ಸಂಪಾದಕೀಯ

ಡಿಸೆಂಬರ್ ಆರು ಬಂದ ತಕ್ಷಣ ರಕ್ತ ಸಿಕ್ತ ಅಧ್ಯಾಯವೊಂದು ಕಣ್ಣ ಮುಂದೆ ಹಾದು ಹೋಗುತ್ತದೆ. ಬರೊಬ್ಬರಿ ಎರಡು ಸಾವಿರ ಜನರ ಪ್ರಾಣ ಆಹುತಿಗೆ ಕಾರಣವಾದ ದಿನವದು. ಸಂವಿಧಾನದ ಆಸ್ತಿತ್ವವನ್ನೇ ಪ್ರಶ್ನಿಸಿದ, ಪ್ರಜಾಪ್ರಭುತ್ವದ ಬುಡವನ್ನೆ ಅಲುಗಾಡಿಸಿದ ಮಾರಕ ದಿನ. 1992 ಡಿಸೆಂಬರ್ 6 ಸಂಘಪರಿವಾರ 1980ರಲ್ಲಿ ಹೆಣೆದ ತಂತ್ರವನ್ನು ಕಾರ್ಯ ರೂಪಕ್ಕೆ ತಂದ ದಿನ. ಕಾನೂನನ್ನು ಕೈಗೆತ್ತಿಕೊಂಡು ನೆಲದ ಕಾನೂನಿಗೆ ಅವಮಾನ ಮಾಡಿ ಐತಿಹಾಸಿಕ ಕಟ್ಟಡವೊಂದನ್ನು ಉರುಳಿಸಿದ ದಿನ. 1980 ರಲ್ಲಿ ಸಂಘಪರಿವಾರದ ರಾಜಕೀಯ ಅಂಗಸಂಸ್ಥೆಯಾದ ಭಾರತೀಯ ಜನತಾ ಪಾರ್ಟಿಯ ಬಲವರ್ಧನೆಗಾಗಿ ರಾಮ ಮಂದಿರ ನಿರ್ಮಾಣದ ಅಜೆಂಡಾವನ್ನು ಮುಂದಿಟ್ಟು ಕೊಂಡು ಭಾರತದ ಹಲವಾರು ಕಡೆಗಳಲ್ಲಿ ಆಂದೋಲನಗಳನ್ನು ಕಟ್ಟಲಾರಂಭಿಸಿತು. ಅದರ ಮುಖ್ಯ ಭಾಗವಾಗಿ ಎಲ್.ಕೆ ಆಡ್ವಾಣಿಯವರ ನೇತೃತ್ವದಲ್ಲಿ ರಾಮ್ ರಥ ಯಾತ್ರೆಯನ್ನು ದೇಶದಾದ್ಯಂತ ಹಮ್ಮಿಕೊಂಡು ವಿಭಜಕ ನೀತಿಯನ್ನು ಬಹಳ ಸೂಕ್ಷ್ಮವಾಗಿ ಜನರ ಮಸ್ತಿಷ್ಕದಲ್ಲಿ ತುಂಬುವಲ್ಲಿ ಯಶಸ್ವಿಯಾಯಿತು. ಅದರ ಪರಿಣಾಮವಾಗಿ ದೇಶದಾದ್ಯಂತ ಸುತ್ತಿದ ರಥ ಯಾತ್ರೆ ಬಾಬರಿ ಮಸೀದಿಯನ್ನು ಒಡೆಯುವ ಕೈಗಳನ್ನಷ್ಟೇ ಅಲ್ಲ, ಡಾ.ಬಿ.ಆರ್ ಅಂಬೇಡ್ಕರ್ ರಚಿಸಿದ ಸಂವಿಧಾನದ ಮೇಲೆ ದಾಳಿ ಮಾಡುವ ಪರಕೀಯ ಸಿದ್ದಾಂತಕ್ಕೆ ಜೀವ ನೀಡಿತು.

 ಇಂದು ಬಾಬರಿ ಮಸೀದಿ ಉರುಳಿ ಬರೊಬ್ಬರಿ 25 ವರ್ಷ ಸಂದಿವೆ ಇನ್ನು ಕೂಡ ಉರುಳಿದ ಅಮಾಯಕ ಮನುಷ್ಯ ದೇಹಗಳ ಸಗಟು ವಾಸನೆ ಮತ್ತೆ ಮತ್ತೆ ಮೂಗಿಗೆ ಬಡಿದು ಭಾರತದ ಸಾಕ್ಷಿ ಪ್ರಜ್ಞೆಯನ್ನು ಜಾಗೃತಿಗೊಳಿಸುತ್ತದೆ.

ಬಿಜೆಪಿ ರಾಮ ಮಂದಿರದ ಹೆಸರಿನಲ್ಲಿ 25 ವರ್ಷಗಳ ಸುದೀರ್ಘ ರಾಜಕೀಯ ಸವಿಯುಂಡಿದೆ. ಆದರೆ ಇದೀಗ ಧರ್ಮಸಂಸತ್ತಿನಲ್ಲಿ ರಾಮಮಂದಿರ ಕಟ್ಟುತ್ತೇವೆ ಎನ್ನುದರೊಂದಿಗೆ ಬಾಬಬುಡನ್ ಗಿರಿಯನ್ನು ಇನ್ನೊಂದು ಅಯೋಧ್ಯೆಯನ್ನಾಗಿಸಲು ತಯಾರಿ ನಡೆಸುತ್ತಿದೆ. ಇನ್ನೊಂದು ಕಡೆ ಮುಸ್ಲಿಂ ಸಂಘಟನೆಗಳು ಡಿಸೆಂಬರ್ 6 ರಂದು ಕಪ್ಪು ದಿನ ಆಚರಿಸುತ್ತದೆ. ಪ್ರಗತಿಪರ ಚಿಂತಕರು, ದೇಶದ ಬುದ್ದಿಜೀವಿಗಳು ಮತ್ತೆ ಬಾಬರಿ ಮಸೀದಿಯ ಪುನರ್ ನಿರ್ಮಾಣದ ಕೂಗು ಕೂಗುತ್ತಿದ್ದಾರೆ.

ಅದೇನೆ ಇರಲಿ ಕಾನೂನಿನ ಮೇರೆ ಮೀರಿ ಒಂದು ಕಟ್ಟಡವನ್ನು ಒಡೆಯುವುದು ಸಂವಿಧಾನದ ಮೇಲಿನ ದಾಳಿಗೆ ಸಮ. ಭಾರತದಲ್ಲಿ ನ್ಯಾಯ ವ್ಯವಸ್ಥೆಯೊಂದು ಅಸ್ತಿತ್ವದಲ್ಲಿದೆ. ಏನೇ ಅನ್ಯಾಯವಾಗಿದ್ದರೂ ನ್ಯಾಯಾಲಯದ ಮೂಲಕ ಪರಿಹಾರ ಕಂಡು ಕೊಳ್ಳಬೇಕು. ಆದರೆ ಡಿಸೆಂಬರ್ 6 ರಂದು ಭಾರತದ ನ್ಯಾಯ ವ್ಯವಸ್ಥೆಯ ಮೇಲೆ ಸಂಘ ಪರಿವಾರ ಕರಿ ಮಸಿಯೆನ್ನೆರಚಿ 2000 ಅಮಾಯಕರ ಜೀವವನ್ನು ಬಲಿ ಪಡೆದುಕೊಂಡಿತು. ಪೇಜಾವರ ಶ್ರೀ ಗಳು ಇತ್ತೀಚೆಗೆ ಮಾತನಾಡುತ್ತ ಅದೊಂದು ಆಕಸ್ಮಿಕವಾಗಿ ಉದ್ವೇಗದಲ್ಲಿ ನಡೆದು ಹೋಯಿತೆಂದು ಹೇಳಿದರು ಆದರೆ ಆ ಸಾವಿಗೀಡಾದ 2000 ಜೀವಗಳನ್ನು ತನ್ನ ಅಪ್ತರನ್ನು ಕಳೆದುಕೊಂಡ ಕುಟುಂಬಗಳಿಗೆ ಮರಳಿಸಲು ಸಾಧ್ಯವೇ? ಸಂವಿಧಾನಕ್ಕೆ ಮಾಡಿದ ಅವಮಾನಕ್ಕಾಗಿ ದೇಶದ ಜನತೆ ಮುಂದೆ ಕ್ಷಮೆ ಕೇಳಲು ಸಾಧ್ಯವಿದೆಯೇ?

ಇಂದು ಕೂಡ ರಾಮ ಮಂದಿರದ ಹೆಸರಿನಲ್ಲಿ  ಬಲಿಯ ಸರಪಳಿ ನಿರಂತರವಾಗಿ ಸಾಗುತ್ತಿದೆ. ಒಂದಂಥು ಸ್ಪಷ್ಟ, ಇವರಿಗೆ ರಾಮ ಮಂದಿರಗಿಂತ ಪುರೋಹಿತಶಾಹಿತ್ವದ ಉಳಿವು ಮುಖ್ಯ. ಅದಕ್ಕಾಗಿ ರಾಮನ ಹೆಸರಿನಲ್ಲಿ ಅಮಾಯಕ ಹಿಂದುಳಿದ ವರ್ಗದ ಯುವಕರ ಮಸ್ತಿಷ್ಕದಲ್ಲಿ ದ್ವೇಷ ತುಂಬಿ ಒಡಾಡುವ ಬಾಂಬರ್ ಗಳಾಗಿ ಬದಲಾಯಿಸುತ್ತಿದ್ದಾರೆ!  ಯಾರನ್ನಾದರೂ ಬಲಿ ನೀಡಿಯಾದರೂ ತಾವು ತಮ್ಮ ಶ್ರೇಷ್ಠತೆಯನ್ನು ಭಾರತದಲ್ಲಿ ಪ್ರತಿಷ್ಟಾಪಿಸುತ್ತೇವೆಂಬ ಶ್ರೇಷ್ಠತ ವ್ಯಾಧಿಯನ್ನು ಇಪ್ಪತೈದು ವರ್ಷಗಳ ನಂತರವೂ ಯಥಾಸ್ಥಿತಿಯಲ್ಲಿ ಸಂಘಪರಿವಾರ ಕಾಯ್ದುಗೊಂಡು ಬಂದಿರುವುದು ನೂರಕ್ಕೆ ನೂರು ಪ್ರತಿಶತ ಸತ್ಯ!

ಈ ವ್ಯಾಧಿ ತೊಲಗಬೇಕಾದರೆ ಭಾರತದ ಯುವ ತಲೆಮಾರು ಚಿಂತಿಸುವಂತಾಗಬೇಕು. ಅಧ್ಯಯನ ಶೀಲರಾಗಿ ರಾಜಕೀಯ ಅಜೆಂಡಾಗಳಿಗೆ ಬಲಿಯಾಗದೆ ಸ್ಪಷ್ಟ ಮತ್ತು ಧನಾತ್ಮಕ ನಿರ್ಧಾರಗಳನ್ನು ಕೈಗೆತ್ತಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇಲ್ಲಿ ರಾಮನಿಗೆ ಮಂದಿರ ಕಟ್ಟುವ ಮುಂಚೆ, ಕೋಟ್ಯಾಂತರ ರಾಮರು ತಲೆಯ ಮೇಲೆ ಸೂರಿಲ್ಲದೆ ರಾತ್ರಿ ಕಳೆಯುತ್ತಾರೆ ಆ ವಿಚಾರಗಳನ್ನು ರಾಜಕಾರಣಿಗಳು ಚರ್ಚಿಸುವಂತೆ ವೇದಿಕೆ ಸಿದ್ದ ಮಾಡಬೇಕಾಗಿದೆ. ಶಿಕ್ಷಣ, ಆಹಾರ, ಮೂಲಭೂತ ಸೌಕರ್ಯಗಳು ಇಲ್ಲಿನ ಕಟ್ಟಕಡೆಯ ಪ್ರಜೆಗೂ ದೊರೆಯುವಂತೆ ಮಾಡುವಂತೆ ಒತ್ತಾಯಿಸಬೇಕಾದ ಅಗತ್ಯತೆ ಇದೆ.

ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಸಾಲಿನಲ್ಲಿರುವ ನಮ್ಮ ದೇಶದಲ್ಲಿ ಬಾಬರಿ ಮಸೀದಿ ಒಡೆಯುವುದಕ್ಕೋ, ರಾಮ ಮಂದಿರ ಕಟ್ಟುವುದಕ್ಕೋ ಸಂಭ್ರಮ ಪಡುವ ಬದಲು ಅಥವಾ ಚರ್ಚಿಸುವ ಬದಲು ಇಲ್ಲಿನ ಬಡತನದ ಬಗ್ಗೆ, ಭಾರತದ ಪ್ರತಿ ಪ್ರಜೆಗೂ ಸೂರು ಸಿಗುವ ಬಗ್ಗೆ, ಆಹಾರ ಭದ್ರತೆಯ ಬಗ್ಗೆ, ವೈದ್ಯಕೀಯ ಸವಲತ್ತುಗಳ ಬಗ್ಗೆ ಚರ್ಚೆಯಾಗಬೇಕಿತ್ತು. ನಮ್ಮ ಸಮಾವೇಶಗಳು ರಾಜಕೀಯ ಪಕ್ಷಗಳ ಒಲೈಕೆ ರಾಜಕಾರಣದ ವಿರುದ್ಧವಾಗಬೇಕಾಗಿತ್ತು, ಆದರೆ ಇಲ್ಲಿ ಎಲ್ಲವು ಉಲ್ಟಾ! ಧರ್ಮಗಳ ಹೆಸರಿನಲ್ಲಿ, ಧರ್ಮದ ಮೂಲ ಆಶಯ ಬಿಟ್ಟು ಹೊಡೆದಾಡುತ್ತ, ಅಮಾಯಕ ಜೀವಗಳನ್ನು ಬಲಿಗೊಡುತ್ತ ನಾವು ಬದುಕುವುದಾದರೆ ನಾವು ಪ್ರತಿಪಾದಿಸುವ ಧರ್ಮಗಳ ಬಗ್ಗೆಯೇ ನಾವು ಪುನಾರವಲೋಕಿಸಬೇಕಾದ ಅಗತ್ಯತೆಯಿದೆ. ವಸುದೈವ ಕುಟುಂಬಕಂ ಎನ್ನುವವರಿಗೆ ಒಂದು ಕಟ್ಟಡದ ಅಸ್ತಿತ್ವ ಸಹಿಸಲು ಸಾಧ್ಯವಾಗದಿರಲು ಕಾರಣವೇ ಇಲ್ಲ!!

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.