HAJABBA, HASANABBA

ಮಾರ್ಚ್ 13 2005 ರಲ್ಲಿ ದೇಶದಲ್ಲೇ ಪ್ರಥಮ ಎಂಬಂತೆ ಉಡುಪಿಯ ಸಮೀಪದ ಆದಿ ಉಡುಪಿಯಲ್ಲಿ ಒಂದು ಪ್ರಕರಣ ಬೆಳಕಿಗೆ ಬರುತ್ತದೆ. ಅದರ ಮೊದಲು ದನ ಗೋವಾಗಿ ಬದಲಾಗಿರಲಿಲ್ಲ ಎನ್ನ ಬಹುದು. ಹಿಂದು ಯುವ ಸೇನೆಯ ಕಾರ್ಯಕರ್ತರು ಮತ್ತು ಕೆಲವು ಸಂಘಪರಿವಾದ ಕಾರ್ಯಕರ್ತರು ಹಸನಬ್ಬ (25) ಹಾಜಬ್ಬ(60) ಇಬ್ಬರು ದನಗಳನ್ನು ಮಾರುತಿ ಒಮ್ನಿ ಕಾರಿನಲ್ಲಿ ಮೂಡಬೆಟ್ಟುವಿನಿಂದ ಸಾಗಿಸುತ್ತಿರುವಾಗ ಅಡ್ಡಗಟ್ಟಿ ಅವರಿಬ್ಬರ ಬಟ್ಟೆ ಬಿಚ್ಚಿ ಥಳಿಸಿ ಹಸನಬ್ಬ ಕಾಲು ಮುರಿದು, ಹಾಜಬ್ಬನ ಬೆನ್ನು ಮೂಳೆಗೆ ಗಂಭೀರ ಗಾಯ ಮಾಡಿ ಬೆತ್ತಲೆ ಮೆರವಣಿಗೆ ಮಾಡಿದ್ದು ಇತಿಹಾಸದ ಅತ್ಯಂತ ಹೇಯ ಘಟನೆ! ಇಡೀ ದೇಶದಲ್ಲಿ ಉಡುಪಿಗೆ ಅಪಖ್ಯಾತಿ ಬರುವಂತೆ ಮಾಡುವುದರೊಂದಿಗೆ ಗೋ ಭಯೋತ್ಪಾನೆಗೆ ಚಾಲನೆ ನೀಡಿದ ದುಷ್ಕೃತ್ಯವದು.
ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲದಲ್ಲಿ ಒಂದು ಸುದೀರ್ಘ ವಿಚಾರಣೆಯ ನಂತರ ಇವತ್ತು ಆರೋಪಿಗಳು ಸಾಕ್ಷಿಯ ಕೊರತೆಯಿಂದ ಕೆಳನ್ಯಾಯಲಯದಿಂದ ಕ್ಲಿನ್ ಚಿಟ್ ಪಡೆದು ಹೊರ ಬಂದಿದ್ದಾರೆ. ಅದರಲ್ಲೂ ಕೆಲವರು ಇಂದು ಜಿಲ್ಲಾ ಮಟ್ಟದ ಸಂಘಪರಿವಾರದ ನಾಯಕರಾಗಿ ಬೆಳೆದಿದ್ದಾರೆ. ಅವರಿಗೆ ಯಾವ ಶಿಕ್ಷೆಯೂ ಆಗದಿದದ್ದು ಮತ್ತು ಹಲ್ಲೆಗೊಳಗಾದ ಮಂದಿ ಈ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸದಂತೆ ವ್ಯವಸ್ಥಿತ ಷಡ್ಯಂತ್ರ ನಡೆದದ್ದು ಎಲ್ಲವೂ ವಿಪರ್ಯಾಸ!
ಈ ಅಮಾನವೀಯ ಘಟನೆಯ ನಂತರ ದೇಶದಲ್ಲಿ ಈ ಗುಂಪು ಥಳಿತದ ವ್ಯಾಧಿ ಮುಂದುವರೆದು ಇಡಿ ದೇಶದ್ಯಾಂತ ಹಲವು ಕಡೆಗಳಲ್ಲಿ ಹಲವಾರು ಅಮಾಯಕರ ಮೇಲೆ ತನ್ನ ಅಟ್ಟಹಾಸ ತೋರಿಸಿತು. ಈ ಘಟನೆಯನ್ನು ಖಂಡಿಸಿ 2005ರ ಮಾರ್ಚ್ 19 ರಂದು ಬೃಹತ್ ಸಂಖ್ಯೆಯಲ್ಲಿ ಜನ ಸೇರಿ ಪ್ರತಿಭಟನೆಯನ್ನೂ ನಡೆಸಿದ್ದರು.

MARCH 19,2005 PROTEST AT UDUPI

ಅದರಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿದ್ದರು. ನಂತರ ಅದೆಷ್ಟೋ ಸ್ಥಳೀಯ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ನ್ಯಾಯಕ್ಕಾಗಿ ಪ್ರತಿಭಟನೆಗಳು ನಡೆದವು. ಆದರೆ ನ್ಯಾಯಾಲಕ್ಕೆ ಬೇಕಾಗಿರುವುದು ಸಾಕ್ಷಿ ಮತ್ತು ನ್ಯಾಯ ಪಡೆಯಲು ಬೇಕಾಗಿರುವುದು ಮರ್ದಿತರ ಗಟ್ಟಿ ಮನಸ್ಸು ಈ ಪ್ರಕರಣದಲ್ಲಿ ಇವೆರಡಕ್ಕೂ ಸೋಲಾಯಿತು. ದುಷ್ಕರ್ಮಿಗಳ ಕೈ ಮೇಲಾಯಿತು. ಇದರೊಂದಿಗೆ ಅವರ ದುಷ್ಕೃತ್ಯದ ಮನಸ್ಥಿತಿ ಬೆಳೆಯಲು ಸಾಧ್ಯವಾಯಿತು.

ಹಾಜಬ್ಬ, ಹಸನಬ್ಬ ಬೆತ್ತಲೆ ಪ್ರಕರಣ ಮಾನವೀಯತೆಯ ಸೋಲಿನ ಪ್ರತೀಕವಾಗಿತ್ತು. ಉಡುಪಿಯ ಮಟ್ಟಿಗೆ ಅಳಿಸಲಾಗದ ಕಪ್ಪು ಚುಕ್ಕೆಯೆಂದೆ ಹೇಳ ಬಹುದು.ಹಾಜಬ್ಬ ಹಸನ್ನಬ್ಬ ಬೆತ್ತಲೆ ಪ್ರಕರಣ ನಂತರ ಬುದ್ದಿವಂತರ ಜಿಲ್ಲೆ ಪಾಠ ಕಲಿಯಬಹುದೆಂದು ಭಾವಿಸಲಾಗಿತ್ತು. ಆದರೆ ಅದರ ನಂತರ ವ್ಯವಸ್ಥೆಗಳೊಂದಿಗೆ ಸೇರಿ “ಗೋ ರಕ್ಷಣೆಯ” ಹೆಸರಿನಲ್ಲಿ ನಡೆದ ಭಯೋತ್ಪಾದಕ ಕೃತ್ಯಗಳು ಮತ್ತೆ ಮತ್ತೆ ಉಡುಪಿಯನ್ನು ಅಪಖ್ಯಾತಿಗೆ ತಳ್ಳುತ್ತ ಹೋಯಿತು.

ಕಂಡ್ಲೂರು ಎಂಬ ಪುಟ್ಟ ಗ್ರಾಮದಲ್ಲಿ ಗೋವಿನ ಹೆಸರಿನಲ್ಲಿ ನಡೆದ ಕರಾಣಿ ಮತೀನ್ ಸಾವು, ಪ್ರವೀಣ್ ಪೂಜಾರಿಯ ಹತ್ಯಾ ಪ್ರಕರಣ, ಇತ್ತಿಚ್ಚಿಗೆ ಗುಲ್ವಾಡಿಯಲ್ಲಿ ನೀಲಕಾಂತ ಎಂಬುವವರ ಮೇಲೆ ನಡೆದ ಹಲ್ಲೆ ಪ್ರಕರಣ ಹೀಗೆ ಜಿಲ್ಲೆಗೆ ಅಪಖ್ಯಾತಿ ಕೊಡುತ್ತಾ ಸಾಗಿದೆ.

PRAVEEN POOJARY

ಹೊಸ ಪ್ರಕರಣವೆಂಬಂತೆ ಕಂಡುಬಂದಿರುವ ಪೇರ್ಡೂರಿನಲ್ಲಿ ಜಾನುವಾರು ವ್ಯಾಪರಿ ಹುಸೇನಬ್ಬ ಕೊಲೆ ಪ್ರಕರಣ ಇದೀಗ ಮತ್ತೊಮ್ಮೆ ಉಡುಪಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ತಲೆ ತಗ್ಗಿಸುವಂತೆ ಮಾಡಿದೆ. ಬುದ್ಧಿವಂತರ ಜಿಲ್ಲೆಗೆ ಕೆಲವು ದುಷ್ಕರ್ಮಿಗಳು ಮಸಿ ಎರಚುವ ಕೃತ್ಯ ನಡೆಸಿದ್ದಾರೆ. ಅದರಲ್ಲೂ ಈ ಪ್ರಕರಣದಲ್ಲಿ ಸ್ವತ಼ ಪೊಲೀಸ್ ಇಲಾಖೆಯ ಸಿಬ್ಬಂದಿಗಳೇ ಬಂಧಿತರಾಗಿರುವುದು ನಾಚಿಕೆಗೇಡಿನ ಸಂಗತಿ.ಬೇಲಿಯೇ ಎದ್ದು ಹೊಲ ಮೇಯ್ದ ಅನುಭವಾಗುತ್ತಿದೆ.

ದೂರದ ರಾಜಸ್ಥಾನವೊ, ಉತ್ತರ ಪ್ರದೇಶದಲ್ಲಿ ಸುದ್ದಿಯಾಗುತ್ತಿದ್ದ ಪ್ರಕರಣಗಳು ಇದೀಗ ಉಡುಪಿಯಲ್ಲಿ ಅದರಲ್ಲೂ ಶೈಕ್ಷಣಿಕವಾಗಿ ಮುಂಚೂಣಿಯಲ್ಲಿರುವ ಜಿಲ್ಲೆಯಲ್ಲಿ ನಡೆದಿದೆ ಎಂದರೆ ನಾಚೀಕೆಗೇಡು. ಕತುವಾದಲ್ಲಿ ಬಾಲಕಿಯ ಮೇಲೆ ಪೊಲೀಸ್ ಅಧಿಕಾರಿ ನಡೆಸಿದ ಅತ್ಯಾಚಾರ ಪ್ರಕರಣಕ್ಕೂ ಈ ಪ್ರಕರಣಕ್ಕೂ ವ್ಯತ್ಯಾಸ ಏನೀದೆ? ಎರಡು ಕೂಡ ನಡೆದದ್ದು ಪೊಲೀಸ್ ಸಮವಸ್ತ್ರ ಧರಿಸಿದ ಗೋ ಮುಖ ವ್ಯಾಘ್ರರಿಂದ, ಎರಡು ಪ್ರಕರಣದಲ್ಲಿ ಸಮವಸ್ತ್ರ ಒಳಗೆ ಇದ್ದದ್ದು ವಿಷ ಸರ್ಪಗಳು, ಅವರ ತಲೆಯಲ್ಲಿದ್ದದ್ದು ಧರ್ಮ ದ್ವೇಷ!!

UDUPI CHALO ACTIVIST MET PRAVEEN POOJARY MOTHER

ಎಸ್.ಪಿ ಲಕ್ಷ್ಮಣ್ ನಿಂಬರ್ಗಿಯವರ ಪ್ರಮಾಣಿಕ ತನಿಖೆಯಿಂದಾಗಿ ಪೊಲೀಸ್ ಇಲಾಖೆಯ ಒಳಗಿರುವ ಸಂಘಪರಿವಾರ ಮನಸ್ಥಿತಿಗಳ ಮುಖವಾಡ ಬಯಲಾಗಿದೆ. ಸಬ್ ಇನ್ಸ್ ಪೆಕ್ಟರ್ ಡಿ.ಎನ್ ನಾಯಕ್ ಸೇರಿ ಇತರ ಸಿಬ್ಬಂದಿಗಳು ಸೇರಿಕೊಂಡು ಬಜರಂಗದಳದ ಕಾರ್ಯಕರ್ತರ ಹುಸೇನಬ್ಬ ಶವವನ್ನು ಕಾಡಿಗೆ ಎಸೆದು ಮತ್ತೆ ಹುಡುಕುವ ನಾಟಕವಾಡಿ ಈ ಹತ್ಯಾ ಪ್ರಕರಣದಲ್ಲಿ ಶಾಮೀಲಾಗಿ ಇಡೀ ಪೊಲೀಸ್ ಇಲಾಖೆ ತಲೆತಗ್ಗಿಸುವಂತೆ ಮಾಡಿದ್ದರು. ಇದೇ ಸಂದರ್ಭದಲ್ಲಿ ಪ್ರಮಾಣಿಕವಾಗಿ ತನಿಖೆ ಮಾಡಿ, ಪೊಲೀಸ್ ಇಲಾಖೆಯ ಮೇಲೆ ಅಲ್ಪಸ್ವಲ್ಪ ನಂಬಿಕೆಯನ್ನು ಜೀವಂತವಾಗಿರಿಸಿರುವುದು ಎಸ್.ಪಿ ಲಕ್ಷ್ಮಣ್ ನಿಂಬರ್ಗಿಯವರು. ಇನ್ನು ಮುಂದೆ ಈ ಪ್ರಕರಣ ನ್ಯಾಯಾಲಯದಲ್ಲಿ ಸಾಬೀತಾಗಿ ಗೊ-ರಕ್ಷಣೆಯ ಹೆಸರಿನಲ್ಲಿ ನಡೆಯುವ ಮತೀಯ ಗಲಭೆ ಹುಟ್ಟಿಸಲು ಪ್ರಯತ್ನಿಸುವ ಭಯೋತ್ಪಾದಕರಿಗೆ ಪಾಠವಾಗಲಿ. ಅದರೊಂದಿಗೆ ಇಲ್ಲಿಯವರೆಗೆ ಗೋರಕ್ಷಣೆಯ ಹೆಸರಿನಲ್ಲಿ ಗೋ ಭಯೋತ್ಪಾದಕರಿಂದ ಹಲ್ಲೆಗೊಳಗಾಗಿ ಅಥವಾ ಪ್ರಾಣ ಕಳೆದುಕೊಂಡ ಅಮಾಯಕರಿಗೆ ನ್ಯಾಯ ಸಿಗುವಂತಾಗಲಿ, ಅದಕ್ಕೆ ಹುಸೇನಬ್ಬ ಪ್ರಕರಣ ನ್ಯಾಯದ ಮುನ್ನುಡಿ ಬರೆಯಲಿ ಎಂಬ ಆಶಯ ನಮ್ಮದು. ಇದು ಕೇವಲ ನಮ್ಮ ಆಶಯವಲ್ಲ ಈ ದೇಶದ ಸಂವಿಧಾನದ ಬದ್ಧತೆ ಕೂಡ!!

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.