ಚೆನ್ನೈ: ಗಜನ ಆರ್ಭಟದಿಂದ ತಮಿಳುನಾಡಿನ ಆರು ಜಿಲ್ಲೆಗಳಲ್ಲಿ ಭೂ ಕುಸಿತ ಉಂಟಾಗಿದ್ದು ನೂರಾರು ಮರಗಳು ಧರೆಗುಳಿವೆ. ಎಲ್ಲ ಜಿಲ್ಲೆಗಳಲ್ಲೂ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯಿಂದ ನಾಲ್ಕು ತಂಡಗಳು ಸಂತ್ರಸ್ತ ಜಿಲ್ಲೆಗಳಲ್ಲಿ ಕಾರ್ಯಪ್ರವೃತ್ತವಾಗಿವೆ.

ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ತೀವ್ರ ಗಜ ಚಂಡಮಾರುತ ಶುಕ್ರವಾರ ಬೆಳಗ್ಗೆ ತಮಿಳುನಾಡು ಕರಾವಳಿಯ ವೇದರನ್ನಿಯಂ ಮತ್ತು ನಾಗಪಟ್ಟಿಣಂ ದಾಟಿದ್ದು, 120 ಕಿ.ಮೀ. ವೇಗದಲ್ಲಿ ಈ ಎರಡೂ ಪ್ರದೇಶವನ್ನು ದಾಟಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಚಂಡಮಾರುತ ಪೀಡಿತ ಪ್ರದೇಶದಿಂದ 76,290 ಜನರನ್ನು ಈಗಾಗಲೇ ಸ್ಥಳಾಂತರಗೊಳಿಸಲಾಗಿದ್ದು, ಚಂಡಮಾರುತ ತೀವ್ರಗೊಂಡಿರುವ ಆರು ಜಿಲ್ಲೆಗಳಲ್ಲಿ 300 ಪರಿಹಾರ ಕೇಂದ್ರಗಳನ್ನು ನಿರ್ಮಿಸಲಾಗಿದೆ. ನಾಗಪಟ್ಟಿಣಂ, ಪುಡುಕೊಟ್ಟೈ, ರಾಮನಾಥಪುರಂ ಮತ್ತು ತಿರುವರುರ್ನಲ್ಲಿ ಚಂಡಮಾರುತದ ಆರ್ಭಟ ಹೆಚ್ಚಾಗಿದೆ ಎಂದು ತಮಿಳುನಾಡಿನ ಆಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ಇದೇ ನಿಟ್ಟಿನಲ್ಲಿ ಇಂದು ನಾಗಪಟ್ಟಿಣಂ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಕರಾವಳಿ ತೀರವನ್ನು ದಾಟಲು ಗಜ ಇನ್ನೂ ಎರಡು ಗಂಟೆಗಳನ್ನು ತೆಗೆದುಕೊಳ್ಳಲಿದ್ದು, ಚಂಡಮಾರುತ ಪಶ್ಚಿಮದ ಕಡೆ ತಿರುಗಲಿದೆ. ಇನ್ನು ಆರು ಗಂಟೆಗಳಲ್ಲಿ ಗಜನ ತೀವ್ರತೆ ಕ್ರಮೇಣ ಕಡಿಮೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಡೆಪ್ಯುಟಿ ಡೈರೆಕ್ಟರ್ ಜನರಲ್ ಎಸ್. ಬಾಲಚಂದ್ರನ್ ತಿಳಿಸಿದ್ದಾರೆ.
ಚಂಡಮಾರುತದ ಸಮಯದಲ್ಲಿ ಏನೆಲ್ಲ ಮಾಡಬೇಕು ಮತ್ತು ಏನೆಲ್ಲಾ ಮಾಡಬಾರದು ಎಂಬುದರ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಅನಿಮೇಟೆಡ್ ವೀಡಿಯೋವನ್ನು ಬಿಡುಗಡೆ ಮಾಡಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.