್ಕಾರವು ‘ಮತಬ್ಯಾಂಕ್’ ರಾಜಕಾರಣಕ್ಕಾಗಿ ತೆರಿಗೆದಾರರ ಹಣವನ್ನು ‘ಹಜ್ ಸಬ್ಸಿಡಿ’ಯ ಮೂಲಕ ಮುಸ್ಲಿಮರ ಬಾಯಿಗಿಟ್ಟು ಅಲ್ಪಸಂಖ್ಯಾತರ ತುಷ್ಟೀಕರಣಕ್ಕಿಳಿದಿದೆಯೆಂದು ದೊಡ್ಡದಾಗಿ ಗದ್ದಲವೆಬ್ಬಿಸುತ್ತಿದ್ದ ಬಲಪಂಥೀಯರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾವಿರಾರು ಕೋಟಿ ರೂಪಾಯಿಗಳ ತೆರಿಗೆ ಹಣವನ್ನು ಮುಸ್ಲಿಮೇತರ ಮೇಳಗಳು ಮತ್ತು ತೀರ್ಥ ಯಾತ್ರೆಗಳಿಗಾಗಿ ಪೋಲು ಮಾಡುತ್ತಿರುವುದು ಯಾಕೆ ಕಾಣುತ್ತಿಲ್ಲ ಎಂಬುದು.

2014ರಲ್ಲಿ ಅಲಹಾಬಾದಿನಲ್ಲಿ ನಡೆದ ಕುಂಭಮೇಳಕ್ಕೆ ಕೇಂದ್ರ ಸರ್ಕಾರ ರೂ.1,150 ಕೋಟಿಗಳಷ್ಟು ಹಣವನ್ನು ಖರ್ಚು ಮಾಡಿತ್ತು. ನಾಸಿಕ್ ಕುಂಭಮೇಳಕ್ಕೆ ಮಹಾರಾಷ್ಟ್ರ ಸರ್ಕಾರ ರೂ.2,500 ಕೋಟಿಗಳಷ್ಟು ಹಣವನ್ನು ತೆಗೆದಿರಿಸಿದೆ. ಉಜ್ಜಯಿನಿಯಲ್ಲಿ 12 ವರ್ಷಕ್ಕೊಮ್ಮೆ ನಡೆವ ಸಿಂಹಾಸ್ಥ ಮಹಾಕುಂಭಕ್ಕಾಗಿ ಮಧ್ಯಪ್ರದೇಶ ಸರ್ಕಾರ ರೂ.100 ಕೋಟಿಗಳಷ್ಟು ಹಣವನ್ನು ತೆಗೆದಿರಿಸಿತ್ತು. ಶಿವರಾಜ ಸಿಂಘ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರ ಈ ಸಮಾರಂಭಕ್ಕಾಗಿ 2016ರಲ್ಲಿ ರೂ.3,500 ಕೋಟಿಗಳಷ್ಟು ಹಣವನ್ನು ಖರ್ಚು ಮಾಡಿದ್ದು ಇದರ ಅಂತಿಮ ವೆಚ್ಚ ರೂ.5,000 ಕೋಟಿಗಳನ್ನು ತಲುಪುವ ಅಂದಾಜಿದೆ. ಗೋಧಾವರಿ ಪುಷ್ಕರಕ್ಕಾಗಿ ಅಂಧ್ರ ಪ್ರದೇಶ ಸರ್ಕಾರ 2015 ರೂ.570 ಕೋಟಿಗಳಷ್ಟು ಹಣವನ್ನು ಬಿಡುಗಡೆ ಮಾಡಿತ್ತು. ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಮಸ್ತಕಾಭಿಷೇಕಕ್ಕೆ ರೂ.1,070 ಕೋಟಿಗಳಷ್ಟು ಹಣ ಖರ್ಟಾಗಬಹುದೆಂದು ಅಂದಾಜಿಸಲಾಗಿದೆ.

ಕುಂಭ ಮೇಳಗಳ ಜೊತೆಗೆ ನವರಾತ್ರಿ, ವಿನಾಯಕ ಚತುರ್ಥಿ, ಕಾರ್ತೀಕ ದೀಪ, ಗಂಗಾ ಪೂಜೆಯಂತಹ ಸಮಾರಂಭಗಳಲ್ಲಿ ಕಲುಷಿತಗೊಳ್ಳುವ ನದಿ ಮತ್ತು ಕೆರೆಗಳ ಶುದ್ದೀಕರಣಕ್ಕಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವೆಚ್ಚ ಮಾಡುತ್ತವೆ. ವೈದಿಕ ವಿಧಿಯನ್ನು ಅನುಸರಿಸಲು ಹೋಗಿ ಮೃತರ ಭಸ್ಮ, ಅರೆಬೆಂದ ಹೆಣಗಳು ಮತ್ತು ಪೂಜಾ ಪರಿಕರಗಳು ಮತ್ತು ತ್ಯಾಜ್ಯಗಳನ್ನು ವರ್ಷಾನುಗಟ್ಟಲೆ ಗಂಗೆಯ ಒಡಲಿಗೆ ಸುರಿದ ಕಾರಣ ಪಾಪವಿನಾಶಿನಿಯೆಂದೇ ಕರೆಯಲ್ಪಡುತ್ತಿದ್ದ ಗಂಗೆಯೇ ಕಲುಷಿತಗೊಂಡಿದ್ದು ಅದನ್ನು ಶುದ್ಧೀಕರಿಸಲು ರೂ.20,000 ಕೋಟಿಯಷ್ಟು ಪ್ರಾರಂಭಿಕ ವೆಚ್ಚದ ‘ನಮಾಮಿ ಗಂಗೆ’ ಎಂಬ ಪಂಚವಾರ್ಷಿಕ ಯೋಜನೆ ರೂಪಿಸಲಾಗಿದೆ.

ಕೈಲಾಸ ಮಾನಸ ಸರೋವರ ಯಾತ್ರೆಗೂ ಕೇಂದ್ರ ಸರ್ಕಾರ ಬೃಹತ್ ಮೊತ್ತಗಳನ್ನು ವ್ಯಯಿಸುತ್ತಿದೆ. ಉತ್ತರ ಪ್ರದೇಶದ ಅಖಿಲೇಶ್ ಯಾದವ್ ಸರ್ಕಾರ ಕೈಲಾಸ ಮಾನಸ ಸರೋವರ ಯಾತ್ರಿಗಳಿಗೆ ಟಿಬೆಟ್ ಮತ್ತು ಚೀನಾ ಪ್ರವಾಸಕ್ಕಾಗಿ ತಲಾ ರೂ.50,000 ಸಬ್ಸಿಡಿ ನಿಗದಿಗೊಳಿಸಿತ್ತು. ಯೋಗಿ ಆದಿತ್ಯನಾಥ ಅಧಿಕಾರಕ್ಕೆ ಬಂದ ನಂತರ ಈ ಮೊತ್ತವನ್ನು ತಲಾ ರೂ.1,00,000 ಕ್ಕೇರಿಸಲಾಗಿದೆ. ಮಾತ್ರವಲ್ಲದೆ ಸಿಂಧು ದರ್ಶನಕ್ಕಾಗಿ ಜಮ್ಮು ಕಾಶ್ಮೀರದ ಲಢಾಕ್ ಗೆ ಪ್ರಯಾಣ ಕೈಗೊಳ್ಳುವ ಯಾತ್ರಿಗಳಿಗೆ ತಲಾ ರೂ.10,000 ಸಬ್ಸಿಡಿಯನ್ನು ನೀಡುತ್ತಿದೆ. ಛತ್ತೀಸ್ ಘಡ್, ದೆಹಲಿ, ಗುಜರಾತ್, ಕರ್ನಾಟಕ, ಮಧ್ಯ ಪ್ರದೇಶ ಮತ್ತು ಉತ್ತರಖಾಂಡ ದಂತಹ ಅನೇಕ ರಾಜ್ಯಗಳು ಸಹ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವವರಿಗೆ ಧನ ಸಹಾಯ ನೀಡುತ್ತಿವೆ. ಮಧ್ಯಪ್ರದೇಶ ಸರ್ಕಾರ ಮುಖ್ಯಮಂತ್ರಿ ತೀರ್ಥ ದರ್ಶನ ಯೋಜನೆಯಡಿಯಲ್ಲಿ ವಿವಿಧ ತೀರ್ಥಯಾತ್ರೆಗಳಿಗೆ ಧನ ಸಹಾಯ ನೀಡುತ್ತಿದೆ. ಅಮರನಾಥ ಯಾತ್ರೆಗಾಗಿಯೇ ಸಮಿತಿಯೊಂದನ್ನು ರಚಿಸಿರುವ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಅಮರನಾಥ ಯಾತ್ರೆಗೆ ಸಹಾಯ ನೀಡುತ್ತಿದೆ. ಕನ್ವಾರ್ ಯಾತ್ರೆಗಾಗಿ ಉತ್ತರಖಾಂಡ ರಾಜ್ಯ ಸಹಾಯ ನೀಡುತ್ತಿದೆ. ಕುರುಕ್ಷೇತ್ರದಲ್ಲಿ ಗೀತಾರಾಧನೆಗಾಗಿ ಹರ್ಯಾಣ ಸರ್ಕಾರ ರೂ.100 ಕೋಟಿಗಳಷ್ಟು ಹಣ ತೆಗೆದೆರಿಸಿದೆ.

ಇಷ್ಟು ಮಾತ್ರವಲ್ಲದೆ ಸರ್ಕಾರಗಳು ದೇವಸ್ಥಾನ ನಿರ್ಮಾಣ ಮತ್ತು ಪುನರ್ಜೀವನ; ದೇವ-ದೇವತೆಯರ ವಿಗ್ರಹ ನಿರ್ಮಾಣ; ವರುಣ ದೇವನ ಮನವೊಲಿಸಲು ಹೋಮ-ಹವನಗಳಿಗಾಗಿ ನೂರಾರು ಕೋಟಿ ರೂಪಾಯಿಗಳನ್ನು ತೆರಿಗೆ ಹಣದಲ್ಲೇ ಭರಿಸುತ್ತವೆ. ಹಜ್ ಸಬ್ಸಿಡಿಯನ್ನು ರದ್ದುಗೊಳಿಸಿದಂತೆಯೆ ಈ ಎಲ್ಲಾ ಬಾಬ್ತುಗಳಿಗಾಗಿ ಖರ್ಚುಗಳನ್ನು ರದ್ದುಗೊಳಿಸಿ ಈ ಹಣವನ್ನು ಬಾರತೀಯರ ಸ್ವಾಭಿಮಾನಿ ಬದುಕಿಗೆ ಅನುವಾಗುವ ಶಿಕ್ಷಣ ನೀಡಲು ಮತ್ತು ಯುವಜನರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಕಾರ್ಯಕ್ರಮಗಳಿಗಾಗಿ ಖರ್ಚು ಮಾಡುವ ದಿನಗಳು ಬರುವುದು ಯಾವಾಗ?
(TheWire.in ಸುದ್ದಿಜಾಲದಲ್ಲಿ ಪ್ರಕಟವಾದ ವರದಿಯನ್ನು ಆಧರಿಸಿದ ಬರೆಹ)